ಹರಿದಿದೆ ನವರಾತ್ರಿಗೆ ಭಕ್ತಿಗೀತೆಗಳ ಸುಧೆ...
ನಕಲಿ ಕ್ಯಾಸೆಟ್ ಹಾವಳಿ, ಅನಾರೋಗ್ಯಕರ ಪೈಪೋಟಿ, ಟ್ಯಾಕ್ಸ್ ಇತ್ಯಾದಿಯಿಂದ ನಲುಗಿರುವ ಕನ್ನಡ ಕ್ಯಾಸೆಟ್ ಪ್ರಪಂಚವನ್ನು ಆ ದೇವರೇ ಕಾಪಾಡಬೇಕು ಎಂಬ ಮಾತಿದೆ. ವಾಸ್ತವವಾಗಿ ಕ್ಯಾಸೆಟ್ ಉದ್ಯಮವನ್ನು ಈ ಹೊತ್ತು ಕಾಪಾಡುತ್ತಿರುವುದೂ ದೇವರೆ! ಅರ್ಥಾತ್ ಭಕ್ತಿಗೀತೆಗಳ ಕ್ಯಾಸೆಟ್.
ಅಕ್ಟೋಬರ್ 17ರಿಂದ ನವರಾತ್ರಿ ಆರಂಭ. ಕನ್ನಡಿಗರ ನಾಡಹಬ್ಬವಾದ ದಸರೆಯ ಸಂದರ್ಭದಲ್ಲಿ ತಾಯಿ ಭುವನೇಶ್ವರಿ, ಚಾಮುಂಡೇಶ್ವರಿ, ಆದಿಶಕ್ತಿ, ಸರಸ್ವತಿಯನ್ನು ಪೂಜಿಸುವುದು ಸಂಪ್ರದಾಯ. ಹೀಗಾಗೇ ನವರಾತ್ರಿಗೆ ಭಕ್ತಿಗೀತೆಗಳ ಕ್ಯಾಸೆಟ್‌ಗಳ ಸುಧೆಯೇ ಹರಿದಿದೆ. ತಾಯಿ ಚಾಮುಂಡಾಂಬಿಕೆ, ಆದಿಶಕ್ತಿ, ಕೊಲ್ಲೂರು ಮೂಕಾಂಬಿಕೆ, ವಿನಾಯಕ, ಮಾರಮ್ಮ, ದಾನಮ್ಮ, ಆದಿಶಕ್ತಿಯ ಮಹಿಮೆ, ಶ್ರೀಆದಿಶಕ್ತಿ ವೈಭವ, ಅಯಗಿರಿ ನಂದಿನಿ, ಭಾಗ್ಯಾದ ಲಕ್ಷ್ಮೀ ಬಾರಮ್ಮ ಇತ್ಯಾದಿ ಕ್ಯಾಸೆಟ್‌ಗಳು ಮಾರುಕಟ್ಟೆಗೆ ಬಂದಿವೆ.
ಕನ್ನಡ ನಾಡನ್ನು ಪೊರೆಯುತಿಹ ಚಾಮುಂಡಿ, ನವರಾತ್ರಿಯ ದುರ್ಗೆ ಕುರಿತ ಕ್ಯಾಸೆಟ್‌ಗಳನ್ನು ಹೊರತರುವಲ್ಲಿ ಯಾವ ಕ್ಯಾಸೆಟ್ ತಯಾರಿಕಾ ಕಂಪನಿಗಳೂ ಹಿಂದೆ ಬಿದ್ದಿಲ್ಲ. ಈ ಪೈಕಿ ಟಿ ಸೀರೀಸ್, ಝೇಂಕಾರ ತೀವ್ರ ಪೈಪೋಟಿ ನಡೆಸಿವೆ.
ಭಾಗ್ಯದ ಲಕ್ಷ್ಮೀ ಬಾರಮ್ಮ ಮತ್ತು ಅಯಗಿರಿ ನಂದಿನಿ : ಟಿ ಸೀರೀಸ್ ಹೊಸತಂದಿರುವ ಈ ಕ್ಯಾಸೆಟ್ ಆದಿ ಶಂಕರಾಚಾರ್ಯ ವಿರಚಿತ ಅಯಗಿರಿ ನಂದಿನಿ... ಸ್ತೋತ್ರದೊಂದಿಗೆ ಆರಂಭವಾಗುತ್ತದೆ. ಈ ಸ್ತೋತ್ರವನ್ನು ಕಸ್ತೂರಿ ಶಂಕರ್ ಮತ್ತು ಶೀಲಾ ಹಾಡಿದ್ದಾರೆ.
ಪುರಂದರ ದಾಸರ ಭಾಗ್ಯದ ಲಕ್ಷ್ಮೀ ಬಾರಮ್ಮ ಕೃತಿಯೂ ಈ ಕ್ಯಾಸೆಟ್‌ನಲ್ಲಿದೆ. ಬಿ.ಕೆ. ಸುಮಿತ್ರ, ಕಸ್ತೂರಿ ಶಂಕರ್, ಶೀಲಾ ಅವರ ಧ್ವನಿಗೆ ಬಿ.ವಿ. ಶ್ರೀನಿವಾಸ್ ರಾಗ ಸಂಯೋಜನೆ ಮಾಡಿದ್ದಾರೆ. ಕ್ಯಾಸೆಟ್ ಬೆಲೆ 30 ರು.
ಚೆಲ್ಲೋಣ ಮಲ್ಲಿಗೆಯ ಚೆಂದಗಾತಿ ಚಾಮುಂಡಿಗೆ : ಶ್ರೀಚಾಮುಂಡೇಶ್ವರಿ ಕುರಿತ 22 ಭಕ್ತಿಗೀತೇಗಳ ಈ ಸಂಪುಟಕ್ಕೆ ಎ.ಎಸ್. ಮಾರುತಿ ಸಂಗೀತ ನೀಡಿದ್ದಾರೆ. ಚಂದ್ರು ಗೀತೆ ರಚಿಸಿದ್ದಾರೆ. ಪುತ್ತೂರು ನರಸಿಂಹನಾಯಕ್, ಬಿ.ಆರ್. ಛಾಯಾ, ಕೆ.ಎಸ್. ಸುರೇಖ, ವಿಜಯ್ ಅರಸ್ ಸುಶ್ರಾವ್ಯವಾಗಿ ಹಾಡಿದ್ದಾರೆ. ಇದಲ್ಲದೆ ಟಿ ಸೀರೀಸ್ ದೇವಿ ಕೃತಿಗಳು, ದೇವಿ ಗೀತೋತ್ಸವ, ಆದಿಶಕ್ತಿ ವೈಭವ ಎಂಬ ಧ್ವನಿಸುರುಳಿಗಳನ್ನೂ ಬಿಡುಗಡೆ ಮಾಡಿದೆ.
ಝೇಂಕಾರ : ಝೇಂಕಾರ ಕ್ಯಾಸೆಟ್ ಸಂಸ್ಥೆ ಸಹ ನವರಾತ್ರಿಗೆ ಭಕ್ತಿಗೀತೆಗಳ ಕ್ಯಾಸೆಟ್ ಬಿಡುಗಡೆ ಮಾಡಿದೆ. ಕುಲದೇವಿ ಗೌರ ಸಮುದ್ರದ ಶ್ರೀ ಮಾರಮ್ಮ ಹಾಗೂ ದಾನಮ್ಮ ಬಾರೆ ಮನೆಗೆ ಹಾಗೂ ದಾಸತರಂಗಿಣಿ ಎಂಬ ಧ್ವನಿಸುರುಳಿಗಳನ್ನು ಅದು ಹೊರತಂದಿದೆ.
ದಾಸ ತರಂಗಿಣಿ : ಹೆಸರೇ ಹೇಳುವಂತೆ ಈ ಕ್ಯಾಸೆಟ್‌ನಲ್ಲಿ 8 ದಾಸರ ಪದಗಳಿವೆ. ಡಿ. ಶ್ರೀನಿವಾಸ್ ರಾಗ ಸಂಯೋಜಿಸಿರುವ ಹಾಡುಗಳನ್ನು ರಮೇಶ್‌ಚಂದ್ರ ಹಾಡಿದ್ದಾರೆ. ಸಾಕು ಸಾಕು ಮನುಜ, ಆನೆ ಬಂದಿತಮ್ಮ, ಎಲ್ಲಿ ಮಾಯವಾದನೆ ಮೊದಲಾದ ಗೀತೆಗಳುಳ್ಳ ಕ್ಯಾಸೆಟ್ ಬೆಲೆ 25 ರುಪಾಯಿ.
ಕುಲದೇವಿ ಗೌರ ಸಮುದ್ರದ ಶ್ರೀ ಮಾರಮ್ಮ : 8 ಭಕ್ತಿ ಗೀತೆಗಳನ್ನು ಒಳಗೊಂಡ ಈ ಕ್ಯಾಸೆಟ್‌ನ ಗೀತೆಗಳನ್ನು ಪುರುಷೋತ್ತಮ್ ರಚಿಸಿದ್ದಾರೆ. ಸಾಮ್ರಾಟ್ ಸಂಗೀತ ನೀಡಿದ್ದಾರೆ. ಮಾರಮ್ಮ ತೋರೆ ಕರುಣೆ, ನೂರು ದೇವರು ಏಕೆ ಬೇಕು ಇತ್ಯಾದಿ ಗೀತೆಗಳು ಕ್ಯಾಸೆಟ್‌ನಲ್ಲಿವೆ. ವಿಜಯ್ ಅರಸ್, ರೂಪಾ ಶ್ರೀನಿವಾಸ್, ನಂದಕುಮಾರ್ ಗೀತೆಗಳನ್ನು ಹಾಡಿದ್ದಾರೆ. ಕ್ಯಾಸೆಟ್ ಬೆಲೆ 25 ರುಪಾಯಿ.
ದಾನಮ್ಮ ಬಾರೇ ಮನೆಗೆ: ಗುಡ್ಡಾಪುರದ ದಾನಮ್ಮ ದೇವಿ ಕುರಿತ ಭಕ್ತಿಗೀತೆಗಳ ಈ ಸಂಪುಟದಲ್ಲಿ ವೀರೇಶ್ ಬೆಳಗಾಲಪೇಟೆ ರಚಿಸಿರುವ 8 ಗೀತೆಗಳಿವೆ. ಬದ್ರಿಪ್ರಸಾದ್, ಅನುಪಮಾ, ವಿಜಯ್ ಅರಸ್. ನಂದನ್ ಮತ್ತು ಸುನೀತಾ ಹಾಡಿರುವ ಗೀತೆಗಳಿಗೆ ಸಾಮ್ರಾಟ್ ಸಂಗೀತ ಸಂಯೋಜನೆ ಇದೆ. ಕ್ಯಾಸೆಟ್ ಬೆಲೆ 25 ರುಪಾಯಿ.
ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications