ವದಂತಿ
- ಶ್ರೀವತ್ಸ ದುಗ್ಲಾಪುರ
E-mail : [email protected]
ಹೀಗೆಂದು ಉಸುರಿದ್ದೆ
ಪದಗಳೊಂದೆರಡು; ಮೂರು
ದಿನದ ಕಂಬಳಿಹುಳುವಿನ ಮೊಟ್ಟೆ
ಯಂತೆ ಇದ್ದದ್ದು ,
ಈ ಬಾಯಿಯಿಂದ ಆ ಕಿವಿಗೆ
‘ನಿಮಗೆ ಮಾತ್ರ’ ಅಂದದ್ದು,
ಗೋಡೆ ದಾಟುವುದರೊಳಗೆ
ರೆಕ್ಕೆಯಾಡೆದು, ಪುಕ್ಕ ಬಂದು, ನೂರಾಗಿ
ಹೌದೇನ್ರೀ ? ನಿಜವೇನ್ರೀ?
ಕುತೂಹಲದ ತೂಕ
ಹೆಚ್ಚಿ, ಮೈ-
ದುಂಬಿ
ಅವರ ಮನೆ ಅಡುಗೆಮನೆ
ಹೊಸಿಲು ದಾಟಿ ಇವರ ಮನೆ
ಜಗುಲಿಯ ಬಳಿ ಬಂದಾಗ
ಚಿಟ್ಟೆಯಾಗಿತ್ತು.
ಬಿಚ್ಚುಮನಸ್ಸಿನವರು ಸಾದಾ
ರೆಕ್ಕೆಗೆ ಎರಡೋ, ಮೂರೋ
ಬಣ್ಣ ಬಳಿದು
ಸಾವಿರ ಕಣ್ಣಿನ
ಕಿವಿಯ, ಬಾಯಿಯ
ನವಿಲುಗರಿ ಮಾಡಿ,
ಉಬ್ಬಿಸಿ
ಬಿಟ್ಟರು.
ಮತ್ತೆರಡು ಮನ ದಾಟಿ
ತಿರುತಿರುಗಿ ಸಂ-
ಪೂರ್ಣ ಜೀವನಚಕ್ರದ
ಅಂತೆ-ಕಂತೆಗಳ ಪು-
ಕಾರು ಬಾರುಗಳ ನಡುವೆ
ತಾನೇ ಹಾರುವ ಚಿಟ್ಟೆ
ಬಂದು ಕುಳಿತದ್ದು ನನ್ನ ಕಿವಿ ಮೇಲೆ !
ಗುರುತೇ ಸಿಗಲಿಲ್ಲ ನೋಡಿ...
ಈ ಕವಿತೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications