ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಲಕೃಷಿಕ ಕರ್ನಲ್ ಪ್ರಕಾಶ್ ಜತೆ ಮಾತುಕತೆ-2

By Staff
|
Google Oneindia Kannada News



Hydrophonics project Kadamba
*ಜಲಕೃಷಿಗೆ ಕೀಟ, ಕಳೆ ಬಾಧೆ ಇಲ್ಲವೇ? ಅದನ್ನು ಹೇಗೆ ನಿವಾರಿಸುತ್ತೀರಾ?

ಇದು ಕುತೂಹಲಕಾರಿ ಪ್ರಶ್ನೆ. ಜಲಕೃಷಿ ಉನ್ನತ ತಂತ್ರಜ್ಞಾನ ಬಳಕೆ, ಸಾಮಾನ್ಯ ಜನರಿಗೆ ಎಂದೆಲ್ಲ ಹೇಳಿದರೂ, ಕೀಟಬಾಧೆ, ಕಳೆ ನಿವಾರಣೆಗೆ ಪ್ರಾಚೀನ ಕಾಲದ ನೈಸರ್ಗಿಕ ಮಾರ್ಗಗಳನ್ನೇ ಬಳಸಲಾಗುವುದು. ಸುತ್ತ ಬೇವು ಬೆಳೆಸಲಾಗುವುದು, ಈರುಳ್ಳಿ ಸ್ಪ್ರೇ ಹಾಕಲಾಗುವುದು. ಸಗಣಿ ನೀರು ಹಾಕುವುದು.. ಇತ್ಯಾದಿ ಅನಾದಿಕಾಲದಿಂದ ನಮ್ಮ ರೈತರು ಬಳಸುತ್ತಿರುವ ಸರಳ ಉಪಾಯಗಳು ಸಾಕು. ಆದರೆ, ಅದನ್ನು ಇಲ್ಲಿ ಅಳವಡಿಸುವ ರೀತಿ ಮುಖ್ಯ. ಕೀಟಗಳನ್ನು ತಡೆಯಲು ಪ್ಲೇ ವುಡ್ ತುಂಡುಗಳಿಗೆ ಎಣ್ಣೆ, ಜಾರುವಂಥ ಕ್ರೀಸ್ ಪದಾರ್ಥಗಳನ್ನು ಬಳಿಯಲಾಗುವುದು. ಪ್ಲೇವುಡ್ ಮೇಲೆ ಗಾಢವಾದ ಹಳದಿ, ನೀಲಿ ಬಣ್ಣ ಬಳಸಿ ಸಸಿಗಳ ಆವರಣದಲ್ಲಿಡಲಾಗುವುದು. ಇನ್ನೊಂದು ತಂತ್ರವೆಂದರೆ, ಒಂದೆ ಕಡೆ ಕೋಸು, ಟಮೋಟೊ, ಸುಗಂಧ ದ್ರವ್ಯ ಸಸಿ ಬೆಳೆಯುವುದು. ಇದು ಕೀಟಗಳಿಗೆ ಆಯ್ಕೆ ಗೊಂದಲವುಂಟು ಮಾಡುತ್ತದೆ. ದೃಷ್ಟಿ ಬೊಂಬೆ, ಹಳೆ ಕ್ಯಾಸೆಟ್ ಟೇಪ್ ಇಳಿ ಬಿಡುವುದು ..ಹಕ್ಕಿಗಳ ಓಡಿಸಲು ಕನ್ನಡಿ ಬಳಕೆ ..ಇತ್ಯಾದಿ ಅನೇಕ ಸರಳ ಉಪಾಯಗಳನ್ನು ದಿನೇದಿನೇ ಕಲಿಯುತ್ತಾ ಹೋಗಬಹುದು. ಒಮ್ಮೆ ಫೀಲ್ಡ್ ಗೆ ಇಳಿದರೆ ತಾನಾಗೆ ತಿಳಿಯುತ್ತದೆ. ಕಳೆ ಕೀಳಲು ಕೀಟಗಳ ಬಳಕೆ ಕೂಡ ಪ್ರಯೋಗದ ಹಂತದಲ್ಲಿದೆ. ನೆನಪಿರಲಿ, ಈ ಕೃಷಿಯಲ್ಲಿ ಕಳೆ ಪ್ರಮಾಣ ಅತ್ಯಲ್ಪ.

