ಕಾರ್ಕಳದಲ್ಲಿ ಬಿದಿರು ಮರ ಹೂ ಬಿಟ್ಟಿದೆ!

ಬಿದಿರು ಕಾಡಿನ ವೃಕ್ಷವಾದರೂ, ಇತ್ತೀಚಿನ ದಿನಗಳಲ್ಲಿ ಅದನ್ನು ಶೃಂಗಾರಕ್ಕಾಗಿ ಉದ್ಯಾನವನಗಳಲ್ಲೂ, ಮನೆಯಂಗಳದಲ್ಲೂ ಬೆಳೆಯುತ್ತಿರುವುದನ್ನು ನಾವು ಕಂಡಿದ್ದೇವೆ. ಹುಲ್ಲಿನ ಜಾತಿಗೆ ಸೇರಿದ ಈ ಸಸ್ಯ ಔಷಧೀಯ ಗುಣಗಳನ್ನು ಹೊಂದಿರುವುದರಿಂದ, ಮಾನವ ಅದನ್ನು ಆಪ್ತಬಂಧುವಾಗಿ ಉಪಯೋಗಿಸುತ್ತಾ ಬಂದಿದ್ದಾನೆ. ಮಾನವನ ಹುಟ್ಟಿನಿಂದ ಹಿಡಿದು ಸಾವಿನ ತನಕವೂ ಬಿದಿರು ಒಂದಲ್ಲೊಂದು ಕಾರಣದಿಂದ ಅವನ ಜೀವನದಲ್ಲಿ ಹಾಸುಹೊಕ್ಕಾಗಿದೆ.
ಜಗತ್ತಿನಾದ್ಯಂತ 550 ಬಿದಿರಿನ ಪ್ರಭೇದಗಳಿವೆ. ಭಾರತದಲ್ಲೇ 136 ಜಾತಿಯ ಬಿದಿರುಗಳಿದ್ದರೂ, ನಮಗೆ ಮಾತ್ರ ಕಾಣಸಿಗುವುದು 40ರಷ್ಟು ಮಾತ್ರ. ಇದು ದಿನಕ್ಕೆ 3-4 ಅಂಗುಲಗಳಷ್ಟು ವೇಗವಾಗಿ ಬೆಳೆಯುತ್ತದೆ. ಎಳೆ ಬಿದಿರಿನ ಕಳಲೆ ಕತ್ತರಿಸಿ ಪಲ್ಯ, ಸಾಂಬಾರು, ಉಪ್ಪಿನಕಾಯಿ ಹೀಗೆ ವಿವಿಧ ವ್ಯಂಜನಗಳನ್ನು ತಯಾರಿಸಲಾಗುತ್ತದೆ. ಆದರೆ ಕಳಲೆಯನ್ನು ಬಳಸುವ ಮುನ್ನ ಅದನ್ನು ಕನಿಷ್ಠ 3 ದಿನಗಳ ಕಾಲ ನೀರಿನಲ್ಲಿ ನೆನೆಸಿಡಬೇಕು.ಇಲ್ಲವಾದಲ್ಲಿ ಅದು ವಿಷಕಾರಿ ಎಂಬ ಅಂಶವನ್ನು ನೀವು ತಿಳಿಯುವುದೊಳಿತು.
ಬಿದಿರಿನಲ್ಲಿ ಹೂ ಬಿಟ್ಟರೆ ಆ ವರ್ಷ ಊರಿಗೆ ಬರಗಾಲ ಬರುತ್ತದೆ ಎಂಬ ನಂಬಿಕೆ ನಮ್ಮಲ್ಲಿ ಹಾಸುಹೊಕ್ಕಾಗಿದೆ. ಅದು ಹೂ ಬಿಟ್ಟು ಕಾಯಿ ಕಟ್ಟಿ ಅಕ್ಕಿಯ ರೂಪದಲ್ಲಿ ಅದರ ಬೀಜ ಧರೆಗುರುಳುತ್ತದೆ. ಅದನ್ನು ಜನ ಆಹಾರ ರೂಪದಲ್ಲಿ ಉಪಯೋಗಿಸುತ್ತಾರೆ. ಗ್ರಾಮೀಣ ಭಾಗದಲ್ಲಿ ಬಿದಿರಿನ ಅಕ್ಕಿ ಬಗ್ಗೆ ಹಿರಿಯರು ಪ್ರತ್ಯೇಕವಾದವನ್ನೇ ವ್ಯಕ್ತಪಡಿಸುತ್ತಾರೆ. ಬಿದಿರು ಹೂ ಬಿಟ್ಟರೆ ಊರಿಗೆ ಅನಿಷ್ಟವಂತೆ. ಬಿದಿರಿನ ಅಕ್ಕಿಯನ್ನೇ ಅವಲಂಬಿಸುವಂತ ಕಾಲ ಸಮೀಪಿಸುತ್ತದೆ ಎನ್ನುವುದು ಅವರ ಭಯ ಮತ್ತು ವಾದ.
