ಹೈ.ಕರ್ನಾಟಕದ ಥೂಛೀ ಮಂದಿ (ಭಾಗ 2)

ಈ ದಂಡಪಿಂಡಗಳ ಕಥೆಯನ್ನು ಎಂತು ಬಣ್ಣಸಲಿ ನಾನು! ದಿ.ವೀರೇಂದ್ರಪಾಟೀಲರು ಎರಡು ಸಲ ಮುಖ್ಯಮಂತ್ರಿಯಾಗಿರುವಾಗಲೂ ಉತ್ತರ ಕರ್ನಾಟಕ ಜಿಲ್ಲೆಗಳ ಕಡೆ ಕಣ್ಣೆತ್ತಿ ಕೂಡ ನೋಡಲಿಲ್ಲ. ಕರಟಕ ದಮನಕ ಖ್ಯಾತಿಯ ಧರ್ಮಸಿಂಗ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಸ್ವಲ್ಪ ಹೆಚ್ಚು ಕಡಿಮೆ ರಾಜ್ಯ ಪುನರ್ ವಿಂಗಡಣೆಯ ಆರಂಭದಿಂದಲೂ ಒಂದಾನೊಂದು ಅಧಿಕಾರದ ಖುರ್ಚಿಯಲ್ಲಿ ಕುಳಿತುಕೊಂಡವರೆ ಆಗಿದ್ದಾರೆ.
ಭೀಮಣ್ಣಖಂಡ್ರೆ ಎಂಬ ಉಟ್ಟು ಓರಾಟಗಾರ ಸಿಟ್ಟು ಸೆಡವುಗಳಿಂದ ಮಾತ್ರ ಮಿಂಚಿದರೆ ಹೊರತು ಬೇರೆ ಮತ್ತಾವುದಕ್ಕೂ ಅಲ್ಲ. ವಿಶ್ವನಾಥರೆಡ್ಡಿ ಮುದ್ನಾಳ ಎಂಬ ವಿಚಿತ್ರ ತೆವಲುಗಳಿರುವ ಮನುಷ್ಯ ತನ್ನ ವೈಯಕ್ತಿಕ ಕಟ್ಟುನಿಟ್ಟುಗಳನ್ನು ಸಮಾಜಕ್ಕೆ ತೋರಿಸಿದನೆ ಹೊರತಾಗಿ ಸರಕಾರದಿಂದ ಈ ಭಾಗಕ್ಕೆ ಸಿಗಬೇಕಾದ ಸೌಲತ್ತುಗಳ ಬಗ್ಗೆ ಚಕಾರವೆತ್ತಲಿಲ್ಲ.
ಶಹಾಪುರದ ಬಾಪುಗೌಡ ದರ್ಶನಾಪುರಿಗೆ ತನ್ನ ಕ್ಷೇತ್ರದ ಬಗ್ಗೆ ಕನಿಷ್ಠ ಬಗೆಯ ಕಾಳಜಿಗಳಿದ್ದವು. ಆದರೆ ಅದಕ್ಕೆ ಅಂದಿನ ರಾಜಕೀಯ ಸ್ಥಿತಿ ಅವಕಾಶ ಕೊಡಲಿಲ್ಲ. ಆದರೆ ಇತ್ತೀಚೆಗೆ ಈತನ ಪುತ್ರ ಶರಣಬಸಪ್ಪಗೌಡ ದರ್ಶನಾಪುರಗೆ ಏನೆಲ್ಲ ಅವಕಾಶಗಳಿದ್ದರೂ ಅವನ್ನು ಕಣ್ಣೆತ್ತಿಯೂ ನೋಡದ ಮೈಗಳ್ಳ. ಮುಕ್ಕುವುದನ್ನೆ ತನ್ನ ರಾಜಕೀಯ ಎಂದು ಅರಿತುಕೊಂಡಿರುವ ದರ್ಶನಾಪುರನಿಂದ ಪ್ರದೇಶದ ಹಿತ ಕಾಪಾಡುವುದು ಒತ್ತಟ್ಟಿಗಿರಲಿ ತನ್ನ ಕ್ಷೇತ್ರದ ಬಗೆಗಿನ ಕಾಳಜಿಗಳನ್ನೂ ಇಟ್ಟುಕೊಂಡಿಲ್ಲ.
