ಭಳಾರೆ ಕುಂ. ವೀರಭದ್ರಪ್ಪ ಭಳಾರೆ!

ಕುಂವೀ ಮೇಷ್ಟ್ರಾಗಿ ಕೆಲಸ ಮಾಡುತ್ತಿದ್ದುದು ತಿಳಿದ ವಿಷಯವಷ್ಟೇ. ಅವರೀಗ ತಮ್ಮ ಮೇಷ್ಟ್ರು ಕೆಲಸದಿಂದ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಇನ್ನೂ ಎರಡು ವರ್ಷಗಳ ಸೇವೆ ಬಾಕಿಯಿತ್ತು. ಕೈತುಂಬಾ ಸಂಬಳ ಪಡೆಯುವ ಹೊತ್ತಿನಲ್ಲಿ ಸ್ಕೂಲು ಕೆಲಸ ಸಾಕು ಅನ್ನಿಸಿ ನಿವೃತ್ತಿ ಪಡಕೊಂಡಿರುವ ಕುಂವೀ ಈಗ ಪೂರ್ಣ ಪ್ರಮಾಣದಲ್ಲಿ ಬರವಣಿಗೆಯಲ್ಲಿ ನಿರತರು. ಇದು ಖುಷಿಯ ಮೊದಲ ಸಂಗತಿ.
ಕೇಂದ್ರ ಸಾಹಿತ್ಯ ಅಕಾಡೆಮಿಯ 'ರೈಟರ್ಸ್ ರೆಸಿಡೆನ್ಸ್' ಪುರಸ್ಕಾರ ದೊರೆತಿರುವುದು ಕುಂವೀ ಖುಷಿಯ ಎರಡನೇ ಕಾರಣ. ಬರವಣಿಗೆಗೆ ಒತ್ತಾಸೆ ನೀಡುವ ಈ ಯೋಜನೆಯಡಿ ಕುಂವೀ ಆತ್ಮಚರಿತ್ರೆ ಬರೀತಾರಂತೆ!
ಕುಂವೀ ಸಂಭ್ರಮದ ಮತ್ತೊಂದು ಕಾರಣ ಪುಸ್ತಕ ಪ್ರಕಟಣೆಗೆ ಸಂಬಂಧಿಸಿದ್ದು. ಹತ್ತು ಪರ್‍ಸೆಂಟ್ ರಾಯಲ್ಟಿ ತಗೊಳ್ಳಿ ಎಂದು ಕಿರಿಕ್ಕು ಮಾಡುವ ಈ ಪ್ರಕಾಶಕರ ಸವಾಸವೇ ಸಾಕು ಎಂದು ನಿರ್ಧರಿಸಿರುವ ಅವರು, ತಾವೇ ಸ್ವತಃ ಪ್ರಕಾಶಕರಾಗುತ್ತಿದ್ದಾರೆ. 'ಭಳಾರೆ ಪ್ರಕಾಶನ' ಎನ್ನೋದು ಅದರ ಹೆಸರು. ಇನ್ನುಮುಂದೆ ಕುಂವೀ ಪುಸ್ತಕಗಳೆಲ್ಲ ಭಳಾರೆಯಿಂದಲೇ ಪ್ರಕಟಿತವಾಗಲಿವೆ.
ಕನ್ನಡ ಪುಸ್ತಕಗಳು ಐಶ್ವಯಾ ರೈಗಿಂತಲೂ ಚೆನ್ನಾಗಿವೆ ಎಂದು ಈಚೆಗಷ್ಟೇ ಕುಂವೀ ಉದ್ಘರಿಸಿದ್ದರು. ಭಳಾರೆ ಪ್ರಕಾಶನದಿಂದ ರೂಪುಗೊಳ್ಳುವ ರಸಿಕ ಕುಂವೀ ಅವರ ಪುಸ್ತಕಗಳು ಅದಿನ್ನೆಷ್ಟು ಸೊಗಸಾಗಿರುತ್ತವೆಯೋ?











Click it and Unblock the Notifications