ಎಲ್ಲರ ಬಳಿ ಇರಬೇಕಾದ ಅಂಗಡಿಯಲ್ಲಿ ಕನ್ನಡ ನುಡಿ

Shop in Kannada, manual for shopping
ಯಾರು ಓದುತ್ತಾರೋ ಬಿಡುತ್ತಾರೋ.. ಕನ್ನಡನಾಡಿನಲ್ಲಿ ತಿಂಗಳೊಂದಕ್ಕೆ ಸಾವಿರಾರು ಕತೆ ಕವನ ಕಾದಂಬರಿ ಹೊಸೆದಿರುವ ಪುಸ್ತಕಗಳು ಪ್ರಕಟವಾಗುತ್ತವೆ. ಆದರೆ, ನಿತ್ಯಜೀವನಕ್ಕೆ ಹತ್ತಿರವಾಗುವ, ಕನ್ನಡಿಗರ ದಿನಬಳಕೆಗೆ ಪ್ರಯೋಜನವಾಗುವ ಕೈಪಿಡಿಗಳು ಬೆಳಕುಕಾಣುವುದು ತುಂಬ ಅಪರೂಪ. ಇಂಥ ಅಭಾವ ಸ್ವರ್ಗದಲ್ಲಿ 'ಅಂಗಡಿಯಲ್ಲಿ ಕನ್ನಡ ನುಡಿ'ಎಂಬ ಶೀರ್ಷಿಕೆಯ ಕೈಪಿಡಿ ಪ್ರಕಟವಾಗಿದೆ. ಗ್ರಾಹಕ ಸ್ನೇಹಿ, ಕನ್ನಡ ಪ್ರೇಮಿ ಪುಸ್ತಕ ಹೊರತಂದಿರುವ ಬನವಾಸಿ ಬಳಗಕ್ಕೆ ದಟ್ಸ್ ಕನ್ನಡದ ಹೃತ್ಪೂರ್ವಕ ಶುಭಾಶಯಗಳು. ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಂತಾದ ಕನ್ನಡದ ಉದ್ದಾರಕ್ಕೋಸ್ಕರ ಇರುವ ಸಂಸ್ಥೆಗಳು ಮಾಡಬೇಕಾದ ಕೆಲಸವನ್ನು ಕನ್ನಡ ಪ್ರಜ್ಞೆಯ ಪುಟ್ಟ ಗುಂಪು ಮಾಡಿದೆ. ಪುಸ್ತಕ ಕೊಳ್ಳಿ, ಪುಸ್ತಕ ಬಳಸಿ - ಸಂಪಾದಕ.

2007ರಲ್ಲಿ IMRB ಜೊತೆ ಸೇರಿ ರೇಡಿಯೊ ಮಿರ್ಚಿ ನಡೆಸಿದ ಬೆಂಗಳೂರಿನ ಮಾಲ್ ಸಮೀಕ್ಷೆಯೊಂದರ ಅನ್ವಯ ಬೆಂಗಳೂರಿನ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಖರ್ಚು ಮಾಡುವ ಸಾಮರ್ಥ್ಯ ಇರುವುದು ಕನ್ನಡಿಗರಿಗೆ. ಹೀಗಿದ್ದು, ಬೆಂಗಳೂರಿನ ಸಾಕಷ್ಟು ವ್ಯಾಪಾರ ವಹಿವಾಟಿನ ಸ್ಥಳಗಳಲ್ಲಿ ಕನ್ನಡಕ್ಕೆ ಅರ್ಹವಾಗಿ ಸಿಗಬೇಕಾದ ಸ್ಥಾನ ಸಿಗದೇ ಇರುವುದು ಕಂಡು ಬರುತ್ತದೆ.

ಇದಕ್ಕೆ ಮುಖ್ಯ ಕಾರಣವೇ ಕನ್ನಡಿಗ ಗ್ರಾಹಕನಲ್ಲಿ ಸೇವೆ ಪಡೆಯುವಾಗ ತನ್ನ ಭಾಷೆಯನ್ನು ಬಳಸುವ ಬಗ್ಗೆ ಹೆಚ್ಚಿನ ಅರಿವು, ಜಾಗೃತಿ ಇಲ್ಲದೇ ಇರುವುದು. ಗ್ರಾಹಕರಾಗಿ ನಮ್ಮ ಮಾರುಕಟ್ಟೆಯ ಬಗ್ಗೆ, ಅಲ್ಲಿ ಕನ್ನಡದಲ್ಲಿ ವ್ಯವಹರಿಸುವ ಅಗತ್ಯದ ಬಗ್ಗೆ, ಅದರಿಂದಾಗುವ ಲಾಭದ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವೇ "ಅಂಗಡಿಯಲ್ಲಿ ಕನ್ನಡ ನುಡಿ" ಅನ್ನುವ ಕೈಪಿಡಿ. ಇದು ಬನವಾಸಿ ಬಳಗದ ಪ್ರಕಟಣೆ. ಈ ಹೊತ್ತಗೆಯ ಮುನ್ನುಡಿ ಮತ್ತು ಬೆನ್ನುಡಿಯ ಕೆಲ ಸಾಲುಗಳು ಹೊತ್ತಗೆ ಸ್ವರೂಪವನ್ನು, ಹೊತ್ತಗೆ ಹೊತ್ತು ತಂದಿರುವ ಸಂದೇಶವನ್ನು ಸಾರುತ್ತದೆ.