* ಜಲಕೃಷಿ ಅನ್ನೋದೇನೋ ಸರಿ. ಆದ್ರೆ ನೀರು ದಿನೇ ದಿನೇ ದುರ್ಲಭ ಆಗುತ್ತಿರುವಾಗ ಇಲ್ಲಿ ನೀರಿನ ಬಳಕೆ ಹೇಗೆ. ಪುನರ್ ಬಳಕೆ ಅಂದ್ರೂ ಯಾವ ಥರಾ ಬಳಸಿದ ನೀರನ್ನು ಸಂಸ್ಕರಿಸಿತ್ತೀರಾ ? ಆರ್ಥಿಕವಾಗಿ ನೀರಿನ ಬಳಕೆಯ ಪಾತ್ರವೇನು?

-ಗುಡ್. ಸಿಂಪ್ಲಿಫೈಡ್ ಹೈಡ್ರೋಫೋನಿಕ್ಸ್ ನ ವಿಶೇಷ ಅಂದರೆ, ಸಾಮಾನ್ಯ ಕೃಷಿಯಲ್ಲಿ ಬಳಸಲ್ಪಡುವ ನೀರಿನ ಪ್ರಮಾಣಕ್ಕಿಂತ 1/10 ರಿಂದ 1/20 ಪ್ರಮಾಣದಷ್ಟು ಕಮ್ಮಿ ನೀರು ಬಳಸಲಾಗುವುದು. ಸರಿ ಪ್ರಮಾಣದ ಪಿಎಚ್ ಅಂಶವುಳ್ಳ ನೀರು ಅವಶ್ಯ. ಇಲ್ಲದಿದ್ದರೆ ಸಿಗುವ ನೀರನ್ನು ಸರಿ ಪಿಎಚ್ ಹಂತಕ್ಕೆ ತಂದು ನಂತರ ಬಳಸಲಾಗುವುದು. ಶುದ್ಧ ನೀರಿನ ಪಿಎಚ್ ಪ್ರಮಾಣ 7 ಆಗಿದೆ.ಇಲ್ಲಿ ಬಳಸಲಾವ ಶುದ್ಧ ನೀರನ್ನು ಪುನರ್ಬಳಕೆ ಮಾಡಲಾಗುವುದು. ಅಂದರೆ ಕುಂಡ(pot) ದಿಂದ ಹೊರ ಬರುವ ನೀರನ್ನು ನಲ್ಲಿ ಮುಖಾಂತರ ಸಂಗ್ರಹಿಸಿ ಪುನಃ ಬಳಸಲಗುವುದು. ಇದರಿಂದ ಸಸಿಗಳಿಗೆ ಬೇಕಾದ ಅಗತ್ಯ ಪೋಷಕಾಂಶ ಮಾತ್ರ ದೊರೆಯುವಂತೆ ನೋಡಿಕೊಳ್ಳಲಾಗುವುದು. ಅನಗತ್ಯ ನೀರು ನಿಲ್ಲುವಿಕೆ. ಮಣ್ಣಿನಲ್ಲಿ ಉಳಿಯುವ ಅಧಿಕ ತೇವಾಂಶ, ಸಸಿಯ ಬೇರು ಬೆಳೆದಂತೆ ಪೋಷಕಾಂಶಗಳಿಗೆ ತಡಗಾಡುವುದನ್ನು ತಪ್ಪಿಸಿ, ಅಗತ್ಯ ಆಹಾರವನ್ನು ನಾವೇ ನೀಡಿ ಬೆಳೆಸುವ ಕ್ರಮ ಅನುಸರಿಸಲಾಗುವುದು.ಕುಂಡಗಳಲ್ಲಿ ಮಣ್ಣಿನ ಬದಲು ಶುದ್ಧಿಕರಿಸಿದ ತೆಂಗಿನ ನಾರು ಬಳಸಲಾಗುವುದು. ಇದು ನೀರು ಸರಾಗವಾಗಿ ಒಳ ತಲುಪಲು ಸಹಾಯಕವಾಗುತ್ತದೆ. ಮಳೆ ನೀರಿಗಿಂತ ಹೆಚ್ಚಿನ ಜಲಮೂಲ ಯಾವುದಿದೆ ಹೇಳಿ.

