ನದಿಯ ನೆನಪಿನ ಹಂಗು
ನಾಗೇಶ ಮಯ್ಯ ಊರಲ್ಲೇ ಇಲ್ಲ. ಹಾಗಂತ ಮೋಹನ ತನಗೆ ಸಕಲವೂ ಗೊತ್ತು ಎಂಬ ಧಾಟಿಯಲ್ಲಿ ಹೇಳಿದ. ಅವನ ಮಾತನ್ನು ಕೇಳುತ್ತಿರಬೇಕಾದರೆ ರಘುನಂದನನನ್ನು ಕಾಡಿದ ಅನುಮಾನಗಳು ಮೂರು;
ನಿರಂಜನನ ಸಾವು ಯಾಕೆ ಇಷ್ಟೊಂದು ನಿಗೂಢಗಳನ್ನು ಹೊತ್ತುಕೊಂಡಿದೆ?
ಮೋಹನ, ಆ್ಯಂಟನಿ, ದಿನೇಶ ಎಲ್ಲರೂ ಯಾಕೆ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಅಥವಾ ಅವರು ಹೇಳುವುದು ತನಗೆ ನಂಬಲಿಕ್ಕೆ ಸಾಧ್ಯವಾಗದ ಸಂಗತಿಗಳಂತೆ ಯಾಕೆ ಭಾಸವಾಗುತ್ತಿದೆ.
ಈ ಕೊಲೆಯ ಬೆನ್ನು ಹತ್ತಿ ಹೋಗುವ ಮೂಲಕ ನಾವೆಲ್ಲ ಏನನ್ನು ಸಾಧಿಸಲಿಕ್ಕೆ ಹೊರಟಿದ್ದೇವೆ? ಇದು ನಮ್ಮ ದೈನಿಕದ ಏಕತಾನತೆಯನ್ನು ಮೀರುವ ಯತ್ನವೇ? ನಿಜಕ್ಕೂ ನಮಗೆಲ್ಲ ನಿರಂಜನನ ಸಾವಿನ ಬಗ್ಗೆ ಕಾಳಜಿಯಿದೆಯೇ?
ಬಹುಶಃ ಹೊಳ್ಳನನ್ನೂ ಇಂಥದ್ದೇ ಅನುಮಾನಗಳು ಕಾಡಿದ್ದವೆಂದು ಕಾಣುತ್ತದೆ. ಆತ ಈ ಪ್ರಕರಣ ಸದ್ಯಕ್ಕಂತೂ ಬಗೆ ಹರಿಯುವುದಿಲ್ಲ ಎಂಬ ಧಾಟಿಯಲ್ಲಿ ಆಕಳಿಸಿ ತನ್ನ ಮುಂದೆ ತೆರೆದುಕೊಂಡಿದ್ದ ಒಂದು ಹಳೆಯ ಫೈಲನ್ನು ಸಶಬ್ದವಾಗಿ ಮುಚ್ಚಿದ. ಅದರ ಧೂಳು ಹೊಳ್ಳ ಮತ್ತು ಗಾಂಪಾ ಗೆಳೆಯರ ನಡುವೆ ಸಣ್ಣ ಮೋಡದಂತೆ ಕವಿಯಿತು.
ಇದಾದ ಕೆಲವೇ ದಿನಕ್ಕೆ ರಾಧಾಕೃಷ್ಣ ಹೊಳ್ಳ ಒಂದು ರಿಪೋರ್ಟು ಬಂದಿದೆ ಬನ್ನಿ ಎಂದು ಆನಂದನನ್ನು ಕರೆಸಿಕೊಂಡ. ಅದು ಕೊಕ್ಕಡ ರಾಮಚಂದ್ರ ರೈಯ ತೋಟದಲ್ಲಿ ಸಿಕ್ಕಿದ ಮೂಳೆ ಪ್ರಾಣಿಯ ದೇಹದ್ದು ಎನ್ನುವುದನ್ನು ಖಚಿತಪಡಿಸಿದ ವರದಿ. ಅಲ್ಲಿದೆ ಕೊಕ್ಕಡ ರಾಮಚಂದ್ರ ರೈಯ ತೋಟದಲ್ಲಿ ನಿರಂಜನನನ್ನು ಹೂಳಲಾಗಿದೆ ಅನ್ನುವುದು ಸುಳ್ಳು ಎಂದು ಜನ ಮಾತಾಡಿಕೊಂಡರು.
ಈ ಮಧ್ಯೆ ರಘುನಂದನ ತನ್ನ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗಾಗಿ ಬೆಂಗಳೂರಿಗೆ ವಾಪಸ್ಸಾಗಿದ್ದ. ಸಿನಿಮಾ ಚೆನ್ನಾಗಿ ಬಂದಿದೆ ಎಂಬ ಗುಮಾನಿ ಗಾಂಧೀನಗರಕ್ಕಿತ್ತು. ಹೀಗಾಗಿ ಸಾಕಷ್ಟು ಪ್ರಚಾರ ಕೊಟ್ಟು ಬಿಸಿಬಿಸಿ ಇರುವಾಗಲೇ ಸಿನಿಮಾ ಬಿಡುಗಡೆ ಮಾಡಬೇಕು ಅನ್ನುವುದು ನಿರ್ಮಾಪಕರ ಇರಾದೆಯಾಗಿತ್ತು. ರಿಲೀಸ್ ರಗಳೆಗಳಲ್ಲಿ ಎಂದೂ ತನ್ನನ್ನು ಸಿಲುಕಿಸಿಕೊಳ್ಳಲು ಬಯಸದ ರಘುನಂದನ ಚಿತ್ರದ ಮೊದಲ ಪ್ರತಿ ಸಿದ್ಧವಾದೊಡನೆ ಉಪ್ಪಿನಂಗಡಿಗೆ ಹೊರಟು ನಿಂತ.
ಆದರೆ ಚಿತ್ರರಂಗದಿಂದ ಬಿಡಿಸಿಕೊಂಡು ಬರುವುದು ಅಷ್ಟು ಸುಲಭವಲ್ಲ ಅನ್ನುವುದು ಅವನಿಗೆ ಗೊತ್ತಾಗಿತ್ತು. ಫಸ್ಟ್ ಕಾಪಿ ಬಂದದ್ದೇ ತಡ ಚಿತ್ರಕ್ಕೆ ಇನ್ನಿಲ್ಲದ ಬೇಡಿಕೆ ಬಂದಿತ್ತು. ರಘುನಂದನನ ಹತ್ತಿರ ಮತ್ತೊಂದು ಸಿನಿಮಾ ನಿರ್ದೇಶಿಸಿಕೊಡಲು ಅಡ್ವಾನ್ಸು ಹಿಡಿದುಕೊಂಡು ಕಾಯುವವರಿದ್ದರು. ಕತೆ ಬರೆಯುವುದಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿ ಅವನು ತಪ್ಪಿಸಿಕೊಂಡು ಬರುವ ಹಾಗೂ ಇರಲಿಲ್ಲ. ಕತೆ ಬರೆಯುವುದಕ್ಕೆ ಒಳ್ಳೇ ಹೋಟೆಲಿನಲ್ಲಿ ರೂಮು ಹಾಕಿಸೋಣ ಎಂದು ಅವರು ಗಂಟುಬಿದ್ದಿದ್ದರು.
