ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈ.ಕರ್ನಾಟಕದ ಥೂಛೀ ಮಂದಿ ಕೊನೆ ಭಾಗ

By Staff
|
Google Oneindia Kannada News

ಅಧಿಕಾರ ಗದ್ದುಗೆಯನ್ನು ಕುಂಡಿಗೆ ಅಂಟಿಸಿಕೊಂಡೇ ಕುಳಿತಿರುವ ಗರಿಗರಿ ಪಂಚೆಯ ಈ ಮಂದಿ ರಾಜಕೀಯ ಧರ್ಮಕ್ಕೆ ಅಡ್ಡನಾಮ ಎಳೆದುಬಿಟ್ಟಿದ್ದಾರೆ. ತಾವಿರುವುದೇ ಗುಡಾಣ ತುಂಬಿಸಿಕೊಳ್ಳಲು ಎಂಬಂತಿರುವ ಹೈದರಾಬಾದ್ ಕರ್ನಾಟಕದ ರಾಜಕಾರಣಿಗಳ 'ವಿರಾಟ್ ದರ್ಶನ' - ಕೊನೆ ಭಾಗ

*ವಿಶ್ವಾರಾಧ್ಯ ಸತ್ಯಂಪೇಟೆ

ನಿಂತರೆ ಕೂಡಲಾಗದ, ಕುಂತರೆ ಏಳಲಾಗದ ಧರ್ಮಸಿಂಗ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರನ್ನು ನೋಡಿದರೆ ಸಮೃದ್ಧತೆಯ ಸಂಕೇತದಂತೆ ಕಾಣುತ್ತಾರೆ. ಒಬ್ಬರ ಬಣ್ಣ ಕೆಂಪು ಇನ್ನೊಬ್ಬರು ಕಡುಗಪ್ಪು. ಅಷ್ಟೆ ವ್ಯತ್ಯಾಸ. ಆದರೆ ಅವರವರ ಮತಕ್ಷೇತ್ರವನ್ನು ಹೊಕ್ಕು ನೋಡಿದರೆ ಮಾತ್ರ ಅವರ ಬಣ್ಣಮೀರಿದ ಅವಲಕ್ಷಣ ಮುಖ ಎದ್ದು ಕಾಣುತ್ತದೆ. ರದ್ದೇವಾಡಗಿಯ ಬಸವಂತರಾಯ ಗೌಡನ ಕೈಚೀಲ ಹಿಡಕೊಂಡು ಅಡ್ಡಾಡುತ್ತಿದ್ದ ಧರ್ಮಸಿಂಗ್ ರಾಜಕೀಯಕ್ಕೆ ಬಂದು ಕಡಿದು ಕಟ್ಟೆ ಹಾಕಿದ್ದೆಂದರೆ ತನ್ನ ದಾರಿದ್ರ್ಯವನ್ನು ಜಾಡಿಸಿ ಒದ್ದುಕೊಂಡು ಮೇಲೆದ್ದು ಬಂದದ್ದು. ಮುಖ್ಯಮಂತ್ರಿಯಾಗಿದ್ದಾಗಲೂ ತಮ್ಮ ಭಾಗದ ಜನತೆಗೆ ಏನೊಂದು ಕೆಲಸ ಮಾಡದ ಕೊಳದಪ್ಪಲೆ .

ಅದೇ ರೀತಿ ಮಲ್ಲಿಕಾರ್ಜುನ ಖರ್ಗೆ ಈಗ್ಗೆ ನಲವತ್ತೈದು ವರ್ಷಗಳ ಹಿಂದೆ ತಿರುಗಾಡುವುದಕ್ಕೆ ಒಂದು ಮುರಿದ ಸೈಕಲ್ ಬಿಟ್ಟರೆ ಗತಿ ಇರಲಿಲ್ಲ. ಹರಿದ ಅಂಗಿ ಪ್ಯಾಂಟು ತಗುಲುಸಿಕೊಂಡು ಅವರು ಓಡಾಡಿದ್ದನ್ನು ನೋಡಿದವರು ಇನ್ನೂ ಬದುಕಿದ್ದಾರೆ. ಆದರೆ ಇಂದು ಖರ್ಗೆ ಕರ್ನಾಟಕದ ಕುಬೇರರಲ್ಲಿ ಒಬ್ಬ. ಚಿತ್ತಾಪುರ ತಾಲೂಕಿನ ಗುಂಡಗುರ್ತಿಯಲ್ಲಿ ಮಾವ ಈ ಹಿಂದೆ ಕೊಟ್ಟ ಐದು ಎಕರೆ ಜಮೀನು ಹೊರತಾಗಿ ಅಂಗೈ ಅಗಲ ಜಾಗವೂ ಖರ್ಗೆಗೆ ಇರಲಿಲ್ಲ. ಆದರೆ ಇಂದು ಇಡೀ ರಾಜ್ಯದ ಮೂಲೆ ಮೂಲೆಯಲ್ಲಿಯೂ ಖರ್ಗೆ ಕೋಟ್ಯಂತರ ರೂಪಾಯಿಗಳ ಮೌಲ್ಯದ ಭೂಮಿ ಖರೀದಿಸಿದ್ದಾನೆ.

