• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾಭ್ಯಾಲವಾಲರೋಮಾಲಿಲತಾಫಲ....

By Super
|

ಸುಗಂಧಿಯನ್ನು ಎದುರಿಸುವ, ಆ ಮೂಲಕ ಅವಳನ್ನು ಪಶ್ಚಾತ್ತಾಪದ ಬೆಂಕಿಯಲ್ಲಿ ಬೇಯುವಂತೆ ಮಾಡುವ, ತನ್ಮೂಲಕ ಆಕೆ ಆನಂದನಿಂದ ದೂರವಾಗುವಂತೆ ಮಾಡುವ ಸೋಮಯಾಜಿಗಳ ಉಪಾಯ ಫಲಿಸಲಿಲ್ಲ. ಸೋಮಯಾಜಿಗಳ ಕಣ್ಣಿಗೆ ಪಾಪಾಂಕಿತೆಯಾದಷ್ಟೂ ಧನ್ಯತೆ ಅನುಭವಿಸುವ ಹುಡುಗಿಯಂತೆ ಸುಗಂಧಿ ಕಂಡಳು. ಅವರ ಹತ್ತಿರ ಮೊದಲ ಬಾರಿ ಬೈಸಿಕೊಂಡು ಶಾಪಗ್ರಸ್ತೆಯಾಗುವ ಆತಂಕಕ್ಕೀಡಾದಾಗಲೂ ಸುಗಂಧಿಯ ಮಂದಹಾಸ ಮಾತ್ರ ಮಾಸಿರಲಿಲ್ಲ. ಸೋಮಯಾಜಿಗಳ ದೈವತ್ವವನ್ನೂ ಧಾರ್ಮಿಕತೆಯನ್ನೂ ನೈತಿಕತೆಯನ್ನು ತನ್ನ ಚೂಪು ಮೊಲೆಗಳಿಂದ ಎದುರಿಸಬಲ್ಲೆ ಎಂಬ ಅಹಂಕಾರದಲ್ಲಿ ಸುಗಂಧಿ ತೇಲಾಡುತ್ತಿದ್ದಾಳೆ ಅಂತ ಸೋಮಯಾಜಿಗಳಿಗೆ ಪದೇ ಪದೇ ಅನ್ನಿಸತೊಡಗಿತು. ಆನಂದನ ಮನಸ್ಸಿನಲ್ಲಿ ನೆಲೆಗೊಂಡಷ್ಟೇ ಗಾಢವಾಗಿ ಸೋಮಯಾಜಿಗಳ ಮನಸ್ಸಿನಲ್ಲೂ ಸುಗಂಧಿ ನೆಲೆಯಾದಳು.

ಆಗಲೇ ಅವರಿಗೆ ದ್ವೇಷಿಸುವುದೂ ಪ್ರೀತಿಸುವುದೂ ಒಂದೇ ಎಂದು ಹೊಳೆದದ್ದು. ದ್ವೇಷಿಸುವ ಮೂಲಕ ಮೂರೇ ಜನ್ಮವೆತ್ತಿ ಹರಿಪಾದ ಸೇರಲು ಬಯಸಿದ ಜಯವಿಜಯರ ಕತೆಯನ್ನು ನೆನೆಯುತ್ತಾ ಸೋಮಯಾಜಿಗಳು ಆನಂದ ಬ್ರಾಹ್ಮಣ್ಯದಿಂದ ವಿಮುಖನಾಗುತ್ತಿರುವುದೇಕೆ ಎಂದು ಚಿಂತಿಸತೊಡಗಿದರು. ಅವರ ಚಿಂತೆ ಆನಂದನ ವಿಮುಖತ್ವದ ಕುರಿತಾಗಿರಲಿಲ್ಲ; ಅದರ ಕಾರಣದ ಕುರಿತಾಗಿತ್ತು. ಯಾಕೆ ಬ್ರಾಹ್ಮಣ ತನ್ನ ಸಂಸ್ಕಾರವನ್ನು ತನ್ನ ಆಚಾರವನ್ನು ಮರೆಯುತ್ತಾನೆ? ಅದರ ಶ್ರೇಷ್ಠತೆ ಅವನಿಗೇಕೆ ಅರ್ಥವಾಗುತ್ತಿಲ್ಲ ? ಶೂದ್ರಾತಿಶೂದ್ರರೆಲ್ಲ ಬ್ರಾಹ್ಮಣತ್ವಕ್ಕಾಗಿ ಹಾತೊರೆಯುತ್ತಿರಬೇಕಾದರೆ ತಾನಾಗಿ ಒದಗಿ ಬಂದ ಬ್ರಾಹ್ಮಣತ್ವವನ್ನು ವಿಸರ್ಜಿಸಿಕೊಳ್ಳುವ ಮೂಲಕ ಆನಂದ ಏನನ್ನು ಸಾಧಿಸುತ್ತಿದ್ದಾನೆ ? ಅದು ತನ್ನ ಮೇಲೆ ಸೇಡು ತೀರಿಸಿಕೊಳ್ಳುವ ವಿಧಾನ ಇರಬಹುದೇ?