* ಬೆಳೆದ ಉತ್ಪನ್ನಗಳ ಮಾರಾಟ ವ್ಯವಸ್ಥೆ ಹೇಗೆ?

ಕೈತೋಟವನ್ನು ಮನೆಮಟ್ಟಿಗೆ ಬೆಳೆಸಬಹುದು. ಆದರೆ ಆರ್ಥಿಕವಾಗಿ ಬಳಸಬಹುದು. ಹತ್ತಿರ ತರಕಾರಿ ಅಂಗಡಿಗೆ, ತಳ್ಳುಗಾಡಿಯವನಿಗೆ, ಸಗಟು ಮಾರಾಟಗಾರರಿಗೆ ನೀಡಿ ಹಣ ಗಳಿಸಬಹುದು. ದುಡ್ಡು ಮುಖ್ಯವಲ್ಲ ಎಂದಾದರೆ, ಸಮುದಾಯ ಕೈತೋಟ ಪದ್ಧತಿ ಆರಂಭಿಸಬಹುದು. ನಿಮ್ಮ ವಠಾರ, ಅಪಾರ್ಟ್ ಮೆಂಟ್, ಅಕ್ಕ ಪಕ್ಕ ಮನೆಯರೆಲ್ಲ ಸೇರಿ ನೀವು ನೀವು ಬೆಳೆದ ತರಕಾರಿಗಳನ್ನು ವಿನಿಮಯ ಮಾಡಿಕೊಳ್ಳಬಹುದು. ವಿವಿಧ ರೀತಿಯ ತರಕಾರಿ ಬೆಳೆದು ಪರಸ್ಪರ ಹಂಚಿಕೊಳ್ಳುವ ಬಾರ್ಟರ್ ಸಿಸ್ಟಮ್ ಪುನಃ ಜಾರಿಗೆ ತಂದರೂ ತೊಂದರೆಯಿಲ್ಲ. ಬೆಳೆದ ಉತ್ಪನ್ನಗಳನ್ನು ನೇರವಾಗಿ ಹಾಪ್ ಕಾಮ್ಸ್, ಸಫಲ್, ಫ್ರೆಶ್ ಮುಂತಾದ ದೊಡ್ಡ ಮಳಿಗೆಯವರಿಗೆ ಮಾರಾಟಕ್ಕೆ ಅನುವು ಮಾಡಿಕೊಡಲು ಅವಕಾಶ ನೀಡುವಂತೆ ವ್ಯವಸ್ಥೆ ಕಲ್ಪಿಸಲು ನಮ್ಮ ಸಂಸ್ಥೆ ಸರ್ಕಾರದೊಡನೆ ಮಾತುಕತೆ ನಡೆಸಿದೆ.

*ಇದುವರೆವಿಗೂ ಎಷ್ಟು ಜನರಿಗೆ ತರಬೇತಿ ನೀಡಿದ್ದೀರಾ? ಪ್ರಸ್ತುತ ಯಾವ ಯೋಜನೆಯಲ್ಲಿ ತೊಡಗಿದ್ದೀರಾ?

