• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾನವ ಹಕ್ಕು ಕಾರ್ಯಕರ್ತ ಡಾ||ಬಿನಾಯಕ್ ಸೇನ್

By * ವಿಶ್ಲೇಷಣೆ : ಡಾ||ಕೆ.ಎಸ್. ಶರ್ಮಾ
|
ಕಳೆದ ಎರಡು ವರ್ಷಗಳಿಂದ ಛತ್ತೀಸ್‌ಗಡ್ ರಾಜ್ಯದ ರಾಯ್‌ಪುರ ಕೇಂದ್ರ ಕಾರಾಗಾರದಲ್ಲಿ ವಿಚಾರಣಾಪೂರ್ವ ಬಂಧನದಲ್ಲಿ ನರಳುತ್ತಿದ್ದ, ಮಕ್ಕಳ ರೋಗತಜ್ಞ ಡಾ|| ಬಿನಾಯಕ್ ಸೇನ್‌ಗೆ ಸರ್ವೋಚ್ಚ ನ್ಯಾಯಾಲಯವು ಜಾಮೀನನ್ನು ನೀಡಿ ಮಾನವೀಯತೆಯಿಂದ ಮೆರೆದಿದೆ. ಅತ್ಯಂತ ಗಮನಾರ್ಹವಾದ ವಾಸ್ತವಾಂಶವೆಂದರೆ ಸರ್ವೋಚ್ಚ ನ್ಯಾಯಾಲಯದ ರಜಾಪೀಠದಲ್ಲಿದ್ದ ನ್ಯಾ.ಮೂ. ಮಾರ್ಕಂಡೇಯ ಕಟ್ಜು ಹಾಗೂ ನ್ಯಾ.ಮೂ. ದೀಪಕ್ ವರ್ಮಾ, ಛತ್ತೀಸ್‌ಗಡ ರಾಜ್ಯ ಸರ್ಕಾರದ ಪರ ಹಿರಿಯ ವಕೀಲ ಮುಕುಲ್ ರೋಹಟಗಿಯವರು ಸೇನ್‌ರವರ ಜಾಮೀನು ಅರ್ಜಿಯ ವಿರುದ್ಧ ವಾದಗಳನ್ನು ಮಂಡಿಸಲು ಅನುಮತಿಯನ್ನು ನೀಡಲಿಲ್ಲ. ಅಷ್ಟೇಅಲ್ಲ, ಸೇನ್‌ಪರ ಹಿರಿಯ ವಕೀಲರಾದ ಶಾಂತಿಭೂಷಣ್ ಇವರು ಜಾಮೀನು ಪರ ವಾದಗಳನ್ನು ಕೂಡ ಮಂಡಿಸಲು ಅವಕಾಶವನ್ನು ನೀಡದೆ, ಬಿನಾಯಕ್ ಸೇನ್‌ರವರಿಗೆ ಜಾಮೀನನ್ನು ಮಂಜೂರುಮಾಡುವ ಆಜ್ಞೆಯನ್ನು ಮಾಡಿದೆ.

