ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ನೆಚ್ಚಿನ ಸಾಹಿತಿ ಪೂರ್ಣಚಂದ್ರ ತೇಜಸ್ವಿ

By ಸುಚೇತಾ ಕುಲಕರ್ಣಿ (ತಾಳಿಕೋಟೆ)
|
Google Oneindia Kannada News

'ಸಾಹಿತಿಗಳು ಜಗತ್ತಿನ ಅನಭಿಷಿಕ್ತ್ತ ಸಾಮ್ರಾಟರು'. ಈ ಪ್ರಸಿದ್ಧ ಮಾತು ಸಾಹಿತಿಗಳ ಮಹೋನ್ನತ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ಹೋಮರ್‌, ವ್ಯಾಸ, ವಾಲ್ಮೀಕಿ ಮುಂತಾದ ವ್ಯಕ್ತಿಗಳು ಮಹಾನ್‌ ಸಾಹಿತಿಗಳಾಗಿ ಸಾರ್ವಕಾಲಿಕ ಕೀರ್ತಿಗೆ ಪಾತ್ರರಾಗಿದ್ದಾರೆ. ಭಾರತದ ಸಾಹಿತ್ಯ ಕ್ಷೇತ್ರದಲ್ಲಿ ಅಜರಾಮರವಾಗಿರುವಂಥ ಎಷ್ಟೋ ಹೆಸರುಗಳಿವೆ. ಆ ಪಟ್ಟಿಯಲ್ಲಿ ಕನ್ನಡ ಸಾಹಿತಿಗಳ ಪಾಲು ಸಾಕಷ್ಟಿದೆ.

ಪಂಪ, ರನ್ನ, ಹರಿಹರ, ಕುಮಾರವ್ಯಾಸ ಮತ್ತಿತರ ಹಳಗನ್ನಡ ಕವಿಗಳಿಂದ ಹಿಡಿದು ಕುವೆಂಪು, ಬೇಂದ್ರೆ, ಕಾರಂತ, ಮಾಸ್ತಿಯಂತಹ ದಿಗ್ಗಜರು ಇಲ್ಲಿ ಆಗಿ ಹೋಗಿದ್ದಾರೆ. ಯಾವ ಭಾರತೀಯ ಭಾಷೆಗೂ ಸಲ್ಲದ ಏಳು ಜ್ಞಾನಪೀಠ ಪ್ರಶಸ್ತಿಗಳ ಗೌರವ ಕನ್ನಡ ಭಾಷೆಗೆ ಸಂದಿರುವುದನ್ನು ಹೆಮ್ಮೆಯಿಂದ ಇಲ್ಲಿ ಉಲ್ಲೇಖಿಸಬಹುದು.

ಆಧುನಿಕ ಕನ್ನಡ ಸಾಹಿತ್ಯದಲ್ಲಿ ಹಳೆಯ ತಲೆಮಾರಿನ ಸಾಹಿತಿಗಳು ಒಂದು ತೂಕವಾದರೆ, ಹೊಸ ಸಂವೇದನಾ ಪ್ರಜ್ಞೆಯ ಸಾಹಿತಿಗಳು ಇನ್ನೊಂದು ತೂಕ. ಇಂತಹ ಅಪರೂಪದ ಹೊಸ ಸಂವೇದನೆಯ ಕೆ. ಪಿ. ಪೂರ್ಣಚಂದ್ರ ತೇಜಸ್ವಿ ನನ್ನ ನೆಚ್ಚಿನ ಸಾಹಿತಿ. ತೇಜಸ್ವಿಯ ಅಗಾಧ ಬರಹ-ಬದುಕಿನ ಕೆಲ ತುಣುಕುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನವೇ ಈ ಲೇಖನ.

ರಾಷ್ಟ್ರಕವಿ ಕುವೆಂಪುರವರು ಮಹಾಕಾವ್ಯ, ಕಾದಂಬರಿ, ನಾಟಕಗಳ ಕೊಡುಗೆ ನೀಡಿದರೆ, ಇನ್ನೊಂದೆಡೆ ತೇಜಸ್ವಿಯಂಥ ಚಿಂತಕನನ್ನು ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. 1938 ರಂದು ಜನಿಸಿದ ತೇಜಸ್ವಿ ಬಾಲ್ಯದಿಂದಲೇ ಮಲೆ ನಾಡಿನ ಸಮೃದ್ಧ ಪರಿಸರದಲ್ಲಿ ಬೆಳೆದವರು. ಶಿವರಾಮ ಕಾರಂತ, ಲೋಹಿಯ ಮತ್ತು ಕುವೆಂಪುರವರ ದಟ್ಟ ಪ್ರಭಾವ ಕ್ಕೆ ಒಳಗಾದ ಇವರು ಸಮಾಜವಾದಿ ಗೋಪಾಲಗೌಡರ ಗರಡಿಯಲ್ಲಿ ಪಳಗಿದವರು. ಯು.ಆರ್‌. ಅನಂತಮೂರ್ತಿ, ಪಿ.ಲಂಕೇಶ, ರಾಮದಾಸ್‌ ಮುಂತಾದವರ ಸಮಕಾಲೀನರಾಗಿ ತೇಜಸ್ವಿ ಬೆಳೆದು ಬಂದವರು.

Poornachandra Tejasvi : A pen portrait

ಪ್ರವೇಶ : 'ಸೋಮುವಿನ ಸ್ವಾಗತ ಲಹರಿ' ಎಂಬ ಕಾವ್ಯ ಕೃತಿಯ ಮೂಲಕ ಸಾಹಿತ್ಯ ಕ್ಶೇತ್ರ ಪ್ರವೇಶಿಸಿದ ತೇಜಸ್ವಿ, 'ಯಮಳ ಪ್ರಶೆ'್ನ ಎಂಬ ನಾಟಕದಿಂದ ಬದುಕಿನ ಒಗಟನ್ನು ಬಿಡಿಸ ಹೊರಟರು. ಹುಲಿಯೂರಿನ ಸರಹದ್ದು, ಅಬ ಚೂರಿನ ಪೋಸ್ಟ್‌ ಆಫೀಸ್‌, ಕಿರಿಯೂರಿನ ಗಯ್ಯಾಳಿಗಳು ಕಥಾಸಂಕಲನಗಳಲ್ಲಿ ಈವರೆಗೂ ಕನ್ನಡ ಸಾಹಿತ್ಯದಲ್ಲಿ ಕಾಣದ ಹೊಸತನವನ್ನು ತುಂಬಿದವರು.

ಕರ್ವಾಲೋ ಕಾದಂಬರಿಯಂತೂ ಪ್ರಕೃತಿ ಪರಿಸರ ಮತ್ತು ಮಾನವ ಜೀವನದ ರಹಸ್ಯವನ್ನೇ ಭೇದಿಸುವ ವಿಶಿಷ್ಟ ಕೃತಿ. ಚಿದಂಬರ ರಹಸ್ಯ ಮತ್ತು ಜುಗಾರಿ ಕ್ರಾಸ್‌ ವಿಶಿಷ್ಟ ರೀತಿಯ ಬರವಣಿಗೆಯಿಂದಾಗಿ ಓದುಗರ ಮನಗೆದ್ದಿವೆ. ಸ್ವರೂಪ ಮತ್ತು ನಿಗೂಢ ಮನುಷ್ಯ- ಕಾದಂಬರಿಗಳಲ್ಲಿಯೂ ಸಹಾ ಬದುಕನ್ನು ಬಿಡಿಸಿ ನೋಡುವ ಪ್ರಯತ್ನವಿದೆ. ಪರಿಸರದ ಕತೆ ಮತ್ತು ಏರೋಪ್ಲೇನ್‌ ಚಿಟ್ಟೆ ಕೃತಿಗಳಲ್ಲಿ ಪರಿಸರದ ಜೀವಂತ ಚಿತ್ರಣವನ್ನೇ ತೇಜಸ್ವಿಅಭಿವ್ಯಕ್ತಿಸಿದ್ದಾರೆ.

ಬರಿಯ ಕತೆಯಲ್ಲ : ಪ್ರಕೃತಿಯಲ್ಲಿನ ಮಾನವ, ಪ್ರಾಣಿ, ಪಕ್ಷಿ , ಕೀಟಗಳ ಅನ್ಯೋನ್ಯ ಸಂಬಂಧದ ಸಂಕೀರ್ಣ ಎಳೆಗಳ ನ್ನು ತೇಜಸ್ವಿ ಬೆರಗಾಗುವಂತೆ ಚಿತ್ರಿಸಿದ್ದಾರೆ. ಅದ್ಭುತ ಜಗತ್ತು ಸರಣಿಯಲ್ಲಿ ಮೂಡಿಬಂದ ವಿಸ್ಮಯ 1, 2 ಮತ್ತು 3 ಕೃತಿಗಳು ಹಾಗೂ ಫ್ಲೈಯಿಂಗ್‌ ಸಾಸರ್ಸ್‌ 1,2 ಕೃತಿಗಳು ಕನ್ನಡದಲ್ಲಿ ವಿಜ್ಞಾನದ ಸಂಗತಿಗಳನ್ನು ಹೇಗೆ ಬರೆಯಬಹುದು ಎಂಬುದಕ್ಕೆ ಮಾದರಿಗಳಾಗಿವೆ.

ಹಕ್ಕಿಪುಕ್ಕ- ಕನ್ನಡದಲ್ಲಿ ವರ್ಣಚಿತ್ರಗಳುಳ್ಳ ಏಕೈಕ ಪಕ್ಷಿ ವಿಜ್ಞಾನದ ಪುಸ್ತಕ. ಬ್ರಹ್ಮಾಂಡದ ಹುಟ್ಟು ಹೇಗಾಯಿತು ? ನೈಲ್‌ ನದಿಯ ಮೂಲವೆಲ್ಲಿದೆ ? ಮುಂತಾದ ಜಾಗತಿಕ ಅದ್ಭುತ ಸಂಗತಿಗಳನ್ನು ಆಕರ್ಷಕ ರೀತಿಯಲ್ಲಿ ಚಿತ್ರಿಸಿದ್ದಾರೆ. ಅಲೆಮಾರಿ ಅಂಡಮಾನ್‌ ಎನ್ನುವುದು ಒಂದು ವಿಲಕ್ಷಣ ಪ್ರವಾಸ ಕಥನ. ಪ್ರಗತಿಶೀಲ ಶ್ರೀಮಂತ ರಾಷ್ಟ್ರಗಳಿಗೆ ಇಲ್ಲವೇ ಐತಿಹಾಸಿಕ ವಾಸ್ತುಶಿಲ್ಪದ ಅದ್ಭುತಗಳಿರುವ ದೇಶಗಳಿಗೆ ಪ್ರವಾಸ ಕೈಕೊಳ್ಳವವರು ಬಹಳ ಜನ. ಆದರೆ ಅಂಡ ಮಾನ್‌ನಂಥ ಸಮುದ್ರ ಮಧ್ಯದ ರುದ್ರಭೀಕರ ಕಾಡಿನ ಲೋಕಕ್ಕೆ ಪ್ರವಾಸ ಕೈಗೊಳ್ಳುವವರು ತೇಜಸ್ವಿಯಂಥ ಅಲೆಮಾರಿಗಳು ಮಾತ್ರ.

ಅಲೆಮಾರಿ : ಕಾಡಿನಲ್ಲಿ ಅಲೆಮಾರಿಯಾಗಿ ಅಲೆಯುವ ಹುಚ್ಚುತನ ಇದ್ದುದ್ದರಿಂದಲೇ ಏನೋ ಇವರು ಜಿಮ್‌ ಕಾರ್ಬೇಟ್‌ ಮತ್ತು ಕೆನೆತ್‌ ಅಂಡರ್ಸನ್‌ರವರ ಶಿಕಾರಿ ಕಥೆಗಳನ್ನು/ ಭೇಟೆಯ ಅನುಭವಗಳನ್ನು ಕನ್ನಡಕ್ಕೆ ರೂಪಾಂತರ ಮಾಡಿದ್ದಾರೆ. ಅಣ್ಣನ ನೆನಪು ಕುವೆಂಪು ಮತ್ತು ತೇಜಸ್ವಿಯವರ ವಿಶಿಷ್ಟ ಸಂಬಂಧವನ್ನು ಚಿತ್ರಿಸುವ ಒಂದು ಜೀವನ ಚರಿತ್ರೆ.

ಜಗತ್ತಿನ ಅದ್ಭುತಗಳನ್ನು, ಐತಿಹಾಸಿಕ ಮಹತ್ವದ ಘಟನೆಗಳನ್ನು, ವಿಸ್ಮಯಕಾರಕ ಒಗಟಿನ ಸಂಗತಿಗಳನ್ನು , ವಿಜ್ಞಾನದ ಅದ್ಭುತ ಪ್ರಗತಿಯನ್ನು ಸಾರುವ ಮಿಲನಿಯಮ್‌ ಸರಣಿಯ ಹಿಂದಿನ ಶ್ರಮ ನಿಜಕ್ಕೂ ದೊಡ್ಡದು. ತೇಜಸ್ವಿಯವರ ಮಹತ್ವಾಕಾಂಕ್ಷೆಯ ಮಹಾಯುದ್ಧ 1,2, 3 ಮತ್ತು ದೇಶ ವಿದೇಶ 1, 2, 3, 4 ಕೃತಿಗಳು ಸೊಗಸಾಗಿವೆ. ನೆರೆಹೊರೆಯ ಗೆಳೆಯರು, ಚಂದ್ರನ ಚೂರು, ಮಹಾ ಪಲಾಯನ, ವಿಸ್ಮಯ ವಿಶ್ವ, ಅಡ್ವೆಂಚರ್‌ ಮುಂತಾದ 16 ಕೃತಿಗಳು ಕನ್ನಡದ ಪುಸ್ತಕಲೋಕಕ್ಕೆ ಅಮೂಲ್ಯ ಕೊಡುಗೆಗಳಾಗಿವೆ.

ಎರಡು ಸಾವಿರ ವರ್ಷಗಳ ಮಾನವನ ಸಾಧನೆ ಪ್ರಗತಿ ಮತ್ತು ವಿಕೃತಿಗಳನ್ನು ಮಕ್ಕಳಿಗೂ ತಿಳಿಯುವಂತಹ ಭಾಷೆಯಲ್ಲಿ ತೇಜಸ್ವಿ ಬರೆದಿದ್ದಾರೆ. ಇಡೀ ಒಂದು ಜೀವಮಾನದುದ್ದಕ್ಕೂ ಓದಿ ಅರಗಿಸಿಕೊಳ್ಳಬೇಕಾದ ಬೃಹತ್‌ ಸ್ವರೂಪದ ಸಂಗತಿ ಗಳನ್ನು ಈ 16ಪುಸ್ತಕಗಳಲ್ಲಿ ಸಂಕ್ಷಿಪ್ತವಾಗಿ ಅಡಕಗೊಳಿಸಿದ್ದಾರೆ. ನೌರು ದ್ವೀಪದ ದುರಂತ, ಹರಪ್ಪಾ, ಮಹಂಜೋದಾ ರೋ, ಸಹರಾ ಮರುಭೂಮಿ, ಟೈಟಾನಿಕ್‌, ಚಂದ್ರಲೋಕಯಾನ, ಎವರೆಸ್ಟ್‌ ಶಿಖರ ಆರೋಹಣ, ಮಹಾಪಲಾಯ ನ ಮುಂತಾದ ಸಂಗತಿಗಳನ್ನು ಓದಿಯೇ ಅನುಭವಿಸಬೇಕು.

ಬಹುಮುಖಿ ಪ್ರತಿಭೆ : ತೇಜಸ್ವಿಯವರ ಮಾನವ ಶಾಸ್ತ್ರದ 'ಮಿಸ್ಸಿಂಗ್‌ಲಿಂಕ್‌' ಮನುಷ್ಯನ ಚರಿತ್ರೆಯನ್ನು ಚಿತ್ರಿಸುವ ಅದ್ಭುತ ಕೃತಿಯಾಗಿದೆ. ಕವಿ, ನಾಟಕಕಾರ, ಕಾದಂಬರಿಕಾರ, ಪರಿಸರ ಪ್ರೇಮಿ, ಪಕ್ಷಿತಜ್ಞ, ಕೀಟವಿಜ್ಞಾನಿ, ಸಮಾಜವಾದಿ ಚಿಂತ ಕ, ಚಿತ್ರ ಕಲಾವಿದ, ಛಾಯಾಗ್ರಾಹಕರಾದ ಪೂರ್ಣಚಂದ್ರ ತೇಜಸ್ವಿಯವರು ಆಧುನಿಕ ಕೃಷಿ ವಿಜ್ಞಾನಿಯೂ ಹೌದು. ಸ್ವತಃ ಕೃಷಿಕರೂ ಹೌದು. ಜಪಾನಿನ ಕೃಷಿ ಋಷಿಯಾದ ಪುಕೋಕಾರವರ ಸಹಜ ಕೃಷಿಕುರಿತು ವಿಶಿಷ್ಟ ಕೃತಿ ರಚಿಸಿದ್ದಾರೆ.

ಮಲೆನಾಡಿನ ಮೂಡಿಗೆರೆಯಲ್ಲಿ ಕಾಫಿತೋಟ ಮಾಡಿಕೊಂಡಿರುವ ಇವರು ಜೇನುಸಾಕಾಣಿಕೆ, ಮೀನುಸಾಕಣಿಕೆಯ ಲ್ಲೂ ಅನುಭವ ಗಳಿಸಿಕೊಂಡಿದ್ದಾರೆ. ಪ್ರೌಢ ಸಾಹಿತ್ಯದಲ್ಲಿ ತೇಜಸ್ವಿ, ಎಷ್ಟು ಹೆಸರುವಾಸಿಯಾಗಿರುವರೋ ಅಷ್ಟೇ ಮಕ್ಕಳ ಸಾಹಿತ್ಯದಲ್ಲೂ ವಿಶಿಷ್ಠ ಸ್ಥಾನಗಳಿಸಿದ್ದಾರೆ. ಎಂತಹ ಓದುಗರನ್ನೂ ಆಕರ್ಷಿಸಬಲ್ಲ ಸಾಮರ್ಥ್ಯವುಳ್ಳವರು. ಕುವೆಂಪುರಂಥ ಮಹಾಕವಿಯ ಪ್ರಭಾವದ ಕವಚವನ್ನು ತೇಜಸ್ವಿ, ಹರಿದೊಗಿದು ಸ್ವತಂತ್ರ ವ್ಯಕ್ತಿತ್ವ ಬೆಳೆಸಿಕೊಂಡವರು.

ತಬರನ ಕತೆ, ಅಬಚೂರಿನ ಪೋಸ್ಟ್‌ ಆಫೀಸು, ಕುಬಿ ಮತ್ತು ಇಯಾಲ, ಇವು ಚಲನಚಿತ್ರಗಳಾಗಿ ತೇಜಸ್ವಿಯವರಿಗೆ ರಾಜ್ಯಮತ್ತು ರಾಷ್ಟ್ರ ಪ್ರಶಸ್ತಿಗಳನ್ನು ತಂದುಕೊಟ್ಟಿವೆ. ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸಹಾ ಬರೆದಿದ್ದಾರೆ.

ಅರಸಿ ಬಂದ ಗೌರವಗಳು : ಕಾಡಿನಲ್ಲಿ ಕುಳಿತು ತನ್ನಷ್ಟಕ್ಕೆ ತಾನು ಕೃತಿ ರಚಿಸುತ್ತ, ಚಿತ್ರ ಬರೆಯುತ್ತಾ, ಬೇಟೆಯಾಡುತ್ತಾ, ಪಕ್ಷಿಗಳ ಚಿತ್ರವನ್ನು ಸೆರೆಹಿಡಿ ಯುತ್ತಾ ತೇಜಸ್ವಿ ಸೃಜನಶೀಲರಾಗಿ ಮೆರೆದಿದ್ದಾರೆ. ಕರ್ವಾಲೋ. ಅಲೆಮಾರಿ ಅಂಡ ಮಾನ್‌, ಪರಿಸರದ ಕಥೆ, ಕಿರಿ ಯೂರಿನ ಗಯ್ಯಾಳಿಗಳು ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಚಿದಂಬರ ರಹಸ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದೆ. ಕರ್ನಾಟಕ ಸರ್ಕಾರದ ಪರಿಸರ ವಿಜ್ಞಾನದ ಪ್ರಶಸ್ತಿ , ಪಂಪ ಪ್ರಶಸ್ತಿ ತೇಜಸ್ವಿಯನ್ನು ಅರಸಿ ಬಂದಿವೆ.

ತೇಜಸ್ವಿ ತಮ್ಮ ಮಕ್ಕಳಾದ ಈಶಾನ್ಯೆ ಮತ್ತು ಸುಶ್ಮಿತಾರವರಿಗೆ ಪಕ್ಷಿ ಮತ್ತು ಕೀಟಗಳನ್ನು ಕುರಿತು ಹೇಳಿದ ಕಥೆಗಳು,

ಏರೋಪ್ಲೇನ್‌ಚಿಟ್ಟೆ ಎನ್ನುವ ವಿಶಿಷ್ಟ ಕೃತಿಯಾಗಿ ಪ್ರಕಟಗೊಂಡಿದೆ. ತೇಜಸ್ವಿ ತಾವೇ ತೆಗೆದ ಪಕ್ಷಿ ಚಿತ್ರಗಳನ್ನು ಇತ್ತೀಚೆಗೆ ಕಲಾತ್ಮಕ ಶುಭಾಶಯ ಪತ್ರಗಳನ್ನಾಗಿ ಮುದ್ರಿಸಿದ್ದಾರೆ. ಚಿತ್ರಕ್ಕೆ ಸೂಕ್ತವಾದ ಕುವೆಂಪುರವರ ಪದ್ಯಗಳನ್ನು ಬಳಸಿಕೊಂಡಿ ದ್ದಾರೆ. ಕನ್ನಡದ ಮಕ್ಕಳಿಗೆ ಇದೊಂದು ಅಪೂರ್ವ ಕೊಡುಗೆ.

ತೇಜಸ್ವಿತಮ್ಮ ಬದುಕಿನ ಶೈಲಿಯಿಂದ, ಬರವಣಿಗೆಯಿಂದ, ಚಿಂತನೆಯಿಂದ, ಚಿತ್ರಕಲೆಯಿಂದ, ಫೋಟೋಗ್ರಾಫಿ ಯಿಂದ, ಪಕ್ಷಿ-ಕೀಟಗಳ ಆಸಕ್ತಿಯಿಂದ, ಪರಿಸರ ವಿಜ್ಞಾನದ ಕಾಳಜಿಯಿಂದ ಪ್ರಜ್ಞಾವಂತರನ್ನು ತಲುಪಿದ್ದಾರೆ. ಅವರ ಅಭಿಮಾನಿಯೆನ್ನುವ ಹೆಮ್ಮೆ ನನ್ನದು.

English summary
K.P. Poornachandra Tejasvi : A pen portrait by Sucheta Kulakarni, Taalikote.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X