ಆಸೆಗಳು ಬಾನಗಲ,ಬೊಕ್ಕಸ ಬೊಗಸೆಯಗಲ: ಇದು ಕನ್ನಡ ಮತ್ತು ಸಂಸ್ಕೃತಿ !

'ನಾನು ತುಂಬಾ ಕೆಲಸ ಮಾಡಿದ್ದೇನೆ ಎನ್ನುವುದಿಲ್ಲ . ಆದರೆ ಮಾಡಿರುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಕನ್ನಡದ ಕೆಲಸ ಮನಸ್ಫೂರ್ತಿಯಾಗಿ ಮಾಡಿದ್ದೇನೆ ಎನ್ನುವ ನೆಮ್ಮದಿ ನನಗಿದೆ. ಮಾಡಬೇಕಾದುದು ಇನ್ನೂ ಬಹಳಷ್ಟಿದೆ ಎನ್ನುವುದೂ ನನಗೆ ತಿಳಿದಿದೆ.'

ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ.. ಮುಂತಾಗಿ ಕನ್ನಡ.ಇನ್ಫೋ ಓದುಗರ ಹಲವಾರು ಪ್ರಶ್ನೆಗಳನ್ನು, ಅನಿವಾಸಿ ಕನ್ನಡಿಗರ ಒಳಗುದಿಗಳನ್ನು ಹೊತ್ತು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ರಾಣಿ ಸತೀಶ್‌ ಅವರನ್ನು ನಾವು ಎದುರಾದಾಗ- ಸುಮಾರು ಎರಡು ವರ್ಷಗಳ ಅವಧಿಯ ತಮ್ಮ ಕಾರ್ಯ ನಿರ್ವಹಣೆಯನ್ನು ಅವರು ವಿವರಿಸಿದ್ದು ಹೀಗೆ!

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏನು ಮಾಡುತ್ತಿದೆ?

ನಿಮ್ಮ ಪ್ರಶ್ನೆಯ ಔಚಿತ್ಯ ನನಗೆ ಅರ್ಥವಾಗುತ್ತದೆ. ಕೃಷಿ , ಕೈಗಾರಿಕೆ, ಕಂದಾಯ.. ಮುಂತಾದ ಖಾತೆಗಳಿಗೆ ಹೋಲಿಸಿದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತೀರಾ ಚಿಕ್ಕದು. ಆದರೆ ಕನ್ನಡ ಮತ್ತು ಸಂಸ್ಕೃತಿ ಖಾತೆಯ ಮೇಲಿನ ಜನತೆಯ ನಿರೀಕ್ಷೆ ದೊಡ್ಡದು. ಭಾಷೆ, ಸಂಸ್ಕೃತಿ.. ಇದೆಲ್ಲಾ ಹಣಕಾಸಿಗೆ ಸಂಬಂಧಿಸಿದ್ದಲ್ಲ ; ಮನಸ್ಸಿಗೆ ಸಂಬಂಧಿಸಿದ್ದು, ಭಾವನಾತ್ಮಕ ವಿಷಯ. ನಾನು ಇದನ್ನೇ ಎಲ್ಲರೊಂದಿಗೂ ಹೇಳುತ್ತಿರುತ್ತೇನೆ ಎಂದರು ರಾಣಿ ಸತೀಶ್‌.
ಎರಡು ವರ್ಷಗಳ ಕಾಲದ ತಮ್ಮ ಸಾಧನೆ ಹಾಗೂ ಮುಂದಿನ ಯೋಜನೆಗಳನ್ನು ರಾಣಿ ಸತೀಶ್‌ ಮುಂದಿಟ್ಟರು. ತಮ್ಮ ಸಾಧನೆಗಳನ್ನು, ಯೋಜನೆಗಳನ್ನು ಓದುಗರಿಗಾಗಿ ಬಿಚ್ಚಿಟ್ಟರು.
ಮಾತುಕತೆಯ ಸಾರ ಇಲ್ಲಿದೆ-ಆಡಳಿತದಲ್ಲಿ ಕನ್ನಡ ಅನುಷ್ಠಾನಕ್ಕೆ ಒತ್ತು

ಆಡಳಿತದಲ್ಲಿ ಕನ್ನಡ ಬಳಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಈ ಕುರಿತು ಆಡಳಿತಾತ್ಮಕ ಸುತ್ತೋಲೆಯನ್ನೂ ಹೊರಡಿಸಲಾಗಿದೆ. ಅಲ್ಲದೆ ಎಲ್ಲ ಶಾಲೆಗಳಲ್ಲೂ ಕನ್ನಡ ಬಳಸುವಂತೆ ಸುತ್ತೋಲೆ ಕಳಿಸಲಾಗಿದೆ. ಇಂಗ್ಲೀಷ್‌ ಬಳಸಲು ನಮ್ಮ ಅಡ್ಡಿಯೇನಿಲ್ಲ . ಆದರೆ, ಕನ್ನಡವನ್ನೂ ಬಳಸಿ ಎನ್ನುವುದು ನಮ್ಮ ಆಗ್ರಹ. ಯಾರಿಗಾದರೂ ಕೇಳಿಸುತ್ತಿದೆಯಾ ?

