ದಡವ ಮುಟ್ಟಿಸಿ ಪರದ ಕಡೆಗೆ ಪಯಣಿಸಿದೆ- ನಿನ್ನ ಚೇತನಕೆ ಸಿಗಲಿ ಶಾಂತಿ!
ಮೊರೆ
*ಬಿ.ಎನ್.ಸೋಮಸುಂದರ ರಾವ್, ಜಾಕ್ಸನ್ ಹೈಟ್ಸ್, ನ್ಯೂಯಾರ್ಕ್
ಹದಿಹರೆಯದಾದಿಯೆಲೆ ಹದಿಬದೆಯ ಹೊಣೆಹೊತ್ತು
ಹದುಳದಿಂ ಬಾಳ್ನೊಗಕೆ ಹೆಗಲನಿತ್ತೆ . ।। 1 ।।
ನಿನ್ನ ಇಚ್ಛೆಯ ನೀನು ಅರಿವ ಕ್ಷಮತೆಗೆ ಮುನ್ನ
ಹಿರಿಯರಿಚ್ಛೆಗೆ ಮಣಿದು ಮದುವೆಯಾದೆ;
ಓದಿ ಆಡುವ ವೇಳೆ ಸೊಸೆಯಾಗಿ ಸತಿಯಾಗಿ
ತಾಯಾಗಿ ಹೊಸನೆಲೆಗೆ ಕವಚವಾದೆ. ।। 2 ।।
ಕೀರುತಿಯ ಜೊತೆಯಲ್ಲಿ ಆರತಿಗು ಒಂದಾಗೆ
ಚಿಕ್ಕದಿರೆ ಸಂಸಾರ ಚೊಕ್ಕದೆಂದರಿತೆ;
ವಿಧಿಯ ಪ್ರಕೃತಿಯ ಸಂಚು ನಿನ್ನರಿವಿಗೆಟುಕದಿರೆ
ದೈವೇಚ್ಛೆಯೆಂದದನು ಒಪ್ಪಿ ನಡೆದೆ . ।। 3 ।।
ಸುಗಮ ಬಡತನದೊಳಗೆ ಕಾರ್ಪಣ್ಯ ಮುಗಿಬೀಳೆ
ಶಾಂತಿ ಸಹನೆಯ ಮೂರ್ತಿವೆತ್ತು ನಿಂದೆ;
ಅಷ್ಟ ದಿಗ್ಗಜದಂತೆ ಆದಿಶೇಷನವೋಲು
ಒಳಗು ಹೊರಗಿನ ಹೊರೆಯ ಹೊತ್ತು ನಿಂದೆ. ।। 4 ।।
ಇಂದು ನೆನೆದರು ಮೈಯ ಜುಮ್ಮೆನಿಪ ಶಕ್ತಿಬಲ
ಎಲ್ಲಿತ್ತು ನಿನ್ನ್ ಅಬಲ ತೋಳುಗಳಲಿ?
ವಿಧಿರಾಯನಿಚ್ಛೆಯನು ಎದುರಿಸುವ ನಿನ್ನ ಛಲ
ಅದಟುಗಳ ಹಿನ್ನೆಲೆಯ ನಿರಿಗೆಗಳಲೆ? ।। 5 ।।
ನಿಸ್ವಾರ್ಥ ನಿಸ್ಪೃಹತೆ ನಿನ್ನ ಬಾಳಿನ ನೆಲೆಯು
ಮಕ್ಕಳೇಳಿಗೆಗೆ ಅಂದು ಏನನಿತ್ತೆ?
ಹೊಟ್ಟೆ ಬಟ್ಟೆಯ ಕಟ್ಟಿ ಕೂಡಿಟ್ಟ ಹಣದೊಡವೆ
ಮಾರಿ ಹಣ ತುಂಬಲಿಕೆ ತಂದುಕೊಟ್ಟೆ. ।। 6 ।।
ನಿನ್ನದೆನಿಸುವ ಆಸೆ ಉಡಿಗೆ ತೊಡಿಗೆಯ ಜಂಬ
ಹಂಬಲವು ನಿನ್ನ ಬಳಿ ಸುಳಿಯದಿತ್ತೆ?
ಪ್ರೀತಿ ಕರ್ತವ್ಯಗಳ ಗುರಿಗೈವ ಛಲದಂಬು
ಆಸೆ ಹಂಬಲಗಳನನು ಕೊಚ್ಚಿಸಿತ್ತೆ? ।। 7 ।।
ನಿನ್ನ ಅರಿವಿನ ಪರಿಧಿ ಸೀಮಿತವು ಕಾಣ್ಕೆಗಿರೆ
ಅಚ್ಚರಿಯದಿತ್ತರದ ಆಳ ಹರವು;
ಹೊಸಹಳೆಯ ಕಾವ್ಯಗಳು ಕವಿಯ ಇತಿಹಾಸಗಳು
ಗದ್ಯಕೃತಿ ಕನ್ನಡದ ಮತ್ತೆ ಎರವು. ।। 8 ।।
ಎಲ್ಲವನು ನೀನೋದಿ ಮಕ್ಕಳೊಳು ಮೊಳೆಸಿದ್ದೆ
ಸಾಹಿತ್ಯದಾಸಕ್ತಿ ಪ್ರೀತಿಗಳನು;
ಬಾಳು ಬರಡಾಗದೊಲು ಮೊಳೆಯಿಸಿದೆ ಬಳೆಯಿಸಿದೆ
ಓದಿ ಹಾಡಿಸಿಕೊಳುವ ಹವ್ಯಾಸಗಳನು. ।। 9 ।।
ಬಾಳದೋಣಿಯನಿಂತು ಚುಕ್ಕಾಣಿ ಹಿಡಿದು ನೀ
ನಡೆಯಿಸಿದೆ ಏತರದ ಖತಿ ಬಾರದಂತೆ;
ದಡವ ಮುಟ್ಟಿಸಿ ಪರದ ಕಡೆಗೆ ನೀ ಪಯಣಿಸಿದೆ-
ಆ ನಿನ್ನ ಚೇತನಕೆ ಸಿಗಲಿ ಶಾಂತಿ! ।। 10 ।।












Click it and Unblock the Notifications