ಒಂದು ತಿಂಗಳ ಬಿಡುವು ಬೇಕೆಂದು ಹೇಳಿ ರಘು ಹೇಗೋ ತಪ್ಪಿಸಿಕೊಂಡು ಉಪ್ಪಿನಂಗಡಿಗೆ ಬರುವ ಹೊತ್ತಿಗೆ ನಿರಂಜನನ ಕೊಲೆಯ ಕುರಿತ ಊಹಾಪೋಹಗಳೂ ಸಂಪೂರ್ಣ ಮರೆಯಾಗಿದ್ದವು. ಗಾಂಪಾ ಗೆಳೆಯರು ಮತ್ತೊಂದು ರೋಚಕ ಸಂಗತಿ ಘಟಿಸುತ್ತದೇನೋ ಎಂದು ಕಾಯುತ್ತಿದ್ದರು. ರಘುನಂದನ ಬಂದ ದಿನವೇ ಮೋಹನ ಅವನನ್ನು ಭೇಟಿಯಾಗಿ ಈ ಪ್ರಸಂಗದ ಬಗ್ಗೆ ಸಿಓಡಿ ತನಿಖೆಯಾಗಬೇಕು ಎಂದು ಒತ್ತಾಯಿಸಲು ಸಾಧ್ಯವೇ ಎಂದು ಯಾರನ್ನಾದರೂ ಕೇಳು ಎಂದು ದುಂಬಾಲು ಬಿದ್ದ.
ರಘುನಂದನನಿಗೆ ಅದೆಲ್ಲ ಆಗದ ಹೋಗದ ಸಂಗತಿ ಅನ್ನುವುದು ತಿಳಿದಿತ್ತು. ಆದರೂ ಮೋಹನನ ತೃಪ್ತಿಗೋಸ್ಕರ ಬೆಂಗಳೂರಿನಲ್ಲಿರುವ ತನ್ನ ಗೆಳೆಯ ಸೂರ್ಯನಿಗೆ ರಘು ಫೋನ್ ಮಾಡಿದ. ಸೂರ್ಯ ಇಂಗ್ಲಿಷ್ ವಾರಪತ್ರಿಕೆಯಾಂದರ ಬೆಂಗಳೂರು ವರದಿಗಾರನಾಗಿದ್ದ ಮತ್ತು ವಿಶೇಷ ವರದಿಗಳಿಗೆ ವಿಷಯಗಳನ್ನು ಹುಡುಕುವುದರಲ್ಲಿ ನಿಸ್ಸೀಮನೂ ಆಗಿದ್ದ. ಅವನ ವರದಿಗಳಲ್ಲಿ ಬಹಳಷ್ಟು ಫಿಕ್ಷನಲ್ ಅಂಶಗಳೂ ಇರುತ್ತಿದ್ದರಿಂದ ರಘುವಿಗೆ ಅವನೆಂದರೆ ಇಷ್ಟ.
ಆತ ರಘುವಿನ ಬೇಡಿಕೆಯನ್ನು ದೊಡ್ಡದಾಗಿ ನಕ್ಕು ತಳ್ಳಿಹಾಕಿದ.
'ಇದನ್ನೆಲ್ಲ ಸಿಓಡಿ ತನಿಖೆಗೆ ಒಪ್ಪಿಸೋಕ್ಕಾಗಲ್ಲ. ನೂರಾರು ಜನ ಸತ್ತರೆ ಮಾತ್ರ ಅಂಥದ್ದೆಲ್ಲ ನಡೆಯೋದು. ಅದಕ್ಕೆಷ್ಟು ಖರ್ಚಾಗುತ್ತೆ ಗೊತ್ತಾ? ಬೇಕಿದ್ದರೆ ನಾನೊಂದು ರಿಪೋರ್ಟು ಮಾಡಬಲ್ಲೆ , ಕೊಲೆ ನಡೆದು ಎಷ್ಟು ದಿನವಾಯ್ತು ಹೇಳು?" ಸೂರ್ಯ ಕೇಳಿದ. ಆಗಲೇ ಮೂರು ತಿಂಗಳು ಕಳೆಯುತ್ತಾ ಬಂದಿದೆ ಎಂದು ರಘು ಹೇಳಿದಾಗ ಸೂರ್ಯ ಗಹಗಹಿಸಿ ನಕ್ಕ. ಮೂರು ತಿಂಗಳು ಕಳೆದ ನಂತರ ಯಾವ ಪತ್ರಿಕೆಗೂ ಕೊಲೆಗಳ ಬಗ್ಗೆ ಆಸಕ್ತಿಯಿರುವುದಿಲ್ಲ. ಅದು ಜನರ ಮನಸ್ಸಿನಿಂದ ಯಾವತ್ತೋ ಮರೆಯಾಗಿ ಹೋಗಿರುತ್ತದೆ. ಅದನ್ನು ಮತ್ತೆ ಮೇಲಕ್ಕೆತ್ತಬೇಕಾದರೆ ಅದಕ್ಕೊಂದು ದೊಡ್ಡ ಕಾರಣ ಬೇಕಾಗುತ್ತದೆ ಎನ್ನುವುದು ಸೂರ್ಯನ ವಾದ.