ಸುಮಾರು 125 ಜನರಿಗೆ ತರಬೇತಿ ನೀಡಲಾಗಿದೆ. ಇವರೆಲ್ಲ ಮಾಸ್ಟರ್ ಟ್ರೈನರ್ ಗಳಾಗಿದ್ದು ಆಸಕ್ತರಿಗೆ ತರಬೇತಿ ನೀಡುವ ಸಾಮರ್ಥ್ಯ ಹೊಂದಿರುತ್ತಾರೆ.ತರಬೇತಿಗೆ, ಪಾಠ, ಪ್ರವಚನ, ಪ್ರಾತ್ಯಕ್ಷಿಕೆಗೆ ತಗುಲುವ ವೆಚ್ಚ ವನ್ನು ನಾವೇ ಭರಿಸುತ್ತಿದ್ದೇವೆ. ಕೈಗೆಟುಕುವ ದರದಲ್ಲಿ ತರಬೇತಿ ಪಡೆಯಬಹುದು. ಕಳೆದ ಬಾರಿ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ ಕೃಷಿ ಮೇಳದಲ್ಲಿ ಪಾಲ್ಗೊಂಡಿದ್ದೆ. ಮಣ್ಣಿಲ್ಲದೆ ಕೈತೋಟ ಮಾಡುವ ಬಗೆ ವಿವರಿಸಿದೆ. ಹೆಚ್ಚಿನ ಜನರು ಆಸಕ್ತಿಯಿಂದ ಕೇಳಿಸಿಕೊಂಡರೂ ಉತ್ತಮ ಪ್ರತಿಕ್ರಿಯೆ ದೊರೆಯಲಿಲ್ಲ. ನಂತರ ಗ್ರಾಮೀಣ ಬೆಂಗಳೂರಿನ ಸಾಂಡ್ರಾ ರೆಕೆಟ್ಸ್ ಪಬ್ಲಿಕ್ ಸ್ಕೂಲ್ ನಲ್ಲಿ ತರಬೇತಿ ನೀಡಲು ನಿರ್ಧರಿಸಿದೆ. ಅನಾಥ ಮಕ್ಕಳು ಹಾಗೂ ಆರ್ಥಿಕವಾಗಿ ದುರ್ಲಭರಾದವರಿಗೆ ಇರುವ ಈ ಶಾಲೆಯ 20 ರಿಂದ 25 ಮಕ್ಕಳು ಹಾಗೂ ಐವರು ಟೀಚರ್ ಗಳಿಗೆ ಐಎಸ್ ಎಚ್ ನ ತರಬೇತಿ ನೀಡಲಾಯಿತು. ಸುಮಾರು 20 ಚ.ಮೀ ವಿಸ್ತ್ರೀರ್ಣದ ಭೂಮಿಯಲ್ಲಿ ತರಕಾರಿ, ಹೂ, ಔಷಧೀಯ ಸಸ್ಯಗಳನ್ನು ಬೆಳೆಸಲು ಆರಂಭಿಸಿದರು. ಬಹುಶಃ ಇದು ಭಾರತದಲ್ಲಿ ಆರಂಭಿಸಿದ ಮೊಟ್ಟಮೊದಲ ಹೈಡ್ರೋಪೋನಿಕ್ಸ್, ಕೈತೋಟ ಎನ್ನಬಹುದು. ಹೀಗೆ ಇಲ್ಲಿ ಕಂಡ ಯಶಸ್ಸು ಹತ್ತು ಹಲವು ಜನರನ್ನು ಆಕರ್ಷಿಸಿತು. ದೇಶದ ನಾನಾ ಭಾಗಗಳಿಂದ ಆಸಕ್ತರು ಹೈಡ್ರೋಪೋನಿಕ್ಸ್,ಕುರಿತು ವಿಚಾರಿಸಲಾರಂಭಿಸಿದರು. ದೂರದ ನಾಗಾಲ್ಯಾಂಡ್ ನಿಂದಲೂ ಕರೆ ಬಂದಿತ್ತು. ಕೆಲ ರೋಟರಿ ಸಂಸ್ಥೆಗಳು, ಸ್ವಯಂಸೇವ ಸಂಸ್ಥೆಗಳು ಶಾಲಾ ಮಕ್ಕಳಿಗೆ ಹೈಡ್ರೋಪೋನಿಕ್ಸ್, ತರಬೇತಿ ನೀಡುವಂತೆ ಕೋರಿಕೊಂಡಿವೆ. ನಮ್ಮ ಗುರಿ ದೇಶದ ಪ್ರಮುಖ ನಗರಗಳಲ್ಲಿ ಐಎಸ್ ಎಚ್ ಕೇಂದ್ರ ಸ್ಥಾಪಿಸಿ, ಸ್ಥಳೀಯ ವಿಶ್ವವಿದ್ಯಾಲಯದ ನೆರವು ಪಡೆಯುವುದಾಗಿದೆ. ಮುಂದಿನ ಯೋಜನೆ ಮಾರ್ಚ್2009 ರ ವೇಳೆಗೆ ಆರಂಭಿಸುವ ಇರಾದೆ ಇದೆ.

