ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಕಾಶಮಾನ ಡಾ.ಮನಮೋಹನ್‌ ಸಿಂಗ್‌ ವೃತ್ತಾಂತ

By Staff
|
Google Oneindia Kannada News

1990ರ ದಶಕದಲ್ಲಿ ಮಧ್ಯಮವರ್ಗದ ಕಣ್ಮಣಿಯಾಗಿ ಹೊರಹೊಮ್ಮಿದ ಮನಮೋಹನ್‌ ಸಿಂಗ್‌ 14ನೇ ಲೋಕಸಭೆಯ ನಾಯಕ, ವಾಜಪೇಯಿ ನಂತರದಲ್ಲಿ ಭಾರತದ ಆಡಳಿತದ ಸೂತ್ರಗಳ ಹಿಡಿದಿದ್ದಾರೆ. ಸೋನಿಯಾ ಪ್ರಧಾನಿ ಹುದ್ದೆಯನ್ನು ನಿರಾಕರಿಸಿದ ನಂತರ ಆ ಸ್ಥಾನವನ್ನು ಅಲಂಕರಿಸುವವರು ಯಾರು ಎಂಬ ಪ್ರಶ್ನೆ ಎದುರಾದಾಗ ಉತ್ತರಕ್ಕೆ ತಡಕಾಡಬೇಕಾದ ಅಗತ್ಯವೇ ಇರಲಿಲ್ಲ . ಏಕೆಂದರೆ, ವಿವಾದಾತೀತ ರಾಜಕಾರಣಿಯೆಂದೇ ಖ್ಯಾತಿ ಪಡೆದಿರುವ ಮನಮೋಹನ್‌ ಸಿಂಗ್‌ ಪ್ರಧಾನಿಯಾಗಬಹುದೆಂಬ ಮಾತುಗಳು ಅದಾಗಲೇ ಕೇಳಿಬಂದಿದ್ದವು. ಸೋನಿಯಾ ಆಪ್ತರೆಂದೇ ಗುರುತಿಸಿಕೊಂಡಿರುವ ಮನಮೋಹನ್‌ ಶುದ್ಧಹಸ್ತರೆಂಬ ಹಿರಿಮೆಯನ್ನೂ ಹೊಂದಿದ್ದಾರೆ.

ಮೂಲತಃ ಸಿಖ್‌ ಪಂಥಕ್ಕೆ ಸೇರಿರುವ ಮನಮೋಹನ್‌ 1932, ಸೆಪ್ಟೆಂಬರ್‌ 26ರಂದು ಪಶ್ಚಿಮ ಪಂಜಾಬಿನಲ್ಲಿ ಜನಿಸಿದರು. ಆದರೆ ಅವರ ಜನ್ಮಸ್ಥಳ ಇನ್ನೂ ಪಾಕಿಸ್ತಾನದಲ್ಲಿದೆ. ಗುರುಮುಖ್‌ ಸಿಂಗ್‌ ಮತ್ತು ಅಮೃತ್‌ ಕೌರ್‌ ಮಗನಾಗಿ ಜನಿಸಿದ ಅವರು 1958, ಸೆಪ್ಟಂಬರ್‌ 14ರಂದು ಗುರುಶರಣ್‌ ಕೌರ್‌ ಅವರನ್ನು ವಿವಾಹವಾದರು. ಮನಮೋಹನ್‌ಗೆ ಮೂವರು ಪುತ್ರಿಯರಿದ್ದಾರೆ.

ಸ್ವತಂತ್ರ ಭಾರತದ ಮೊದಲ ಸಿಖ್‌ ಸಚಿವ ಮನಮೋಹನ್‌ ಅವರಲ್ಲ . ದೇಶದ ಮೊದಲ ರಕ್ಷಣಾ ಸಚಿವ ಸರ್ದಾರ್‌ ಬಲ್‌ದೇವ್‌ಸಿಂಗ್‌, ದೇಶದ ಹೆಸರಾಂತ ವಿದೇಶಾಂಗ ಸಚಿವ ಸರ್ದಾರ್‌ ಸ್ವರಣ್‌ಸಿಂಗ್‌, ಮಾಜಿ ಗೃಹ ಸಚಿವ ಬೂಟಾಸಿಂಗ್‌ ಮತ್ತು ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದ್ದ ಗ್ಯಾನಿ ಜೇಲ್‌ಸಿಂಗ್‌ ಕೂಡ ಸಿಖ್‌ ಪಂಥಕ್ಕೆ ಸೇರಿದ್ದಾರೆ. ಆದರೂ ಮನಮೋಹನ್‌ ವಿಶಿಷ್ಟ . ಅವರು ದೇಶದ ಮೊದಲ ಸಿಖ್‌ ವಿತ್ತ ಸಚಿವ ಮಾತ್ರವಲ್ಲ , ಹೆಸರಾಂತ ಹಣಕಾಸು ಸಚಿವರೂ ಹೌದು. ವೃತ್ತಿಪರ ಅರ್ಥಶಾಸ್ತ್ರಜ್ಞರಾಗಿರುವ ಮನಮೋಹನ್‌ ಸಿಂಗ್‌ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಲ್ಲದೇ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ಡಾಕ್ಟರ್‌ ಆಫ್‌ ಫಿಲಾಸಫಿ ಪದವಿಯನ್ನೂ ಪಡೆದಿದ್ದಾರೆ. ಪಂಜಾಬ್‌, ಕೇಂಬ್ರಿಜ್‌ ಮತ್ತು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಿರುವ ಅವರು ಹಲವಾರು ಗೌರವ ಡಾಕ್ಟರೇಟ್‌ಗಳನ್ನು ಪಡೆದಿದ್ದಾರೆ.

