ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ವಂಡರ್‌’ ವೈಯೆನ್ಕೆ : ಅರಿತಷ್ಟೂ ನಿಗೂಢ ಏನಕೆ ?

By Staff
|
Google Oneindia Kannada News

*ವಿಶ್ವೇಶ್ವರ ಭಟ್‌
ಕಾರ್ಯ ನಿರ್ವಾಹಕ ಸಂಪಾದಕರು, ವಿಜಯ ಕರ್ನಾಟಕ

Happy birthday YNKವೈಯೆನ್ಕೆ, ಹ್ಯಾಪಿ ಬರ್ಥ್‌ ಡೇ!
ವೈಯೆನ್ಕೆ, ಇಂದು ನೀವು ಇದ್ದಿದ್ದರೆ ನಿಮಗೆ 77 ವರ್ಷವಾಗುತ್ತಿತ್ತು. ನೀವು ಅದೆಷ್ಟು ಲವಲವಿಕೆಯಿಂದ ಓಡಾಡಿಕೊಂಡು ಇರುತ್ತಿದ್ದಿರಿ. ‘ನಾನು ಹೀಗೆ ಗುಂಡುಕಲ್ಲಾಗಿ ಅನೇಕ ವರ್ಷ ಬದುಕಿರ್ತೀನಿ. ನಾನು ನೈಂಟಿಗೆಲ್ಲ ಔಟಾಗೊಲ್ಲ’ ಎಂದು ಒಮ್ಮೆ ಗುಂಡು ಹಾಕಿದಾಗ ನೀವು ಹೇಳಿದ್ದಿರಿ. ವೈಯೆನ್ಕೆ, ಅದ್ಹೇಗೆ 75ಕ್ಕೆ ಎದ್ದುಬಿಟ್ಟಿರಿ? ನೀವು ಇಂದು ಇರಬೇಕಿತ್ತು ವೈಎನ್ಕೆ. ಆದರೂ ಇಂದು ನೀವು ನಮ್ಮೊಂದಿಗಿಲ್ಲ ಎಂದು ಅನಿಸುವುದೇ ಇಲ್ಲ. ನೀವು ನಮ್ಮಲ್ಲಿ ಆವರಿಸಿದ್ದೀರಿ, ಆವಾಹಿಸಿದ್ದೀರಿ.

ವೈಯೆನ್ಕೆ ನಿಧನರಾಗಿ ಎರಡೂವರೆ ವರ್ಷಗಳಾಗಿರಬಹುದು. ನಾನು ಶುದ್ಧ ‘ಘಾ’ನಂತೆ ಪ್ರಶ್ನೆ ಕೇಳಿಕೊಳ್ಳುತ್ತಿದ್ದೇನೆ- ‘ ವೈಯೆನ್ಕೆ, ನಿಮ್ಮನ್ನು ನೆನಪಿಟ್ಟುಕೊಳ್ಳದೇ ಹೇಗಿರಲಿ?’ ನನ್ನನ್ನು ನೆನಪಿಟ್ಟುಕೊಂಡು ಜನರಿಗೆ ಏನು ಪ್ರಯೋಜನ ಎಂದು ವೈಯೆನ್ಕೆ ಒಮ್ಮೆ ಯಾವ ಅರ್ಥದಲ್ಲಿ ಹೇಳಿದರೋ ಗೊತ್ತಿಲ್ಲ. ವೈಯೆನ್ಕೆ ನೆನಪು ಮಾತ್ರ ಒಂದು ‘ವಂಡರ್‌’ನನ್ನು ಸೃಷ್ಟಿಸುತ್ತದೆ. ಹೀಗಾಗಿ ಅವರು ಬಿಟ್ಟು ಬಿಡದೇ ನೆನಪಾಗುತ್ತಾರೆ.