ಮುನ್ನುಡಿಯಿಂದ : ಈ ಹೊತ್ತಗೆಯು ಮಾರುಕಟ್ಟೆಯಲ್ಲಿ ನಮ್ಮ ಹಕ್ಕಿನ ಬಗ್ಗೆ ಒಂದಷ್ಟು ಬೆಳಕು ಚೆಲ್ಲುವ ಪ್ರಯತ್ನ. ಈ ದಿನ ನಾಡಿನ ಮಾರುಕಟ್ಟೆಯಲ್ಲಿ ನಮ್ಮ ದೈನಂದಿನ ಬದುಕಿನಲ್ಲಿ ಕನ್ನಡಕ್ಕೆ ಸಿಗಬೇಕಾದ ಸ್ಥಾನ ಸಿಗುತ್ತಿಲ್ಲ ಎನ್ನುವುದು ಒಂದೆಡೆ ಎದ್ದು ತೋರುತ್ತಿದ್ದರೆ, ಹಲವೆಡೆ ನಮ್ಮ ಜನರಿಗೇ 'ಇಂತಿಂತಹ ಕಡೆಗಳಲ್ಲಿ ಕನ್ನಡ ಬಳಸಬಾರದು, ಬಳಸಲಾಗಲ್ಲ" ಎನ್ನುವ ಮನಸ್ಥಿತಿ ಇದೆಯೇನೋ ಎನ್ನುವಂತೆ ತೋರುತ್ತದೆ. ಬ್ಯಾಂಕುಗಳಲ್ಲಿ ಕನ್ನಡದಲ್ಲಿ ಬರೆಯಬಾರದು, ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಬಳಸಬಾರದು, ಮಾಲ್‌ಗಳಿಗೆ ಹೋದಾಗ, ವಿಮಾನನಿಲ್ದಾಣಕ್ಕೆ ಹೋದಾಗೆಲ್ಲಾ ನಾವುಗಳು ಇಂಗ್ಲಿಷಲ್ಲೇ ಮಾತಾಡಬೇಕು... ಇತ್ಯಾದಿ ಭ್ರಮೆಗಳು ನಮ್ಮಲ್ಲಿರುವಂತೆ ತೋರುತ್ತದೆ. ಒಟ್ಟಾರೆ ನಮ್ಮ ಜನರು ಗ್ರಾಹಕ ಸೇವೆಯಲ್ಲಿ ನಮ್ಮ ನುಡಿಗೆ ಇರುವ ಮಹತ್ತರವಾದ ಪಾತ್ರವನ್ನೇ ಮರೆತಿರುವಂತೆ ತೋರುತ್ತದೆ. ಈ ಮರೆವನ್ನು ಹೋಗಲಾಡಿಸಬೇಕೆಂಬ ಉದ್ದೇಶದಿಂದ ನಾವು ಈ ಹೊತ್ತಗೆಯನ್ನು ಹೊರತರುತ್ತಿದ್ದೇವೆ.

