Get Updates
Get notified of breaking news, exclusive insights, and must-see stories!

ಕಂಡವರನ್ನು ಬೈಯುವ ಕೊಡಗಿನ ವಿಶಿಷ್ಟ ಕುಂಡೆ ಹಬ್ಬ

Kunde habba of Tribals
ಕೊಡಗಿನಲ್ಲಿ ನೆಲೆಸಿರುವ ಬುಡಕಟ್ಟು ಜನಾಂಗದ ಮಂದಿ ತಮ್ಮ ಜನಾಂಗದ ಸಂಭ್ರಮದ "ಕುಂಡೆ" ಹಬ್ಬಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ವರ್ಷ ಯಾವ ರೀತಿಯ ವೇಷ ಹಾಕಬೇಕು? ಯಾರಿಗೆ ಬೈಯ್ಯ ಬೇಕು? ಹೇಗೆ ಹಣ ವಸೂಲಿ ಮಾಡಬೇಕೆಂಬುವುದರ ಬಗ್ಗೆ ಹಾಡಿಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ವೈಶಿಷ್ಟ್ಯಪೂರ್ಣವಾಗಿ ಕೊಡಗಿನಲ್ಲಿ ನಡೆಯುವ "ಕುಂಡೆ" ಹಬ್ಬದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಇದೊಂದು ವಿಚಿತ್ರವಾದರೂ ವಿಶಿಷ್ಟ ಹಬ್ಬ. ಬಹುಶಃ ಇಂತಹವೊಂದು ಹಬ್ಬವನ್ನು ಕೊಡಗು ಹೊರತುಪಡಿಸಿದರೆ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಇಷ್ಟಕ್ಕೂ ಇದ್ಯಾವುದಪ್ಪಾ ಅಂತಹ ವಿಚಿತ್ರ ಹಬ್ಬ ಎಂಬ ಕುತೂಹಲ ಪ್ರತಿಯೊಬ್ಬರನ್ನು ಕಾಡದಿರದು. ಬುಡಕಟ್ಟು ಜನಾಂಗದವರು ಆಚರಿಸುವ ಈ ಹಬ್ಬದ ಸಂಭ್ರಮವನ್ನು ನೋಡಬೇಕಾದರೆ ಕೊಡಗಿನ ಗೋಣಿಕೊಪ್ಪದಿಂದ ತಿತಿಮತಿಗೆ ತೆರಳುವ ರಸ್ತೆಯಲ್ಲಿ ಸಿಗುವ ದೇವರಪುರಕ್ಕೆ ಮೇ ತಿಂಗಳ ಕೊನೆಯವಾರದಲ್ಲಿ ಬರಬೇಕು.

ನಾವು ಆಚರಿಸಲ್ಪಡುವ ಯಾವ ಹಬ್ಬವನ್ನೂ ಹೋಲದೆ ವಿಭಿನ್ನ ಹಾಗೂ ವಿಶಿಷ್ಟವಾಗಿರುವ ಈ ಹಬ್ಬವನ್ನು ಕೆಲವರು ಬೇಡುಹಬ್ಬ ಎಂದು ಕರೆದರೆ, ಮತ್ತೆ ಕೆಲವರು ಕುಂಡೇ ಹಬ್ಬ ಎಂದೇ ಕರೆಯುತ್ತಾರೆ. ಈ ಹಬ್ಬದ ದಿನದಂದು ದಾರಿಯಲ್ಲಿ ಸಿಕ್ಕವರಿಗೆಲ್ಲಾ ಅಶ್ಲೀಲ ಪದಗಳಿಂದ ಬೈಯ್ಯುತ್ತಾ ಹಣ ವಸೂಲಿ ಮಾಡುವುದರಿಂದ "ಬೈಗುಳದ ಹಬ್ಬ" ಎಂದು ಕರೆದರೂ ತಪ್ಪಾಗಲಾರದು. [ಚಿತ್ರಪಟ]