ವೈಯೆನ್ಕೆ ಯಾವತ್ತೂ ಒಂದು ಮಾತನ್ನು ಹೇಳುತ್ತಿದ್ದರು ‘ಬಾಳೇ ಒಂದು ವಿಸ್ಮಯ, ಒಂದು ವಂಡರ್‌. ಅದು ಮುಗಿದರೆ ಈ ಬದುಕು ಮುಗಿದಂತೆ. ಹೀಗಾಗಿ ವಂಡರ್‌ಗಾಗಿ ಹುಡುಕಾಟ ನಡೆಸಬೇಕು. ತಡಕಾಟ ನಡೆಸಬೇಕು. ಜನ ಸಾಯುತ್ತಾರೆ ಮೂವತ್ತರಲ್ಲಿ, ಅವರನ್ನು ಹೂಳುತ್ತಾರೆ ಅರವತ್ತರಲ್ಲಿ , ಚರ್ವಿತಚರ್ವಣ ಬಾಳಿಗೆ ಅರ್ಥವೇನು?’ ಸದಾ ಸೋಜಿಗ ಮತ್ತು ವಂಡರ್‌ನ್ನು ಮೊಗೆದು ಕೊಡುತ್ತಿದ್ದ ಅವರು ಇಂದಿಗೂ ನಮ್ಮಲ್ಲಿ ಅದನ್ನೇ ಮಾಡುತ್ತಿದ್ದಾರೆ.

ವೈಯೆನ್ಕೆ ಅವರೊಂದಿಗೆ ಪರಿಚಯ ಎಲ್ಲರಿಗೂ ಸಾಧ್ಯವಿತ್ತು. ಅವರೊಂದಿಗೆ ಹರಟೆ, ಒಡನಾಟವೂ ತಕ್ಕಮಟ್ಟಿಗೆ ಸಾಧ್ಯವಿತ್ತು. ಆದರೆ ಗೆಳೆತನ ಸಿಕ್ಕಿದ್ದು ಮಾತ್ರ ಕೆಲವೇ ಕೆಲವರಿಗೆ. ಆಕಸ್ಮಿಕ ಪರಿಚಯದಿಂದ ಸಹೋದ್ಯೋಗಿಯಾಗಿ, ಗುರುವಾಗಿ, ಗೆಳೆಯರಾಗಿ ಅವರನ್ನು ಆತ್ಮೀಯತೆಯಿಂದ ಹತ್ತಿರದಿಂದ ಒಡನಾಡುವ ಅವಕಾಶ ನನಗೆ ಸಿಕ್ಕಿತ್ತು. ಈ ನಂಟು ಅವರ ಕೊನೆ ತನಕವೂ ಮುಂದುವರಿಯಿತು.

ವೈಯೆನ್ಕೆ ಅವರೊಂದಿಗೆ ಜಗಳವಾಡದೇ ಪ್ರೀತಿಸುವುದು, ಪ್ರೀತಿಸದೇ ಜಗಳವಾಡುವುದು ಸಾಧ್ಯವೇ ಇರಲಿಲ್ಲ. ಈ ಸಂಗತಿ ಅರ್ಥವಾದವರಿಗೆ ಅವರ ಸ್ನೇಹ, ಒಡನಾಟ, ಮಾತು, ವಿಚಾರ ಅರ್ಥವಾಗುತ್ತಿತ್ತು. ಚಿಕ್ಕಪುಟ್ಟ ಕಾರಣಗಳಿಗೆ ಸಿಡುಕಿದಾಗ, ಅವರನ್ನು ತಪ್ಪಾಗಿ ಅರ್ಥೈಸಿಕೊಂಡರೆ, ಅವರೆಂದೂ ಬೇರೆಯವರಿಗೆ ಅರ್ಥವಾಗುತ್ತಿರಲಿಲ್ಲ. ಅವರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಕಷ್ಟವಾಗಿತ್ತು ಎನ್ನುವುದಕ್ಕಿಂತ ತಮ್ಮನ್ನು ಸರಿಯಾಗಿ ಯಾರೂ ಅರ್ಥ ಮಾಡಿಕೊಳ್ಳಲು ವೈಯೆನ್ಕೆ ಬಿಡುತ್ತಿರಲಿಲ್ಲ ಎನ್ನುವುದು ಹೆಚ್ಚು ಸೂಕ್ತ. ಅವರನ್ನು ತಪ್ಪಾಗಿ ತಿಳಿದುಕೊಳ್ಳಲು ಅವರು ಬೇರೆಯವರಿಗೆ ಸಾಕಷ್ಟು ಅವಕಾಶಗಳನ್ನು ಕೊಡುತ್ತಿದ್ದರು. ಹೀಗಾಗಿ ಅವರನ್ನು ತಪ್ಪಾಗಿ ತಿಳಿದುಕೊಂಡವರು, ಅಪಾರ್ಥ ಮಾಡಿಕೊಂಡವರು ಅದೆಷ್ಟೋ?
ಪ್ರಜಾವಾಣಿ, ಕನ್ನಡಪ್ರಭದ ಸಂಪಾದಕರಾಗಿದ್ದ ಯಳಂದೂರು ನರಸಿಂಹಮೂರ್ತಿ ಕೃಷ್ಣಮೂರ್ತಿ (ವೈಯೆನ್ಕೆ) ಕೆಲವರಿಗೆ ಅರ್ಥವಾಗುತ್ತಿರಲಿಲ್ಲ . ಅರಳು ಹುರಿದಂತೆ ಬಹಳ ವೇಗವಾಗಿ ಮಾತಾಡುತ್ತಿದ್ದರು. ಈ ವೇಗ ಎಷ್ಟೊಂದು ತೀವ್ರವಾಗ್ತಿತೆಂದರೆ ಅವರ ಯೋಚನೆಯ ಗತಿಗೂ, ನಾಲಗೆಗೂ ತಾಳಮೇಳವಿರುತ್ತಿರಲಿಲ್ಲ . ಯೋಚನೆಯ ಗತಿಗೆ ನಾಲಗೆ ಸಹಕರಿಸದೇ ಪದಗಳನ್ನು ನುಂಗಿಬಿಡುತ್ತಿದ್ದರು. ಅವರ ಕನ್ನಡವನ್ನು ಕನ್ನಡಕ್ಕೆ ತರ್ಜುಮೆ ಮಾಡಿಕೊಳ್ಳಬೇಕಿತ್ತು ! ತಮ್ಮ ಮಾತನ್ನು ಅರ್ಥ ಮಾಡಿಕೊಳ್ಳದಿದ್ದರೆ ಸಿಡಿಮಿಡಿಗೊಳ್ಳುತ್ತಿದ್ದ ವೈಯೆನ್ಕೆ, ಜೋಕಿಗೆ ನಗದಿದ್ದರೆ, ‘ಘಾ’ ತರಹ ವರ್ತಿಸಬೇಡಿ ಎಂದು ಹೀಗಳೆಯುತ್ತಿದ್ದರು.

ನಿಮ್ಮ ಬರವಣಿಗೆ, ಅದರ ಅರ್ಥ ಏನೆಂದು ಪ್ರಶ್ನಿಸಿದರೆ ಅವರು ಹೇಳುತ್ತಿದ್ದುದು- ‘ಷಹರ್‌ಜಾದೆಯ ಕತೆ ಗೊತ್ತಲ್ಲ . ಆಕೆ ಕತೆ ಹೇಳುತ್ತಾ ಸಾವನ್ನು ಗೆದ್ದಳು. ಕತೆ ಹೇಳುವುದನ್ನು ನಿಲ್ಲಿಸಿದ ಕ್ಷಣ ಅವಳಿಗೆ ಸಾವು ಕಾದಿತ್ತು . ಹಾಗೆ ನಾನು ಬರೆಯುವ ಮೂಲಕ ಕಾಲವನ್ನು ಮೀರುತ್ತೇನೆ. ದೇಹದಂತೆ ಮನಸ್ಸಿಗೂ ಮುಪ್ಪು ಅಡರುತ್ತದೆ. ಬರವಣಿಗೆ ನಿಜವಾದ ಆನಂದ ನೀಡುವ, ಈ ಮುಪ್ಪನ್ನು ದೂರವಿರಿಸುವ ಮದ್ದು . ಸಕ್ಕರೆಯಾಗಲಿ, ಉಪ್ಪಾಗಲಿ ತನ್ನಿಂದ ತಾನೇ ಅದಲ್ಲ . ಅದರ ರುಚಿ ನಾಲಿಗೆಯಲ್ಲಿ ಹುಟ್ಟುವಂಥದ್ದು . ಜೊಲ್ಲಿನ ಅಂಶ ಸೇರದೇ ಅದು ರುಚಿ ಬಿಟ್ಟುಕೊಡುವುದಿಲ್ಲ . ಸಾಹಿತ್ಯ ಕೃತಿಗಳು ಹಾಗೆಯೇ. ಮನುಷ್ಯನ ಸಂವೇದನೆಯ ಜತೆಗೆ ಬೆರೆಯದೇ ಇದ್ದರೆ ಅದು ಕೇವಲ ಅಕ್ಷರಮಾಲಿಕೆ ಅಷ್ಟೇ. ಹಾಗೇ ನನ್ನ ಬರಹಗಳು ಕೂಡ ಅವು ಅನುಭವವನ್ನು ಹಂಚುವ, ರುಚಿಯಾಗಿಸುವ ವಿಧಾನ. ಅವು ವಿಧಾನ ಕೂಡ ಅಲ್ಲ . ಸಹಜ ಜೀವನ ಕ್ರಮ.’