ಆನಂದನಿಗೆ ಆಸೆ ಇದ್ದದ್ದು ಇಂಜಿನಿಯರ್‌ ಆಗಬೇಕೆಂದು. ಆದರೆ ಗುರುವಾಯನಕೆರೆಯಲ್ಲಿದ್ದ ಏಕಮಾತ್ರ ಶಾಲೆಯಲ್ಲಿ ಓದಿದ ಅವನನ್ನು ಮಂಗಳೂರಿಗೆ ಕಾಲೇಜಿಗೆ ಕಳುಹಿಸುವ ಶಕ್ತಿ ಸೋಮಯಾಜಿಗಳಿಗೆ ಇರಲಿಲ್ಲ. ಅಷ್ಟಕ್ಕೂ ಇಂಜಿನಿಯರ್‌ ಆಗುವುದರಿಂದ ಏನು ಸಾಧನೆ ಮಾಡಿದ ಹಾಗಾಯಿತು ಅನ್ನುವ ಪ್ರಶ್ನೆಯೂ ಸೋಮಯಾಜಿಗಳನ್ನು ಕಾಡದೇ ಇರಲಿಲ್ಲ. ಪೌರೋಹಿತ್ಯ ಮಾಡಿಕೊಂಡಿದ್ದರೆ ಸಾಕು, ಹೇಗೋ ಜೀವನ ಸಾಗುತ್ತದೆ. ಇರುವವನು ಒಬ್ಬನೇ ಮಗ. ಕುಲಪೌರೋಹಿತ್ಯಕ್ಕೆಂದು ನೂರು ಮನೆಗಳಾದರೂ ಇದ್ದೇ ಇವೆ. ನೂರು ಮನೆಗಳಲ್ಲಿ ವರ್ಷಕ್ಕೆರಡು ಶ್ರಾದ್ಧ, ದುರ್ಗಾನಮಸ್ಕಾರ, ಗಣಹೋಮ, ಮದುವೆ, ಮುಂಜಿ, ಸತ್ಯನಾರಾಯಣ ಪೂಜೆ ಅಂತ ಮಾಡಿಸಿದರೂ ವರ್ಷಪೂರ್ತಿ ಕೆಲಸ ಇದ್ದೇ ಇರುತ್ತದೆ. ಸತ್ಕುಲ ಪ್ರಸೂತೆಯಾದ ಸೊಸೆಯಾಬ್ಬಳು ಬಂದುಬಿಟ್ಟರೆ ಮನೆಯಲ್ಲಿ ಅಡುಗೆ ಮಾಡಬೇಕಾದ ಪ್ರಮೇಯವೇ ಇಲ್ಲ. ಗಂಡ ಹೆಂಡಿರಿಬ್ಬರೂ ಜಂಬರ ನಡೆದಲ್ಲೇ ಊಟ ಮುಗಿಸಿಕೊಂಡು ಬರಬಹುದು. ಬೇಕಿದ್ದರೆ ಅವಳೂ ಅಡುಗೆಗೋ ಸಿಂಗಾರಕ್ಕೋ ಸೇರಿದರಾಯ್ತು. ಇಂಥದ್ದೆಲ್ಲ ಬಿಟ್ಟು ಇಂಜಿನಿಯರ್‌ ಆಗಿ ಯಾರದೋ ಕೈಲಿ ಬೈಸಿಕೊಂಡು ದುಡಿಯುವ ಅಗತ್ಯವೇನಿದೆ?

ಆದರೆ ಆನಂದನಿಗೆ ಯಾಕೋ ವೇದಾಧ್ಯಯನ ಆಗಿಬರಲಿಲ್ಲ. ಇಂಜಿನಿಯರ್‌ ಆಗುವುದು ಕನಸು ಅಂತ ಗೊತ್ತಾದದ್ದೇ ತಡ, ಅವನು ಹಾದಿ ತಪ್ಪಿದ. ಕೊಂಕಣಿ ಹುಡುಗರ ಜೊತೆ ಸೇರಿ ಹೊಟೆಲಿನಲ್ಲಿ ತಿಂಡಿ ಕಾಫಿ ಮಾಡುವುದು ಗೊತ್ತಾದ ದಿನ ಸೋಮಯಾಜಿಗಳು ಅವನನ್ನು ಕರೆದು ಬೈದಿದ್ದರು. ನಿನ್ನನ್ನು ನೀನೇ ಹೀನೈಸಿಕೊಳ್ಳುತ್ತೀ. ನಿನ್ನನ್ನು ಯಾರೂ ಗೌರವಿಸುವುದಿಲ್ಲ. ನಾವು ಗೌರವ ಪಡೆಯುವುದು ನಮ್ಮ ಆಚಾರದಿಂದಾಗಿ ಎಂದಿದ್ದರು. ಅವನಿಗೆಷ್ಟು ಅರ್ಥವಾಯಿತೋ? ಮತ್ತೊಂದು ಸಲ ಹೇಳುವುದಕ್ಕೆ ಅವನು ಅವಕಾಶ ಕೊಡಲೇ ಇಲ್ಲ. ಸೋಮಯಾಜಿಗಳಿಗೆ ಅವನು ಹುಡುಗರ ಜೊತೆ ಸೇರಿ ಸಿಗರೇಟು ಸೇದುವುದೂ ಗೊತ್ತಾಯಿತು. ಆವತ್ತು ರಾತ್ರಿಯೆಲ್ಲ ಕೂತು ಮಗನಿಗಾಗಿ ಅರಿಷ್ಟನಿವೃತ್ತಿ ಮಂತ್ರ ಪಠಿಸಿದ್ದರು. ಆನಂದ ಬದಲಾಗಲಿಲ್ಲ. ಅವರ ಕೈಗೆ ಹತ್ತಲಿಲ್ಲ. ಅವನನ್ನು ತಾನು ಬದಲಾಯಿಸಬಲ್ಲೆ ಎಂಬ ಸೋಮಯಾಜಿಗಳ ಅಹಂಕಾರವನ್ನು ಮಾತ್ರ ಸುಟ್ಟುಬಿಟ್ಟ.

ಈಗ ಹೋದಲ್ಲೆಲ್ಲ ಕೇಳುತ್ತಾರೆ; ಆನಂದನ ಮದುವೆ ಯಾವಾಗ ಮಾಡುತ್ತೀರಿ. ಕುಲಗುರುಗಳಾದ ನಿಮ್ಮ ಮಗನನ್ನೇ ನೀವು ಹೀಗೆ ಬಿಟ್ಟರೆ ಹೇಗೆ? ಸೋಮಯಾಜಿಗಳಿಗೂ ಅನ್ನಿಸಿದ್ದಿದೆ; ಆನಂದನಲ್ಲಿ ಮಾತ್ರವಲ್ಲ, ಊರಲ್ಲಿ ಎಲ್ಲರಲ್ಲೂ ಭಕ್ತಿ ಕಡಿಮೆಯಾಗಿದೆ. ಯಾಕೆ, ನಾರಾಯಣರಾಯರ ದೊಡ್ಡ ಮಗ, ಮುಂಬಯಿಯಲ್ಲಿರುವವನು, ಬೆಳಗ್ಗೆ ಶ್ರಾದ್ಧ ಮಾಡಲು ಕೂತಾಗ ಅವನ ಬಾಯಿಯಿಂದ ಕೆಟ್ಟ ವಾಸನೆ ಬರುತ್ತಿತ್ತಲ್ಲ. ಅದನ್ನೆಲ್ಲ ನಾವು ಪ್ರಶ್ನಿಸುವಂತಿಲ್ಲ. 'ಅದೆಲ್ಲ ನಮ್ಮ ನಮ್ಮ ಭಕ್ತಿ ಸೋಮಯಾಜಿಗಳೇ. ನಿಮ್ಮ ಕ್ರಿಯೆಗಳು ಸಾಂಗವಾಗಿ ನಡೆಯಲಿ" ಅನ್ನುತ್ತಾರೆ.

ಮೊದಲಿನಂತಾಗಿದ್ದರೆ ಅದನ್ನೆಲ್ಲ ಕೇಳಿಸಿಕೊಂಡು ಸುಮ್ಮನೆ ಕೂತಿರುತ್ತಿರಲಿಲ್ಲ ಸೋಮಯಾಜಿಗಳು. ಎಷ್ಟೋ ಮನೆಗಳಲ್ಲಿ ಕೊಟ್ಟ ದಕ್ಷಿಣೆಯನ್ನೂ ಅಕ್ಕಿತೆಂಗಿನಕಾಯಿಯನ್ನೂ ಎಡಗಾಲಲ್ಲಿ ಒದ್ದು ಬಂದಿದ್ದಾರೆ ಅವರು.