ಗುರುಪಾದಪ್ಪ ನಾರಮಾರಪಳ್ಳಿ ಎಂಬ ಮತ್ತೊಬ್ಬ ಫ್ಯೂಡಲ್ ಗುಣಗಳ ಮನುಷ್ಯ ಶೋಕಿಯೆ ತನ್ನ ರಾಜಕೀಯ ಜೀವನ ಎಂದು ಬಗೆದವರು. ಕಂದಾಯ ಇಲಾಖೆಯ ಮಾಮೂಲಿ ಸೆಕ್ರೆಟ್ರಿಯಾಗಿದ್ದ ನಾಗಮಾರಪಳ್ಳಿಗೆ ಕನಸುಗಳಾಗಲಿ, ಕಸುವಾಗಲಿ ಇಲ್ಲ. ಅದೇನಿದ್ದರೂ ತನ್ನ ಗುಡಾಣವನ್ನು ಹೇಗೆ ತುಂಬಿಸಿಕೊಳ್ಳಬೇಕು ಎಂಬ ತೆವಲಿಗೆ ಮಾತ್ರ ಗಂಟು ಬಿದ್ದಾತ. ಬೀದರ ಜಿಲ್ಲೆಯ ಡಿ.ಸಿ.ಸಿ ಬ್ಯಾಂಕ್ ಹಾಗೂ ನಾರಂಜ ಸಕ್ಕರೆ ಕಾರ್ಖಾನೆಗಳನ್ನು ತನ್ನ ಪದತಲದಲ್ಲಿ ಇಟ್ಟುಕೊಂಡು ಮಿಂಚುತ್ತಿರುವ ರಾಜಕುಮಾರ. ನಾಗಮಾರಪಳ್ಳಿ ತಿರುಗಾಡುವ ಹೆಲಿಕ್ಯಾಪ್ಟರ್, ಆತನ ಶುಗರ್ ಫ್ಯಾಕ್ಟರಿಯ ,ಡಿ.ಸಿ.ಸಿ. ಬ್ಯಾಂಕಿನ ಸುಸಜ್ಜಿತ ಚೇಂಬರ್ ಹಾಗೂ ಆತ ತಿರುಗಾಡುವ ಕಾರುಗಳ ಬಗ್ಗೆಯೆ ರಂಜಕ ಕತೆಗಳನ್ನು ಹಬ್ಬಿಸಿ ಜನತೆಯನ್ನು ಕಂದಕಕ್ಕೆ ತಳ್ಳಿರುವಾತ.
ದಿ.ರಾಮಚಂದ್ರವೀರಪ್ಪ ಕೂಡ ನಿರುಪದ್ರವಿ ಎಂಬುದನ್ನು ಬಿಟ್ಟರೆ ತನ್ನ ಸಂಸದೀಯ ಕ್ಷೇತ್ರಕ್ಕೂ ಏನನ್ನೂ ಮಾಡದೆ ಇರುವ ಹೆಗ್ಗಳಿಗೆ ಈತನಿಗೆ ತಗಲಿಕೊಂಡಿದೆ. ಶರಣ ಕ್ಯಾತಿಯ ಬಸವರಾಜ ಪಾಟೀಲ ಹುಮ್ನಾಬಾದ ಕೂಡ ಈ ಮಾತಿಗೆ ಕಿಂಚಿತ್ತೂ ಹೊರತಲ್ಲ. (ಇನ್ನೂ ಇದೆ, ನಾಳೆ ಬರತ್ತೆ- ಸಂ)












Click it and Unblock the Notifications