ಸೇನ್‌ರವರ ಅರ್ಜಿಯಲ್ಲಿ ಅಡಕವಾಗಿದ್ದ ಎಲ್ಲ ವಾಸ್ತವಾಂಶಗಳನ್ನೂ ಅಧ್ಯಯನಮಾಡಿಕೊಂಡು ಬಂದಿದ್ದ ಇಬ್ಬರು ನ್ಯಾಯಮೂರ್ತಿಗಳ ಪೀಠ, ಈ ವಾಸ್ತವಾಂಶಗಳ ಅರ್ಹತೆಯ ಆಧಾರದ ಮೇಲೆಯೇ ಮೇ 25ರಂದು ತನ್ನ ಆಜ್ಞೆಯನ್ನು ಹೊರಡಿಸಿತ್ತು. ಇದು ಸರ್ವೋಚ್ಚ ನ್ಯಾಯಾಲಯದ ಅಪರೂಪದ, ಅನನ್ಯ ಆದೇಶವೆಂದೇ ಹೇಳಬೇಕಾಗುತ್ತದೆ. ಈ ಪ್ರಕರಣ ಕುರಿತು ಒಂದೆಡೆ ಪ್ರಕರಣಕ್ಕೆ ಸಂಬಂಧಪಟ್ಟ ವಾಸ್ತವಾಂಶಗಳನ್ನು, ಇನ್ನೊಂದೆಡೆ ಸೇನ್‌ರವರ ಬಿಡುಗಡೆಗಾಗಿ ವಿಶ್ವದಾದ್ಯಂತ ಗಣ್ಯರು ನೀಡಿದ ಬೆಂಬಲ ಹಾಗೂ ವ್ಯಕ್ತಪಡಿಸಿದ ಅಭಿಮತಗಳನ್ನು ವೀಕ್ಷಿಸುವುದು ಉಪಯುಕ್ತವಾಗುತ್ತದೆ. ಬಿನಾಯಕ್ ಸೇನ್‌ರವರ ವ್ಯಕ್ತಿಪರಿಚಯ ಪಡೆದು, ಇವರ ಮೇಲೆ ಛತ್ತೀಸ್‌ಗಡ್ ಸರ್ಕಾರ ದಾಖಲು ಮಾಡಿದ ಪ್ರಕರಣದಲ್ಲಿಯ ಆರೋಪಗಳನ್ನು ಪರಿಶೀಲಿಸೋಣ.

ಬಿನಾಯಕ್ ಸೇನ್ ಒಬ್ಬ ಪ್ರಖ್ಯಾತ ಶಿಶುವೈದ್ಯರಾಗಿದ್ದರು. ತಮಿಳುನಾಡಿನ ವೆಲ್ಲೂರು ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್‌ದಲ್ಲಿ ವೈದ್ಯಕೀಯ ಪದವಿಯನ್ನು ಪಡೆದು, 1976ರಿಂದ 1978ರ ವರೆಗೆ ನವದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ಸಾಮಾಜಿಕ ಔಷಧ ಹಾಗೂ ಸಾಮುದಾಯಿಕ ಆರೋಗ್ಯ ಕೇಂದ್ರದಲ್ಲಿ ಫ್ಯಾಕಲ್ಟಿ ಸದಸ್ಯರಾಗಿ ಸೇವೆಯನ್ನು ಸಲ್ಲಿಸಿದರು. ಈ ಶೈಕ್ಷಣಿಕ ಕ್ಷೇತ್ರದ ಸೇವೆಗೆ ರಾಜೀನಾಮೆಯನ್ನು ನೀಡಿ ಸಾಮುದಾಯಿಕ ಆರೋಗ್ಯ ಸೇವೆಯಲ್ಲಿ ತೊಡಗುವ ಉದ್ದೇಶದಿಂದ ಮಧ್ಯಪ್ರದೇಶದ ಹೋಷಂಗಾಬಾದ್ ಜಿಲ್ಲೆಯ ಗ್ರಾಮೀಣ ಆರೋಗ್ಯ ಕೇಂದ್ರದ ಸೇವೆಯಲ್ಲಿ ಕಾರ್ಯತತ್ಪರರಾದರು.