ವೈಯೆನ್ಕೆ ಜತೆ ಯಾವ ವಿಷಯದ ಬಗ್ಗೆ ಬೇಕಾದರೂ ಮುಚ್ಚುಮರೆಯಿಲ್ಲದೇ ನಿಸ್ಸಂಕೋಚವಾಗಿ ಮಾತನಾಡಬಹುದಿತ್ತು . ರಂಗೋಲಿಯಿಂದ ಹಿಡಿದು ರಮ್‌ವರೆಗೆ, ಸಾಸಿವೆಯಿಂದ ಹಿಡಿದು ಸೆಕ್ಸ್‌ವರೆಗೆ, ಕಸೂತಿಯಿಂದ ಹಿಡಿದು ಪ್ರಸೂತಿವರೆಗೆ, ಪ್ರವಾಸೋದ್ಯಮದಿಂದ ಹಿಡಿದು ಪತ್ರಿಕೋದ್ಯಮದವರೆಗೆ... ಹೀಗೆ ಎಲ್ಲ ವಿಷಯಗಳ ಕುರಿತು ಮೈಲಿಗೆ- ಮಡಿ ಇಲ್ಲದೇ ಹರಟೆ ಕೊಚ್ಚಬಹುದಿತ್ತು .

ಆದರೆ ಅವರೊಂದಿಗೆ ಹತ್ತು ನಿಮಿಷ ಮಾತಿಗಿಳಿದರೂ, ಹತ್ತಾರು ವಿಷಯಗಳ ಬಗ್ಗೆ ಹೊಸ ಸಾಧ್ಯತೆಗಳ ಎಳೆಯನ್ನು ತೋರಿಸುತ್ತಿದ್ದರು. ಆ ಎಳೆಯನ್ನು ಹಗ್ಗ ಮಾಡಿಕೊಳ್ಳಬಲ್ಲವ ಮಾತ್ರ ಅವರ ಮಾತುಕತೆಯಿಂದ ಲಾಭ ಮಾಡಿಕೊಳ್ಳಬಹುದಿತ್ತು .

ಹೀಗಾಗಿ ಅವರೆಂದೂ ವೇದಿಕೆಯ ಮೇಲೆ ಮಾತಾಡುತ್ತಿರಲಿಲ್ಲ . ಮಾತಾಡಲೂ ಪ್ರಯತ್ನಪಟ್ಟರೂ, ಪ್ರೇಕ್ಷಕರ ಪ್ರತಿಕ್ರಿಯೆಯಿಂದ ಅದನ್ನು ಮುಂದುವರಿಸಲಿಲ್ಲ. ಅವರು ಏನು ಹೇಳುತ್ತಾರೆಂಬುದು ಅರ್ಥವೇ ಆಗುತ್ತಿರಲಿಲ್ಲ . ಪ್ರೇಕ್ಷಕರ ಭಾಗ್ಯವೋ, ಕಾರ್ಯಕ್ರಮ ಸಂಘಟಕರ ಪುಣ್ಯವೋ, ಯಾವುದೇ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಿದರೂ, ಅವರು ಸಿದ್ಧ ಭಾಷಣವನ್ನೇ ಓದುತ್ತಿದ್ದರು. ಅದೇ ವೈಯೆನ್ಕೆ ಪಾರ್ಟಿಯಲ್ಲಿ ಕುಳಿತರೆ ಸಕತ್‌ ಮಿಂಚಿಂಗ್‌!