ಹೊರ ರಾಜ್ಯ ಕನ್ನಡಿಗರೊಂದಿಗೆ ನಿಕಟ ಸಂಪರ್ಕ

ಹೊರನಾಡ ಕನ್ನಡಿಗರ, ಕನ್ನಡ ಸಂಘಟನೆಗಳ ಸಭೆ ಕರೆದು ಅವರ ಸಮಸ್ಯೆಗಳ ಬಗ್ಗೆ ಸರ್ಕಾರ ಚರ್ಚೆ ನಡೆಸಿದೆ. ಇಂಥದೊಂದು ಹೊರನಾಡ ಕನ್ನಡಿಗರ ಸಭೆ ನಡೆಸಿದ ಮೊದಲ ಸರ್ಕಾರ ನಮ್ಮದು. ಹೊರನಾಡ ಕನ್ನಡಿಗರ ಸಮಸ್ಯೆಗಳನ್ನು ತಿಳಿದುಕೊಂಡಿದ್ದೇವೆ. ಇನ್ನು ಮುಂದೆ ಅವುಗಳನ್ನು ಬಗೆಹರಿಸುವ ಕೆಲಸ. ಹೊರರಾಜ್ಯಗಳಲ್ಲಿ ಕನ್ನಡದ ಕಾರ್ಯಕ್ರಮಗಳನ್ನು ನಡೆಸಲು, ರಾಜ್ಯೋತ್ಸವ ಕಾರ್ಯಕ್ರಮ ಆಚರಿಸಲು ಸಂಸ್ಕೃತಿ ಇಲಾಖೆ ಆರ್ಥಿಕ ನೆರವು ಒದಗಿಸುತ್ತಿದೆ. ಗಡಿನಾಡ ಪ್ರದೇಶಗಳಲ್ಲೂ ಕನ್ನಡ ಸ್ಪಂದನ ಉಂಟು ಮಾಡುವ ಚಟುವಟಿಕೆಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತೊಡಗಿದೆ. ಇಲಾಖೆಯದು ದೊಡ್ಡ ಮನಸ್ಸು, ಆದರೆ ವ್ಯಾಲೆಟ್‌ ತುಂಬ ಚಿಕ್ಕದು !

ಕಾಶಿಯಲ್ಲಿ ಎದುರಾದ ಕನ್ನಡ ಕಲಾವಿದರು

ಅಂತರ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಡಿ ಇತ್ತೀಚೆಗೆ ಕಾಶಿಗೆ ಹೋಗಿದ್ದೆ. ಅಲ್ಲಿ 16 ಮಂದಿ ಕನ್ನಡ ಕಲಾವಿದರು ಸಿಕ್ಕಿದ್ದರು. ಅವರಲ್ಲಿ ಕನ್ನಡ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ತುಂಬಾ ಸಂತೋಷವಾಯಿತು. ಕನ್ನಡ ಕಾಶಿಗೆ ಹೋಗಲಿಲ್ಲ , ಸದ್ಯ !

ಹೂಸ್ಟನ್‌ ಸಮ್ಮೇಳನದ ಅನುಭವ ಎಂದೂ ಮರೆಯಲಾಗದ್ದು

ನಾನು ಅಮೆರಿಕಾದಲ್ಲಿದ್ದೇನೆ ಎಂದು ಅನ್ನಿಸಲೇ ಇಲ್ಲ . ಅಪ್ಪಟ ಭಾರತೀಯ ವಾತಾವರಣ ಅಲ್ಲಿ ಸೃಷ್ಟಿಯಾಗಿತ್ತು . ಅಮೆರಿಕಾ ಕನ್ನಡಿಗರು ನೀಡಿದ ಸ್ವಾಗತ, ನಮ್ಮ ಆಗಮನಕ್ಕೆ ಅವರ ಪ್ರತಿಕ್ರಿಯೆ ಅದ್ಭುತವಾಗಿತ್ತು . ನನ್ನೊಂದಿಗೆ ರಾಜ್ಯಪಾಲರಾದ ವಿ.ಎಸ್‌. ರಮಾದೇವಿ, ವಿಧಾನ ಸಭಾಧ್ಯಕ್ಷ ವೆಂಕಟಪ್ಪನವರು ಹಾಗೂ ಕನ್ನಡದ ಕಲಾವಿದರು ಹೂಸ್ಟನ್‌ ವಿಶ್ವ ಕನ್ನಡ ಸಮ್ಮೇಳನ (ಸೆಪ್ಟಂಬರ್‌-2000)ಕ್ಕೆ ಬಂದಿದ್ದರು.

ಅಲ್ಲಿ ದಸರಾ ಉತ್ಸವ ಮಾಡಿದರು. ಆನೆ ಇರಲಿಲ್ಲ ಎನ್ನುವುದನ್ನು ಬಿಟ್ಟರೆ ದಸರೆ ಅದ್ದೂರಿಯಾಗಿತ್ತು . ಅವರಿಗೆಲ್ಲ ಕನ್ನಡದ ಬಗೆಗೆ ಅಪಾರ ಆಸ್ಥೆ . ಭಾರತೀಯ ಸಂಸ್ಕೃತಿ ಬಗ್ಗೆ ಅಪಾರ ಕಳಕಳಿ. ಶನಿವಾರ, ಭಾನುವಾರದ ರಜೆ ದಿನಗಳಲ್ಲಿ ಕೆಲವು ಭಾರತೀಯರ ಮನೆಗಳಿಗೆ ಭೇಟಿ ಕೊಟ್ಟಿದ್ದೆ . ಪೋಷಕರು ತಮ್ಮ ಮಕ್ಕಳಿಗೆ ದಾಸ ಸಾಹಿತ್ಯ, ವೇದ, ವಚನ.. ಅಭ್ಯಾಸ ಮಾಡಿಸುತ್ತಿದ್ದರು. ಅವರಿಗೆಲ್ಲ ತಮ್ಮ ಸಂಸ್ಕೃತಿ ಕೈ ತಪ್ಪುವ ಆತಂಕ. ವಿಪರ್ಯಾಸವೆಂದರೆ ಮಕ್ಕಳಿಗೆ ಸಂಸ್ಕೃತಿಯ ಅರಿವು ಮೂಡಿಸುವ ಕೆಲಸ ಭಾರತದಲ್ಲಿ ಆಗ್ತಿಲ್ಲ ; ಅಮೆರಿಕೆಯಲ್ಲಿ ಸಾಧ್ಯವಾಗ್ತಿದೆ. Keep it up, folks

ಕನ್ನಡ ಪುಸ್ತಕ ಕೇಳಿದ್ದರು.. ಕಳಿಸುತ್ತಿದ್ದೇವೆ..

ಸಂಸ್ಕೃತಿ, ಪರಂಪರೆ ಬಗೆಗೆ ಅರಿವು ಮೂಡಿಸುವ ಪುಸ್ತಕಗಳನ್ನು ಕಳಿಸುವಂತೆ ಅಮೆರಿಕಾ ಭೇಟಿಯ ಸಂದರ್ಭದಲ್ಲಿ ಅಲ್ಲಿನ ಕನ್ನಡಿಗರು ಕೇಳಿದ್ದರು. ಪುಸ್ತಕ ಕಳಿಸುವುದಾಗಿ ಒಪ್ಪಿಕೊಂಡಿದ್ದೆ . ಈವರೆಗೆ ಸಾಧ್ಯವೇ ಆಗಿರಲಿಲ್ಲ . ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಅಕ್ಕ ಸಂಸ್ಥೆಯ ಜಂಟಿ ಖಜಾಂಚಿ ಮತ್ತು ಮಿಚಿಗನ್‌ ಕನ್ನಡ ಕೂಟದ ಅಧ್ಯಕ್ಷ ರಂಗರಾಜನ್‌ ತಿರುಮಲ ಕನ್ನಡ ಪುಸ್ತಕಗಳನ್ನು ಕಳಿಸುವ ವಾಗ್ದಾನವನ್ನು ನೆನಪಿಸಿದರು. ಈಗ ಪುಸ್ತಕಗಳನ್ನು ಕಳಿಸುವ ವ್ಯವಸ್ಥೆ ನಡೆಯುತ್ತಿದೆ. ಸದ್ಯದಲ್ಲೇ ಪುಸ್ತಕಗಳು ಅಮೆರಿಕಾ ಕನ್ನಡಿಗರ ಕೈ ಸೇರಲಿವೆ. ಓದಿಕೊಳ್ಳಿ..

ಮನೆಗೊಂದು ಗ್ರಂಥಾಲಯ! ಅಮ್ಮ, ಮಗು.. ಎಲ್ಲರಿಗೂ ಪುಸ್ತಕ!