ಈ ಕೇಂದ್ರದಲ್ಲಿ ಕ್ಷಯರೋಗಕಾರಕ ಕಾರಣಗಳ ಅಧ್ಯಯನದಲ್ಲಿ ಇವರು ವಿಶೇಷ ಪರ್ಯಾಯ ಆರೋಗ್ಯ ವ್ಯವಸ್ಥೆಯ ಮೂಲಕ ಬಡವರ ಆರೋಗ್ಯ ಆವಶ್ಯಕತೆಗಳಿಗೆ ಸ್ಪಂದಿಸಲೆಂದೇ ಸ್ಥಾಪಿಸಲ್ಪಟ್ಟ "ಮೆಡಿಕೋ ಫ್ರೆಂಡ್ಸ್ ಸರ್ಕಲ್" ಎಂಬ ರಾಷ್ಟ್ರೀಯ ಸಂಘಟನೆಯ ಸಕ್ರಿಯ ಸದಸ್ಯರಾದರು. ತದನಂತರ ದಿಲ್ಲಿ, ರಾಜಹಾರ, ಛತ್ತೀಸ್‌ಗಡ್‌ಗಳಲ್ಲಿ ಗಣಿಕಾರ್ಮಿಕರ ಆರೋಗ್ಯ ಅವಶ್ಯಕತೆಗಳಿಗೆ ಪೂರೈಸುವ ಕಾರ್ಯದಲ್ಲಿ ತೊಡಗಿದ್ದರು. ಇಲ್ಲಿಂದ ತಿಲ್ದದಲ್ಲಿಯ ಮಿಷನ್ ಆಸ್ಪತ್ರೆಯಲ್ಲಿ ಶಿಶುವೈದ್ಯರೆಂದು ಕಾರ್ಯನಿರ್ವಹಿಸತೊಡಗಿದರು. ಇಲ್ಲಿ ಕಾರ್ಯಮಾಡುತ್ತಿದ್ದಾಗ, ಪ್ರಖ್ಯಾತ ಕಾರ್ಮಿಕ ಮುಖಂಡ ಶಂಕರ್ ಗುಹ ನಿಯೋಗಿ ಇವರೊಡನೆ ನಿಕಟ ಸಂಪರ್ಕವನ್ನು ಹೊಂದಿದ್ದರು. ದುರಂತವೆಂದರೆ, ಶಂಕರಗುಹ ನಿಯೋಗಿಯವರ ಕೊಲೆಯಾಯಿತು. ಈ ದುರ್ಘಟನೆಯ ನಂತರ ಡಾ|| ಬಿನಾಯಕ್ ಸೇನ್ ರಾಯ್‌ಪುರಕ್ಕೆ ಸ್ಥಳಾಂತರಗೊಂಡರು.

ರಾಯ್‌ಪುರಕ್ಕೆ ಬಂದಾಗಿನಿಂದ ಸೇನ್ ಪ್ರಾಥಮಿಕ ಆರೋಗ್ಯ ರಕ್ಷಣೆಗಾಗಿ ಕೆಲವು ಮಾದರಿ ಯೋಜನೆಗಳನ್ನು ರೂಪಿಸತೊಡಗಿದರು. ಇವರನ್ನು ಛತ್ತೀಸ್‌ಗಡ್ ರಾಜ್ಯ ಸರ್ಕಾರವು ಸಮುದಾಯ ಮೂಲದ ಆರೋಗ್ಯ ಕಾರ್ಯಕರ್ತರ ಕಾರ್ಯಕ್ರಮವನ್ನು ರೂಪಿಸಲೆಂದೇ ರಚಿಸಲಾದ ರಾಜ್ಯ ಸಲಹಾಸಮಿತಿಯ ಸದಸ್ಯರನ್ನಾಗಿ ಕೂಡ ನಾಮಕರಣಮಾಡಿತ್ತು. ವಲಸೆಬಂದ ಕಾರ್ಮಿಕರ ಮಕ್ಕಳ ಆರೋಗ್ಯ ರಕ್ಷಣೆಯ ಕಾರ್ಯದಲ್ಲಿ ಸೇನ್ ಅವಿರತವಾಗಿ ತೊಡಗಿದ್ದರು. ಇವರ ಅನುಪಮ ಸೇವೆಯನ್ನು ಗುರುತಿಸಿದ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು 2004ರಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಕಾಲೇಜಿನ ಹಳೆಯ ವಿದ್ಯಾರ್ಥಿಗಳಿಗೆಂದೇ ಮೀಸಲಿಟ್ಟ ಪ್ರತಿಷ್ಠಿತ "ಪಾಲ್ ಹ್ಯಾರಿಸನ್ ಅವಾರ್ಡ್" ಪ್ರದಾನಮಾಡಿ ಗೌರವಿಸಿತ್ತು.