"ಅಂದು ನಾವು ಬಿದಿರಿನ ಪೊದೆಯಡಿಯಲ್ಲಿ ರಾತ್ರಿ ವೇಳೆ ಒಂದಾ ಸೀರೆ ಅಥವಾ ಗೋಣಿಚೀಲವನ್ನು ನೆಲಕ್ಕೆ ಹಾಸುತ್ತಿದ್ದೆವು. ಅಥವಾ ನೆಲವನ್ನು ಶುಚಿಗೊಳಿಸಿ ಸೆಗಣಿ ಸಾರಿಸುತ್ತಿದ್ದೆವು. ಅದರ ಮೇಲೆ ಸಂಗ್ರಹವಾದ ಬಿದಿರಿನ ಅಕ್ಕಿಯನ್ನು ಮನೆಗೆ ತಂದು ಬೇಯಿಸಿ ಆಹಾರವಾಗಿ ಉಪಯೋಗಿಸಲಾಗುತ್ತಿತ್ತು. ಅದು ಅಂತಹ ಕಷ್ಟದ ಕಾಲ" ಎನ್ನುತ್ತಾರೆ ಮಾಳ ಮಂಜಲ್ತಾರ್ ನಿವಾಸಿ 80ರ ಹರೆಯದ ಶ್ಯಾಮ ಶೆಟ್ಟಿ. ಅಂದು 1962 ರಲ್ಲಿ ಭಾರತ ಚೀನಾ ನಡುವೆ ಮರ ನಡೆದ ಸಂದರ್ಭ, ಕಾರ್ಕಳದಲ್ಲಿ ಬಿದಿರು ವೃಕ್ಷ ಹೂ ಬಿಟ್ಟಿತ್ತು ಎನ್ನುವುದನ್ನು ಅವರು ನೆನಪಿಸಿದ್ದಾರೆ. ಆ ಬಳಿಕ ಈ ಬಾರಿಯೇ ನಾನು ಬಿದಿರಿನ ಹೂ ಕಾಣುತ್ತಿದ್ದೇನೆ ಎನ್ನುತ್ತಾರೆ ಅವರು.
ಬಿದಿರು ಹೂ ಬಿಡುವುದು 40 ಅಥವಾ 60 ವರ್ಷಗಳಿಗೊಮ್ಮೆ. ಆದ್ದರಿಂದ ಬಿದಿರಿನ ಅಕ್ಕಿ ಕೂಡಾ ಬಲು ಅಪರೂಪ. ಬಿದಿರು ಜೀವಿತಾವಧಿ ಮುಗಿಸಿ ಒಣಗಲು ಆರಂಭಿಸಿo ಕೂಡಲೇ ಅದನ್ನು ಕಡಿದು ವಿಲೇವಾರಿ ಮಾಡುವಂತಿಲ್ಲ. ಜೈವಿಕ ವೈವಿಧ್ಯ ಅದರಲ್ಲಿ ಹಾಗೇ ಉಳಿಯುವುದರಿಂದ ಅದು ಮರಳಿ ಮಣ್ಣಿಗೆ ಸೇರಬೇಕು ಎನ್ನುವ ವೈಜ್ಞಾನಿಕ ವಾದವು ಇನ್ನೊಂದೆಡೆಯಿದೆ. ಆದರೆ ರಸ್ತೆ ಬದಿಯಲ್ಲಿರುವ ಒಣ ಬಿದಿರಿಗೆ ಬೆಂಕಿ ತಗಲಿದರೆ, ಅದು ಇಡೀ ಅರಣ್ಯಕ್ಕೆ ವ್ಯಾಪಿಸುವ ಅಪಾಯವಿದೆ. ಈ ಬಗ್ಗೆ ಮುನ್ನೆಚ್ಚರಿಕೆ ಅಗತ್ಯ.
ಬರಗಾಲ ಹೇಗೆ : ಕಾಡಿನಲ್ಲಿ ಬಿದಿರಿನ ಎಲೆಗಳು ಹಣ್ಣಾಗುವ ಹೊತ್ತಿಗೆ ಆನೆಗಳಿಗೆ ಆಹಾರದ ಕೊರತೆ ಆವರಿಸುತ್ತವೆ. ಕಾಡು ಬಿಟ್ಟು ನಾಡಿಗೆ ಆಹಾರವನ್ನು ಅರಸುತ್ತಾ ಆನೆಗಳು ಬಂದಲ್ಲಿ ಕೃಷಿಗೆ ಆಪತ್ತುಗಳಿವೆ. ಇನ್ನೊಂದೆಡೆ ಬಿದಿರಿನ ಅಕ್ಕಿಯಿಂದಾಗಿ ಇಲಿಯ ವಂಶ ವೃದ್ದಿಯಾಗುತ್ತದೆ. ಬಿದಿರಿನ ಅಕ್ಕಿ ಮುಗಿದಾಗ ಈ ಇಲಿಗಳು ನಾಡಿಗೆ ಪ್ರವೇಶಿಸಿ ದವಸ ಧಾನ್ಯಗಳ ಮೇಲೆ ಲಗ್ಗೆಯಿಡುತ್ತವೆ ಎನ್ನುವುದು ಇನ್ನೊಂದು ಕಾರಣ.
ಆದ್ದರಿಂದಲೇ ಬಿದಿರು ಹೂ ಬಿಟ್ಟರೆ ಬರಗಾಲ ಗ್ಯಾರಂಟಿ ಎನ್ನುವ ಮಾತು ಹಳೆಯ ಕಾಲದಲ್ಲಿತ್ತು. ಆದರೆ ಪ್ರಸ್ತುತ ಇಂಥ ಮಾತುಗಲೆಲ್ಲ ಕಾಲ ಚಕ್ರದ ಉರುಳಲ್ಲಿ ಸವಕಲಾಗುತ್ತಿವೆ. ಆದರೆ ಬಿದಿರಿನ ಬೆಳೆಗೆ ಕುತ್ತು ಬಂದಾಗ, ಒಂದಿಲ್ಲೊಂದು ರೀತಿಯಲ್ಲಿ ಮಾನವ ತೊಂದರೆಗೀಡಾಗುತ್ತಾನೆ ಎನ್ನುವುದು ಮಾತ್ರ ನಿರ್ವಿವಾದ (ಚಿತ್ರ : ಸುಶಾಂತ್ ಬಜಗೋಳಿ)












Click it and Unblock the Notifications