‘ತುಮ್ಸಾ ನಹಿ ದೇಖಾ’ : ಓ.ಪಿ.ನಯ್ಯರ್ ಸಂಗೀತ ರಸಸಂಜೆ
ಹಿಂದಿ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ, ಮಾಧುರ್ಯದ ಮಾಂತ್ರಿಕ ಓ.ಪಿ.ನಯ್ಯರ್ ಸವಿನೆನಪಿಗಾಗಿ ಮಾರ್ಚ್ 10ರಂದು ‘ತುಮ್ಸಾ ನಹಿ ದೇಖಾ’ ಎಂಬ ಗೀತಗಾಯನ ಸಂಜೆ ಏರ್ಪಡಿಸಲಾಗಿದೆ.
ಬೆಂಗಳೂರು : ಮಧುರಾತಿಮಧುರ ಗೀತೆಗಳನ್ನು ಸಂಯೋಜಿಸಿದ ನಯ್ಯರ್‌ರ ಅಮರ ಗೀತೆಗಳನ್ನು ಕೇಳಲು ದಿನಾಂಕ ಗುರುತು ಹಾಕಿಕೊಳ್ಳಿ.
ಹಿಂದಿ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ, ಮಾಧುರ್ಯದ ಮಾಂತ್ರಿಕ ಓ.ಪಿ.ನಯ್ಯರ್ ಸವಿನೆನಪಿಗಾಗಿ ಮಾರ್ಚ್ 10ರಂದು ‘ತುಮ್ಸಾ ನಹಿ ದೇಖಾ’ ಎಂಬ ಗೀತಗಾಯನ ಸಂಜೆ ಏರ್ಪಡಿಸಲಾಗಿದೆ.
ಖ್ಯಾತ ಗಾಯಕಿ ಇಂದು ವಿಶ್ವನಾಥ್ ಅವರ ‘ಇಂದು ಪ್ರೊಡಕ್ಷನ್ಸ್ ’ ವತಿಯಿಂದ ನಡೆಯಲಿರುವ ಈ ಕಾರ್ಯಕ್ರಮದಲ್ಲಿ, ನಯ್ಯರ್ ಅವರ ರಾಗಸಂಯೋಜನೆಯಲ್ಲಿ ಮೂಡಿಬಂದ ಗೀತೆಗಳನ್ನು ಅಲ್ಲಿ ಆಲಿಸಬಹುದು.
ಕಾರ್ಯಕ್ರಮ ನಡೆಯುವ ಸ್ಥಳ : ಎಡಿಎ ರಂಗಮಂದಿರ, ಜೆ.ಸಿ.ರಸ್ತೆ, ಬೆಂಗಳೂರು.
ಸಮಯ : ಸಂಜೆ 6.30
ನಯ್ಯರ್ ಹಾಡಿಬಂದ ದಾರಿ : ಓಪಿ ಎಂದೇ ಜನಪ್ರಿಯವಾಗಿದ್ದ ಓ.ಪಿ.ನಯ್ಯರ್ ಅವರ ಪೂರ್ಣ ಹೆಸರು ಓಂಕಾರ್ ಪ್ರಸಾದ್ ನಯ್ಯರ್. ಜನವರಿ 16, 1926ರಂದು ಅವಿಭಜಿತ ಭಾರತದ ಲಾಹೋರ್‌ನಲ್ಲಿ ಜನನ. 1949ರಲ್ಲಿ ‘ಕನೀಝ್’ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡುವ ಮೂಲಕ ರಂಗಪ್ರವೇಶ.
