• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನ.7ರಂದು ಹಂಸಲೇಖರಿಂದ ಒಂದು ಮಹಾಮಳೆಯ ಕತೆ ಕೃತಿ ಲೋಕಾರ್ಪಣೆ

|
Google Oneindia Kannada News

ಬೆಂಗಳೂರು, ನವೆಂಬರ್ 03: ಪಶ್ಚಿಮ ಘಟ್ಟದ ತಪ್ಪಲಿನ ಮಲೆಮನೆ, ಮಧುಗುಂಡಿ, ಹಲಗಡಕ, ಚನ್ನಡ್ಲು, ದುರ್ಗದಹಳ್ಳಿ, ಆಲೇಖಾನ್ ಹೊರಟ್ಟಿ ಸೇರಿದಂತೆ ಹಲವು ಊರು ಕೇರಿಗಳು ಮಹಾಮಳೆಗೆ ಸಿಲುಕಿ ತತ್ತರಿಸಿದ್ದು ಹೇಗೆ? ಮಲೆನಾಡು ಹೇಗೆ ಬದಲಾಯಿತು? ಪಶ್ಚಿಮ ಘಟ್ಟದ ತಪ್ಪಲಿನ ಹಳ್ಳಿಗಳಲ್ಲಿ ಏನೆಲ್ಲಾ ಹೊಸ ಸಂಚಲನಗಳು ಹುಟ್ಟಿಕೊಂಡವು? ಎಂಬುದರ ಚಿತ್ರಣ ನೀಡುವ ಕೃತಿ ಒಂದು ಮಹಾಮಳೆಯ ಕತೆ ಲೋಕಾರ್ಪಣೆಗೆ ಸಿದ್ಧವಾಗಿದೆ. ನಾದ ಬ್ರಹ್ಮ ಹಂಸಲೇಖ ಅವರು ನವೆಂಬರ್ 7ರಂದು ನಾಗರಾಜ ಕೂವೆ ಅವರು ಬರೆದಿರುವ ಈ ಪುಸ್ತಕವನ್ನು ಬಿಡುಗಡೆಗೊಳಿಸಲಿದ್ದಾರೆ.

2019 ರ ಆಗಸ್ಟ್ ತಿಂಗಳಲ್ಲಿ ಒಂದು ವಾರಗಳ ಕಾಲ ಪಶ್ಚಿಮ ಘಟ್ಟಗಳಲ್ಲಿ ವಿಪರೀತ ಮಳೆ ಸುರಿಯಿತು. ಆಗಸ್ಟ್ 9 ರಂದು ಅಲ್ಲಿನ ಹಲವೆಡೆ ಅವಘಡಗಳು ಜರುಗಿಬಿಟ್ಟವು. ಎಲ್ಲೆಲ್ಲೂ ಪ್ರಕೃತಿ ತನ್ನ ಏಕಪಾತ್ರಾಭಿನಯದಲ್ಲಿ ಮಾನವ ನಿರ್ಮಿತ ಸಕಲವೂ ಕ್ಷುಲ್ಲಕ ಎನ್ನುವಂತೆ ನಿರ್ನಾಮ ಮಾಡುತ್ತಾ, ಎಲ್ಲವನ್ನೂ ಕಬಳಿಸುತ್ತಾ ಮನ್ನಡೆಯಿತು. ಜಲಪ್ರಳಯ ಎಲ್ಲೆಲ್ಲೂ ನಡುಕ ಹುಟ್ಟಿಸಿತು. ಏಕಾಏಕಿ ಪ್ರಾಕೃತಿಕ ವಿಕೋಪದಿಂದ ಜನ ಬೆಚ್ಚಿಬಿದ್ದರು. ಹಳ್ಳಿ ಹಳ್ಳಿಗಳ ಬದುಕಿನ ಸಂಕೋಲೆಯೇ ಕಳಚಿತು. ಗ್ರಾಮ ಗ್ರಾಮಗಳ ವ್ಯವಸ್ಥೆಯೇ ಕುಸಿಯಿತು. ಕೂಡಿಟ್ಟ ಕನಸುಗಳೆಲ್ಲಾ ನೆರೆಯಲ್ಲಿ ಚಿಂದಿಯಾದವು. ಮೂಡಿಗೆರೆ ತಾಲೂಕಿನ ಮಲೆಮನೆ, ಮಧುಗುಂಡಿ, ಹಲಗಡಕ, ಚನ್ನಡ್ಲು, ದುರ್ಗದಹಳ್ಳಿ, ಆಲೇಖಾನ್ ಹೊರಟ್ಟಿ ಮೊದಲಾದ ಪಶ್ಚಿಮ ಘಟ್ಟದ ತಪ್ಪಲಿನ ಹಲವು ಊರುಗಳ ಸಾವಿರಾರು ಜನ ಮನೆ-ಮಠ, ತೋಟ-ಗದ್ದೆ, ಬದುಕುಗಳನ್ನೇ ಕಳೆದುಕೊಂಡು ಸಂತ್ರಸ್ಥರಾದರು. "'ಒಂದು 'ಮಹಾಮಳೆ'ಯ ಕಥೆ" ಪುಸ್ತಕ ಈ ಎಲ್ಲಾ ಅತಿವೃಷ್ಟಿ ಸಂತ್ರಸ್ಥರ ಬಗ್ಗೆ ಮಾತನಾಡುತ್ತದೆ. 2019 ರ ಆಗಸ್ಟ್ ನಿಂದ 2020 ರ ಆಗಸ್ಟ್ ನ ಆಶ್ಲೇಷಾ ಮಳೆಯವರೆಗಿನ ಕಥೆಯೊಂದು ಇಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತದೆ.

