ಸರ್ ಎಂವಿಯನ್ನು ಕಂಡ ಈ ಕಣ್ಣುಗಳೇ ಧನ್ಯ

By: ಜಿ.ಎಸ್. ಸತ್ಯ, ಸ್ಯಾನ್‌ಹೊಸೆ
Subscribe to Oneindia Kannada
JC Wodeyar with Sir MV
ಭಾರತ ಕಂಡ ಅತ್ಯಂತ ಧೀಮಂತ, ಬುದ್ಧಿವಂತ ಇಂಜಿನಿಯರ್ ಎಂದು ಖ್ಯಾತರಾದವರು ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು. ಸರ್ ಎಂವಿ ಅವರನ್ನು ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಬೆಂಗಳೂರಿನ ಲಾಲ್ ಬಾಗಿನಲ್ಲಿ ಸಾಕ್ಷಾತ್ ಕಂಡು, ಅವರ ಮಾತುಗಳನ್ನು ಕೇಳಿದ ಐತಿಹಾಸಿಕ ಕ್ಷಣಗಳನ್ನು ಲೇಖಕರು ಇಲ್ಲಿ ಮೆಲುಕು ಹಾಕಿದ್ದಾರೆ. ವಿಶ್ವೇಶ್ವರಯ್ಯನವರ 157ನೇ ಜನ್ಮದಿನೋತ್ಸವ (ಜನನ : ಸೆಪ್ಟೆಂಬರ್ 15, 1860)ನಿಮಿತ್ತ ಇದು ಒನ್ಇಂಡಿಯಾ ಕನ್ನಡ ಸಾದರಪಡಿಸುತ್ತಿರುವ ವಿಶೇಷ ಲೇಖನ, ಪ್ರಕಟವಾಗಿದ್ದು 2012ರಲ್ಲಿ - ಸಂಪಾದಕ.

ಅದೊಂದು ಅಪರೂಪದ ದಿನ. ಅದೊಂದು ಅದ್ಭುತ ಕ್ಷಣ. ಹದಿಹರೆಯದ ನನ್ನ ಪಾಲಿಗೆ ಅನಿರೀಕ್ಷಿತ ದರ್ಶನ ಭಾಗ್ಯ. ದೂರದ ಅಮೆರಿಕಾದಲ್ಲಿ ಕುಳಿತು ಈಗ ನೆನೆದರೆ, ಐವತ್ತು ವರ್ಷಗಳ ಹಿಂದಿನ ಆ ಸಮಾರಂಭದ ಸುವರ್ಣ ಸ್ಮೃತಿ ಸಂಭ್ರಮ.