1957ರಲ್ಲಿ ಪಂಜಾಬ್‌ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಡಾ. ಮನಮೋಹನ್‌ ಸಿಂಗ್‌, ಡೆಲ್ಲಿ ಸ್ಕೀಲ್‌ ಆಫ್‌ ಎಕನಾಮಿಕ್ಸ್‌ನಲ್ಲಿ ಅಂತರರಾಷ್ಟ್ರೀಯ ವ್ಯಾಪಾರ ವಿಷಯದಲ್ಲಿ ಪ್ರಾಧ್ಯಾಪಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. 1971ರಲ್ಲಿ ಬೋಧನಾ ವೃತ್ತಿಗೆ ಶರಣು ಹೊಡೆದ ಅವರು ವಿದೇಶಿ ವ್ಯಾಪಾರ ಸಚಿವಾಲಯಕ್ಕೆ ಆರ್ಥಿಕ ಸಲಹೆಗಾರರಾಗಿ ನಿಯುಕ್ತಿಗೊಳ್ಳುವ ಮೂಲಕ ಸರಕಾರಿ ಸೇವೆಗೆ ಸೇರಿದರು. 1972ರಿಂದ 76ರವರೆಗೂ ಕೇಂದ್ರ ವಿತ್ತ ಖಾತೆಯ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಮನಮೋಹನ್‌ ಸಿಂಗ್‌ ಅವರನ್ನು 1976ರಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ನ ನಿರ್ದೇಶಕರಾಗಿ ನೇಮಕ ಮಾಡಲಾಯಿತು. 1982ರಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಹುದ್ದೆಗೇರಿದ ಮನಮೋಹನ್‌ ಸಿಂಗ್‌ 1985 ಜನವರಿವರೆಗೂ ಸೇವೆ ಸಲ್ಲಿಸಿದರು. ರಿಸವ್‌ ಬ್ಯಾಂಕ್‌ ಗವರ್ನರ್‌ ಹುದ್ದೆಯಿಂದ ನಿವೃತ್ತರಾದ ಮರುದಿನವೇ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಸಿಂಗ್‌ಅವರನ್ನು ನೇಮಕ ಮಾಡಲಾಯಿತು. 1987, ಜುಲೈನವರೆಗೂ ಇದೇ ಹುದ್ದೆಯಲ್ಲಿ ಮುಂದುವರೆದರು. ಈ ಮಧ್ಯೆ 1990, ಡಿಸೆಂಬರ್‌ 10ರಿಂದ 1991, ಮಾರ್ಚ್‌ 14ರವರೆಗೂ ಆಗಿನ ಪ್ರಧಾನಿ ಚಂದ್ರಶೇಖರ್‌ ಅವರಿಗೆ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದರು.

ಹೀಗೆ ಶಿಕ್ಷಕನಾಗಿ, ಸರಕಾರಿ ನೌಕರನಾಗಿ, ಕೊನೆಗೆ ರಾಜಕಾರಣಿಯಾಗಿ ಡಾ.ಸಿಂಗ್‌ ಮಾರ್ಪಟ್ಟರು. 1991ರ ಜೂನ್‌ನಲ್ಲಿ ಕಾಂಗ್ರೆಸ್‌ ಪಕ್ಷದ ಸರಕಾರ ಅಧಿಕಾರಕ್ಕೆ ಬಂದಾಗ ಆಗಿನ ಪ್ರಧಾನಿ ಪಿ.ವಿ.ನರಸಿಂಹರಾವ್‌ ಸ್ವಇಚ್ಛೆಯಿಂದ ಮನಮೋಹನ್‌ ಸಿಂಗ್‌ ಅವರನ್ನು ದೇಶದ ಪ್ರತಿಷ್ಠಿತ ವಿತ್ತ ಸಚಿವರನ್ನಾಗಿ ಆಯ್ಕೆ ಮಾಡಿದರು. ಇದು ಅವರ ಜೀವನದ ಮಹತ್ವದ ಘಟ್ಟ . ಆರ್ಥಿಕ ಉದಾರೀಕರಣ ಮತ್ತು ಜಾಗತೀಕರಣದ ಹರಿಕಾರರಾಗಿ ಹೊರಹೊಮ್ಮಿದರು.

