ಹಾರಂಗಿಯಲ್ಲಿ ದೇವರ ಮೀನಿನ ರಕ್ಷಣೆಗೆ ಮತ್ಸ್ಯಧಾಮ

By: ವಿಶೇಷ ವರದಿ : ಲತೀಶ್ ಪೂಜಾರಿ
Subscribe to Oneindia Kannada

ಅಳಿವಿನ ಅಂಚಿನಲ್ಲಿ ಇರುವ ಜೀವಿ ಎಂದು 1982ರಲ್ಲೇ ನ್ಯಾಶನಲ್ ಬ್ಯೂರೋ ಆಫ್ ಫಿಶ್ ಜೆನೆಟಿಕ್ ರೀಸರ್ಚ್ (NBFGR) ಸಂಸ್ಥೆ ಘೋಷಿಸಿರುವ ಮಹಶೀರ್ ಮೀನಿನ ರಕ್ಷಣೆಗೆ ಮೀನುಗಾರಿಕಾ ಇಲಾಖೆ ಹಲವು ಕ್ರಮಗಳನ್ನು ತೆಗೆದುಕೊಂಡಿದೆ.

ಮಹಶೀರ್ ಮೀನುಮರಿಗಳ ಉತ್ಪಾದನೆಗಾಗಿ ರಾಜ್ಯದ ಏಕೈಕ ಕೇಂದ್ರ ಕುಶಾಲನಗರ ಸಮೀಪದ ಹಾರಂಗಿಯಲ್ಲಿದ್ದು, ಪ್ರತೀ ವರ್ಷವೂ ಸಾವಿರಾರು ಮರಿಗಳನ್ನು ಹಾರಂಗಿ ನದಿಗೆ ಬಿಡಲಾಗುತ್ತಿದೆ. ಈ ವರ್ಷವೂ 11 ಸಾವಿರ ಮರಿಗಳನ್ನು ಮೇ 7ರಂದು ನದಿಗೆ ಬಿಡಲಾಗಿದೆ. ಹಾರಂಗಿ ಅಣೆಕಟ್ಟೆಯಿಂದ ಕೂಡಿಗೆಯ ಸೇತುವೆ ತನಕದ 5 ಕಿ.ಮೀ. ಉದ್ದದ ನದಿಭಾಗವನ್ನು ಮತ್ಸ್ಯಧಾಮ ಎಂದು ಘೋಷಿಸಲಾಗಿದ್ದು, ಮೀನು ಹಿಡಿಯುವುದು ಸೇರಿದಂತೆ ಎಲ್ಲಾ ಬಗೆಯ ಮೀನುಗಾರಿಕೆ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. [ಮಹಸೀರ್ ಮೀನು ಸಂರಕ್ಷಣೆಗೆ ಟಾಟಾ 'ಪವರ್']

Conservation of Mahaseer fish in Harangi, Coorg

ಮಹಶೀರ್ ಮೀನು ಮರಿಗಳ ಉತ್ಪಾದನೆಗಾಗಿ ಹಾರಂಗಿ ಮೀನು ಮರಿ ಉತ್ಪಾದನಾ ಕೇಂದ್ರದಲ್ಲಿ 2 ಹೆಕ್ಟೇರ್ ಜಲ ವಿಸ್ತೀರ್ಣದ 79 ಕೊಳಗಳಿವೆ. 1987-88ರಲ್ಲಿ 167.14 ಲಕ್ಷ ವೆಚ್ಚದಲ್ಲಿ ಈ ಕೇಂದ್ರ ತಲೆ ಎತ್ತಿತ್ತು. ಆದರೆ ಸದ್ಯಕ್ಕೆ 15 ಕೊಳಗಳು ಮಾತ್ರ ಉಪಯೋಗಕ್ಕೆ ಸಿಗುತ್ತಿವೆ.

ಈ ಹಿನ್ನೆಲೆಯಲ್ಲಿ ಸರ್ಕಾರ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಕೇಂದ್ರದ ದುರಸ್ತಿ ಕಾಮಗಾರಿಗಳಿಗಾಗಿ 1 ಕೊಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದು, ಕಾಮಗಾರಿಗೆ ಚಾಲನೆ ಸಿಕ್ಕಿದೆ. ಆದರೆ ಕೊಳಗಳ ದುರಸ್ತಿಯಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ನೀರು ಮತ್ತೆ ಸೋರಿ ಹೋಗುತ್ತದೆ. ಇದರ ಬದಲು ಹೊಸದಾಗಿ ಕೊಳಗಳನ್ನು ನಿರ್ಮಿಸುವುದೇ ಒಳ್ಳೆಯದು ಎನ್ನುತ್ತಾರೆ ತಜ್ಞರು. [ಮೀನುಪ್ರಿಯರ ಜಿಹ್ವಾ ಚಾಪಲ್ಯ ತಣಿಸಲು ಮತ್ಸ್ಯ ಭವನ]

Conservation of Mahaseer fish in Harangi, Coorg

ದೇವರ ಮೀನು : ದೊಡ್ಡದಾದ ತಲೆ ಇರುವುದರಿಂದ ಈ ಮೀನನ್ನು 'ಮಹಶಿರ' ಅಥವಾ 'ಮಹಶೀರ್' ಮಿನು ಎಂದು ಕರೆಯಲಾಗುತ್ತದೆ. ದೇವಾಲಯದ ಕಲ್ಯಾಣಿಗಳಲ್ಲಿ ಕಂಡುಬರುವುದರಿಂದ 'ದೇವರ ಮೀನು' ಎಂದೂ, ಬೆಳ್ಳಿಯಂತೆ ಹೊಳೆಯುವ ಹುರುಪುಗಳು ಇರುವುದರಿಂದ 'ಬಿಳಿ ಮೀನು' ಎಂದು ಕೂಡ ಹೆಸರಿದೆ.

ಇದೊಂದು ಉತ್ತಮ ಆಹಾರವಾಗಬಲ್ಲ ಮೀನು. ಆದರೆ ಕ್ರೀಡೆಗೆ ಉತ್ತಮವಾಗಿ ಸಹಕರಿಸುವುದರಿಂದ ಮಹಶೀರ್ ಮೀನಿನ ಬೇಟೆ ತುಂಬಾ ಪ್ರಸಿದ್ಧ. ಹಿಂದೆ ಹುಲಿ ಬೇಟೆಯಷ್ಟೇ ರೋಚಕ ಅನುಭವವನ್ನು ಮಹಶೀರ್ ಮೀನಿನ ಬೇಟೆ ಕೊಡುತ್ತಿತ್ತು ಎನ್ನುವುದು ಇತಿಹಾಸದ ಪುಸ್ತಕಗಳಲ್ಲಿ ದಾಖಲಾಗಿದೆ.

Conservation of Mahaseer fish in Harangi, Coorg

ಹೆಚ್ಚಾಗುತ್ತಿರುವ ಸಂತತಿ : ಈ ಮೀನು ನೀರಿನಲ್ಲಿರುವ ಸಣ್ಣಪುಟ್ಟ ಹುಳ-ಹುಪ್ಪಟೆಗಳು, ಹಣ್ಣು ಸಸ್ಯ ಪ್ಲಾಂಕ್ಟಾನ್‌ಗಳನ್ನು ಸೇವಿಸುತ್ತವೆ. ಹಾಗಾಗಿ ನದಿ ಪಾತ್ರದಲ್ಲಿ ಮಹಶೀರ್ ಮೀನು ಕಂಡುಬಂದರೆ ಆ ನೀರಿನ ಸಾರ್ವತ್ರಿಕ ಆರೋಗ್ಯ ಉತ್ತಮವಾಗಿರುತ್ತದೆ ಎಂದು ತಜ್ಞರು ಗುರುತಿಸುತ್ತಾರೆ. ಕೊಡಗಿನಲ್ಲಿ ವಾಲ್ನೂರು, ನಿಸರ್ಗಧಾಮದ ಕಾವೇರಿ ನದಿ ಹಾಗೂ ಹಾರಂಗಿ ನದಿ ಪಾತ್ರದಲ್ಲಿ ಮಹಶೀರ್ ಮೀನಿನ ಸಂತತಿ ಹೆಚ್ಚಾಗಿ ಕಂಡುಬರುತ್ತದೆ.

