ಸೊಗಡು- ಮುಗ್ಧತೆಯ ಅನಂತ ಕೇಲಿ

* ವಿಶಾಖ ಎನ್‌.

ಮೂವತ್ತೆರಡು ವರ್ಷಗಳ ಹಿಂದಿನ ಮಾತು. ಕಾರ್ಪೊರೇಟ್‌ ಗಾಳಿ ಆಗಿನ್ನೂ ನಮ್ಮ ನಾಡಲ್ಲಿ ಎದ್ದಿರಲಿಲ್ಲ. ಹಾರ್ಮೋನಿಯಂ ನುಡಿಸಿದರೆ ಸಂತೋಷ ಬಿಟ್ಟು ಬೇರೇನೂ ಗಿಟ್ಟದ ಕಾಲವದು. ಆದರೂ ದಿಗ್ಗಜ ಕವಿಗಳ ಅರ್ಥಗರ್ಭಿತ ಕವನಗಳಿಗೆ ಜೀವ ತುಂಬುವ ಕೆಲಸವನ್ನು ಈ ಹಾರ್ಮೋನಿಯಂ ವಾದಕರು ಮಾಡುತ್ತಿದ್ದರು. ಧನ್ಯರಾಗುತ್ತಿದ್ದರು. ಕರ್ನಾಟಕ- ಹಿಂದೂಸ್ತಾನಿ ಎರಡೂ ಪ್ರಕಾರಗಳು ಇಲ್ಲಿ ಅಣ್ಣ- ತಮ್ಮ. ಭಾವ ಮುಖ್ಯವಾದಾಗ ಪ್ರಕಾರ ಪ್ರಧಾನವಾಗದು. ಸಂಗೀತದ ಉಲಿ ಕೇಳುಗರ ಮನದಲ್ಲಿ ಅಚ್ಚೊತ್ತುತ್ತಿತ್ತು. ಭಾವಗೀತೆಗೆ ಹೊಸ ವೇಗ ಸಿಕ್ಕದ್ದೇ ಆಗ.

ಗೋದಾಮಿನ ಗೋಣಿ ಚೀಲ ಸೇರಿದ್ದ ಇಂಥಾ ಅಪೂರ್ವ ಸಂಯೋಜನೆಗಳನ್ನು ಲಹರಿ ಸಂಸ್ಥೆ ಹೆಕ್ಕಿ ತಂದು, ಮಾರುಕಟ್ಟೆಗೆ ತಂದಿದೆ. ಒಟ್ಟು 7 ಕೆಸೆಟ್ಟುಗಳು ಹಾಗೂ 5 ಸಿಡಿಗಳು ನಿಮಗಾಗಿ ಕಾಯುತ್ತಿವೆ.

ಗೀಳನ್ನು ಕಿಬ್ಬಲು ಹತ್ತಲು ಬಿಡದೆ ಹಠ ಮೆರೆಯುತ್ತಿದ್ದ ಸಂಗೀತ ಸಾಧಕರ ಕಾಲವದು. ಬಿಎಂಶ್ರೀ, ಕೆಎಸ್‌ನ, ಜಿಪಿಆರ್‌, ಬೇಂದ್ರೆ, ಕೈಲಾಸಂ, ಕುವೆಂಪು, ಡಿವಿಜಿ, ಜಿಎಸ್‌ಎಸ್‌, ಎಸ್‌ವಿಪಿ, ಅಡಿಗ ಅವರಿಂದ ಹಿಡಿದು ಭೂಸನೂರು ಮಠ, ಕೆ.ಎಸ್‌.ನಿಸಾರ್‌ ಅಹಮದ್‌, ಕಂಬಾರ, ಎನ್‌.ಎಸ್‌.ಲಕ್ಷ್ಮೀನಾರಾಯಣ ಭಟ್ಟ ಮೊದಲಾದವರ ಸಾಹಿತ್ಯಕ್ಕೆ ಸಂಗೀತದ ಮೆರುಗು. ಸುಗಮ ಸಂಗೀತವನ್ನ ಮನಮನಕ್ಕೆ ಮುಟ್ಟಿಸಲು ಕೈ ಎತ್ತಿದ ಮೊದಲಿಗರಾದ ಪಿ.ಕಾಳಿಂಗ ರಾವ್‌, ಮೈಸೂರು ಅನಂತಸ್ವಾಮಿ, ಸಿ.ಅಶ್ವತ್ಥ್‌ ಅವರ ರಾಗ ಸಂಯೋಜನೆಯಲ್ಲಿನ ಅಸಲಿ ಮಜ ಈ ಕೆಸೆಟ್ಟುಗಳಲ್ಲಿ.

ಕಂಜಿರ, ಪಿಟೀಲು, ಕೊಳಲು, ಹಾರ್ಮೋನಿಯಂ, ಡೋಲಕ್‌, ತಬಲಾ, ಮೃದಂಗ ಇಂಥಾ ಲೈಟ್‌ ವಾದ್ಯಗಳು ಹಿನ್ನೆಲೆಯಾಗುತ್ತವೆ. ಆದರೆ ನಿಮ್ಮ ಚಿತ್ತಾಪಹರಣ ಮಾಡುವುದು ಅನಂತಸ್ವಾಮಿ, ಕಾಳಿಂಗರಾವ್‌, ರತ್ನಮಾಲ ಪ್ರಕಾಶ್‌, ಜಯಶ್ರೀ, ಬಿ.ಕೆ.ಸುಮಿತ್ರಾ, ಪುಷ್ಪಲತಾ ಮೊದಲಾದವರ ಸುಶ್ರಾವ್ಯ ಕಂಠ. ಅಲ್ಲಲ್ಲಿ ಮೀಟುವ ಏಕತಂತಿ ನಾದ ಬೇಂದ್ರೆ ಅವರ ನಾಕುತಂತಿಯ ಶೃತಿಗೆ ಜೀವ ತುಂಬುತ್ತದೆ.