ಆದರೆ, ಇವತ್ತು ಆ ಶಕ್ತಿ ಅವರಿಗಿಲ್ಲ. ಅದನ್ನು ಕಸಿದುಕೊಂಡವನು ಮಗ, ಆನಂದ. ಮಕ್ಕಳಿಂದ ಅಪ್ಪನಿಗೆ ಶಕ್ತಿ ಬರುತ್ತದೆ ಅನ್ನುತ್ತಾರೆ. ಆದರೆ ಆನಂದನಿಂದ ತನಗೆ ದೌರ್ಬಲ್ಯ ಬಂತು.

ಸೋಮಯಾಜಿಗಳು ಸುಗಂಧಿಯ ಜೊತೆ ಮಾತನಾಡಿದ್ದಾಗಲೀ, ಅವರು ಅವಳ ಮನೆಗೆ ಹೋದದ್ದಾಗಲೀ ಆನಂದನಿಗಿನ್ನೂ ಗೊತ್ತಾಗಿರಲಿಲ್ಲ. ಅವನು ಉಪ್ಪಿನಂಗಡಿಯ ನಿರಂಜನನ ಕೊಲೆ ಕೇಸಿನಲ್ಲಿ ಸಿಕ್ಕಿಹಾಕಿಕೊಂಡಿದ್ದ. ಅದಕ್ಕೂ ಇವನಿಗೂ ಸಂಬಂಧವೇ ಇಲ್ಲ. ಆದರೆ ನಿರಂಜನನೇ ಆನಂದನ ಗುರುವಂತೆ. ಆನಂದನಿಗೆ ಕುಡಿತ ಕಲಿಸಿದ್ದೇ ಅವನಂತೆ. ಇಲ್ಲದಿದ್ದರೆ ಇವನ ಹತ್ತಿರ ಅದಕ್ಕೆಲ್ಲ ದುಡ್ಡೆಲ್ಲಿತ್ತು?

ಸೋಮಯಾಜಿಗಳು ಯೋಚಿಸಿದರು. ಆನಂದ ಈ ರಗಳೆಗಳಿಂದ ಬಿಡಿಸಿಕೊಂಡು ಗುರುವಾಯನಕೆರೆಗೆ ಬಂದಿದ್ದಾನೆ. ಅವನ ಪೇಪರಿನ ಸರ್ಕುಲೇಷನ್ನು ಅದು ಹೇಗೋ ಹೆಚ್ಚಿದೆ. ನಿರಂಜನನ ಕೇಸಿನಲ್ಲಿ ಆನಂದ ಪೊಲೀಸರಿಗೆ ಬೈದನಂತೆ. ಹೀಗಾಗಿ ಅವನ ವರ್ಚಸ್ಸೂ ಹೆಚ್ಚಾಗಿದೆ. ಯಾರ್ಯಾರೋ ಅವನನ್ನು ಏನೇನೋ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಹೀಗಿರುವಷ್ಟು ದಿನವೂ ತೊಂದರೆಯಿಲ್ಲ. ಆದರೆ, ಇದಕ್ಕೆಲ್ಲ ಒಂದು ಕೊನೆ ಇದ್ದೇ ಇರುತ್ತದಲ್ಲ. ಆವತ್ತಾದರೂ ಅವನು ಸುಗಂಧಿಯನ್ನು ಮದುವೆಯಾಗೇ ಆಗುತ್ತಾನೆ. ಆ ನಂತರ...

ವೇಣೂರು ಪ್ರಾಂತ್ಯದಲ್ಲಿ ಈಗಾಗಲೇ ಗುಲ್ಲು ಎದ್ದಿದೆ. ಐತಾಳರ ಮನೆಯವರು ಸಾಕಷ್ಟು ರಂಪ ಮಾಡುತ್ತಿದ್ದಾರೆ. ಆ ಪ್ರಾಂತ್ಯದ ಪೌರೋಹಿತ್ಯ ತಮಗೆ ಬರಬೇಕೆಂಬುದು ಅವರ ಹುನ್ನಾರ. ಅದು ಅಲ್ಲಿನ ಬ್ರಾಹ್ಮಣ ಕುಟುಂಬಗಳಿಗೂ ಗೊತ್ತುಂಟು. ಆದರೆ ಈಗಿನ ಕಾಲದಲ್ಲಿ ಪುರೋಹಿತರು ಯಾರಾದರೇನಂತೆ? ಅವನಿಗೆ ಮಂತ್ರ ಗೊತ್ತಿದೆಯೋ ಇಲ್ಲವೋ ಯಾರು ನೋಡುತ್ತಾರೆ. ಒಂದು ಗಂಟೆಗೆಲ್ಲ ಊಟಕ್ಕೆ ಎಲೆ ಹಾಕಬೇಕು. ಅಷ್ಟರೊಳಗೆ ನಿಮ್ಮ ಕೆಲಸ ಮುಗಿಸಿಕೊಂಡು ಬಿಡಿ ಅಂದುಬಿಡುತ್ತಾರೆ. ಚಟಾಕು ಮಾಡಿ ಮುಗಿಸಿದರೂ ನಡೆಯುತ್ತದೆ.