*ಈ ಯೋಜನೆಯ ಯಶಸ್ಸಿನ ಪ್ರಮಾಣವೇನು?

ಹೈಡ್ರೋಪೋನಿಕ್ಸ್,ಬಳಸಿ ಮಾಡುವ ಕೃಷಿಯ ಯಶಸ್ಸಿನ ಪ್ರಮಾಣ ಶೇ.40 ರಿಂದ 90 ಎನ್ನಬಹುದು. ಇನ್ನೂ ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಲ್ಲಿರದಿರುವುದು. ಜನರಿಗೆ ಇದರ ಬಗ್ಗೆ ಅರಿವಿಲ್ಲದಿರುವುದು, ಸ್ಥಳೀಯ ಸಂಪನ್ಮೂಲಗಳ ಸಹಕಾರ, ಸರ್ಕಾರ, ತರಬೇತಿಯ ಗ್ರಹಿಕೆ ಮುಂತಾದವುಗಳು ಫಲಾಫಲವನ್ನು ನಿರ್ಧರಿಸಬಲ್ಲದು. ಜಲಕೃಷಿಗೆ ಬಂಡವಾಳ ಹೂಡಿಕೆ ಅಲ್ಪ ಪ್ರಮಾಣದಲ್ಲಿ ಮಾಡುವುದರಿಂದ ನಷ್ಟದ ಪ್ರಮಾಣವು ಕಮ್ಮಿ ಎನ್ನಬಹುದು.

*ಆರ್ಥಿಕ ನೆರವು, ಬೆಳೆವಿಮೆ ಇತ್ಯಾದಿ ಎಲ್ಲಾ ಹೇಗೆ?

ಈ ಕೃಷಿಗೆ ಅಂಥಾ ಪ್ರತ್ಯೇಕ ಆರ್ಥಿಕ ನೆರವು ದೊರೆಯದಿದ್ದರೂ, ಸರ್ಕಾರೇತರ ಸಂಸ್ಥೆಗಳು, ಪರಿಸರ ಸ್ನೇಹಿ ಸಂಘಟನೆಗಳು ಹಾಗೂ ಕೈಸಾಲ ನೀಡುವವರ ಸಹಕಾರ ಪಡೆದು ಕೃಷಿ ಮಾಡುವ ಸಾಹಸ ಮಾಡಬಹುದು. ಜಲಕೃಷಿಯ ಮೂಲ ಉದ್ದೇಶ ಬಡತನ ನೀಗಿ, ಸಿಗುವ ಸಂಪನ್ಮೂಲಗಳನ್ನು ಬಳಸಿ ಸರಳವಾಗಿ ಉತ್ತಮ ಫಲ ಗಳಿಸಿ, ಆರ್ಥಿಕ ಭದ್ರತೆಯನ್ನು ಕಾಣುವುದಾಗಿದೆ. ಎನ್ ಜಿಒಗಳು ಮೈಕ್ರೊ ಫೈನಾನ್ಸ್ ಇನ್ಸ್ ಸ್ಟಿಟ್ಯೂಟ್ ಗಳು ಮುಖ್ಯಪಾತ್ರ ವಹಿಸಿದರೆ ಸಾಮಾನ್ಯರ ಬದುಕು ಏಳಿಗೆ ಕಾಣಲು ಸಾಧ್ಯ.