ಅವರು ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು. ನಮ್ಮಂತಹ ವಿದ್ಯಾರ್ಥಿಗಳಿಂದ ಮೊದಲ್ಗೊಂಡು ಎಲ್ಲರಿಗೂ ಆದರ್ಶಪ್ರಾಯರು. ನಮ್ಮ ಮಾದರಿ ಮೈಸೂರು ರಾಜ್ಯದ ನಿರ್ಮಾತೃ, ಭಾಗ್ಯಶಿಲ್ಪಿ. ದಿವಾನರಾಗಿ ಅಪಾರ ಸಾಧನೆ ಮಾಡಿದವರು. ತತ್ತ್ವನಿಷ್ಠರು, ಕಠಿಣ ಪರಿಶ್ರಮಿ. ನಮ್ಮ ದೇಶದಲ್ಲಿಯೇ ತುಂಬ ಬುದ್ಧಿವಂತರೆಂದು, ಧೀಮಂತರೆಂದು ಪ್ರಸಿದ್ಧಿ ಪಡೆದವರು. ನಾವೆಲ್ಲಾ ಚಿಕ್ಕವರಿದ್ದಾಗ ಅದೇನೇನೋ ಕತೆಗಳು. ಬ್ರಿಟಿಷರು ವಿಶ್ವೇಶ್ವರಯ್ಯನವರ ಮರಣಾನಂತರ ಅವರ ಮೆದುಳನ್ನು ಕೊಡಿ ಪರೀಕ್ಷಿಸುತ್ತೇವೆ ಎಂದು ಕೇಳಿದ್ದರಂತೆ, ಮೈಸೂರು ಮಹಾರಾಜರು ಅವರನ್ನು ದಿವಾನರಾಗಲು ಕರೆದಾಗ, ತಮ್ಮ ತಾಯಿಯಿಂದ ವಿಶ್ವೇಶ್ವರಯ್ಯನವರು ಮಾತು ಪಡೆದರಂತೆ, ಯಾವ ಬಂಧುಗಳನ್ನೂ ಶಿಫಾರಸಿಗಾಗಿ ಕರೆದುಕೊಂಡು ಬರುವುದಿಲ್ಲ ಎಂದು ವಾಗ್ದಾನ ಪಡೆದರಂತೆ, ನಂತರವೇ ಅವರು ದಿವಾನರಾಗಲು ಒಪ್ಪಿದರಂತೆ, ಎಲ್ಲಿಗೆ ಪ್ರವಾಸ ಹೊರಟರೂ ಎರಡು ಮೇಣದ ಬತ್ತಿ ಕೊಂಡೊಯ್ಯುತ್ತಿದ್ದರಂತೆ, ಒಂದು ಸರ್ಕಾರಿ ಕೆಲಸಕ್ಕೆ, ಇನ್ನೊಂದು ಸ್ವಂತ ಕೆಲಸಕ್ಕೆ, ಇತ್ಯಾದಿ, ಇತ್ಯಾದಿ. ಅದೇನೇ ಇರಲಿ, ಅವರ ಶಿಸ್ತು-ಸಮಯ ಪಾಲನೆ-ಬುದ್ಧಿಶಕ್ತಿ-ಪೇಟ-ವೇಷಭೂಷಣ ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಿದ್ದವು.

ಅಂದು ಸೆಪ್ಟೆಂಬರ್ ಹದಿನೈದು, 1960. ಬೆಂಗಳೂರಿನ ಲಾಲ್‌ಬಾಗಿನ ಗಾಜಿನಮನೆಯಲ್ಲಿ ಅಂದಿನ ಮೈಸೂರು ಸರ್ಕಾರದ ಅಧಿಕೃತ ಸಮಾರಂಭ. ಆಹ್ವಾನಿತರಿಗೆ ಮಾತ್ರ ಪ್ರವೇಶ. ಆಗ ನಾನು ಬಸವನಗುಡಿಯ ಗೋವಿಂದಪ್ಪ ರಸ್ತೆಯಲ್ಲಿದ್ದೆ. ನಮ್ಮ ರೂಮಿನ ಮಾಲೀಕರಾದ ಮುಖ್ಯ ಇಂಜಿನಿಯರ್ ಕೆ.ಎಸ್. ಕೃಷ್ಣಸ್ವಾಮಿಯವರಿಗೆ ಆಹ್ವಾನ ಪತ್ರಿಕೆ ಬಂದಿತ್ತು. ಅವರೆಲ್ಲಾ ಆಗ ದೆಹಲಿಯಲ್ಲಿದ್ದುದರಿಂದ ನನಗೆ ಅನಾಯಾಸವಾಗಿ ಆಹ್ವಾನ ಪತ್ರಿಕೆ ಸಿಕ್ಕಿತ್ತು. ಕಾಲೇಜಿಗೆ ಚಕ್ಕರ್ ಹೊಡೆದು, ಟೈ-ಜ್ಯಾಕೆಟ್ ಧರಿಸಿ ಕೈಲಿ ಇನ್ವಿಟೇಶನ್ ಹಿಡಿದು ಲಾಲ್‌ಬಾಗ್ ವೆಸ್ಟ್‌ಗೇಟ್ ಬಳಿ ಆಟೋರಿಕ್ಷಾದಲ್ಲಿಳಿದೆ. ಮುಖ್ಯದ್ವಾರದಲ್ಲಿ ಹೆಚ್ಚು ವಾಹನಗಳು-ಜನರು ಇರುತ್ತಾರೆಂದು, ಈ ಕಡೆಯೇ ಇಳಿದು ಗಾಜಿನಮನೆಗೆ ಓಡಿದೆ.