ಕನ್ನಡ ಕಿಟ್‌ ಯೋಜನೆಯನ್ನು ಕನ್ನಡ ಸಾಹಿತ್ಯ ಪರಿಷತ್ತು , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರ ಜಂಟಿಯಾಗಿ ಹಮ್ಮಿಕೊಂಡಿವೆ. ಕುಟುಂಬಕ್ಕೊಂದು ಮಿನಿ ಗ್ರಂಥಾಲಯ ಒದಗಿಸುವುದು ಯೋಜನೆಯ ಉದ್ದೇಶ. ಮಕ್ಕಳಿಂದ ವೃದ್ಧರವರೆಗೆ.. ಎಲ್ಲ ವಯೋಮಾನದವರಿಗೂ ಅವಶ್ಯಕವಾದ ಆಯ್ದ ಪುಸ್ತಕಗಳನ್ನು ಈ ಯೋಜನೆಯಡಿ ಮುದ್ರಿಸಿ ಜನ ಸಾಮಾನ್ಯರ ಕೈಗೆಟುಕುವಂಥ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಉದ್ದೇಶಿಸಲಾಗಿದೆ. ಪುಸ್ತಕಗಳನ್ನು ಗುರ್ತಿಸುವ ಕೆಲಸ ನಡೆಯುತ್ತಿದೆ. ನಮಗೆ ಎಂಥ ಪುಸ್ತಕಗಳು ಬೇಕು ?

ಅನಿವಾಸಿ ಕನ್ನಡಿಗರಿಗೆ ಪುಸ್ತಕ, ಕೆಸೆಟ್‌ ಇತ್ಯಾದಿ

ವಿದೇಶದಲ್ಲಿ ನೆಲೆಸಿ ಕನ್ನಡಕ್ಕಾಗಿ ಹಪಹಪಿಸುವ ಅವರ ಕನ್ನಡಾಭಿಮಾನ ದೊಡ್ಡದು. ಅವರಿಗೆ ಕನ್ನಡ ಪುಸ್ತಕಗಳು, ಭಾವಗೀತೆಗಳ ಕೆಸೆಟ್‌ ಹಾಗೂ ಕನ್ನಡ ಸಂಸ್ಕೃತಿ ಪರಂಪರೆ ಬಿಂಬಿಸುವ ಕಲಾಕೃತಿಗಳನ್ನು ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುವುದು. ಈ ಬಗ್ಗೆ ನಾನು ಇಲಾಖೆಯ ಕಾರ್ಯದರ್ಶಿ ಕೆ.ಸಿ. ರಾಮಮೂರ್ತಿ ಅವರೊಡನೆ ಸಮಾಲೋಚನೆ ನಡೆಸುತತೇನೆ. 2002 ನೇ ಇಸವಿ ಆಗಸ್ಟ್‌, ಸೆಪ್ಟಂಬರ್‌ನಲ್ಲಿ ನಡೆಯುವ ಡೆಟ್ರಾಯಿಟ್‌ ಸಾಹಿತ್ಯ ಸಮ್ಮೇಳನ ಕ್ಕೆ ನಾನೇ ಪುಸ್ತಕ, ಕೆಸೆಟ್‌, ಕಲಾಕೃತಿಗಳನ್ನು (wall hangers) ಕೊಂಡೊಯ್ಯುತ್ತೇನೆ. ಆ ವೇಳೆಗೆ 'ಕನ್ನಡ ಕಿಟ್‌' ಕೂಡ ಸಿದ್ಧವಾಗಲಿದೆ.

ಕೊನೆಯದಾಗಿ-

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿಕ್ಕ ಖಾತೆ. ಇತರ ಖಾತೆಗಳಿಗೆ 300-400 ಕೋಟಿ ರುಪಾಯಿ ಮೀಸಲಿಟ್ಟರೆ, ಇಲ್ಲಿರುವುದು 9 ಕೋಟಿ ರುಪಾಯಿ ಬಜೆಟ್‌ ಮಾತ್ರ. ಇಷ್ಟರೊಳಗೇ ಎಲ್ಲವನ್ನೂ ತೂಗಿಸಬೇಕು. ಹಣಕಾಸಿನ ಮಿತಿಯಾಳಗೆ ಕನ್ನಡದ ಕೆಲಸ ನಡೆಯುತ್ತಿದೆ.

ರಾಣಿ ಸತೀಶ್‌ ಮಾತು ಮುಗಿಸಿದರು. ಅವರು ಇನ್ನಾವುದೋ ಕನ್ನಡದ ಸಭೆಗೆ ಹೊರಡಬೇಕಿತ್ತು .

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+