ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ತಬ್ಬಿ ಕಣ್ಣಲ್ಲಿ ಕಣ್ಣಿಟ್ಟು ಕೇಳಿದರು‘ಇವತ್ತು ಯಾವ ಕತೆ ಕೇಳುತ್ತಿ?’

By Staff
|
Google Oneindia Kannada News

ಅಲೆಮಾರಿ ಕನಸುಗಳು

*ಎಂ. ಆರ್‌. ದತ್ತಾತ್ರಿ (ಸನ್ನಿವೇಲ್‌, ಕ್ಯಾಲಿಫೋರ್ನಿಯಾ)

ಯಾವ ಊರೋ, ಯಾರ ಮನೆಯೋ,
ಎದುರು ಡೇರೆಯಲ್ಲಿ ಭೂಗತವಾಗಿದ್ದ
ಬಣ್ಣ ಬಣ್ಣದವರೆಲ್ಲಾ
ಒತ್ತೊಟ್ಟಿಗೇ ದೌಡಾಯಿಸಿ
ಓಡಿ, ಹಾರಿ, ಕುಣಿದು
ಗೋಡೆ ನೆಲಕ್ಕೆಲ್ಲಾ ತಮ್ಮ ಕೆಮ್ಮಣ್ಣ ಕೆಸರ ಕಾಲೂರಿ
ಬೆವರಿನ ಕಮಟಿಗೆ ಹಳದಿಯಾದ ಟವಲ್ಲಿನಿಂದ
ಗಡ್ಡದ ಹಸಿಯ ಸವರಿ,
ತುಂಬಿ ನಿಂತ
ಬೆತ್ತಲೆಯ ಕುಚಗಳಿಗೆ
ಹಿಂಜಿ ಹೋದ ಸೀರೆಯನ್ನೂ ಎಳೆಯದೆ,
ಅಂಗಳದಲ್ಲಿ ನಿಂತ ನನ್ನ ತಬ್ಬಿ
ಕಣ್ಣಲ್ಲಿ ಕಣ್ಣಿಟ್ಟು ಕೇಳಿದರು
‘ಇವತ್ತು ಯಾವ ಕತೆ ಕೇಳುತ್ತಿ?’

ಯಾರಿವರು!?
ಒಂದೂ ಮುಖದ ಪರಿಚಯವಿಲ್ಲ
ಪಂಚೆಯೋ, ಸೀರೆಯೋ, ಪೇಟವೋ, ಟೊಪ್ಪಿಗೆಯೋ
ನನ್ನವರಲ್ಲ ಎಂದು ಚೀರಲು ಬಾಯ್ದೆರೆದರೆ
ಮೇಲೆದ್ದಿತೊಂದು ಮುಖ!
ಅರೆರೆ! ಮೊನ್ನೆ ಹಕ್ಕಿಯಂತೆ ಹಾರಿದವನು!
ಇನ್ನೊಂದು ಮುಖ,
ಓಡಿ ಓಡಿ ಎತ್ತಿನ ಗಾಡಿಗೆ ಚಕ್ರವಾದವನು!
ಮತ್ತೊಂದು,
ನದಿಯಾಡನೆ ಹರಿಯುತ್ತಾ
ಮೊಸಳೆಯ ತತ್ತಿಯಾದವನು!

ಇವಳೋ,
ಚಂದ್ರನೊಡನೆ ಸರಸವಾಡಿ,
ಚಂಡೀ ಹಿಡಿದು ನಕ್ಷತ್ರವಾದವಳು!
ಮುಖಕ್ಕೆ ಕನ್ನಡಿ ಹಿಡಿದು
ಅಂಬೆಗಾಲ ಮಗುವ ನಗಿಸಿದವಳು!
ಭೂತಾಕಾರವಾಗಿ ಬೆಳೆದು
ಭ್ರೂಣವನ್ನೂ ಚಿಟ್ಟನೆ ಚೀರಿಸಿದವಳು!

ಹೌದು, ಇವರುಗಳೇ,
ಮೋಡಗಳಂತೆ,
ಹಕ್ಕಿಗಳಂತೆ,
ಇಬ್ಬನಿಯ ಮಬ್ಬಿನಂತೆ
ತೇಲಿ ತೇಲಿ ಹೋಗುವವರು
ಹಾಡಿನಡಿಯ ಗುನುಗನ್ನು ಮಳೆಯಂತೆ ಹನಿಸುವವರು
ಕ್ಷಣ ಕಂಡು ಕ್ಷಣದೊಳಗೆ ಇಲ್ಲವಾಗುವರು

ಕಾಮನಬಿಲ್ಲ ಕಂಡ ಮಗುವಂತೆ
ಮುಖವರಳಿ, ಮನವೆರಗಿ
ನಾನು ಕೇಳಿದೆ
‘ಇವತ್ತೆಲ್ಲಿಗೆ ಕರೆದೊಯ್ಯುವಿರಿ ನನ್ನ !!’

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X