ವಿಶ್ವೇಶ್ವರಯ್ಯ ಮತ್ತು ನೆಹರೂ ಅವರನ್ನು ಜೊತೆಯಾಗಿ ನೋಡಿ ಭಾರತ ಭಾಗ್ಯ ವಿಧಾತರ ದರ್ಶನವಾದಂತೆಯೇ ಭಾಸವಾಯಿತು.
ಆಗತಾನೇ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ಅವರು ಎಚ್.ಎ.ಎಲ್. ವಿಮಾನ ನಿಲ್ದಾಣದಿಂದ ಗೌರವ ವಾಹನಗಳ ನಡುವೆ ಬಂದಿಳಿದರು. ಸದ್ಯ, ನಾನು ಬಂದದ್ದು ತಡವಾಗಲಿಲ್ಲ ಎನ್ನಿಸಿತು. ಪಂಡಿತ್‌ಜೀ ಬಂದೊಡನೆ ಖಾದಿಧಾರಿಗಳು, ರಾಜಕಾರಣಿಗಳು, ಗಣ್ಯರು ಹಾರಗಳ ಸಮೇತ ಅವರನ್ನು ಮುತ್ತಿದರು. ನನ್ನ ಕೈಲಿ ಆಹ್ವಾನಪತ್ರಿಕೆಯಿದ್ದರೂ, ಪೊಲೀಸರು ಕಾಯಲು ಸೂಚಿಸಿದ್ದರು. ವೇದಿಕೆಯತ್ತ ನಡೆದ ನೆಹರೂ ಅವರ ಕೈಯಲ್ಲಿ ಹಾರಗಳಿದ್ದವು ಮತ್ತು ದಾರಿಯಲ್ಲಿ ನಿಂತಿದ್ದ ನಾನು ಅನಿರೀಕ್ಷಿತವಾಗಿ ಕೈಚಾಚಿಯೇ ಬಿಟ್ಟೆ. ನೆಹರೂ ತಮ್ಮ ಕೈಯಲ್ಲಿದ್ದ ಹಾರಗಳನ್ನು ನನಗೆ ಕೊಟ್ಟುಬಿಟ್ಟರು. ಟೈ-ಜ್ಯಾಕೆಟ್ ಧರಿಸಿದ್ದ ನಾನು ಸಮಯ ಸ್ಫೂರ್ತಿಯಿಂದ ಪ್ರಧಾನಮಂತ್ರಿಗಳ ಹಿಂದೆ ಹೋಗಿಯೇಬಿಟ್ಟೆ. ಯಾರೂ ತಡೆಯಲಿಲ್ಲ.

ಇಂದಿನಂತೆ ವಿಪರೀತ ಸುರಕ್ಷತಾ ನಿರ್ಬಂಧಗಳು ಆಗಿರಲಿಲ್ಲ. ನನ್ನ ಕೈಯಲ್ಲಿದ್ದ ಹಾರಗಳನ್ನು ಏನು ಮಾಡಬೇಕೆಂಬುದೇ ತಿಳಿಯಲಿಲ್ಲ. ವೇದಿಕೆಯ ಒಂದು ಮೂಲೆಯಲ್ಲಿಟ್ಟು ಸಭಿಕರ ಆಸನಗಳ ಬಳಿ ಬಂದೆ. ಅಲ್ಲೊಬ್ಬರು ಘನತೆ-ಗೌರವ-ಸೌಂದರ್ಯಗಳು ಮೇಳೈಸಿದ್ದ ಮಹಿಳೆ ಗಾಗಲ್ಸ್ ಧರಿಸಿ ಕುಳಿತಿದ್ದರು. ಅವರ ಸನಿಹದ ಖಾಲಿ ಕುರ್ಚಿಯಲ್ಲಿ ಕುಳಿತೇಬಿಟ್ಟೆ. (ನಂತರ ಅವರು ನಮ್ಮಂತಹ ಯುವಜನರ ಕನಸಿನರಾಣಿ ಖ್ಯಾತ ತಾರೆ ವೈಜಯಂತಿಮಾಲಾ ಎಂಬುದು ತಿಳಿದು ಕ್ಷಣಕಾಲ ಹೃದಯದ ಬಡಿತವೇ ನಿಂತಂತಾಯಿತು. ರೋಮಾಂಚನದಿಂದ ಸ್ವಲ್ಪ ಹೊತ್ತು ದಿಗ್ಭ್ರಾಂತನಾಗಿಹೋಗಿದ್ದೆ.)

