ಜಲ ಧಾರೆ
*ಜ್ಯೋತಿ ಮಹಾದೇವ್
ಹೊನಲು ಹೊನಲಾಗಿ ಹರಿವ ಜಲಧಾರೆ
ಹಾಲು ಹೊಳೆಯ ರೀತಿ,
ಎರಡು ದೇಶಗಳ ಒಂದು ಜಲಪಾತ
ಎರಡು ಮನದ ಪ್ರೀತಿ.
ರಾಧೆ ಮಾಧವನ ವಿರಹ ತಾಪದಲಿ
ಕ್ಷೀರ ಧಾರೆ ಚೆಲ್ಲಿ,
ವಸುಧೆ ತುಂಬಿದ್ದ ವರ್ಣ ಮೇಳವು
ಕರಗಿ ಬಂದಿತಿಲ್ಲಿ.
ಪ್ರಕೃತಿ ಪುರುಷರ ಮಿಲನ ತಾಣವಿದು
ಕೈಲಿ ಕೈಯನಿರಿಸಿ,
ಸನಿಹ ಸರಿದವರ ಹರಸಿ ನಗುವರು
ಮೌನ ಶಬ್ದ ಬೆರೆಸಿ.
ಸವತಿ ಮಾತ್ಸರ್ಯದಿಂದ ಸಿಡುಕಾಗಿ
ಗಂಗೆ ಬಂದಳೇನು?
ಸಖಿಯ ಬಿಟ್ಟಿರಲು ಮನಸು ಬಾರದೆ
ಯಮುನೆಯೂ ಇಹಳೇನು?
ಮಕ್ಕಳಿಬ್ಬರಿಂದಗಲಿ ಹಿಮವಂತ
ಕಣ್ಣು ತುಂಬಿ ನಿಂತು,
ತಲೆಯ ಕೊಡವಿರಲು ನೀರು ಹಾರಿರಲು
ಬಿಳಿಯ ಹಾಳೆಯಾಯ್ತು.
ಸುರಿವ ಸ್ಫಟಿಕಮಣಿ ಪರದೆ ಹಿಂದುಗಡೆ
ನಿಂದು ನೋಡ ಬಾರೆ,
ಪ್ರತಿ ಬಿಂದುವಲು ನಮ್ಮ ಪ್ರತಿಬಿಂಬ
ನಾವೇ ಚಂದ್ರ ತಾರೆ.
ನೋವು ನಲಿವುಗಳ ಬದುಕು ಸಾವುಗಳ
ಜಗವು ಆಚೆ ಕಡೆಗೆ,
ಬೆಳ್ಳಿ ಮಾಲೆಗಳು ಬಣ್ಣ ಬಿಲ್ಲುಗಳು
ನಮಗೆ ಈಚೆ ಕಡೆಗೆ.
ಜೋಗದಿಂದ ನಯಾಗರಾವರೆಗೆ
ಬೆಳೆದ ನಮ್ಮ ಪಯಣ,
ಒಲವು ಬತ್ತದೇ ತುಂಬಿ ಮೊರೆಯಲಿ
ಹರಡಿ ಹೊನ್ನ ಕಿರಣ.
ಪೂರಕ ಓದಿಗೆ
ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications