ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರಸಿಂಹರಾವ್‌ ಎನ್ನುವ ‘ಇನ್‌ಸೈಡರ್‌’

By Staff
|
Google Oneindia Kannada News
  • ದಟ್ಸ್‌ಕನ್ನಡ ಬ್ಯೂರೊ
ರಾಜಕಾರಣದ ಸರಪಣಿಯಿಂದ ಮತ್ತೊಂದು ಹಳೆಯ ಕೊಂಡಿ ಕಳಚಿ ಬಿದ್ದಿದೆ. ಅನಾರೋಗ್ಯದ ಕಾರಣ ಆಸ್ಪತ್ರೆ ಸೇರಿದ್ದ ನರಸಿಂಹರಾವ್‌, ಚೇತರಿಸಿಕೊಂಡರು ಎನ್ನುವಾಗಲೇ ಸಾವಿನ ಸುದ್ದಿ ಬಂದಿದೆ. ‘ಅಂದಿರಿಕಿ ಮಂಚಿವಾಡು ಅನಂತಯ್ಯ’ ಎಂಬಂತೆ ಬದುಕಿದ ಪಿ.ವಿ.ನರಸಿಂಹರಾವ್‌ ಅಜಾತ ಶತ್ರು.

ಶತಕ ಹೊಡೆಯುವ ಮೊದಲೇ ಆಟ ಮುಗಿಸಿರುವ ನರಸಿಂಹರಾವ್‌ ಈಚಿನ ದಿನಗಳಲ್ಲಿ ಸುದ್ದಿಮನೆಯಿಂದ ದೂರವಿದ್ದವರು. ಡಿಸೆಂಬರ್‌ 9ರಂದು ಆಸ್ಪತ್ರೆಗೆ ಸೇರಿದಾಗಲೇ ನರಸಿಂಹರಾವ್‌ ಸುದ್ದಿಯ ಬೆಳಕಿಗೆ ಬಂದದ್ದು .

ರಾಜ್ಯಶಾಸ್ತ್ರ ಜ್ಞ, ವಾಗ್ಮಿ, ಬಹು ಭಾಷಾ ಪಂಡಿತ ಹೀಗೆ ಬಹುಮುಖ ವ್ಯಕ್ತಿತ್ವದ ಪಾಮುಲಪರ್ತಿ ವೆಂಕಟ ನರಸಿಂಹರಾವ್‌ ವಿವಿಧ ಕಾರಣಗಳಿಗೆ ನೆನಪಾಗುತ್ತಾರೆ. ನೆಹರು ಮನೆತನದ ಪ್ರಧಾನಿಗಳ ನಂತರ ಆಡಳಿತಾವಧಿಯ ಐದು ವರ್ಷಗಳನ್ನು ಪೂರೈಸಿದ ಮೊದಲ ಪ್ರಧಾನಿ ಎನ್ನುವುದು ಅವರ ಅಗ್ಗಳಿಕೆ.

ರಾಜಕೀಯದಲ್ಲಿ ಚಾಣಕ್ಯರೆಂದೇ ಪಿವಿಎನ್‌ ಕರೆಸಿಕೊಂಡಿದ್ದರು. ತಮ್ಮ ಅಧಿಕಾರದಾಹಕ್ಕಾಗಿ ತೆಲುಗುದೇಶಂ, ಶಿವಸೇನೆ, ಜನತಾದಳ ಹೀಗೆ ಪಕ್ಷಗಳನ್ನು ಒಡೆಯುತ್ತಲೇ ಹೋದರು. ಅದೇನೇ ಇರಲಿ, ಅವರು ಅನೇಕ ಪ್ರಥಮಗಳ ಸೃಷ್ಟಿಸಿದ ಪ್ರಧಾನಿ. ಹೊಸ ಆರ್ಥಿಕ ನೀತಿ ರಾಷ್ಟ್ರದಲ್ಲಿ ಜಾರಿಗೆ ಬಂದಿದ್ದೇ ಪಿವಿಎನ್‌ ಕಾಲದಲ್ಲಿ. ದಕ್ಷಿಣ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಯೂ ಅವರದೇ. ವಿವಾದಾತ್ಮಕ ಬಾಬ್ರಿ ಮಸೀದಿ ಇವರ ಕಾಲದಲ್ಲಿಯೇ ನೆಲಸಮವಾಯಿತು.

ನರಸಿಂಹರಾವ್‌ ತಣ್ಣಗೆ ಕಂಡರೂ, ರಾಷ್ಟ್ರದ ಇತಿಹಾಸದ ಪುಟಗಳಿಗೆ ಅಪಾರ ಸಂಗತಿಗಳು ಅವರ ಮೂಲಕ ಸೇರ್ಪಡೆಗೊಂಡಿವೆ. ಪಿವಿಎನ್‌ ಕೆಲವು ಕ್ರಿಮಿನಲ್‌ ಪ್ರಕರಣಗಳಲ್ಲಿ ದೋಷಾರೋಪಿಯಾಗಿದ್ದರು. ಆದರೆ ಸಾಯುವ ಮೊದಲು ಅವರ ಮೇಲಿದ್ದ ಮೂರು ಪ್ರಕರಣಗಳು ಖುಲಾಸೆಯಾಗಿದ್ದವು. ಲಖ್ಖುಭಾಯಿ ಪಾಠಕ್‌ ವಂಚನೆ ಪ್ರಕರಣದಲ್ಲಿ ರಾವ್‌ ನಿರ್ದೋಷಿಯೆಂದು ಕೋರ್ಟ್‌ ಇತ್ತೀಚೆಗಷ್ಟೇ ಘೋಷಿಸಿತ್ತು.

28 ಜೂನ್‌ 1921ರಲ್ಲಿ ಆಂಧ್ರಪ್ರದೇಶದ ಕರೀಂನಗರ ಜಿಲ್ಲೆಯ ವಂಗಾರ ಎನ್ನುವ ಪುಟ್ಟ ಹಳ್ಳಿಯಲ್ಲಿ ರಾವ್‌ ಜನಿಸಿದರು. ಉಸ್ಮಾನಿಯಾ, ಮುಂಬೈ, ನಾಗ್‌ಪುರ ವಿಶ್ವವಿದ್ಯಾಲಯಗಳಲ್ಲಿ ಬಿಎಸ್ಸಿ, ಎಲ್‌ಎಲ್‌ಬಿ ಪದವಿಗಳನ್ನು ಪಡೆದಿದ್ದರು. 1938 ರಲ್ಲಿ ರಾಜಕೀಯ ಪ್ರವೇಶಿಸಿದ ಪಿವಿಎನ್‌- ನಿಜಾಮರ ಸರಕಾರ ವಂದೇ ಮಾತರಂ ಗೆ ಕಾಲೇಜಿನಲ್ಲಿ ನಿಷೇಧ ಹಾಕಿದ ಹಿನ್ನೆಲೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ನೆಹರು ಕುಟುಂಬಕ್ಕೆ ಮೊದಲಿನಿಂದಲೂ ನಿಷ್ಟರಾಗಿದ್ದ ಪಿವಿಎನ್‌, ಇಂದಿರಾಗಾಂಧಿ ಮತ್ತು ರಾಜೀವ್‌ಗಾಂಧಿ ಅಧಿಕಾರವಧಿಯಲ್ಲಿ ಸಚಿವರಾಗಿ ಗೃಹ, ರಕ್ಷಣೆ ಮತ್ತಿತರ ಖಾತೆಗಳನ್ನು ನಿರ್ವಹಿಸಿದ್ದರು. ವಿಧುರರಾಗಿದ್ದ ರಾವ್‌, ಮೂವರು ಗಂಡುಮಕ್ಕಳು ಮತ್ತು ಐವರು ಪುತ್ರಿಯರನ್ನು ಅಗಲಿದ್ದಾರೆ.

ರಾಜಕೀಯ ನಿವೃತ್ತಿ ಯ ಬಯಕೆ ಬಂದಾಗಲೇ ಅದೃಷ್ಟವೂ ಕೂಡಿ ಬಂತು. 1991 ರಲ್ಲಿ ಅವರು ಚುನಾವಣೆಗೆ ನಿಂತಿರಲಿಲ್ಲ. ಆದರೂ ಅದೃಷ್ಟ ಅವರ ಮನೆಬಾಗಿಲಿಗೆ ಬಂದಿತ್ತು. ರಾಜೀವ್‌ ಸಾವಿನಿಂದ ಪಿವಿಎನ್‌ ಕಾಂಗ್ರೆಸ್‌ ನಾಯಕರಾಗಿ ರಾಷ್ಟ್ರದ ಪ್ರಧಾನಿಯಾದರು. ಆದರೆ 1996ರ ನಂತರ ಅವರು ಬಲ ಕಳೆದುಕೊಂಡರು. ಒಂದೊಂದೇ ಹಗರಣಗಳು ಕತ್ತಿಗೆ ಬಿದ್ದವು.

ಜೆಎಂಎಂ ಸಂಸದರ ಲಂಚಗುಳಿತನ ಮತ್ತು ಲಖ್ಖುಭಾಯಿ ವಂಚನೆ ಪ್ರಕರಣ ಕಾಡಿದವು. ಈ ನಡುವೆ ಸೆಂಟ್‌ಕಿಟ್ಸ್‌ ಪೋರ್ಜರಿ ಹಗರಣ ಸಹಾ ಬಾಧಿಸಿತ್ತು. ರಾವ್‌ ಆಡಳಿತಾವಧಿಯಲ್ಲಿ ಹವಾಲಾ ಹಗರಣ ಸ್ಫೋಟಿಸಿತ್ತು. ಜಾಗತೀಕರಣ, ಖಾಸಗೀಕರಣ, ಉದಾರೀಕರಣ ಇವೆಲ್ಲಾ ಕೇಳಿ ಬಂದದ್ದು ರಾವ್‌ ಕಾಲದಲ್ಲಿಯೇ. ರಾವ್‌ ಮತ್ತು ಹಣಕಾಸು ಸಚಿವ ಮನಮೋಹನ್‌ ಸಿಂಗ್‌ ವಿದೇಶಿ ವಿನಿಮಯಕ್ಕೆ ಸಂಬಂಧಿಸಿದಂತೆ ಅನೇಕ ವಿವಾದಗಳನ್ನು ಸೃಷ್ಟಿಸಿದ್ದರು.

ಒಂದರ ನಂತರ ಮತ್ತೊಂದರಂತೆ ಬಂದು ಅಪ್ಪಳಿಸಿದ ಹಗರಣಗಳು, ಕಾಂಗ್ರೆಸ್‌ ಸರಕಾರದ ಬಗೆಗೆ ಜನರಲ್ಲಿ ಅಸಮಾಧಾನ ಮೂಡಿಸಿದ್ದವು. ಹೀಗಾಗಿ ಮೇ 1996ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅಧಿಕಾರ ದಕ್ಕಲಿಲ್ಲ. ಸೆಂಟ್‌ಕಿಟ್ಸ್‌ ಹಗರಣ ಮತ್ತು ಜೆಎಂಎಂ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ಸ್ಥಾನವನ್ನು ಅವರು ಕಳೆದುಕೊಳ್ಳಬೇಕಾಯಿತು. ಈ ಮಧ್ಯೆಯೇ ಸೋನಿಯಾ ಪಕ್ಷಕ್ಕೆ ಬಂದರು. ನಂತರ ರಾವ್‌ ಚುನಾವಣೆಗೆ ಸ್ಪರ್ಧಿಸಲಿಲ್ಲ.

ರಾವ್‌ ಒಳ್ಳೆಯ ಬರಹಗಾರರು. ಸುಮಾರು 700 ಪುಟಗಳ ‘ಇನ್‌ಸೈಡರ್‌’ ಎನ್ನುವ ಆತ್ಮಕತೆಯನ್ನು ಬರೆದಿದ್ದಾರೆ. ಪುಸ್ತಕವನ್ನು ಬಿಡುಗಡೆ ಮಾಡಿದ್ದು ಅಟಲ್‌ ಬಿಹಾರಿ ವಾಜಪೇಯಿ. ಇದು ರಾವ್‌ ವ್ಯಕ್ತಿತ್ವಕ್ಕೊಂದು ನಿದರ್ಶನವಾಗಿದೆ.

ರಾಜಕೀಯ ಮಾತ್ರವಲ್ಲ , ವಿವಿಧ ಕ್ಷೇತ್ರದಲ್ಲಿ ಅವರಿಗೆ ಹಿಡಿತವಿತ್ತು. ಹಿಂದಿಯಲ್ಲಿ ಸಾಹಿತ್ಯ ರತ್ನ ಶಿಕ್ಷಣ ಪಡೆದಿದ್ದರು. ಸ್ಪ್ಯಾನಿಷ್‌ ಸೇರಿದಂತೆ ಬಹು ಭಾಷೆಯಲ್ಲಿ ಅವರು ಪ್ರಭುತ್ವಪಡೆದಿದ್ದರು. ಕಂಪ್ಯೂಟರ್‌ ಎಂದರೆ ಎಷ್ಟೋ ಪ್ರಧಾನಿಗಳಿಗೆ ಗೊತ್ತಿಲ್ಲ. ಆದರೆ ರಾವ್‌ ತಮ್ಮ ದಿನದ ಬಹುಕಾಲವನ್ನು ಕಂಪ್ಯೂಟರ್‌ ಮುಂದೆ ವ್ಯಯಿಸುತ್ತಿದ್ದರು. ಹೊಸ ಶಿಕ್ಷಣ ಪದ್ಧತಿಗಳ ಬಗೆಗೆ ಸಂಶೋಧನೆ ನಡೆಸುತ್ತಿದ್ದರು.

1986 ರಲ್ಲಿ ಇವರ ಮುಖಂಡತ್ವದಲ್ಲಿ ಮಾನವ ಸಂಪನ್ಮೂಲ ಅಭಿವೃದ್ದಿ ಇಲಾಖೆ ಅಸ್ತಿತ್ವಕ್ಕೆ ಬಂತು. ನವೋದಯ ವಿದ್ಯಾಲಯ ಯೋಜನೆ ರಾವ್‌ರ ಕೊಡುಗೆ.

ರಾವ್‌ 83ರ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ಆ ಮೂಲಕ ಹಿರಿಯ ರಾಜಕಾರಣಿಯಾಬ್ಬರನ್ನು ದೇಶ ಕಳೆದುಕೊಂಡಿದೆ. ಆದರೆ ಕಾಂಗ್ರೆಸ್‌ ಪಕ್ಷ ನಷ್ಟವಾಯಿತೆಂದು ಶೋಕಿಸುವ ಪರಿಸ್ಥಿತಿಯಲ್ಲಿಲ್ಲ . ಏಕೆಂದರೆ ಕಾಂಗ್ರೆಸ್‌ ದೃಷ್ಟಿಯಲ್ಲಿ ನರಸಿಂಹರಾವ್‌ ಲಾಭ ತರುವ ನಾಯಕರಾಗಿರಲಿಲ್ಲ .

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X