*ಈ ಯೋಜಗೆ ಸರ್ಕಾರ ಯಾವ ರೀತಿ ಸ್ಪಂದಿಸಿದೆ? ಈ ಯೋಜನೆಯನ್ನು ಪ್ರಚಾರ ಪಡಿಸಲು ನೆರವಾಗುವ ಭರವಸೆ ನೀಡಿದಿಯೇ?

ಸದ್ಯಕ್ಕಂತೂ ಯಾವುದೇ ಭರವಸೆ ಸಿಕ್ಕಿಲ್ಲ. ಆದರೆ ಹೈಡ್ರೋಪೋನಿಕ್ಸ್, ಅನ್ನು ಶಾಲೆಗಳಲ್ಲಿ ಚಟುವಟಿಕೆಯಂತೆ ಅಳವಡಿಸಿ, ಮಕ್ಕಳಿಗೆ ಕೈತೋಟ ಮಾಡುವ ಅಭ್ಯಾಸ ಮಾಡಿಸುವುದೊಳಿತು. ಮುಂಬರುವ ದಿನಗಳಲ್ಲಿ ಹಸಿರು ಪಡೆಯ ನಿರ್ಮಾಣವಾಗುತ್ತದೆ ಎಂಬ ಭರವಸೆ ನನಗಿದೆ. ಚಿಕ್ಕಂದಿನಿಂದಲೇ ಸ್ವಾವಲಂಬಿಗಳಾಗುವ ಪಾಠವನ್ನು ಕಲಿಸಬಹುದು.ನಾಸಿಕ್ ನ ರಾಷ್ಟ್ರೀಯ ತೋಟಗಾರಿಕಾ ಸಂಶೋಧನಾ ಅಭಿವೃದ್ಧಿ ಫೌಂಡೇಶನ್ (NHRDF) ಹೈಡ್ರೋಪೋನಿಕ್ಸ್, ತಂತ್ರಜ್ಞಾನ ಬಳಕೆಯಲ್ಲಿ ಆಸಕ್ತಿ ತೋರಿದೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಕಡೆಯಿಂದ ನೆರವನ್ನು ನಿರೀಕ್ಷಿಸಲಾಗಿದೆ.

* ಯಾವ ರೀತಿಯ ಬೀಜಗಳನ್ನು ಇಲ್ಲಿ ಬಳಸಬೇಕು?

ಸಾಮಾನ್ಯವಾಗಿ ತಾಲೂಕು ಹಾಗೂ ಜಿಲ್ಲಾಕೇಂದ್ರಗಳಲ್ಲಿ ದೊರೆಯುವ ಬೀಜಗಳನ್ನು ಬಳಸಬಹುದು. ಸಬ್ಸಿಡಿ ದರದಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ. ಒಮ್ಮೆ ಫಲವನ್ನು ಕಾಣಲು ಶುರುವಾದ ಮೇಲೆ ಬೀಜೋತ್ಪತಿಯನ್ನು ತಮ್ಮ ಕೈತೋಟದಲ್ಲೆ ಮಾಡಿಕೊಳ್ಳಬಹುದು.

*ISH ನ ಮುಂದಿನ ಯೋಜನೆಗಳೇನು?

* ಸದ್ಯಕ್ಕೆ ಆಸಕ್ತರಿಗೆ ಉತ್ತಮ ತರಬೇತಿ ನೀಡಿ, ಜಲಕೃಷಿಕರನ್ನು ತಯಾರಿಸುವುದು. ಜನರಿಗೆ ಈ ಕೃಷಿಯ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದು. ಭಾರತದಲ್ಲಿ ಆಹಾರ ಸಮಸ್ಯೆ ನಿವಾರಣೆ ಜಲಕೃಷಿ ಸುಲಭಮಾರ್ಗೋಪಾಯ ಎಂಬುದನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವುದು. ವಿಶ್ವವಿದ್ಯಾಲಯಗಳೊಡನೆ ಕೈ ಜೋಡಿಸಿ ವಿದ್ಯಾರ್ಥಿಗಳು ಹೈಡ್ರೋಪೋನಿಕ್ಸ್, ಸಂಶೋಧನೆಯಲ್ಲಿ ತೊಡಗುವಂತೆ ಮಾಡುವುದು. ಇತ್ಯಾದಿ. ಸದ್ಯ EMPRI ಸಂಸ್ಥೆಯಲ್ಲಿ ತರಬೇತಿ ನೀಡಲಾಗಿದೆ. ಶಿರಸಿ ಕಡೆ ಆಯ್ದ ಕೆಲವರಿಗೆ ತರಬೇತಿ ನೀಡಲು ಅಲ್ಲಿನ ಆಡಳಿತದ ಪರವಾಗಿ ಅನಂತಕುಮಾರ್ ಹೆಗಡೆ ಆಶೀಸರ ಕೇಳಿದ್ದಾರೆ. ಜಯನಗರದಲ್ಲಿ ಪ್ರಾಜೆಕ್ಟ್ ಕದಂಬದಲ್ಲಿ ಸದ್ಯ ವ್ಯಸ್ತನಾಗಿದ್ದೇನೆ.

* ನಿಮ್ಮ ಇನ್ಸ್ ಸ್ಟಿಟ್ಯೂಟ್ ಆಫ್ ಸಿಂಪ್ಲಿ ಫೈಡ್ ಹೈಡ್ರೋಪೋನಿಕ್ಸ್ ತಂಡದ ಬಗ್ಗೆ ಹೇಳಿ?

ನಮ್ಮದು 8 ಜನರ ತಂಡ. 6 ಜನ ಆಸ್ಟ್ರೇಲಿಯಾದಲ್ಲಿದ್ದಾರೆ .ಇಬ್ಬರು ಅಮೆರಿಕದಲ್ಲಿದ್ದಾರೆ. ನಾನು ಆಸ್ಟ್ರೇಲಿಯಾದಿಂದ ಬೆಂಗಳೂರಿಗೆ ಬಂದು ಹೋಗಿ ಮಾಡುತ್ತಿರುತ್ತೇನೆ. ಇಲ್ಲಿ ಕೆಲ ಯೋಜನೆಗಳನ್ನು ಪೂರೈಸಿ ಮತ್ತೆ ಅಲ್ಲಿ ಕೂಡ ಇದೇ ಕೆಲಸವನ್ನು ಮುಂದುವರೆಸುತ್ತಿರುತ್ತೇನೆ.

* ಮಾತು ಕತೆ ಮುಗಿಸುವ ಮುನ್ನ ಏನಾದರೂ ಹೇಳುವುದು ಬಾಕಿ ಇದೆಯಾ? ನಿಮ್ಮ ಬಗ್ಗೆ ಹೇಳಿ ಸಂಕ್ಷಿಪ್ತವಾಗಿ.