ಕೊನೆಗೂ ಸೂರ್ಯನಿಗೊಂದು ಆ್ಯಂಗಲ್ಲು ಸಿಕ್ಕಿಯೇಬಿಟ್ಟಿತು. 'ಒಂದು ಕೆಲಸ ಮಾಡೋಣ, The unsolved murder mysteries ಎಂಬ ಒಂದು ಹೊಸ ಸರಣಿ ಆರಂಭಿಸುತ್ತೇನೆ. ಆದರೆ ಅದರಲ್ಲಿ ನಿನ್ನ ಗೆಳೆಯನೊಬ್ಬನ ಪ್ರಸಂಗ ಒಂದೇ ಬಂದರೆ ಸಾಲದು. ಇಂಥ ಅನೇಕ ಬಗೆಹರಿಯದ ಕೊಲೆಗಳಿದ್ದರೆ ಹೇಳು" ಎಂದು ಹೋಲ್‌ಸೇಲ್ ವ್ಯವಹಾರಕ್ಕೇ ಇಳಿದುಬಿಟ್ಟ ಸೂರ್ಯ.
'ಸರಿ, ನೀನು ಮೊದಲು ಹೊರಟು ಬಾ. ಮಂಗಳೂರು ಕರಾವಳಿಯಲ್ಲಿ ತಿಂಗಳಿಗೊಂದು ಕೊಲೆಗಳು ನಡೆಯುತ್ತಲೇ ಇರುತ್ತವೆ. ಅವುಗಳ ಬಗ್ಗೆ ಮಾಹಿತಿ ಕೊಡಿಸುತ್ತೇನೆ" ಎಂದ ರಘು.
ಸೂರ್ಯ ಬರಲಿಲ್ಲ. ಕ್ರಮೇಣ ನಿರಂಜನನನ್ನು ಅವನ ಕೊಲೆಯನ್ನೂ ಜನ ಮರೆತರು. ರಘು ತನ್ನ ಹೊಸ ಕತೆಯನ್ನು ತಿದ್ದುವುದರಲ್ಲಿ ತೊಡಗಿಕೊಂಡ. ನಾಗೇಶ ಮಯ್ಯನನ್ನೊಮ್ಮೆ ಭೇಟಿಯಾಗಬೇಕು ಅನ್ನುವ ಆಸೆಯಾಂದು ಅವನ ಮನಸ್ಸಿನ ಮೂಲೆಯಲ್ಲಿ ಹಾಗೇ ಇತ್ತು. ಅದನ್ನು ಒಂದೆರಡು ಸಲ ಆನಂದನಿಗೆ ಫೋನ್ ಮಾಡಿದಾಗ ಹೇಳಿಯೂ ಇದ್ದ.
ಆನಂದ ಪಶ್ಚಿಮಘಟ್ಟ ಉಳಿಸಿ ಆಂದೋಲನದಲ್ಲಿ ತೊಡಗಿಕೊಂಡಿದ್ದ. ಬಹುಶಃ ಆಂದೋಲನಗಳಿಲ್ಲದೆ ಬದುಕುವುದೇ ಸಾಧ್ಯವಿಲ್ಲ ಎಂಬ ಸ್ಥಿತಿಗೆ ಅವನು ಬಂದುಬಿಟ್ಟಿದ್ದ. ಅವನ ಒಳಗೂ ಹೊರಗೂ ಒಂದು ತೆರನ ಪ್ರತಿಭಟನೆ ನಡೆಯುತ್ತಲೇ ಇತ್ತು.