ಆನಂದನ ಬಗ್ಗೆ ಎಷ್ಟು ಯೋಚಿಸಿದರೂ ಅಷ್ಟೇ. ಬಗೆಹರಿಯುವಂಥದ್ದಲ್ಲ ಅದು ಅಂದುಕೊಳ್ಳುತ್ತಾ ಕವುಳಿಗೆ ಸೌಟು ಹಿಡಕೊಂಡು ಬಾವಿಕಟ್ಟೆಯ ಬಳಿ ಹೋಗಿ ಕೊಡಪಾನದಲ್ಲಿ ನೀರೆತ್ತಿ ನೆತ್ತಿಗೆ ಸುರಿದುಕೊಂಡು ಸಂಧ್ಯಾವಂದನೆಗೆ ಕುಳಿತಾಗಲೇ ಅವರಿಗೆ ಆವತ್ತು ಶುಕ್ರವಾರ ಅನ್ನುವುದು ನೆನಪಾದದ್ದು. ರಾತ್ರಿ ಅಡಿಗರ ಮನೆಯಲ್ಲಿ ದುರ್ಗಾನಮಸ್ಕಾರ. ಕೇಪುಳದ ಹೂವು ಕೊಯ್ಯುವುದಕ್ಕೆ ಹೇಳಿದ್ದರು. ಹೆಣ್ಣುಮಕ್ಕಳೆಲ್ಲ ಮದುವೆಯಾಗಿ ಹೋದ ನಂತರ ಸೊಸೆಯಂದಿರಿಗೆ ಪೂಜೆ ಪುನಸ್ಕಾರ ಅಂದರೆ ಅಷ್ಟಕ್ಕಷ್ಟೇ. ದೊಡ್ಡ ಅಡಿಗರು ಬದುಕಿರುವ ತನಕ ಪೂಜೆ ನಡೆಯುತ್ತದೆ. ಎಲ್ಲ ಸಿದ್ಧತೆಯನ್ನೂ ತಾನೇ ಮಾಡಬೇಕು.

ಸಂಧ್ಯಾವಂದನೆ ಮುಗಿಸಿ ದೇವಿಸ್ಮರಣೆ ಮಾಡುತ್ತಾ ಸೋಮಯಾಜಿಗಳು ಲಲಿತಾ ಸಹಸ್ರನಾಮ ಜಪಿಸಿದರು.

ಯಾ ದೇವಿ ಸರ್ವಭೂತೇಷು ಮಾತೃರೂಪೇಣ ಸಂಸ್ಥಿರ್ತಾ।

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ।।

ಓಂ ಶ್ರೀ ಮಾತ್ರೇ ನಮಃ।

ಓಂ ಶ್ರೀ ಮಹಾರಾಜ್ಞ್ಯೇ ನಮಃ।

ಓಂ ಶ್ರೀ...... ನಮಃ।

ಓಂ ;#3221;ುಚದ್ವಯ್ಯೈೕ ನಮಃ।

ಸೋಮಯಾಜಿಗಳ ಮನಸ್ಸು ಒಂದು ಕ್ಷಣ ತಡೆಯಿತು.

ಹೊಕ್ಕುಳೆಂಬ ಪಾತಿಯಿಂದ ಹೊರಟ ರೋಮಲತೆಯಲ್ಲಿ ಮೂಡಿದ ಫಲದಂಥ ಮೊಲೆಗಳುಳ್ಳವಳು....

ಆ ಬೆಳಗ್ಗೆ ಕತ್ತಲಲ್ಲಿ ಮಿಂಚಿ ಮರೆಯಾದ ಸುಗಂಧಿಯ ದೇಹ ಸೋಮಯಾಜಿಗಳಿಗೆ ನೆನಪಾಯಿತು.

ಸೋಮಯಾಜಿಗಳು ಮೈಲಿಗೆಯನ್ನು ಸಹಿಸಲಾರದವರಂತೆ ಕಂಪಿಸಿದರು.

English summary
A Kannada novel series to go online on thatskannada.com from 3rd november 2002
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X