
ಎನ್ನಾರೈ ಕನ್ನಡಿಗ ಹೊರ ತಂದಿರುವ e- ಪುಸ್ತಕ 'ಪ್ರೇರಣೆ'
ಎನ್ನಾರೈ ಕನ್ನಡಿಗ, ಅಮೆರಿಕದ ನಿವಾಸಿ ರವಿ ಗೋಪಾಲರಾವ್ ಅವರು ಪ್ರೇರಣೆ: 1001 ಸ್ಫೂರ್ತಿದಾಯಕ ಉಲ್ಲೇಖಗಳು ಎಂಬ ಇ-ಪುಸ್ತಕವನ್ನು ಗೂಗಲ್ ಪ್ಲೇನಲ್ಲಿ ಹೊರ ತಂದಿದ್ದಾರೆ. ಕನ್ನಡ ಸಾಹಿತ್ಯ ಪ್ರೇಮಿ ಮತ್ತು ಸಣ್ಣ ಪುಟ್ಟ ಕತೆ ಕವಿತೆ, ಡಿಜಿಟಲ್ ಪುಸ್ತಕ ಪ್ರಕಟಣೆಯನ್ನು ಹವ್ಯಾಸವಾಗಿ ಮಾಡಿಕೊಂಡಿರುವ ರವಿ ಅವರು ಇತ್ತೀಚಿಗೆ ಬರೆದ ಪುಸ್ತಕದ ಬಗ್ಗೆ ಪರಿಚಯ ಇಲ್ಲಿದೆ
ಪ್ರೇರಣೆ: 1001 ಸ್ಫೂರ್ತಿದಾಯಕ ಉಲ್ಲೇಖಗಳು. ಗೂಗಲ್ ಪ್ಲೆ ನಲ್ಲಿ ಬಿಡುಗಡೆಯಾದ ಇ-ಪುಸ್ತಕ. -ರವಿ ಗೋಪಾಲರಾವ್ ಮತ್ತು ಮಂಜುಳಾ ಕುರುಕುಂಧಿ.
1001 ಆಯ್ದ ಉಲ್ಲೇಖಗಳನ್ನು ಒಟ್ಟುಗೂಡಿಸಿ, ಪರಿಷ್ಕರಿಸಿ, ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದಿಸಿ ಮತ್ತು ಡಿಜಿಟಲ್ ಮಾಧ್ಯಮದಲ್ಲಿ ಈ ಪುಸ್ತಕವನ್ನು ಬಿಡುಗಡೆ ಮಾಡುತ್ತಿರುವುದು ಬಹುಶಃ ಪ್ರಥಮ ಪ್ರಯತ್ನ. ಯಶಸ್ಸು, ಬುದ್ಧಿವಾದ, ಜೀವನ, ಅನುಭವ, ಜ್ಞಾನ, ವಿವೇಕ, ಪ್ರಕೃತಿ, ಗಾದೆ ಎಂಬ ಹತ್ತಾರು ವಿಷಯಗಳ ಬಗ್ಗೆ ಮೂಡಿಬಂದ ಪರಿಪೂರ್ಣ ಹಿತನುಡಿಗಳ ಕೈಪಿಡಿ ಇದು. ಈ ಪುಸ್ತಕದ ಕೊಂಡಿ ಇಲ್ಲಿದೆ.
ಈ ಉಚಿತ ಪುಸ್ತಕದಿಂದ ಕನ್ನಡಿಗರು ಮತ್ತು ಒನ್ಇಂಡಿಯಾ ಓದುಗರು ಪ್ರಯೋಜನ ಪಡೆಯಬಹುದು ಅಂತ ನನ್ನ ದೃಢ ನಂಬಿಕೆ ಎಂದು ರವಿ ಗೋಪಾಲರಾವ್ ತಿಳಿಸಿದ್ದಾರೆ.
ಡಾ. ರವಿ ಗೋಪಾಲರಾವ್ ಪರಿಚಯ:
ಮೂಲತಃ ಬೆಂಗಳೂರಿನವರಾದ ರವಿ ಗೋಪಾಲರಾವ್ ಅಮೆರಿಕಾಗೆ ಬಂದದದ್ದು ವಿದ್ಯಾರ್ಥಿಯಾಗಿ. ಯೂನಿವರ್ಸಿಟಿ ಆಫ್ ಪೆನ್ಸಿಲ್ವೇನಿಯದಿಂದ ಡಾಕ್ಟೊರೇಟ್ ಪದವಿ ಪಡೆದು, ಕಳೆದ ಎರಡೂವರೆ ದಶಕಗಳಿಂದ ಸಿಲಿಕಾನ್ ಕಣಿವೆಯಲ್ಲಿ ಶೈಕ್ಷಣಿಕ, ಕನ್ಸಲ್ಟಿಂಗ್ ಮತ್ತು ಐ. ಟಿ. ಉದ್ಯಮದಲ್ಲಿ ತೊಡಗಿದ್ದಾರೆ. ಕನ್ನಡಾಭಿಮಾನಿ ರವಿಯವರು ಕೆಲವು ಸಣ್ಣ ಕತೆ ಹಾಗು ಕವನಗಳನ್ನು ಪ್ರಕಟಿಸಿದ್ದಲ್ಲದೆ ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ 2004 ಮತ್ತು 2016ರ 'ಸ್ವರ್ಣಸೇತು' ಸಂಚಿಕೆಯ ಪ್ರಧಾನ ಸಂಪಾದಕರಾಗಿ ಅಳಿಲುಸೇವೆ ಸಲ್ಲಿಸಿದ್ದಾರೆ. ನೆಬರಾಸ್ಕ ಕನ್ನಡ ಕೂಟದ ಸ್ಥಾಪಕರಾಗಿ ಮತ್ತು ಅಕ್ಕ 2014 ಸಾಹಿತ್ಯ ವೇದಿಕೆ ಬಿಡುಗಡೆ ಮಾಡಿದ 'ಕಥಾಸಂಭ್ರಮ'ದ ಸಹ ಸಂಪಾದಕರಾಗಿ ಕೆಲಸ ನಿರ್ವಹಿಸಿದ್ದಾರೆ. ಕನ್ನಡ ಸಾಹಿತ್ಯ ರಂಗ (ಯು.ಎಸ್.ಏ) ಪುಸ್ತಕಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ತಮ್ಮ ಬಿಡುವಿನ ವೇಳೆಯಲ್ಲಿ ರವಿಯವರು ಕನ್ನಡ ಪುಸ್ತಕಗಳನ್ನು ಓದುವುದು ಹಾಗು ಸಂಗೀತ ಕೇಳುವ ಹವ್ಯಾಸದೊಂದಿಗೆ ಛಾಯಾಚಿತ್ರ ಮತ್ತು ತಮ್ಮದೇ ಬ್ಲಾಗ್ 'ಗಂಧಾಕ್ಷತೆ'ಗೆ ಬರೆಯುವುದರಲ್ಲಿ ಉತ್ಸುಕರಾಗಿರುತ್ತಾರೆ. ಪತ್ನಿ ಪ್ರತಿಭಾ ಮತ್ತು ಇಬ್ಬರು ಪುತ್ರಿಯರೊಂದಿಗೆ ಕ್ಯಾಲಿಫೋರ್ನಿಯದಲ್ಲಿ ನೆಲಸಿದ್ದಾರೆ. ಅವರನ್ನು ಸಂಪರ್ಕಿಸಲು ಈಮೈಲ್: ravi.gopalarao@gmail.com
ಓದುಗರ ಪ್ರತಿಕ್ರಿಯೆ:
ಪ್ರೇರಣೆ - ೧೦೦೧ ಸ್ಫೂರ್ತಿದಾಯಕ ಉಲ್ಲೇಖಗಳು ನಿಜವಾಗಿಯೂ ಸ್ಫೂರ್ತಿದಾಯಕವಾಗಿದೆ. ಕಡೆಯಲ್ಲಿ ಕೊಟ್ಟಿರುವ ವಿಷಯಸೂಚಿಯೂ ಓದುಗರಿಗೆ ಅನುಕೂಲ ಮಾಡಿಕೊಡುತ್ತದೆ. ವಿಸ್ಡಂ ಎಂಬ ಮಕ್ಕಳ ಮಾಸ ಪತ್ರಿಕೆಯಲ್ಲಿ ಒಂದೊಂದು ಪುಟದ ಅಡಿಯಲ್ಲಿ ಕೊಡುತ್ತಿದ್ದ ಇಂಗ್ಲಿಷ್ ಕೋಟ್ ಗಳನ್ನು ಕನ್ನಡಕ್ಕೆ ನಾನು ಬರೆದಿಟ್ಟುಕೊಳ್ಳುತ್ತಿದ್ದುದು ನೆನಪಿಗೆ ಬಂತು. ರವಿ ಗೋಪಾಲರಾವ್ ಮತ್ತು ಮಂಜುಳಾ ... ಎಂದು ಬಿ.ಎಸ್ ಜಗದೀಶ್ ಚಂದ್ರ ಅವರು ಪ್ರತಿಕ್ರಿಯಿಸಿದ್ದಾರೆ.
***
Interesting collection of so many words of wisdom. ನಿಜಕ್ಕೂ ಸ್ಪೂರ್ತಿದಾಯಕ. ಆಗಾಗ ತೆರೆದು ಓದುವುದಕ್ಕೂ ಚೆನ್ನಾಗಿದೆ.-ವಿದ್ಯಾ ಹರೀಶ್
***
ವಾವ್.. ಮನಸ್ಸಿಗೆ ಮುದ ಕೊಡುವ ಹುರಿದುಂಬಿಸುವ ನುಡಿಗಟ್ಟುಗಳು.. ಚಂದದ ಪ್ರಯತ್ನ- ಶಶಿಕಲಾ ಎಸ್ ಶಂಕರ್
***
ಉಪಯುಕ್ತ ಸಂಗ್ರಹ. ಧನ್ಯವಾದಗಳು ಎಂದು ಒನ್ಇಂಡಿಯಾ ಕನ್ನಡದ ಒಂದು ಕಾಲದ ಅಂಕಣಗಾರ್ತಿ ಅನಿವಾಸಿ ಕನ್ನಡತಿ ತ್ರಿವೇಣಿ ರಾವ್ ಅವರು ಶುಭ ಹಾರೈಸಿದ್ದಾರೆ.