ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಟೋ ಚಾಲಕನ ಮಗಳು ಆಗುವಳೇ ವಿಜ್ಞಾನಿ?

By * ಪ್ರಸಾದ ನಾಯಿಕ
|
Google Oneindia Kannada News

Bhargavi M
ಮುಂದೊಂದು ದಿನ ವಿಜ್ಞಾನಿಯಾಗಿ ಅಬ್ದುಲ್ ಕಲಾಂ ಅಥವಾ ಕಲ್ಪನಾ ಚಾವ್ಲಾ ಅಥವಾ ಸುನೀತಾ ವಿಲಿಯಮ್ಸ್ ಆಗುವ ಕನಸು ಹೊತ್ತಿರುವ ಹುಡುಗಿಗೆ ಕನಸು ನನಸಾಗಿಸಿಕೊಳ್ಳುವ ಆತ್ಮವಿಶ್ವಾಸವಿದೆ. ಸಾಧಿಸೇ ಸಾಧಿಸುತ್ತೇನೆಂಬ ಛಲವೂ ಇದೆ. ಆದರೆ ಇಲ್ಲವಿರುವುದು ಹೆಚ್ಚಿನ ವಿದ್ಯೆಯನ್ನು ಗಿಟ್ಟಿಸಿಕೊಳ್ಳಲು ಅಗತ್ಯವಿರುವ ಹಣಬಲವೊಂದೇ.

ವಿಪರ್ಯಾಸವೆಂದರೇ ಇದೇ ಅಲ್ವೆ? ಕನಸುಗಳ ಮೂಟೆ ಹೊತ್ತು ಮುಂದೇನು ಮಾಡಬೇಕೆಂದು ತೋಚದಿರುವ ಸಂಕಷ್ಟಮಯ ಸ್ಥಿತಿಯಲ್ಲಿ ನಿಂತಿಹಳು ಭಾರ್ಗವಿ ಎಂ. ಟ್ಯೂಷನ್ನಿನ ಹಂಗಿಲ್ಲದೇ ಮಲ್ಲೇಶ್ವರಂ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಷ್ಟಪಟ್ಟು ಓದಿ ಎಸ್ಸೆಸ್ಸೆಲ್ಸಿಯಲ್ಲಿ ಶೇ.97.44ರಷ್ಟು (607/625) ಅಂಕಗಳನ್ನು ಪಡೆದು ಸಂತಸದ ಕಡಲಲ್ಲಿ ಭಾರ್ಗವಿ ಹಾರಾಡುತ್ತಿದ್ದರೂ ಅವರ ಕಾಲುಗಳ ಗಟ್ಟಿಯಾಗಿ ನೆಲದ ಮೇಲೇ ನಿಂತಿವೆ. ಭಾರ್ಗವಿ ನಿಗರ್ವಿ ಕೂಡ.

ಭಾರ್ಗವಿ ಅವರ ತಂದೆ ಮಧುಸೂಧನ ಅವರು ಆಟೋ ಚಾಲಕರಾಗಿದ್ದಾರೆ. ಆಟೋ ಚಾಲನೆಯಿಂದ ಬರುವ ಆದಾಯದಿಂದ ನಾಲ್ವರಿರುವ ಪುಟ್ಟ ಕುಟುಂಬದ ಜೀವನ ಸಾಗಬೇಕು. ಹೀಗಿರುವಾಗ ಮಲ್ಲೇಶ್ವರಂದಲ್ಲಿರುವ ಮೈಸೂರು ಎಜ್ಯುಕೇಶನ್ ಸೊಸೈಟಿಯಂಥ ಕಾಲೇಜಿನಲ್ಲಿ ದುಬಾರಿ ಶುಲ್ಕ ಕಟ್ಟಿ ಮುಂದೆ ಓದುವುದು ಹೇಗೆ ಎಂಬ ಚಿಂತೆ ಅವರನ್ನು ಕಾಡುತ್ತಿದೆ. ವೈಜ್ಞಾನಿಕ ಸಂಶೋಧನೆಯಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಬೇಕೆಂಬ ಗುರಿ ಇರುವ ಭಾರ್ಗವಿಗೆ ಕಷ್ಟಮಯ ದಾರಿಯ ಅರಿವಿದೆ. ಆದರೆ, ಹಣಕ್ಕಾಗಿ ದಾನಿಗಳ ಮುಂದೆ ಕೈಯೊಡ್ಡಬಾರದೆಂಬ ಸ್ವಾಭಿಮಾನಿ ಭಾರ್ಗವಿ ಮತ್ತು ಕುಟುಂಬದವರು.

ದುಬಾರಿ ಶುಲ್ಕದಿಂದಾಗಿ ಎಂಇಎಸ್ ಕಾಲೇಜಿನ ಬದಲು ಮಲ್ಲೇಶ್ವರಂ ಸರ್ಕಾರಿ ಕಾಲೇಜಿನಲ್ಲಿ ಸೇರಿಸಲು ಭಾರ್ಗವಿ ತಂದೆ ಮಧುಸೂಧನ ಅವರು ಚಿಂತಿಸುತ್ತಿದ್ದರು. ಆದರೆ, ಇಂಥ ಸಮಯದಲ್ಲಿಯೇ ಆಶಾಕಿರಣವಾಗಿ ಜನಾನುರಾಗಿಯಾಗಿರುವ ಬಿಜೆಪಿ ನಾಯಕ ಸುರೇಶ್ ಕುಮಾರ್ ಅವರು ಮುಂದಿನ ವಿದ್ಯಾಭ್ಯಾಸದ ಹೊಣೆ ಹೊರುವುದಾಗಿ ಅಭಯಹಸ್ತ ನೀಡಿರುವುದರಿಂದ ಭಾರ್ಗವಿ ಕುಟುಂಬದವರು ನಿರಾಳವಾಗಿದ್ದಾರೆ. ಹೆಚ್ಚಿನದನ್ನು ಸಾಧಿಸಬೇಕೆಂಬ ಮುಂದಿನ ದಾರಿ ಭಾರ್ಗವಿಗೆ ನಿಚ್ಚಳವಾಗಿ ಕಾಣುತ್ತಿದೆ. ಅನೇಕ ದಾನಿಗಳು ಹಣದ ಸಹಾಯ ನೀಡುವುದಾಗಿ ಮುಂದೆ ಬಂದಿದ್ದರೂ ಭಾರ್ಗವಿ ಅವನ್ನೆಲ್ಲ ನಿರಾಕರಿಸಿದ್ದಾರೆ.

ಭಾರ್ಗವಿಗೆ ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಅಪಾರ ಆಸಕ್ತಿ. ಕಲಾಂ ಅವರನ್ನು ದೇವರಂತೆ ಆರಾಧಿಸುವ ಭಾರ್ಗವಿ ಮುಂದೊಂದು ದಿನ ಅವರಂತೆ ಆಗೇ ಆಗುತ್ತೇನೆಂಬ ಕನಸು ಹೊತ್ತಿದ್ದಾರೆ. ಎಸ್ಸೆಸ್ಸೆಲ್ಸಿಯಲ್ಲಿ ಅತ್ಯುತ್ತಮ ಅಂಕ ತೆಗೆದಿದ್ದರೂ ಅದು ಇತಿಹಾಸ ಎಂಬುದು ಭಾರ್ಗವಿ ಅವರ ಅರಿವಿನಲ್ಲಿದೆ. ಉತ್ತಮ ಅಡಿಪಾಯವೇನೋ ಸಿಕ್ಕಿದೆ ಮುಂದಿನ ವಿದ್ಯಾಭ್ಯಾಸ ಕನಸು ನನಸಾಗಿಸಿಕೊಳ್ಳಲು ಸಹಕಾರಿಯಾಗಲಿದೆ ಎಂಬುದು ಭಾರ್ಗವಿ ಉವಾಚ.

ಎಷ್ಟೇ ಅಂಕ ಪಡೆದರೂ, ಆರ್ಥಿಕ ಪರಿಸ್ಥಿತಿ ಎಂಥದೇ ಇದ್ದರೂ ವಿದ್ಯಾ ದೇಗುಲಗಳು ಭಾರ್ಗವಿಯಂಥ ವಿದ್ಯಾರ್ಥಿಗಳಿಗೆ ಶುಲ್ಕವಿಲ್ಲದೆ ಮುಕ್ತದ್ವಾರ ತೆರೆಯದಿರುವುದು ನಿಜಕ್ಕೂ ವಿಷಾದನೀಯ. ಏನೇ ಆಗಲಿ, ಸಕಾಲಿಕ ಧನಸಹಾಯದಿಂದ ಭಾರ್ಗವಿ ನಿರಾಳವಾಗಿದ್ದಾರೆ. ಅವರ ಮುಂದಿನ ಕನಸುಗಳೆಲ್ಲ ನನಸಾಗಲಿ ಎಂಬುದು ದಟ್ಸ್ ಕನ್ನಡದ ಹಾರೈಕೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X