ವಿತ್ತ ಸಚಿವರಾದರೂ ಮನಮೋಹನ್‌ ಸಿಂಗ್‌ ಕ್ರಿಯಾಶೀಲ ರಾಜಕಾರಣದಿಂದ ದೂರವೇ ಇದ್ದರು. ಪ್ರಧಾನಿ ನರಸಿಂಹ ರಾವ್‌, ಸಿಂಗ್‌ ಅವರನ್ನು ಅಸ್ಸಾನಿಂದ ರಾಜ್ಯಸಭೆಗೆ ಆಯ್ಕೆ ಮಾಡುವ ಮೂಲಕ ಅಧಿಕೃತವಾಗಿ ರಾಜಕಾರಣಕ್ಕೆ ಕರೆತಂದರು. ಆ ವೇಳೆಯಲ್ಲಿ ಪಂಜಾಬ್‌ನಲ್ಲಿ ರಾಷ್ಟ್ರಪತಿ ಆಡಳಿತವಿದ್ದ ಕಾರಣ ಅಸ್ಸಾಂನಿಂದ ಸಿಂಗ್‌ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಾಯಿತು. 1996 ಮತ್ತು 2001ರಲ್ಲಿ ಮತ್ತೆ ರಾಜ್ಯಸಭೆಗೆ ಮರು ಆಯ್ಕೆ ಮಾಡಲಾಯ್ತು . ಹಿಂಬಾಗಿಲಿನ ಮೂಲಕವೇ ಸಂಸತ್ತನ್ನು ಪ್ರವೇಶಿಸಿದ ಮನಮೋಹನ್‌ ಸಿಂಗ್‌ 1999ರಲ್ಲಿ ದಕ್ಷಿಣ ದಿಲ್ಲಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿದ್ದರು. ಆದರೆ ಬಿಜೆಪಿಯ ವಿಜಯ್‌ಕುಮಾರ್‌ ಮಲ್ಹೋತ್ರಾ ಎದುರು ಸೋಲನುಭವಿಸಬೇಕಾಯಿತು.

ಇದೇನೇ ಇರಲಿ, ಸಮಾಜವಾದವೇ ಅಗ್ರಸ್ಥಾನವನ್ನು ಆಕ್ರಮಿಸಿದ್ದಂತಹ ಕಾಲದಲ್ಲೂ ಮುಕ್ತ ಮಾರುಕಟ್ಟೆಯಾಂದೇ ದೇಶದ ಮುಂದಿರುವ ಮಾರ್ಗ ಎಂದು ಬಲವಾಗಿ ನಂಬಿದ ಮತ್ತು ಅದಕ್ಕನುಗುಣವಾಗಿ ನಡೆದುಕೊಂಡ ವ್ಯಕ್ತಿ ಅವರು. ಹೀಗೆ 1991ರಲ್ಲಿ ಜನಸ್ಪರ್ಶಿ ಆರ್ಥಿಕ ಉದಾರೀಕರಣವನ್ನು ನಮ್ಮ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಜಾರಿಗೆ ತಂದರು. ಆರ್ಥಿಕ ಉದಾರೀಕರಣದ ಲಾಭ ಬಡವರ್ಗದವರನ್ನು ತಲುಪಬೇಕೆಂಬ ಉತ್ಕಟ ಇಚ್ಛೆ ಅವರಲ್ಲಿತ್ತು . ಅವರ ಆರ್ಥಿಕ ಉದಾರೀಕರಣದ ಸಾಧಕ ಬಾಧಕಗಳೇನೇ ಇರಲಿ, ದೇಶದ ಅರ್ಥ ವ್ಯವಸ್ಥೆಗೆ ಹೊಸ ಚಾಲನೆ ದೊರೆತಿದ್ದಂತೂ ನಿಜ. 13 ವರ್ಷಗಳ ಹಿಂದೆ ಆರ್ಥಿಕ ಸುಧಾರಣೆಗಳ ರೂವಾರಿಯೆನಿಸಿದ ಅವರು ದೇಶದ ಆಡಳಿತಯಂತ್ರದ ನಿರ್ಣಾಯಕ ಸ್ಥಾನದಲ್ಲಿ ನಿಂತಿದ್ದಾರೆ, ಪ್ರಧಾನಿಯಾಗಿದ್ದಾರೆ. ಭಾರತ ಪ್ರಕಾಶಿಸುವುದೆ ?

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X