ಬಾಗಿಲೊಳು ಕೈಮುಗಿದು, ಎದೆತುಂಬಿ ಹಾಡಿದೆನು, ಹೇಳ್ಕಾಳಾಕೊಂದೂರು, ಕರುಣಾಳು ಬಾ ಬೆಳಕೆ, ಕುರಿಗಳು ಸಾರ್‌, ತರವಲ್ಲ ತಗಿ ನಿನ್ನ ತಂಬೂರಿ, ಯಾವ ಮೋಹನ ಮುರಳಿ ಒಂದೊಂದೂ ಅನೇಕ ಅನರ್ಘ್ಯ ರತ್ನಗಳನ್ನು ಹುದುಗಿಸಿಟ್ಟುಕೊಂಡಿವೆ. ಆಶ್ಚರ್ಯವೆಂದರೆ ಕೆಲವು ಹಾಡುಗಳನ್ನು ರಚಿಸಿದವರಾರು, ಹಾಡಿದವರಾರು, ಸಂಗೀತ ಸಂಯೋಜನೆ ಯಾರದು ಎಂಬುದೇ ತಿಳಿದಿಲ್ಲ. ಅಂದರೆ ಈ ಹಾಡುಗಳು ಎಷ್ಟು ಹಳೆಯವು ಎಂಬುದನ್ನು ನೀವು ಮನಗಾಣಬಹುದು. ಈ ಗೀತೆಗಳೆಲ್ಲಾ 1978- 79ರಲ್ಲಿ ಆಕಾಶವಾಣಿಯಲ್ಲಿ ಎಂಎಸ್‌ಐಎಲ್‌ ಗೀತೆಗಳು ಕಾರ್ಯಕ್ರಮದಲ್ಲಿ ಬಿತ್ತರಗೊಂಡಿವೆ.

ಏಳೂ ಮುತ್ತುಗಳ ಒಳಹೊಕ್ಕೆ...

ಪುರಂದರದಾಸರ ‘ಆನೆ ಬಂದಿತಮ್ಮ’, ಕೆಎಸ್‌ನ ರಚನೆಯ ‘ಅತ್ತಿತ್ತ ನೋಡದಿರು’ ಹಾಡುಗಳಲ್ಲಿ ಬಿ.ಕೆ.ಸುಮಿತ್ರಾ ತಮ್ಮ ಎಳೆ ಕಂಠದ ಮೂಲಕ ಜೀವ ಮೂಡಿಸಿದ್ದಾರೆ. ಈ ಕಂಠ ಅವರದೇ ಎಂದು ಗುರ್ತಿಸುವುದು ಕಷ್ಟ. ಕೆಲವು ಗೀತೆಗಳಲ್ಲಿ ರತ್ನಮಾಲ ಪ್ರಕಾಶ್‌ ಕಂಠ ಗುರ್ತಿಸುವುದೂ ಸುಲಭವಲ್ಲ. ಮೈಸೂರು ಮಲ್ಲಿಗೆಯ ‘ರಾಯರು ಬಂದರು ಮಾವನ ಮನೆಗೆ’ ಹಳೆಯ ಟ್ಯೂನಿನ ಹಾಡು ಅನಂತ ಸ್ವಾಮಿ ದನಿಯಲ್ಲಿ ಹೊಸತರಂತೆ ಕೇಳುತ್ತದೆ. ರತ್ನನ ಪದಗಳು ಹಾಗೂ ಜಾನಪದ ಗೀತೆಗಳಿಗೆ ಕಾಳಿಂಗರಾಯರ ಸ್ಪಷ್ಟ ರಾಗ ಅರ್ಥ ಕೊಟ್ಟರೆ, ಅವರ ದನಿ ಸೊಗಡ ಸೂಸುತ್ತದೆ.

ಫ್ರೆಷ್‌ನೆಸ್‌ : ಒಂದು ಫ್ರೆಷ್‌ ದನಿ ಕುವೆಂಪು ವಿರಚಿತ ‘ಮುಚ್ಚು ಮರೆ ಇಲ್ಲದೆಯೆ ಬಿಚ್ಚಿಡುವೆನೂ ಗುರುವೆ’ ಹಾಡನ್ನು ಮನ ಮುಟ್ಟಿಸುತ್ತದೆ. ಅದು ಪುಷ್ಪಲತಾರದ್ದು. ಅಡಿಗರ ‘ಇಂದು ಕೆಂದಾವರೆಯ ದಳ ದಳಿಸಿ’ ಸಾಲುಗಳನ್ನು ಹೊಸ ಅಲೆಯನ್ನಾಗಿಸಿದ್ದಾರೆ ಎಂ.ಕೆ.ಜಯಶ್ರೀ. ಇವೆಲ್ಲಕ್ಕೂ ಟ್ಯೂನ್‌ ಹಾಕಿರುವವರು ಅನಂತಸ್ವಾಮಿ.

ಮುಖಪುಟ / ಸಾಹಿತ್ಯ ಸೊಗಡು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+