ತಿರುಕನ ಕನಸು ಮತ್ತು ಹಾವಿನ ಹಾಡು

Havina Hadu and Thirukana kanasu poems for kids
ಕನ್ನಡ ಸಾಹಿತ್ಯಲೋಕದಲ್ಲಿ ಮುಪ್ಪಿನ ಷಡಕ್ಷರಿಯ 'ತಿರುಕನ ಕನಸು" ಹಾಗೂ ಪಂಜೆಯವರ 'ಹಾವಿನ ಹಾಡು" ಗೀತೆಗಳ ಕೇಳದವರಾರು? ಮೇಲ್ನೋಟಕ್ಕೆ ಮಕ್ಕಳ ಗೀತೆಗಳ ಲಯ ಹೊಂದಿರುವ ಈ ಹಾಡುಗಳ ಗರ್ಭದಲ್ಲಿ ಅಗೆದಷ್ಟೂ ಅರ್ಥವಂತಿಕೆ ಉಂಟು. ಇಂದಿನ ಮಕ್ಕಳಿಗೆ ಅಂದಿನ ಎರಡು ಹಾಡುಗಳು.

ತಿರುಕನ ಕನಸು

* ಮುಪ್ಪಿನ ಷಡಕ್ಷರಿ

ತಿರುಕನೊರ್ವನೂರ ಮುಂದೆ
ಮುರುಕು ಧರ್ಮಶಾಲೆಯಲ್ಲಿ
ಒರಗಿರುತ್ತಲೊಂದು ಕನಸ ಕಂಡನೆಂತೆನೆ
ಪುರದ ರಾಜ ಸತ್ತನವಗೆ
ವರಕುಮಾರರಿಲ್ಲದಿರಲು
ಕರಿಯ ಕೈಗೆ ಕುಸುಮಮಾಲೆಯಿತ್ತು ಪುರದೊಳು

ನಡೆದು ಯಾರ ಕೊರಳಿನಲ್ಲಿ
ತೊಡರಿಸುವದೊ ಅವರ ಪಟ್ಟ
ಕೊಡೆಯರನ್ನು ಮಾಳ್ಪೆವೆಂದು ಬಿಟ್ಟರಲ್ಲಿಯೆ
ಒಡನೆ ತನ್ನ ಕೊರಳಿನಲ್ಲಿ
ತೊಡರಿಸಲ್ಕೆ ಕಂಡು ತಿರುಕ
ಪೊಡವಿಯಾಣ್ಮನಾದೆನೆಂದು ಹಿಗ್ಗುತಿರ್ದನು

ಪಟ್ಟವನ್ನು ಕಟ್ಟಿ ನೃಪರು
ಕೊಟ್ಟರವಗೆ ಕನ್ಯೆಯರನು
ನೆಟ್ಟನವನು ರಾಜ್ಯವಾಳ್ದ ಕನಸಿನಲ್ಲಿಯೇ
ಭಟ್ಟಿನಿಗಳ ಕೂಡಿ ನಲ್ಲ
ನಿಷ್ಟಸುಖದೊಳಿರಲವಂಗೆ
ಹುಟ್ಟಿ ಹೆಣ್ಣು ಗಂಡು ಮಕ್ಕಳಾದುವಾಗಲೇ

ಓಲಗದಲಿರುತ್ತ ತೊಡೆಯ
ಮೇಲೆ ಮಕ್ಕಳಾಡುತಿರಲು
ಲೀಲೆಯಿಂದ ಚಾತುರಂಗ ಬಲವ ನೋಡುತ
ಲೋಲನಾಗಿ ನುಡಿದನಿನಿತು
ಕೇಳು ಮಂತ್ರಿ, ಸುತರುಗಳಿಗೆ
ಬಾಲೆಯರನು ನೋಡಿ ಮದುವೆ ಮಾಡಬೇಕೆಲೆ

ನೋಡಿ ಬನ್ನಿರೆನಲು ಜೀಯ
ನೋಡಿ ಬಂದೆವೆನಲು ಬೇಗ
ಮಾಡು ಮದುವೆ ಮಂಟಪದೊಳು ಸಕಲ ಕಾರ್ಯವ
ಗಾಢವಾಗೆ ಸಂಭ್ರಮಗಳು
ಮಾಡುತ್ತಿದ್ದ ಮದುವೆಗಳನು
ಕೂಡಿದಖಿಳ ರಾಯರೆಲ್ಲ ಮೆಚ್ಚುವಂದದಿ

ಧನದ ಮದವು ರಾಜ್ಯ ಮದವು
ತನುಜಮದವು ಯುವತಿಮದವು
ಜನಿತಮಾಗಿ ಕನಸಿನಲ್ಲಿ ಹಿಗ್ಗುತಿರ್ದನು
ಅನಿತರೊಳಗೆ ನೃಪರ ದಂಡು
ಮನೆಯ ಮುತ್ತಿದಂತೆಯಾಗೆ
ಕನಸ ಕಾಣುತಿರ್ದು ಹೆದರಿ ಕಣ್ಣ ತೆರೆದನು.
***

ಹಾವಿನ ಹಾಡು

* ಪಂಜೆ ಮಂಗೇಶರಾವ್‌ (ಕವಿಶಿಷ್ಯ)

ನಾಗರ ಹಾವೆ! ಹಾವೊಳು ಹೂವೆ!
ಬಾಗಿಲ ಬಿಲದಲಿ ನಿನ್ನಯ ಠಾವೆ?
ಕೈಗಳ ಮುಗಿವೆ, ಹಾಲನ್ನೀವೆ!
ಬಾ ಬಾ ಬಾ ಬಾ ಬಾ ಬಾ ಬಾ ಬಾ

ಹಳದಿಯ ಹೆಡೆಯನು ಬಿಚ್ಚೋ ಬೇಗಾ!
ಹೊಳಹಿನ ಹೊಂದಲೆ ತೂಗೋ ನಾಗಾ!
ಕೊಳಲನ್ನೂದುವೆ ಲಾಲಿಸು ರಾಗಾ,
ನೀ ನೀ ನೀ ನೀ ನೀ ನೀ ನೀ ನೀ

ಎಲೆ ನಾಗಣ್ಣಾ ! ಹೇಳೆಲೊ ನಿನ್ನಾ
ತಲೆಯಲಿ ರನ್ನವಿಹ ನಿಜವನ್ನಾ ,
ಬಲು ಬಡವಗೆ ಕೊಪ್ಪರಿಗೆಯ ಚಿನ್ನಾ
ತಾ ತಾ ತಾ ತಾ ತಾ ತಾ ತಾ ತಾ

ಬರಿಮೈ ತಣ್ಣಗೆ, ಮನದಲಿ ಬಿಸಿ ಹಗೆ,
ಎರಡೆಳೆ ನಾಲಗೆ ಇದ್ದರು ಸುಮ್ಮಗೆ
ಎರಗುವೆ ನಿನಗೆ, ಈಗಲೆ ಹೊರಗೆ
ಪೋ ಪೋ ಪೋ ಪೋ ಪೋ ಪೋ ಪೋ ಪೋ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+