ಹೆಚ್ಚೇನಿಲ್ಲ. ನಾನು ಭಾರತೀಯ ನೇವಿಯಲ್ಲಿ ಅಧಿಕಾರಿಆಗಿದ್ದೆ. ಮೂಲತಃ ಕೇರಳದವನು. ಬೆಳಗಾವಿಯಲ್ಲಿ ಕೆಲವರ್ಷಗಳ ಕಾಲ ಇದ್ದೆ. ಕ್ಯಾ. ಗೋಪಿನಾಥ್, ಗೋಪಾಲ್ ಹೊಸೂರ್ ಗೊತ್ತು. ಕೃಷಿಗೂ ನನಗೂ ಯಾವುದೇ ಪೂರ್ವ ನಂಟಿಲ್ಲ. ನಮ್ಮ ಪೂರ್ವಜರು ಯಾರೂ ಬೇಸಾಯ ಮಾಡಿದ್ದಿಲ್ಲ. ಸೇನೆಯಿಂದ ಹೊರ ಬಂದ ಮೇಲೆ ನಾನು ಇದರಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದೇನೆ. ರಾತ್ರಿ ಕಳೆದು ಬೆಳಗಾಗುವುದರೊಳಗೆ ಏನೋ ಮ್ಯಾಜಿಕ್ ಮಾಡಬಲ್ಲೆ ಎಂಬ ಹುಚ್ಚು ಕಲ್ಪನೆ ನನಗಿಲ್ಲ. ಪ್ರಾಕ್ಟೀಕಲ್ ಆಗಿ ನಮಗೆ ಗೊತ್ತಿರೋ ಜ್ಞಾನವನ್ನು ಅಪ್ಲೈ ಮಾಡುವುದರಲ್ಲಿ ನಂಬಿಕೆಯುಳ್ಳವನು. ಇದರಲ್ಲಿ ಯಶಸ್ಸು ಕಾಣುವುದೆಂದರೆ ಅದು ಜನರಿಗೆ ಸ್ವಾವಲಂಬನೆ ಮಂತ್ರ ಬೋಧಿಸಿದಂತೆ ಎಂಬುದರ ಅರಿವಿದೆ. ಪ್ರಯತ್ನ ಸಾಗಿದೆ. ಮಕ್ಕಳಿಗೆ ಇದರಲ್ಲಿ ಆಕರ್ಷಣೆ ಮಾಡಿದೆ. ಅದು ಒಳ್ಳೆಯ ಬೆಳವಣಿಗೆ. ಇದಲ್ಲದೇ ನಾಗರಿಕ ಸಮಾಜ ಕರ್ತವ್ಯ ಎಂಬುದಿರುತ್ತದೆ. ದಾರಿಯಲ್ಲಿ ಬಿದ್ದ ಪ್ಲಾಸ್ಟಿಕ್ ಕಸವನ್ನು ಕಸದ ಗುಂಡಿಗೆ ಹಾಕುವಷ್ಟು ನಮ್ಮ ಜನ ಬದಲಾಗಿಲ್ಲ. ಸೋ, ಇಲ್ಲಿ ಯಶಸ್ಸು ಸುಲಭದ ತುತ್ತಲ್ಲ ಎಂಬುದನ್ನು ಕಂಡಿದ್ದೇನೆ. ಇಲ್ಲಿ ಟೀಕೆ, ಕುಹಕ ಜೊತೆಗೆ ಬೆಂಬಲವನ್ನೂ ಕಂಡಿದ್ದೀನಿ. ಮರಳಿ ಯತ್ನವ ಮಾಡು ಎಂಬಂತೆ ಮುಂದಿನ ಪೀಳಿಗೆಗೆ ನಾವು ಏನಾದರೂ ನೀಡಬಹುದಾದರೆ ಅದು ಹಸಿರು ತುಂಬಿರುವ ಪರಿಸರ ಏಕಾಗಬಾರದು.

ಆಸಕ್ತರು ಸಂಪರ್ಕಿಸಿ:
ಸಿವಿ ಪ್ರಕಾಶ್
INSTITUTE OF SIMPLIFIED HYDROPONICS
1323, III Floor, IV Cross, Ramaiah Layout,
Kammanahalli, Bangalore - 560 084
Karnataka, India
ದೂರವಾಣಿ: 91 80 6531 5777
ಮೊಬೈಲ್ : 91 98955 22777

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X