ಜಾಗತೀಕರಣದ ನಂತರ ಮಲೆನಾಡೆಂಬ ಮಲೆನಾಡು ಹೇಗೆ ಬದಲಾಯಿತು? ಪಶ್ಚಿಮ ಘಟ್ಟದ ತಪ್ಪಲಿನ ಹಳ್ಳಿಗಳಲ್ಲಿ ಏನೆಲ್ಲಾ ಹೊಸ ಸಂಚಲನಗಳು ಹುಟ್ಟಿಕೊಂಡವು? ಅಭಿವೃದ್ಧಿಯ ಬರದಲ್ಲಿ ಪರಿಸರ, ಕೃಷಿ, ಜನಜೀವನ, ಆಹಾರ ಪದ್ಧತಿ, ಆಚರಣೆ, ಸಂಸ್ಕೃತಿ ಇತ್ಯಾದಿ ಇತ್ಯಾದಿಗಳಲ್ಲಿ ಏನೆಲ್ಲಾ ಪಲ್ಲಟಗಳಾಯಿತು? ರಾಜಕಾರಣದ ಪರಿಭಾಷೆ ಹೇಗೆಲ್ಲಾ ಬದಲಾಯಿತು? ಇಲ್ಲಿನ ಯುವ ಸಮುದಾಯದ ಇಕ್ಕಟ್ಟುಗಳೇನು? ಕಳೆದ ಎರಡ್ಮೂರು ವರ್ಷಗಳಿಂದ ಅದೇಕೆ ಘಟ್ಟದುದ್ದಕ್ಕೂ ಭೂಕುಸಿತಗಳು ಸಂಭವಿಸುತ್ತಿವೆ? ಮಹಾಮಳೆಯಿಂದ ಎಲ್ಲವನ್ನೂ ಕಳೆದುಕೊಂಡವರ ಪುನರ್ವಸತಿಯ ಕಥೆಗಳು ಇಂದಿಗೆ ಏನಾಗಿದೆ? ಪ್ರಕೃತಿಯ ಮುನಿಸಿನಿಂದ ಹಳ್ಳಿ ಹಳ್ಳಿಗಳ ನಡುವಿನ ಬದುಕಿನ ಸಂಕೋಲೆಗಳೇ ತುಂಡರಿದಾಗ ಸರ್ಕಾರಗಳು ಹೇಗೆ ಪ್ರತಿಸ್ಪಂದಿಸಿದವು? ರಾಜ್ಯಾದ್ಯಂತ ಸಹೃದಯರು ದಾನವೆಂದು ಕಳುಹಿಸಿದ್ದ ಅಗತ್ಯ ವಸ್ತುಗಳು ಸಂತ್ರಸ್ಥರನ್ನು ತಲುಪಿದವೇ? ಅರಣ್ಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಲೋಕೋಪಯೋಗಿ ಇಲಾಖೆ ಮೊದಲಾದ ಸರ್ಕಾರದ ಹತ್ತು ಹಲವು ಇಲಾಖೆಗಳು ತಳಮಟ್ಟದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತವೆ? ಕರೆಂಟು ನಿರ್ವಹಿಸುವ ಮೆಸ್ಕಾಂ ಅದೇಕೆ ಗಬ್ಬೆದ್ದು ಹೋಗಿದೆ? ಕಾಫಿ ಕಣಿವೆಗಳಿಗೆ ಹೊರ ರಾಜ್ಯದ ಕಾರ್ಮಿಕರೇ ಏಕೆ ಬೇಕಾಗಿದ್ದಾರೆ? ಕಾಡು, ನದಿ, ಸಸ್ಯ ಸಂಪತ್ತು, ಪ್ರಾಣಿ ವೈವಿಧ್ಯ, ಕಾಡಂಚಿನ ನಿರುಪದ್ರವಿ ಬದುಕಿನ ಒಡಲ ಸಂಕಟಗಳೇನು? ಮಲೆನಾಡಿನ ಭೂವಿವಾದದ ಕಗ್ಗಂಟುಗಳು, ಸ್ಥಳೀಯ ರಾಜಕಾರಣ, ಜಿಲ್ಲಾಡಳಿತ, ಪ್ಲಾಂಟರ್ಗಳು, ಕೂಲಿ ಕಾರ್ಮಿಕರು, ಅತೀ ಸಣ್ಣ ಹಿಡುವಳಿದಾರರು ಸೇರಿದಂತೆ ಇಡೀ ಪಶ್ಚಿಮ ಘಟ್ಟದ ತಪ್ಪಲಿನ ಸಣ್ಣದೊಂದು ಝಲಕ್ ಇಲ್ಲಿದೆ. ಇಲ್ಲಿ ಕಾದಂಬರಿಯ ಸ್ವರೂಪದಲ್ಲಿ ಎಲ್ಲವನ್ನೂ ಹೆಣೆಯಲಾಗಿದೆ.

ದಿನದಿಂದ ದಿನಕ್ಕೆ ಹಸಿರುಮನೆ ಅನಿಲಗಳು ವಾತಾವರಣಕ್ಕೆ ಬಿಡುಗಡೆಯಾಗುವುದು ಜಾಸ್ತಿಯಾಗುತ್ತಾ ಜಾಗತಿಕ ತಾಪಮಾನ ಏರಿಕೆಯು ಮತ್ತಷ್ಟು ಸಂಕಷ್ಟಗಳನ್ನು ತಂದೊಡ್ಡುತ್ತಿರುವ ಈ ದಿನಮಾನಗಳಲ್ಲಿ, ಇದರ ಮೊದಲ ಫಲಾನುಭವಿಯಾಗಿರುವ ಮಳೆಕಾಡುಗಳಲ್ಲಿ ಓಡಾಡಿ ಮಾಡಿದ ಬರಿಗಾಲ ಸಂಶೋಧನೆ (Barefoot Research)ಯ ವಾಸ್ತವ ಚಿತ್ರಣವೊಂದು ಈ ಪುಸ್ತಕದಲ್ಲಿದೆ.

Hamsalekha to release Ondu Mahamaleya kathe book by Nagaraj Koove

ಒಂದು ಹೆದ್ದಾರಿಯ ನಿರ್ಮಾಣದ ಹೆಸರಿನಲ್ಲಿ ಸಾವಿರ ಸಾವಿರ ಮರಗಳನ್ನು ಕತ್ತರಿಸಲಾಗುತ್ತದೆ. ಆಗ ಕಡಿಯುವ ಒಂದು ಮರದ ಬದಲಿಗೆ ಅಂತಹ ಹತ್ತು ಗಿಡ ನೆಡುತ್ತೇವೆ ಎಂದು ಕಥೆ ಹೇಳುತ್ತಾರೆ. ಕಾಡೆಂದರೆ ಬರೀ ಮರಗಿಡಗಳಷ್ಟೇ ಅಲ್ಲ, ಅದನ್ನಾಶ್ರಯಿಸಿರುವ ರಾಶಿ ರಾಶಿ ಪ್ರಾಣಿ-ಪಕ್ಷಿಗಳು, ಹುಳು-ಹುಪ್ಪಟೆಗಳು, ಸೂಕ್ಷ್ಮ ಜೀವಿಗಳು; ಮರ ಹೊರಸೂಸುವ ಗಾಳಿ, ಘನೀಕರಿಸಿದ ಮೋಡ, ಅದರಿಂದ ಸುರಿವ ಮಳೆ, ಮಳೆಯಿಂದ ಹರಿವ ನೀರು ಎನ್ನುವ ಸೂಕ್ಷ್ಮತೆಯ ಅರಿವು ಎಲ್ಲಿದೆ?

ಇರುವ ಹಸಿರನ್ನು ಕಡಿದು ಅದಕ್ಕೆ ಪರ್ಯಾಯವಾಗಿ ಗಿಡ ನೆಡುತ್ತೇವೆ ಎಂದು ಕಥೆ ಹೇಳುವ ಅಸ್ಥಿರ ಅಭಿವೃದ್ಧಿಯ ಮನುಷ್ಯರು, ಹಳೆಯ ಕಟ್ಟಡವೊಂದನ್ನು ಕೆಡವಿ ಒಂದೆರಡು ವರ್ಷಗಳಲ್ಲಿ ಅಂತಹ ನೂರು ಹೊಸ ಕಟ್ಟಡಗಳನ್ನು ನಿರ್ಮಿಸಬಹುದೇ ಹೊರತು ಕಾಡೆಂಬ ಸಂಕೀರ್ಣ ವ್ಯವಸ್ಥೆಯನ್ನಲ್ಲ.

ಲೇಖಕರ ಬಗ್ಗೆ:
ನಾಗರಾಜ ಕೂವೆ, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೂವೆಯವರು. ಕುವೆಂಪು ವಿಶ್ವವಿದ್ಯಾಲಯದಿಂದ ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರ 'ಪ್ರಾರ್ಥನೆ' ಕವನಕ್ಕೆ ಕ್ರೈಸ್ಟ್ ಯೂನಿವರ್ಸಿಟಿ ಕನ್ನಡ ಸಂಘದ ಬಹುಮಾನ ಲಭಿಸಿದೆ. ಪರಿಸರ ಇವರ ಆಸಕ್ತಿಯ ವಿಷಯ. ಪಶ್ಚಿಮ ಘಟ್ಟ ಮತ್ತದರ ತಪ್ಪಲಿನ ಜನರ ಬದುಕು, ಜೀವವೈವಿಧ್ಯದ ಅಧ್ಯಯನ, ಪುಸ್ತಕಗಳ ಓದು, ಬರವಣಿಗೆ, ತಿರುಗಾಟ ಇವರ ಇತರ ಹವ್ಯಾಸಗಳು.

ನಿತ್ಯೋತ್ಸವ ಕನ್ನಡಿಗರ ಬಳಗ 12ನೇ ಬಾರಿಗೆ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ಹಂಸಲೇಖ ಅವರು ಈ ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ದಿನಾಂಕ, ದಿನ: 7/11/2021, ಭಾನುವಾರ.
ಸಮಯ: ಬೆಳಗ್ಗೆ 10 ರಿಂದ 1.
ಸ್ಥಳ: ಸುಚಿತ್ರಾ ಫಿಲಂ ಸೊಸೈಟಿ, ಬಿ.ವಿ ಕಾರಂತ ರಸ್ತೆ, ಪೋಸ್ಟ್ ಆಫೀಸ್ ಹತ್ತಿರ, ಬನಶಂಕರಿ 2ನೇ ಹಂತ, ಬೆಂಗಳೂರು.

Concave Media and Publisher ಪ್ರಕಟಿಸಿರುವ ಈ ಪುಸ್ತಕವನ್ನು ಖರೀದಿಸಲು 86604 04034 ಗೆ ಕರೆ ಮಾಡಬಹುದು. ಅಥವಾ ಕನ್ನಡಲೋಕ ವನ್ನು ಸಂಪರ್ಕಿಸಬಹುದು.

English summary
Hamsalekha to release Ondu Mahamaleya kathe book by Nagaraj Koove. Book release event is at Suchitra Film Society on November11, Here are the event details and about the author.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X