ವೇದಿಕೆಯ ಮೇಲೆ ವಿಶ್ವೇಶ್ವರಯ್ಯನವರು ಆಗಲೇ ಕುಳಿತಿದ್ದರು. ಅವರ ಬಲಭಾಗಕ್ಕೆ ಮಹಾರಾಜರೂ ರಾಜ್ಯದ ರಾಜ್ಯಪಾಲರೂ ಆದ ಜಯಚಾಮರಾಜೇಂದ್ರ ಒಡೆಯರ್ ಕುಳಿತರು. ಎಡಗಡೆ ನೆಹರೂ ಕುಳಿತರು. ರಾಜ್ಯದ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರೇ ಸಭಾಕಾರ್ಯಕ್ರಮ ನಡೆಸಿಕೊಟ್ಟರು. ತ್ರಿಮೂರ್ತಿಗಳಂತೆ ಮೂರು ಜನ ಮಹಾಪುರುಷರು ವೇದಿಕೆಯ ಮೇಲೆ ಒಟ್ಟಾಗಿ ಕುಳಿತುದನ್ನು ನೋಡುವ ಭಾಗ್ಯ ನನ್ನದಾಯಿತು. ಆಧುನಿಕ ಭಾರತದ ಶಿಲ್ಪಿಗಳೂ, ಭಾರತರತ್ನ ಪ್ರಶಸ್ತಿ ಪುರಸ್ಕೃತರೂ ಆದ ವಿಶ್ವೇಶ್ವರಯ್ಯನವರನ್ನು - ನೆಹರೂ ಅವರನ್ನು ಜೊತೆಯಾಗಿ ನೋಡಿ ಭಾರತ ಭಾಗ್ಯ ವಿಧಾತರ ದರ್ಶನವಾದಂತೆಯೇ ಭಾಸವಾಯಿತು.

ಗೌರವಾರ್ಪಣೆ, ಕೃತಜ್ಞತೆಗಳ ನಂತರ ಮಹಾರಾಜರು ಮಾತನಾಡಿದರು. ನಂತರ ನೆಹರೂ ಅವರು ತಮ್ಮ ಭಾಷಣದಲ್ಲಿ, ವಿಶ್ವೇಶ್ವರಯ್ಯನವರು ದೇಶಕ್ಕಾಗಿ ಮಾಡಿದ ಮಹಾನ್ ಸೇವೆಯನ್ನು ಪ್ರಶಂಸಿಸಿ, ದೇಶಕ್ಕೆ ದೇಶವೇ ವಿಶ್ವೇಶ್ವರಯ್ಯನವರಿಗೆ ಕೃತಜ್ಞವಾಗಿದೆ ಎಂದರು. ನಿಮ್ಮಂತಹ ಹಿರಿಯರಿಗೆ ನಾವೆಲ್ಲಾ ಚಿಕ್ಕವರಾಗಿ ಕಾಣಿಸಬಹುದಾದರೂ, ನಮಗೆಲ್ಲಾ ಈಗಾಗಲೇ ವಯಸ್ಸಾಯಿತು. ಆದರೆ ಎಂದೆಂದಿಗೂ ನಿಮ್ಮ ಅಮೂಲ್ಯವಾದ ಜೀವನಯಾತ್ರೆಯೇ ನಮಗೆ ಮಾರ್ಗದರ್ಶಕವಾಗಿರುತ್ತದೆ ಎಂದು ಪಂಡಿತ್‌ಜೀ ಕೊಂಡಾಡಿದರು.