ದೇವರಪುರದ ಅಯ್ಯಪ್ಪ ದೇವಾಲಯದ ಮೈದಾನದಲ್ಲಿ ನಡೆಯುವ ಈ ಹಬ್ಬಕ್ಕೆ ಹುಣಸೂರು, ಗೋಣಿಕೊಪ್ಪ, ತಿತಿಮತಿ, ಪಾಲಿಬೆಟ್ಟ, ಕುಟ್ಟ, ಶ್ರೀಮಂಗಲ, ಪೊನ್ನಂಪೇಟೆ ಮೊದಲಾದ ಕಡೆಗಳಿಂದ ಸಾವಿರಾರು ಬುಡಕಟ್ಟು ಮಂದಿ ಅಗಮಿಸುತ್ತಾರೆ. ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಹಬ್ಬದಲ್ಲಿ ಅಶ್ಲೀಲ ಪದಗಳನ್ನು ನುಡಿಯುತ್ತಾ... ಕುಂಡೇ...ಕುಂಡೇ... ಎನ್ನುತ್ತಾ ಮಹಿಳೆಯರ (ಒಳಉಡುಪು ಸೇರಿದಂತೆ) ಉಡುಪುಗಳನ್ನು ವಿಚಿತ್ರವಾಗಿ ಧರಿಸಿ, ಕೈಯ್ಯಲ್ಲಿ ಸೋರೆಕಾಯಿ ಬುರುಡೆ, ದೊಣ್ಣೆಗಳನ್ನು ಹಿಡಿದು ಕಂಠಪೂರ್ತಿ ಕುಡಿದು ಮನೆಮನೆಗೆ ತೆರಳಿ ಭಿಕ್ಷೆ ಬೇಡಿ, ದಾರಿಯಲ್ಲಿ ಸಿಕ್ಕವರನ್ನು ಅಡ್ಡ ಹಾಕಿ ಬೈದು ಹಣ ವಸೂಲಿ ಮಾಡಿ, ನಂತರ ತಾವು ಮಾಡಿದ್ದಕ್ಕೆ ಕ್ಷಮೆ ಕೇಳುವುದು ಈ ಹಬ್ಬದಲ್ಲಿ ಮೇಲ್ನೋಟಕ್ಕೆ ಕಂಡು ಬರುತ್ತದೆ.

ಹಬ್ಬದ ದಿನದಂದು ಮೈಗೆಲ್ಲಾ ಮಸಿ ಬಳಿದುಕೊಂಡು ವಿಚಿತ್ರ ವೇಷ ಭೂಷಣ ತೊಟ್ಟು ಮನೆಯಿಂದ ಹೊರಡುವ ವೇಷಧಾರಿಗಳು ದಾರಿಯುದ್ದಕ್ಕೂ ಎದುರಿಗೆ ಸಿಕ್ಕ ಜನರನ್ನು ಬೈಯ್ಯುತ್ತಲೇ ಸಾಗುತ್ತಾರೆ. ಅಷ್ಟೇ ಅಲ್ಲ ರಸ್ತೆಗಳಲ್ಲಿ ಸಾಗುವ ವಾಹನಗಳನ್ನು ಕೂಡ ತಡೆದು ಅವರಿಂದ ಹಣ ವಸೂಲಿ ಮಾಡುತ್ತಾರೆ. ಅವತ್ತು ತಾವು ಕೆಲಸ ಮಾಡುವ ತೋಟದ ಮಾಲೀಕರನ್ನು ಕೂಡ ಬಿಡದೆ ಬೈಯ್ಯುತ್ತಾರೆ. ಜೊತೆಗೆ ದೇವರಿಗೂ ಮನಬಂದಂತೆ ಬೈಯ್ಯುತ್ತಾರೆ. ಕೇಳಿದ ತಕ್ಷಣ ಹಣ ಕೊಟ್ಟರೆ ಒಳ್ಳೆ ಕುಂಡೆ ಎನ್ನುವ ವೇಷಧಾರಿಗಳು ಹಣ ಕೊಡದಿದ್ದರೆ ಕೆಟ್ಟ ಕುಂಡೆ ಎನ್ನುತ್ತಾ ಅವರ ಸುತ್ತುವರಿದು ಅಶ್ಲೀಲ ಪದಗಳ ಮಳೆಗರೆಯುತ್ತಾ ಹಣ ವಸೂಲಿ ಮಾಡದೆ ಅಲ್ಲಿಂದ ಮುಂದಕ್ಕೆ ಕದಲುವುದಿಲ್ಲ. ಹೀಗೆ ಎಲ್ಲೆಡೆಯಿಂದ ಆಗಮಿಸುವ ವೇಷಧಾರಿಗಳು ಸಂಜೆ ವೇಳೆಗೆ ದೇವರಪುರದ ಅಯ್ಯಪ್ಪ ದೇವಾಲಯದಲ್ಲಿ ನೆರೆದು ಸಾಂಪ್ರದಾಯಿಕ ನೃತ್ಯದಲ್ಲಿ ಪಾಲ್ಗೊಳ್ಳುತ್ತಾರೆ.

ಇದೇ ಸಂದರ್ಭದಲ್ಲಿ ದೇವರಪುರ ಹೆಬ್ಬಾಲೆಯ ಸಣ್ಣುವಂಡ ಕುಟುಂಬದ ಮುಖ್ಯಸ್ಥರ ಮುಂದಾಳತ್ವದಲ್ಲಿ ದೇವಾಲಯ ಸಮೀಪದ ಅಂಬಲದಿಂದ ಭದ್ರಕಾಳಿ ಉತ್ಸವ ಮೂರ್ತಿಯನ್ನು ಮರದ ಕುದುರೆಯ ಮೂಲಕ ಅಯ್ಯಪ್ಪ ದೇವಾಲಯಕ್ಕೆ ತಂದು ಪೂಜಾ ಕೈಂಕರ್ಯವನ್ನು ನೆರವೇರಿಸಲಾಗುತ್ತದೆ. ನಂತರ ಹರಕೆಹೊತ್ತ ಮಂದಿ ಈ ಕೀಲು ಕುದುರೆ ನೃತ್ಯದಲ್ಲಿ ಪಾಲ್ಗೊಳ್ಳುತ್ತಾರೆ. ಕುಂಡೆ ಹಬ್ಬದ ಸಂದರ್ಭ ಅಯ್ಯಪ್ಪ ದೇಗುಲದಲ್ಲಿ ಪಟ್ಟಣಿ, ಭಂಡಾರ ಹಾಕುವುದು, ಕಳಿಕಟ್ಟು ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ.

ಕುಂಡೆ ಹಬ್ಬ ಎಂಬ ಹೆಸರು ಹೇಗೆ ಬಂತು? : ಹಾಗೆನೋಡಿದರೆ ದೇವರಪುರದಲ್ಲಿ ನಡೆಯುವ ಕುಂಡೆ ಹಬ್ಬಕ್ಕೆ ಶತಮಾನಗಳ ಇತಿಹಾಸವಿರುವುದನ್ನು ನಾವು ಕಾಣಬಹುದು. ಇನ್ನು ಬುಡಕಟ್ಟು ಜನಾಂಗದ ವೇಷಧಾರಿಗಳು ದೇವರನ್ನು ಮನಬಂದಂತೆ ಬಯ್ಯುವುದಕ್ಕೆ ಕಾರಣವೇನು? ಕುಂಡೆ ಹಬ್ಬ ಎಂಬ ಹೆಸರು ಹೇಗೆ ಬಂತು ಎಂಬುವುದಕ್ಕೂ ಇಲ್ಲೊಂದು ದಂತ ಕಥೆಯಿರುವುದನ್ನು ನಾವು ಕಾಣಬಹುದು.

ಹಿಂದಿನ ಕಾಲದಲ್ಲಿ ಬುಡಕಟ್ಟು ಮಂದಿಯನ್ನು ಬೇಟೆಗೆಂದು ಅಯ್ಯಪ್ಪ ದೇವರು ಕಾಡಿಗೆ ಕರೆದುಕೊಂಡು ಹೋಗಿದ್ದನಂತೆ. ಕಾಡನ್ನೆಲ್ಲಾ ಸುತ್ತಾಡಿ ಬೇಟೆಯಾಡಿದ ಬಳಿಕ ಬುಡಕಟ್ಟು ಮಂದಿಯನ್ನು ಕಾಡಿನಲ್ಲಿಯೇ ಬಿಟ್ಟು ಈಗ ಬರುತ್ತೇನೆಂದು ಹೇಳಿ ಹೋದ ಅಯ್ಯಪ್ಪ ಬಹಳ ಸಮಯವಾದರೂ ಬರಲಿಲ್ಲವಂತೆ. ಆತನನ್ನು ಕಾದು ಸುಸ್ತಾದ ಬುಡಕಟ್ಟು ಮಂದಿ ಅಯ್ಯಪ್ಪ ಹೋದ ಹಾದಿಯಲ್ಲಿ ಆತನನ್ನು ಹುಡುಕುತ್ತಾ ಹೋದರಂತೆ. ಹೀಗೆ ಹೋದ ಬುಡಕಟ್ಟು ಮಂದಿಗೆ ಅಯ್ಯಪ್ಪ ಭದ್ರಕಾಳಿಯೊಂದಿಗೆ ಸರಸವಾಡುತ್ತಿರುವುದು ಕಾಣಿಸಿತಂತೆ. ಇದರಿಂದ ಕೋಪಗೊಂಡ ಬುಡಕಟ್ಟು ಮಂದಿ ಅಯ್ಯಪ್ಪನನ್ನು ಬಾಯಿಗೆ ಬಂದಂತೆ ಬೈಯ್ಯುತ್ತಾ ದೊಣ್ಣೆ ಹಿಡಿದು ಅಟ್ಟಿಸಿಕೊಂಡು ಹೋದರಂತೆ. ಬುಡಕಟ್ಟು ಮಂದಿಗೆ ಅಯ್ಯಪ್ಪ ಹಿಂಭಾಗ ತೋರಿಸಿದ ಕಾರಣ ಕುಂಡೇ... ಕುಂಡೇ... ಎಂದು ಹೀಯಾಳಿಸುವುದು ರೂಢಿಗೆ ಬಂತೆಂದು ಹೇಳಲಾಗುತ್ತಿದೆ.

ಹಬ್ಬದ ಸಂದರ್ಭ ನಡೆಯುವ ಕೀಲು ಕುದುರೆ ನೃತ್ಯದ ಹಿಂದೆಯೂ ಮತ್ತೊಂದು ಸ್ವಾರಸ್ಯಕರ ಕಥೆಯಿದೆ. ಅದೇನೆಂದರೆ ಅರ್ಜುನ ಮತ್ತು ಶಿವ ಕೇರಳದಿಂದ ಪುಲಪಳ್ಳಿ ಎಂಬಲ್ಲಿಗೆ ಹೋದಾಗ ಇಬ್ಬರು ನಪುಂಸಕರು ಸೀರೆಯುಟ್ಟು ಮೋಹಿನಿಯಾಗಿ ನರ್ತಿಸಿ ವಂಚಿಸಿದರಂತೆ. ಈ ಸಂದರ್ಭದಲ್ಲಿ ಕೋಪಗೊಂಡ ಶಿವ "ನೀವು ಕುದುರೆಯಾಗಿ" ಎಂದು ಶಾಪ ಹಾಕಿದನಂತೆ. ಆದುದರಿಂದ ಈ ಹಬ್ಬದಲ್ಲಿ ಕೀಲು ಕುದುರೆ ನೃತ್ಯ ಇಂದಿಗೂ ನಡೆದುಕೊಂಡು ಬರುತ್ತಿದೆ.

ಕುಂಡೆ ಹಬ್ಬದ ಸಂದರ್ಭ ನಡೆಯುವ ಪೂಜಾ ಕಾರ್ಯಗಳಲ್ಲಿ ಇತರರು ಭಾಗವಹಿಸುತ್ತಾರೆಯಾದರೂ ಹಬ್ಬದ ಆಚರಣೆಯ ಬಹುಪಾಲು ಬುಡಕಟ್ಟು ಮಂದಿಗೆ ಮೀಸಲಾಗಿರುತ್ತದೆ. ವಿಚಿತ್ರ ಉಡುಗೆ ತೊಡುಗೆಗಳನ್ನು ತೊಟ್ಟು ಕೈಯ್ಯಲ್ಲಿ ಬುರುಡೆ ಹಿಡಿದು ದೇವರಪುರದತ್ತ ಹೊರಡುವ ವೇಷಧಾರಿಗಳ ಪೈಕಿ ಹೆಚ್ಚಿನವರು ವಸೂಲಿಯಾದ ಹಣದಲ್ಲಿ ಕಂಠಪೂರ್ತಿ ಕುಡಿದು ತೂರಾಡುತ್ತಾ ದೇವಾಲಯವನ್ನು ತಲುಪುವ ಮುನ್ನವೇ ರಸ್ತೆ ಬದಿಯಲ್ಲೋ, ಚರಂಡಿಯಲ್ಲೋ ಬಿದ್ದು ಹೆಂಡದ ನಶೆಯಿಳಿದ ಬಳಿಕ ಸಂಜೆ ಭದ್ರಕಾಳಿ ದೇವಾಲಯದತ್ತ ತೆರಳಿ ದೇವರಿಗೆ ಹಾಗೂ ಜನರಿಗೆ ಬೈದುದಕ್ಕೆ ತಪ್ಪಾಯಿತೆಂದೂ, ತಪ್ಪನ್ನು ಮನ್ನಿಸುವಂತೆಯೂ ಭದ್ರಕಾಳಿಯೊಂದಿಗೆ ಬೇಡಿಕೊಳ್ಳುತ್ತಾರೆ. ಬೆಳಿಗ್ಗೆಯಿಂದ ರಾತ್ರಿಯವರೆಗೆ ತಾವು ಅನುಭವಿಸಿದ ಹಬ್ಬದ ಸಂಭ್ರಮವನ್ನು ಮೆಲುಕು ಹಾಕುತ್ತಾ ವೇಷಧಾರಿಗಳು ತಮ್ಮ ಮನೆಯ ಹಾದಿಹಿಡಿಯುತ್ತಾರೆ. ಅಲ್ಲಿಗೆ ಹಬ್ಬವೂ ಮುಗಿದು ಹೋಗುತ್ತದೆ.

;
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+