ಇದೇ ಅವಧಿಯಲ್ಲಿ ಸೇನ್ ಛತ್ತೀಸ್‌ಗಡ್ ರಾಜ್ಯದ ಪಿಯುಸಿಎಲ್ ಘಟಕ (ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್)ದ ರಾಜ್ಯ ಪ್ರಧಾನಕಾರ್ಯದರ್ಶಿಯಾಗಿ ಹಾಗೂ ಪಿಯುಸಿಎಲ್ ರಾಷ್ಟ್ರೀಯ ಸಂಘಟನೆಯು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಛತ್ತೀಸ್‌ಗಡ್ ರಾಜ್ಯಘಟಕ ಪ್ರಧಾನಕಾರ್ಯದರ್ಶಿಯಾಗಿ ರಾಜ್ಯಾದ್ಯಂತ ಸಂಭವಿಸಿದ್ದ ಕಸ್ಟೋಡಿಯಲ್ ಡೆತ್ಸ್ (ಬಂಧನದಲ್ಲಿದ್ದಾಗ ಸಂಭವಿಸುವ ಸಾವುಗಳು), ಫಾಲ್ಸ್ ಎನ್‌ಕೌಂಟರ್ಸ್ ಮುಂತಾದ ಘಟನೆಗಳ ವಿರುದ್ಧ ಪ್ರತಿಭಟನೆಗಳನ್ನು ಸಂಘಟಿಸಿದ್ದರಲ್ಲದೆ, ಈ ರಾಜ್ಯದಲ್ಲಿ ಪ್ರಾರಂಭಿಸಲಾಗಿದ್ದ ನಕ್ಸಲ್ - ನಿಯಂತ್ರಣಸಂಸ್ಥೆ "ಸಲ್ವಾ ಜುಡುಮ್"ದ ದುರಾಕ್ರಮಣ ಹಾಗೂ ದುರಾಡಳಿತವನ್ನು ಬಯಲಿಗೆಳೆಯತೊಡಗಿದರು.

ಈ ಹಿನ್ನೆಲೆಯಲ್ಲಿ ಡಾ|| ಸೇನ್ ಅವರನ್ನು ಅನ್‌ಲಾಫುಲ್ ಆಕ್ಟಿವಿಟೀಸ್ (ಪ್ರಿವೆನ್ಷನ್) ಆಕ್ಟ್ 1967, ಛತ್ತೀಸ್‌ಗಡ್ ಪಬ್ಲಿಕ್ ಸೆಕ್ಯೂರಿಟಿ ಆಕ್ಟ್ 2005 ಹಾಗೂ ಇಂಡಿಯನ್ ಪೀನಲ್ ಕೋಡ್ ಇವುಗಳ ಅಡಿಯಲ್ಲಿ ಆರೋಪಗಳನ್ನು ಮಾಡಿ ಮೇ 14, 2007ರಂದು ಬಂಧಿಸಿದ್ದರು. ಇವರ ವಿರುದ್ಧ ಮಾಡಲಾದ ಆರೋಪಗಳೆಂದರೆ, ರಾಯ್‌ಪುರ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿದ್ದ ನಾರಾಯಣ ಸನ್ಯಾಲ್ ಇವರ ಕಡೆಯಿಂದ ನಿಷೇಧಿತ ನಕ್ಸಲ್ ಸಂಘಟನೆ - ಸಿಪಿಐ(ಎಂಎಲ್)ಗೆ ಗುಪ್ತಪತ್ರಗಳನ್ನು ರವಾನಿಸುತ್ತಿದ್ದರು ಎಂಬುದಾಗಿದೆ. ಈ ಕೇಂದ್ರ ಕಾರಾಗೃಹದಲ್ಲಿ ಸೇನ್ ಇವರು ನಾರಾಯಣ್ ಸನ್ಯಾಲ್ ಇವರನ್ನು 33 ಸಲ ಭೇಟಿಯಾಗಿದ್ದರೆಂಬುದು ಆರೋಪವಾಗಿತ್ತು. ಅಂತೆಯೇ ಸೇನ್ ಈ ನಕ್ಸಲ್ ಸಂಘಟನೆಗೆ ಬಾಡಿಗೆಗೆ ಮನೆಯನ್ನು ಕೊಡಿಸಿದ್ದರೆಂದೂ, ನಕ್ಸಲ್‌ರ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಸಹಾಯಕರಾಗಿದ್ದರೆಂದೂ ಆರೋಪಗಳನ್ನು ಮಾಡಲಾಗಿತ್ತು.