ಸನ್ಮಾನ - ಗೌರವ ಸಮರ್ಪಣೆಗಳ ನಂತರ ವಿಶ್ವೇಶ್ವರಯ್ಯನವರು ಮೊದಲೇ ಸಿದ್ಧಪಡಿಸಿಕೊಂಡುಬಂದಿದ್ದ ತಮ್ಮ ಪುಟ್ಟ ಭಾಷಣವನ್ನು ಓದಿದರು. ವಿಶ್ವೇಶ್ವರಯ್ಯನವರು ಸಮಯಪರಿಪಾಲನೆ, ಕ್ಲುಪ್ತತೆಗಳಿಗೆ ತುಂಬ ಮಹತ್ತ್ವ ನೀಡುತ್ತಿದ್ದರು. ಹಾಗೆಂದೇ ಇಡೀ ಕಾರ್ಯಕ್ರಮ ಸಮಯಬದ್ಧವಾಗಿ, ಶಿಸ್ತುಬದ್ಧವಾಗಿ ನಡೆಯಿತು.

ಇಂದಿರಾಗಾಂಧಿಯವರ ಪತಿ ಫಿರೋಜ್‌ಗಾಂಧಿ ದೆಹಲಿಯಲ್ಲಿ ಅನಿರೀಕ್ಷಿತವಾಗಿ ನಿಧನರಾಗಿದ್ದರು. ಈ ದುಃಖದ ಸನ್ನಿವೇಶದಲ್ಲಿ ನೆಹರೂ ಈ ಕಾರ್ಯಕ್ರಮಕ್ಕೆ ಬರಲು ಆಗುತ್ತದೆಯೋ ಇಲ್ಲವೋ ಎನ್ನುವ ಆತಂಕವಿತ್ತು. ಅಂತ್ಯಕ್ರಿಯೆ ಇನ್ನೂ ಆಗಬೇಕಿತ್ತು. ಆದರೂ ನೆಹರೂ, ವಿಶ್ವೇಶ್ವರಯ್ಯನವರ ಮೇಲಿನ ಗೌರವದಿಂದ, ತಮ್ಮ ಕೌಟುಂಬಿಕ ದುಃಖವನ್ನು ಬದಿಗಿರಿಸಿ ಈ ಕಾರ್ಯಕ್ರಮಕ್ಕೆ ಬಂದುಹೋಗಿದ್ದರು.

ಈ ಎಲ್ಲ ಐತಿಹಾಸಿಕ ಕ್ಷಣಗಳಿಗೆ ಪ್ರತ್ಯಕ್ಷ ಸಾಕ್ಷಿಯಾದ ನನಗೆ, ಈಗ, ಅರ್ಧಶತಮಾನದ ನಂತರ ಎದೆತುಂಬಿ ಬಂದ ದಿವ್ಯಾನುಭವ. ವೇದಿಕೆಯ ಮೂಲೆಯೊಂದರಲ್ಲಿ ನಾನು ಹಾರಗಳನ್ನು ಇರಿಸಿದ್ದು ಆ ತ್ರಿಮೂರ್ತಿಗಳ ಪದತಲದಲ್ಲಿ ಮಾಡಿದ ಪುಷ್ಪಾರ್ಪಣೆಯಂತೆಯೇ ಎಂದು ಅನ್ನಿಸುತ್ತಿದೆ. ಈ ದಿವ್ಯಾನುಭವದಿಂದ ನನ್ನ ಜನ್ಮವೇ ಪಾವನವಾಯಿತೇನೋ ಎನ್ನುವ ಭಾವನೆ ಬಂದಿತು. ಹಾಗೆಂದೇ ಹಿಂದಿರುಗುವ ಹಾದಿಯಲ್ಲಿ ಆಟೋರಿಕ್ಷಾ ಹಿಡಿಯದೇ, ಒಬ್ಬನೇ ಮೌನವಾಗಿ ಮೆಲುಕುಹಾಕುತ್ತಾ ನಡೆದೇ ಹೋದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
GS Satya of San Jose remembers Sir M Visvesvaraya on his birth anniversary. September 15 is celebrated as Engineer's Day.
Please Wait while comments are loading...