ಇವೆಲ್ಲದರ ನಡುವೆಯೇ ಒಂದು ಸಂಜೆ ರಘುನಂದನ ಮತ್ತು ಮೋಹನ ನೇತ್ರಾವತಿಯ ಸೇತುವೆಯ ಮೇಲೆ ನಿಂತು ಸೂರ್ಯಾಸ್ತವನ್ನು ನೋಡುತ್ತಿದ್ದವರು ಸೇತುವೆಯ ಕೊನೆಗೊಂದು ಕಾರು ಬಂದು ನಿಂತಿದ್ದನ್ನು ನೋಡಿದರು. ಗುರುವಾಯನಕೆರೆಯ ಕಡೆಯಿಂದ ಇಳಿಜಾರಿನಲ್ಲಿ ನಿಧಾನವಾಗಿ ಬಂದ ಕಾರು, ಸೇತುವೆಯ ತುದಿಯಲ್ಲಿ ನಿಂತೇಬಿಟ್ಟಿತು. ಡ್ರೆೃವರ್ ಇಳಿದು ಕಾರಿನ ಬಾನೆಟ್ ತೆಗೆದದ್ದೇ ತಡ, ಕಾದು ಕಂಪಿಸುತ್ತಿದ್ದ ರೇಡಿಯೇಟರ್‌ನ ಮುಚ್ಚಳ ಠಪ್ಪನೆ ಹಾರಿಹೋಗಿ ಕುದಿಯುವ ನೀರು ಬಾನೆಟ್ಟಿನೊಳಗೆ ಬಾಗಿಕೊಂಡಿದ್ದ ಡ್ರೆೃವರನ ಮುಖಕ್ಕೆ ಸಿಡಿಯಿತು. ಆತ ವಿಕಾರವಾಗಿ ಚೀರಿಕೊಂಡು ಕುಸಿದುಬಿದ್ದ. ರಘು ಮತ್ತು ಮೋಹನ ಅತ್ತ ಹೋಗುವಷ್ಟರಲ್ಲಿ ಅವನನ್ನು ಕಾರಿನಲ್ಲಿದ್ದವರೂ ದಾರಿಹೋಕರೂ ಒಂದು ಆಟೋ ರಿಕ್ಷಾಕ್ಕೆ ಹಾಕಿಕೊಂಡು ಆಸ್ಪತ್ರೆಗೋ ಏನೋ ಕರೆದೊಯ್ದರು.
ಕಾರಿನಿಂದ ಇಳಿದ ಪ್ರಯಾಣಿಕರು ಅನ್ಯಮನಸ್ಕರಾಗಿ, ತಮ್ಮೆದುರೇ ಘಟಿಸಿದ ಈ ಅಚಾನಕ ದುರ್ಘಟನೆಯಿಂದ ಖಿನ್ನರೂ ಆಶ್ಚರ್ಯಚಕಿತರೂ ಆಗಿ ಬಸ್‌ಸ್ಟಾಂಡಿನ ಕಡೆ ಹೆಜ್ಜೆ ಹಾಕುತ್ತಿದ್ದರು. ಆ ಆರು ಪ್ರಯಾಣಿಕರ ಪೈಕಿ ಹಿಂದಿನಿಂದ ಒಬ್ಬರಿಗೊಬ್ಬರು ಅಂಟಿಕೊಂಡಂತೆ ಬರುತ್ತಿದ್ದ ಇಬ್ಬರನ್ನು ಮೋಹನ ರಘುವಿಗೆ ತೋರಿಸಿ ಹೇಳಿದ;
'ಅವರೇ ವೀಣಾ ಮತ್ತು ನಾಗೇಶ ಮಯ್ಯ"
ರಘು ಕಣ್ಣೆತ್ತಿ ನೋಡಿದ.
-
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
ಮಾರ್ಚ್ 29ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 30ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು












Click it and Unblock the Notifications