ಬೆನ್ನುಡಿಯಲ್ಲಿ : ಗ್ರಾಹಕ ಹಕ್ಕುಗಳ ಬಗ್ಗೆ ನಾನಾ ರೀತಿಯ ಜಾಗೃತಿ ಅಭಿಯಾನಗಳು ಎಲ್ಲೆಡೆ ನಡೆಯುತ್ತಾ ಇರುತ್ತವೆ. ತೂಕ, ಅಳತೆ, ಪ್ರಮಾಣ, ಬೆಲೆ, ಗುಣಮಟ್ಟ, ಸೇವೆ, ಇವೆಲ್ಲವುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಮಾರ್ಚ್ 15ನ್ನು ವಿಶ್ವ ಗ್ರಾಹಕ ದಿನಾಚರಣೆಯಾಗೂ ಆಚರಿಸಲಾಗುತ್ತಿದೆ. ಈ ಗ್ರಾಹಕ ಹಕ್ಕುಗಳನ್ನು ಆಳವಾಗಿ ಪರಿಶೀಲಿಸಿದಾಗ ಇಲ್ಲಿ ಭಾಷೆಯ ಪಾತ್ರವನ್ನೇ ಮರೆತಿರುವುದು ಕಾಣುತ್ತದೆ. ಅಂತಹ ಭಾಷಾ ಆಯಾಮ ಇಲ್ಲದ ಕಾರಣದಿಂದಲೇ ಗ್ರಾಹಕರಿಗೆ ನಾನಾ ರೀತಿಯಲ್ಲಿ ತೊಡಕುಗಳಾಗುತ್ತಿವೆ. ಈ ಬಗ್ಗೆ ಅರಿವು ಮೂಡಿಸುವ, ಈ ದಿಕ್ಕಿನಲ್ಲಿ ನಿಮ್ಮನ್ನು ಯೋಚಿಸಲು ಪ್ರೇರೇಪಿಸುವ ಉದ್ದೇಶದಿಂದ ಈ ಕೊಳ್ಳುಗರ ಕೈಪಿಡಿಯನ್ನು ರೂಪಿಸಿ ನಿಮ್ಮ ಕೈಗಿಟ್ಟಿದ್ದೇವೆ.

ಬನವಾಸಿ ಬಳಗದ ಗುರಿ, ಕನ್ನಡನಾಡಿನ ಮಾರುಕಟ್ಟೆಯಲ್ಲಿ ಬರಿಯ ಕನ್ನಡವನ್ನಷ್ಟೇ ಬಲ್ಲ ಒಬ್ಬ ಸಾಮಾನ್ಯ ಕನ್ನಡಿಗನೂ ತನ್ನೆಲ್ಲಾ ವ್ಯಾಪಾರ ವಹಿವಾಟುಗಳನ್ನು ಸಲೀಸಾಗಿ ಪೂರೈಸಿಕೊಳ್ಳುವಂತಾಗಬೇಕು ಎಂಬುದು. ತನ್ನದೇ ನಾಡಿನ ಯಾವುದೇ ಅಂಗಡಿ, ಮುಂಗಟ್ಟು, ಕಚೇರಿ, ಬ್ಯಾಂಕು, ಮನರಂಜನೆ, ವ್ಯಾಪಾರ, ಉದ್ದಿಮೆ, ಮಾರುಕಟ್ಟೆಗಳಲ್ಲಿ ಭಾಷೆಯ ಕಾರಣದಿಂದ ಯಾವ ತೊಡಕನ್ನೂ ಎದುರಿಸದಂತಹ ವ್ಯವಸ್ಥೆ ನಿರ್ಮಾಣವಾಗಬೇಕು. ಈ ಗುರಿ ಈಡೇರಬೇಕಾದರೆ ಈಗಿರುವ ಪರಿಸ್ಥಿತಿ ಬದಲಾಗಬೇಕು. ಆ ಬದಲಾವಣೆ ಜಾಗೃತರಾದ ಗ್ರಾಹಕರಿಂದ ಮಾತ್ರ ಸಾಧ್ಯ. ಅಂತಹ ಬದಲಾವಣೆಯೆಡೆಗೆ ಹೆಜ್ಜೆಗಳನ್ನಿಡಲು ದೀವಿಗೆಯಾಗಲಿ ಈ ಹೊತ್ತಗೆ ಎಂಬ ಆಶಯ ನಮ್ಮದು. ಓದಿರಿ, ಜಾರಿಗೆ ತನ್ನಿ, ಬದಲಾವಣೆಗೆ ಕಾರಣರಾಗಿರಿ.

ವ್ಯಂಗ್ಯಚಿತ್ರಗಳು ಮತ್ತು ಕಿರುಸಂದೇಶಗಳನ್ನು ಬಳಸಿ ಬರೆಯಲಾಗಿರುವ ಈ ಹೊತ್ತಗೆಯಲ್ಲಿ 5 X 7 ಇಂಚು ಅಳತೆಯಲ್ಲಿ 56 ಪುಟಗಳಿವೆ. ಓದಲು, ಗೆಳೆಯರಿಗೆ ಉಡುಗೊರೆಯಾಗಿ ಕೊಡಲು ಸೂಕ್ತ ಅನ್ನುವ ಹಾಗಿರುವ ಈ ಪುಸ್ತಕವನ್ನು ನೀವೂ ಪಡೆದುಕೊಳ್ಳಬೇಕೆಂದಿದ್ದಲ್ಲಿ [email protected]ಗೆ ಬರೆಯಿರಿ. ನಿಮಗೆ ಬೇಕಿರುವಷ್ಟು ಪ್ರತಿಗಳನ್ನು ಪಡೆದುಕೊಳ್ಳಿರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+