ಛತ್ತೀಸ್‌ಗಡ್ ವರಿಷ್ಠ ನ್ಯಾಯಾಲಯವು ಸೇನ್ ವಿರುದ್ಧ ಮಾಡಲಾಗಿದ್ದ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿವೆ ಎಂದು ತೀರ್ಮಾನಿಸಿ, ಇವರ ಜಾಮೀನ್ ಅರ್ಜಿಯನ್ನು ತಳ್ಳಿಹಾಕಿತ್ತು. ಆದರೆ, ಪೋಲೀಸರು ಮಾಡಿದ್ದ ಆರೋಪಗಳಲ್ಲಿ ತಿರುಳಿಲ್ಲವೆಂಬ ಅಂಶ ವಿಚಾರಣಾ ನ್ಯಾಯಾಲಯದಲ್ಲಿ ಬೆಳಕಿಗೆ ಬಂದಿತ್ತು. ವಿಚಾರಣೆಯ ಕಾಲದಲ್ಲಿ ಪೋಲೀಸರು ಹಾಜರುಪಡಿಸಿದ 38 ಸಾಕ್ಷಿಗಳಲ್ಲಿ ಯಾರೂ ಪೋಲೀಸರು ಮಾಡಿದ್ದ ಆರೋಪಗಳನ್ನು ಸಮರ್ಥಿಸುವ ಸಾಕ್ಷ್ಯವನ್ನು ನೀಡಲಿಲ್ಲ.

ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ವಿ.ಆರ್. ಕೃಷ್ಣಅಯ್ಯರ್ ರಾಷ್ಟ್ರದ ಪ್ರಧಾನಮಂತ್ರಿ ಡಾ|| ಮನಮೋಹನ್ ಸಿಂಗ್ ಇವರಿಗೆ ಏಪ್ರಿಲ್ 17, 2008ರಂದು ಒಂದು ಪತ್ರವನ್ನು ಬರೆದು, "ಡಾ|| ಸೇನ್ ಪ್ರಕರಣದ ಅರ್ಹತೆಯ ಮಾತೇನೇ ಇರಲಿ, ಈ ಪ್ರಕರಣದ ವಿಚಾರಣೆ ನಡೆದಿರುವ ರೀತಿಯನ್ನು ನೋಡಿದಾಗ, ಇದು ಅಪರಿಮಿತ ಅನ್ಯಾಯಕ್ಕೆ ಉದಾಹರಣೆಯಾಗಿದ್ದು, ಇದರಿಂದ ಭಾರತೀಯ ಪ್ರಜಾಸತ್ತೆಗೆ ಅತೀವ ನಾಚಿಕೆಗೇಡು ಸ್ಥಿತಿಯನ್ನು ತಂದಿದೆ" ಎಂದಿದ್ದರು.