ಈ ಮಧ್ಯೆ ಆಸ್‌ಮಾನ್ ಚಿತ್ರಕ್ಕೂ ಸಂಗೀತ ನೀಡಿದ್ದರು. ಆದರೆ 1954ರಲ್ಲಿ ತೆರೆಕಂಡ ಗುರುದತ್ ಅವರ ‘ಆರ್‌ಪಾರ್’ ಚಿತ್ರ ಇವರಿಗೆ ಮೊಟ್ಟಮೊದಲ ಸಲ ಯಶಸ್ಸು ತಂದುಕೊಟ್ಟಿತು. ಈ ಯಶಸ್ಸು ಗುರುದತ್ ಹಾಗೂ ನಯ್ಯರ್ ಯಶಸ್ವೀ ಜೋಡಿಗೆ ನಾಂದಿ ಹಾಡಿತು. ಈ ಜೋಡಿಯಲ್ಲಿ ಮೂಡಿಬಂದ ‘ಮಿಸ್ಟರ್ ಆ್ಯಂಡ್ ಮಿಸಸ್ ’55’, ‘ಸಿಐಡಿ’, ‘ತುಮ್ಸಾ ನಹಿ ದೇಖಾ’ ಮೊದಲಾದ ಚಿತ್ರಗಳು ಯಶಸ್ಸಿನ ಮಹಾಮಾರ್ಗದಲ್ಲೇ ನಡೆದವು.
ಯಶಸ್ವೀ ಸಂಗೀತ ನಿರ್ದೇಶಕ ನಯ್ಯರ್ ಯುವಪ್ರತಿಭೆಗಳಿಗೆ ಅವಕಾಶ ನೀಡುವ ಉದಾರಿಯಾಗಿದ್ದರು. ಬಹುತೇಕ ಗಾಯಕ-ಗಾಯಕಿಯರು ಅವರ ಚಿತ್ರಗಳಲ್ಲಿ ಹಾಡಿದ್ದಾರಾದರೂ ಗಾನಕೋಗಿಲೆ ಲತಾ ಮಂಗೇಷ್ಕರ್ ಮಾತ್ರ ಹಾಡಿಲ್ಲ. ಗೀತಾದತ್, ಆಶಾ ಭೋಂಸ್ಲೆ, ಮೊಹಮ್ಮದ್ ರಫಿ ಮೊದಲಾದವರ ವೃತ್ತಿ ಜೀವನದ ಯಶಸ್ಸಿನಲ್ಲಿ ನಯ್ಯರ್ ಪಾತ್ರ ಗಮನಾರ್ಹವಾದುದು.
ಸಾಹಿತ್ಯದ ಆಯ್ಕೆ ಬಗ್ಗೆ ಅತ್ಯಂತ ಕಾಳಜಿ ವಹಿಸುತ್ತಿದ್ದ ಅವರು ನಿಸಾರ್ ಅಖ್ತರ್, ಕಮರ್ ಜಲಾಲಾಬಾದಿ, ಎಸ್.ಎಚ್.ಬಿಹಾರಿ, ಮಜ್‌ರೂಹ್ ಸುಲ್ತಾನ್‌ಪುರಿ, ಸಾಹಿರ್ ಲೂಧಿಯಾನ್ವಿ ಮೊದಲಾದವರ ಸಾಹಿತ್ಯವನ್ನು ವ್ಯಾಪಕವಾಗಿ ಬಳಸಿಕೊಂಡಿದ್ದಾರೆ.
ತಮ್ಮ ವೃತ್ತಿ ಜೀವನದ ಉತ್ತುಂಗದಲ್ಲಿ ಅವರು ಭಾರೀ ಪ್ರಮಾಣದ ಸಂಭಾವನೆ ಪಡೆದದ್ದೂ ಒಂದು ದಾಖಲೆಯೇ. 50ದಶಕದ ಆರಂಭದಲ್ಲೇ ಅವರ ಸಂಭಾವನೆ 1,00,000 ರೂಪಾಯಿ ಇತ್ತು ಎಂದರೆ ಅವರ ಬೇಡಿಕೆ-ಜನಪ್ರಿಯತೆ ಎಷ್ಟಿತ್ತೆಂದು ಊಹಿಸಬಹುದು. ಸಂಗೀತರಸಿಕರಿಗೆ ಚಲನಚಿತ್ರಗಳ ಮೂಲಕ ಅಪೂರ್ವ ಸಂಗೀತವನ್ನು ನೀಡಿದ ನಯ್ಯರ್ ಜನವರಿ 28, 2007ರಂದು ಇಹಲೋಕಕ್ಕೆ ವಿದಾಯ ಹೇಳಿದರು.












Click it and Unblock the Notifications