ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣಾಚಾರ್ಯ : ಸಗರ ನಾಡಿನ ಮಾಸ್ತಿ

By Staff
|
Google Oneindia Kannada News

Tribute to Sagara Krishnacharyaಶಹಾಪುರ: ಸಗರ ನಾಡಿನ ಕೊನೆಯ ಕೊಂಡಿ, ಕನ್ನಡ ನಾಡು, ನುಡಿ ಕಟ್ಟಿಬೆಳೆಸಿದ ಹಿರಿಯ ಸಾಹಿತಿ ಹಾಗೂ ದಕ್ಷ ಆಡಳಿತಗಾರ ‘ಇಂದಿರೇಶ’ ನಾಮಾಂಕಿತರಾಗಿದ್ದ ಸಗರ ಕೃಷ್ಣಾಚಾರ್ಯ(88) ಜುಲೈ5ರ ಸೋಮವಾರ ಅಸ್ತಂಗತರಾದರು.

ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಕೃಷ್ಣಾಚಾರ್ಯರು ಎರಡು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ‘ಇಂದಿರೇಶ’ ಕಾವ್ಯನಾಮದಿಂದ ಸಾಹಿತ್ಯ ಕೃಷಿ ಆರಂಭಿಸಿದ ಕೃಷ್ಣಾಚಾರ್ಯ ‘ಸಗರ ನಾಡಿನ ಮಾಸ್ತಿ’ ಎಂದು ಖ್ಯಾತರಾಗಿದ್ದರು.

ಕನ್ನಡ ಸಾರಸ್ವತ ಲೋಕದಲ್ಲಿ ಹೆಸರು ಮಾಡಿದ ಕೃಷ್ಣಾಚಾರ್ಯರು ಪ್ರಕಟಿತ ಹಾಗೂ ಅಪ್ರಕಟಿತ ಸೇರಿದಂತೆ 40ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಶಹಾಪುರ ಸರಕಾರಿ ಜೂನಿಯರ್‌ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಆರಂಭಿಸಿ, ಪ್ರಾಚಾರ್ಯರಾಗಿ ಹಾಗೂ ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸಿ 1974ರಲ್ಲಿ ನಿವೃತ್ತರಾದರು.

ಕಥಾ ಸಂಗ್ರಹವಾದ ‘ಆದರ್ಶ’, ‘ಅಮೃತ ಬಿಂದು’ ಕವನ ಸಂಕಲನ, ‘ಜೀವನ ಸಂಸಾರ’ ಹಾಸ್ಯ ಪ್ರಧಾನ ನಾಟಕ, ‘ಸಗರ ನಾಡು ಸಂದರ್ಶನ’, ‘ತೋರಣ’ ಕವನ ಸಂಕಲನ, ‘ನನ್ನ ನಾ ಕಂಡೆ’ ಆತ್ಮ ಚರಿತೆ, ‘ಸ್ಮರಣ ಸಂಜೀವಿನಿ’ ಭಕ್ತಿಗೀತೆಗಳು ಅವರ ಪ್ರಕಟಿತ ಬರಹಗಳಾಗಿವೆ.

ಬಹುಭಾಷಾ ಪಾಂಡಿತ್ಯ ಪಡೆದಿದ್ದ ಅವರು ‘ಹಕೀಕಿ ಮಸಾವಾತ’ ಎಂಬ ಉರ್ದು ಪ್ರಬಂಧವನ್ನು ಬರೆದು ಉರ್ದು ಸಾಹಿತ್ಯಕ್ಕೂ ತಮ್ಮ ಕೊಡುಗೆ ಸಲ್ಲಿಸಿದ್ದಾರೆ.

ಪೌರಾಣಿಕ ನಾಟಕಗಳಾದ ‘ಲೀಲಾ ವಿಲಾಸ’, ‘ಶ್ರೀ ನೃಸಿಂಹ ಜನನ’, ‘ಮಾಂಧಾತಾ’, ‘ಯಯಾತಿ ಸಮರ್ತ ಸೌಭರಿ’, ‘ಮಹರ್ಷಿ ಚ್ಯವನ’, ‘ಅಪೂರ್ವ ಮಿಲನ’, ಸಾಮಾಜಿಕ ನಾಟಕಗಳಾದ ‘ಬ್ರಹ್ಮ-ಗಂಟು’, ‘ಸಂಘರ್ಷ’, ‘ಕಾಮಣ್ಣ ದೇವರು’, ‘ಪ್ರೇಮ ತಂತು’, ‘ರತ್ನಗರ್ಭಾ ವಸುಂಧರಾ’, ಅವರ ಇತರೆ ಕೃತಿಗಳಾಗಿವೆ.

ಕನ್ನಡವಲ್ಲದೇ ಉರ್ದು, ಪಾರಸಿ, ಸಂಸ್ಕೃತ ಭಾಷೆಯಲ್ಲೂ ಪಾಂಡಿತ್ಯ ಹೊಂದಿದ್ದರು. 1995ರಲ್ಲಿ ಮುಧೋಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರನ್ನು ಸತ್ಕರಿಸಲಾಗಿತ್ತು.

ಮೃತರಿಗೆ ಇಬ್ಬರು ಪುತ್ರರು ಹಾಗೂ ಐವರು ಪುತ್ರಿಯರು ಇದ್ದಾರೆ.

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X