ದಿನೇಶ್ ಗುಂಡೂರಾವ್ ಮಾತು : "ಮಹಶೀರ್ ಮೀನು ರಕ್ಷಣೆಗೆ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ. ಹಾರಂಗಿಯ ಮೀನುಮರಿ ಉತ್ಪಾದನಾ ಕೇಂದ್ರಕ್ಕೆ ಪ್ರಸ್ತುತ ಬಿಡುಗಡೆ ಆಗಿರುವ 1 ಕೋಟಿ ರೂಪಾಯಿ ಅನುದಾನದಲ್ಲಿ ಕೊಳಗಳ ದುರಸ್ತಿ ಬದಲು ಹೊಸ ಕೊಳಗಳ ನಿರ್ಮಾಣ ಅಗತ್ಯ ಎನ್ನುವ ಅಭಿಪ್ರಾಯ ಕೇಳಿಬಂದಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಪರಿಶೀಲಿಸುವಂತೆ ಜಿ.ಪಂ. ಸಿಇಒ ಅವರಿಗೆ ಸೂಚಿಸಲಾಗಿದೆ. ಕೇಂದ್ರದ ಸುತ್ತಲೂ ಬೇಲಿ ಅಳವಡಿಸುವ ಅಗತ್ಯವೂ ಇದೆ." ದಿನೇಶ್ ಗಂಡೂರಾವ್, ಜಿಲ್ಲಾ ಉಸ್ತುವಾರಿ ಸಚಿವ.

Conservation of Mahaseer fish in Harangi, Coorg

ಅವೈಜ್ಞಾನಿಕ ಮೀನುಗಾರಿಕೆ ಮಾರಕ : "ಸುಮಾರು 60 ಕೆ.ಜಿ.ಯಷ್ಟು ಭಾರೀ ತೂಕದಷ್ಟು ಬೆಳೆಯುವ ಸಾಮರ್ಥ್ಯ ಮಹಶೀರ್ ಮೀನಿಗೆ ಇದೆ. ಕ್ರೀಡೆಗೆ ಹೇಳಿ ಮಾಡಿಸಿದ ಮೀನು ಇದು. ಅಳಿವಿನ ಅಂಚಿನಲ್ಲಿ ಇದೆ ಎನ್ನುವುದು ಆತಂಕದ ಸಂಗತಿ. ನದಿ ಪಾತ್ರದ ಸುಮಾರು 2 ಕಿ.ಮೀ. ವ್ಯಾಪ್ತಿಯನ್ನು ಒಂದು ಮಹಶೀರ್ ಮೀನು ತನ್ನ ವಾಸ ಸ್ಥಳವನ್ನಾಗಿ ಮಾಡಿಕೊಂಡಿರುತ್ತದೆ. ಅವೈಜ್ಞಾನಿಕ ಮೀನುಗಾರಿಕೆ ಮಹಶೀರ್ ಮೀನುಗಳಿಗೆ ಮಾರಕವಾಗಿ ಪರಿಣಮಿಸಿದೆ." ಕೆ.ಟಿ. ದರ್ಶನಾ, ಹಿರಿಯ ಸಹಾಯಕ ನಿರ್ದೇಶಕಿ, ಮೀನುಗಾರಿಕಾ ಇಲಾಖೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mahaseer, fresh water fish life is threatened due to pollution, habitat loss and overfishing. In order to conserve this endangered species Karnataka govt has sanctioned Rs. 1 crore. Matsyadhama has been set up at Harangi dam in Coorg specially for preserving the silver fish or God's fish. Fishing of Mahaseer has been banned in Karnataka.
Please Wait while comments are loading...