ಹೀಗಾಗಿ ಅವರು ವೇದಿಕೆಯಲ್ಲಿ ಕಂಡಿದ್ದಕ್ಕಿಂತ, ಪಾರ್ಟಿಗಳಲ್ಲಿ ಕಂಗೊಳಿಸಿದ್ದೇ ಜಾಸ್ತಿ . ವೇದಿಕೆಯಲ್ಲಿ ನಿಂತಾಗ ತಮಗೆ ಮಾತಾಡಲಾಗುವುದಿಲ್ಲವೆಂಬುದು ಅವರಿಗೆ ಗೊತ್ತಿತ್ತು . ಆ ಬಗ್ಗೆ ಅವರಿಗೆ ಸ್ವಲ್ಪ ಪ್ರಮಾಣದ ಕೊರಗೂ ಇತ್ತು . ಆದರೆ ಇದನ್ನು ತೋರಗೊಡುತ್ತಿರಲಿಲ್ಲ . ಸಿದ್ಧ ಭಾಷಣ ಓದುವುದರ ಒಂದು ಲಕ್ಷಣವೆಂದರೆ ಎಲ್ಲೋ ಒಂದೆಡೆ ಭಾಷಣ ಮುಗಿಯುವುದು ಗ್ಯಾರಂಟಿ ಎಂದು ಸಮರ್ಥಿಸಿಕೊಳ್ಳುತ್ತಿದ್ದರು.

ವೈಯೆನ್ಕೆಗೂ ಗುಂಡಿಗೂ ಅವಿನಾಭಾವ ಸಂಬಂಧ. ಅವರ ಗುಂಡು ಪಾರ್ಟಿ ಜನಜನಿತ. ಅವರ ‘ಗುಂಡಿಗೆ’ ಸಾಮಾನ್ಯದ್ದಲ್ಲ . ಒಂದು ದಿನವೂ ಬಿಡದೆ, ಸತತ ಐವತ್ತು ವರ್ಷಗಳವರೆಗೆ ಗುಂಡು ಹಾಕಿದ ಗುಂಡುಗಲಿ.

ಸಾಯಂಕಾಲ ಏಳು ಗಂಟೆಯಾದರೆ ಪಕ್ಕದಲ್ಲಿ ಭೂಕಂಪವೇ ಆದರೂ, ವೈಯೆನ್ಕೆ ಗುಂಡು ಹಾಕಲು ಕುಳಿತುಬಿಡುತ್ತಿದ್ದರು. ಐದು ನಿಮಿಷ ತಡವಾದರೂ ತೀವ್ರ ಚಡಪಡಿಕೆ. ಸಂಜೆ 6 ಗಂಟೆ ನಂತರ ಯಾರಾದರೂ ಅವರನ್ನು ಭೇಟಿ ಮಾಡಲು ಬಂದರೆ, ಅವರಿಗೆ ತೀವ್ರ ‘ತುರಿಕೆ’ಯಾಗುತ್ತಿತ್ತು . ಬಂದ ವ್ಯಕ್ತಿ ಎಷ್ಟೇ ಗಣ್ಯನಾಗಿದ್ದರೂ ಪರವಾಗಿಲ್ಲ , ಆರೂವರೆಯ ನಂತರ ಒಂದು ನಿಮಿಷವೂ ಆತನನ್ನು ಇರಗೊಡುತ್ತಿರಲಿಲ್ಲ . ಮುಂದಿನ ‘ತೀರ್ಥಯಾತ್ರೆ’ಗೆ ವಿಳಂಬವಾಗಬಹುದೆನ್ನುವ ದುಗುಡ.


ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X