ಇದೀಗ ರಾಜಕೀಯ ಗಾಳಿಯಲ್ಲಿ ತೂರಿ ಬಂದಿರುವ ಚೆಡ್ಡಿಗಳು ಪತ್ರಿಕಾ ಟೈಗರ್ ಗಳು ಮಾತ್ರ. ಅವರ ಮುಖ್ಯ ಮಂತ್ರಿಯೆ ದಿನ ನಿತ್ಯ ಎದ್ದ ತಕ್ಷಣ ಗುಡಿ ಗುಂಡಾರ ಜೋತಿಷ್ಯ ಎಂದು ತಿರುಗುತ್ತ ಹೊರಟರೆ ಇವರೂ ಅವರನ್ನು ಚಾಚು ತಪ್ಪದೆ ಅನುಸರಿಸುತ್ತ ನಡೆದಿದ್ದಾರೆ. ಸುನೀಲ ವಲ್ಲಾಪುರೆ, ಶಶೀಲ ನಮೋಶಿ, ನರಸಿಂಹ ನಾಯಕ , ಗುಲಬರ್ಗಾದ ಗೌಡನನ್ನು ಎಬ್ಬಿಸುವುದೆ ಕಷ್ಟ. ಶಶೀಲ ನಮೋಶಿಯೇನೋ ಇದೀಗ ಸಣ್ಣ ಹೆಜ್ಜೆ ಇಡುತ್ತ ತೆವಳುತ್ತಿದ್ದಾರೆ. ಇದೂ ಕೂಡ ಹೈದ್ರಾಬಾದ್ ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗುತ್ತದೋ ? ಮಾರಕವಾಗುತ್ತದೋ ? ಮುಂದಿನ ದಿನಗಳೆ ನಿರ್ಧರಿಸಲಿವೆ.

ಇವರೆಲ್ಲರಿಗಿಂತಲೂ ಕನಿಷ್ಟ ಕಾಳಜಿ ಹೋರಾಟದ ಮನೋಧರ್ಮ ಇಟ್ಟುಕೊಂಡ , ಹೈದ್ರಾಬಾದ್ ಕರ್ನಾಟಕದ ಬಗೆಗೆ ಕನಸು ಕಟ್ಟಿಕೊಂಡಿರುವ ಎಸ್.ಕೆ.ಕಾಂತಾ ,ಬಿ.ಆರ್.ಪಾಟೀಲ ಒಂದಕ್ಕೊಂದು ಸೇರದ ವಿರುದ್ಧ ದಿಕ್ಕನವರು. ಇದೆಲ್ಲದರಿಂದಾಗಿ ಇಂದು ಈ ಭಾಗದಲ್ಲಿ ಹೇಳುವ ಅರಸ , ಕೇಳುವ ಪ್ರಧಾನಿ ಇಲ್ಲದ ಬಿಕೋ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜಕೀಯ ನಾಯಕತ್ವದ ಚುಕ್ಕಾಣಿ ಹಿಡಿಯುವರಿಲ್ಲದೆ ಜನತೆ ಒಂದು ಜೋರು ಮಳೆ ಬಂದರೆ ಸಾಕು ಗುಳೆ ಎದ್ದು ಬೆಂಗಳೂರೋ, ಮುಂಬೈಗೋ ಎದ್ದು ಹೋಗಬೇಕಾದ ಪರಿಸ್ಥಿತಿ ಇದೆ. ಬೇಕಾದಷ್ಟು ಸಂಪನ್ಮೂಲಗಳಿದ್ದರೂ ಅವನ್ನು ಸರಿಯಾಗಿ ಉಪಯೋಗಿಸಿಕೊಳ್ಳದ್ದರಿಂದ ಇವತ್ತಿಗೂ ಈ ಭಾಗದ ಯುವಕರು ಕೆಲಸಗಳನ್ನು ಅರಸಿಕೊಂಡು ರಾಜಧಾನಿಯತ್ತ ಮುಖಮಾಡಿ ನಡೆದಿದ್ದಾರೆ.

ಅಗಸ ಬಾವಿಯೊಳಗಿದ್ದೂ ಬಾಯಾರಿ ಸತ್ತಂತೆ ಎಂಬಂತೆ ಇಲ್ಲಿಯ ಜನ ಮೂಕರೋದನ ಅನುಭವಿಸುತ್ತಿದ್ದಾರೆ. ಇವರನ್ನು ಬಹುಶಃ ಆ ದೇವರೆ ಬಂದರು ಪಾರುಮಾಡಲಾರನೇನೊ ? ನಾನಾರ ಏನ್ ಮಾಡ್ಲೀ? ಈ ಮುಗಿಯಲಾರದ ದಂಡಪಿಂಡಗಳ ಕತೀನ ಇಲ್ಲೀಗ ಮುಗಿಸ್ತೀನಿ.

ಪೂರಕ ಓದಿಗೆ:

ಹೈ.ಕರ್ನಾಟಕದ ಥೂಛೀ ಮಂದಿ (ಭಾಗ 3)
ಹೈದರಾಬಾದ್ ಕರ್ನಾಟಕದ ದಂಡಪಿಂಡಗಳು
ಹೈ.ಕರ್ನಾಟಕದ ಥೂಛೀ ಮಂದಿ (ಭಾಗ1)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X