ಇನ್ನೊಂದು ಮಹತ್ವದ ಪ್ರಸಂಗವೆಂದರೆ, ಅಮರ್ತ್ಯಸೇನ್ ಅವರನ್ನು ಒಳಗೊಂಡು ವಿಶ್ವದ 22 ನೋಬೆಲ್ ಪಾರಿತೋಷಕ ವಿಜೇತರು ಭಾರತದ ರಾಷ್ಟ್ರಪತಿಗಳಿಗೆ ಹಾಗೂ ಪ್ರಧಾನಿಗಳಿಗೆ ಪತ್ರವನ್ನು ಬರೆದು ಸೇನ್ ಇವರನ್ನು ಬಿಡುಗಡೆಮಾಡಿ, ಇವರಿಗೆ ವಾಷಿಂಗ್ಟನ್ ಮೂಲಕ ಗ್ಲೋಬಲ್ ಹೆಲ್ತ್ ಅಂಡ್ ಹ್ಯೂಮನ್ ರೈಟ್ಸ್ ಸಂಸ್ಥೆ ಪ್ರದಾನಮಾಡಿರುವ "ಜೋನತನ್‌ಮ್ಯಾನ್ ಅವಾರ್ಡ್" ಸ್ವೀಕರಿಸಲು ಅನುವುಮಾಡಿಕೊಡಿ ಎಂದು ಮನವಿಮಾಡಿದ್ದರು. ಆದರೂ ಇವರನ್ನು ಬಿಡುಗಡೆಮಾಡಿರಲಿಲ್ಲ. ಅಂತೆಯೇ 2007ರ ಡಿಸೆಂಬರ್‌ದಲ್ಲಿ ಇಂಡಿಯನ್ ಅಕ್ಯಾಡೆಮಿ ಆಫ್ ಸೋಷಿಯಲ್ ಸೈನ್ಸಸ್ ಮುಂಬೈಯಲ್ಲಿ ಏರ್ಪಡಿಸಿದ್ದ ಇಂಡಿಯನ್ ಸೋಷಿಯಲ್ ಸೈನ್ಸ್ ಕಾಂಗ್ರೆಸ್‌ದಲ್ಲಿ ಡಾ|| ಸೇನ್‌ಗೆ ನೀಡಲು ನಿಗದಿಪಡಿಸಿದ್ದ "ಸುವರ್ಣ ಪದಕ" ಸ್ವೀಕರಿಸಲು ಕೂಡ ರಾಯ್‌ಪುರ ನ್ಯಾಯಾಲಯ ಜಾಮೀನನ್ನು ನೀಡಿರಲಿಲ್ಲ ಎಂಬ ಕಾರಣಕ್ಕೆ ಇವರ ಹೆಂಡತಿ ಪ್ರೊ|| ಇಲಿನಾ ಸೇನ್, ತಮ್ಮ ಗಂಡನ ಪರವಾಗಿ ಈ ಸುವರ್ಣಪದಕವನ್ನು ಸ್ವೀಕರಿಸಿದ್ದರು.

ಈ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯವು ಬಿನಾಯಕ್ ಸೇನ್ ಇವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ನೀಡಿರುವ ಆದೇಶವು ಐತಿಹಾಸಿಕವಾದದ್ದು ಎಂದು ನಿಸ್ಸಂದೇಹವಾಗಿ ಹೇಳಬಹುದಾಗಿದೆ. ಸೇನ್ ಅವರನ್ನು ಬಿಡುಗಡೆ ಮಾಡಿ (Free Binayak Sen Campaign)ಎಂದು ದೇಶಾದ್ಯಂತ ಚಳವಳಿ ನಡೆದಿತ್ತು. ಅದಕ್ಕೊಂದು ವೆಬ್ ಸೈಟ್ ನಿರ್ಮಿಸಲಾಗಿತ್ತು.ನೋಡಿ : www.binayaksen.net

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more