• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಕನ್ನಡ ಕಾದಂಬರಿ ಲೋಕದಲ್ಲಿ'ಯ ಒಳನೋಟಗಳು

By * ಜಿ.ಎಸ್.ಆಮೂರ, ಧಾರವಾಡ
|

(ಮುನ್ನುಡಿಯ ಮುಂದುವರಿದ ಭಾಗ)

ಎ.ಕೆ. ರಾಮಾನುಜನ್‌ರ ಮತ್ತೊಬ್ಬನ ಆತ್ಮಚರಿತ್ರೆ ಅಪರೂಪದ ಕೃತಿಯಾದರೂ ವಿಮರ್ಶಕರ ಗಮನವನ್ನು ಸೆಳೆಯುವಲ್ಲಿ ಅದು ಅಷ್ಟೊಂದು ಯಶಸ್ವಿಯಾದಂತಿಲ್ಲ. ಟಿ. ಎನ್. ಕೃಷ್ಣರಾಜು ಅವರು ಈಗ ಅದಕ್ಕೆ ನ್ಯಾಯ ಒದಗಿಸಿದ್ದಾರೆ. ಕನ್ನಡ ಕಥನ ಸಾಹಿತ್ಯದಲ್ಲಿ ತೀರ ಹೊಸದಾಗಿದ್ದ ಈ ಕೃತಿ ಕತೆ, ಆತ್ಮಕತೆಗಳ ಅಂತರವನ್ನೇ ಅಳಿಸಿ ಹಾಕಿ ಹೊಸ ರೂಪವನ್ನು ಸೃಷ್ಟಿ ಮಾಡಿತು. ಎಲ್ಲರಿಗೂ ಇರೋ ಕತೆ ಅದೊಂದೇ ಕೆಲವರು ಅದನ್ನು ಕತೆ ಅಂತ ಬರೀತಾರೆ, ಕೆಲವರು ಆತ್ಮಕತೆ ಅಂತಾರೆ ಅಷ್ಟೇ' ಎನ್ನುವ ಕೆ.ಕೆ. ರಾರ ಮಾತಿನಲ್ಲಿ ಸತ್ಯವಿದೆಯಾದರೂ ಕಾದಂಬರಿ, ಆತ್ಮಕತೆಗಳನ್ನು ಬೇರೆ ಬೇರೆಯಾಗಿಯೇ ನೋಡುವುದು ಸಂಪ್ರದಾಯ. ಆದರೆ, ರಾಮಾನುಜನ್ ಇವೆರಡರ ನಡುವೆ ಕ್ರಿಯಾತ್ಮಕ ಸಂಬಂಧವನ್ನೇರ್ಪಡಿಸಿ ಹೊಸ ರೀತಿಯ ಅಭಿವ್ಯಕ್ತಿಯನ್ನು ಸಾಧಿಸಿದ್ದಾರೆ. ಇದು ಕೇವಲ ಸಾಹಿತ್ಯಕ ಪ್ರಶ್ನೆಯಷ್ಟೇ ಅಲ್ಲ, 'self' ಮತ್ತು 'other'ಗಳ ಸಂಬಂಧ ಜಟಿಲವಾದುದು. ಲಕನ್‌ನಂಥ ಮನೋವಿಜ್ಞಾನಿಗಳು ಅನ್ಯ'ದ ಮೂಲಕವೇ ಆತ್ಮ'ದ ಅರಿವು ಸಾಧ್ಯ ಎಂದು ಪ್ರತಿಪಾದಿಸಿದ್ದಾರೆ. ನಾನು ಎಂದರೆ ಯಾರು? ಮತ್ತೊಬ್ಬನಲ್ಲಿಯೂ, ನಾನಿದ್ದರೆ, ನನ್ನಲ್ಲಿಯೂ ಮತ್ತೊಬ್ಬನಿಲ್ಲವೇ?...' ಹೀಗೆ ಸ್ವಂತ ಮತ್ತು ಸ್ವಂತದ ಅವಳಿ ಜವಳಿಯಾದ ಮತ್ತೊಂದು ಐಡೆಂಟಿಟಿಗಳ ಘರ್ಷಣೆ, ದ್ವಂದ್ವ ಜಿಜ್ಞಾಸೆ ಕಾದಂಬರಿಯ ಜೀವಬಿಂದು' ಎಂದು ಕೃಷ್ಣರಾಜು ಸರಿಯಾಗಿಯೇ ಹೇಳಿದ್ದಾರೆ. ಈ ಸಮಸ್ಯೆ ರಾಮಾನುಜನ್‌ರಿಗೆ ಮಾತ್ರ ಸೀಮಿತವಾದುದಲ್ಲ. ಚಂದ್ರಶೇಖರರ ಕಂಬಾರರ ಸಿರಿಸಂಪಿಗೆಯಂಥ ನಾಟಕಗಳಲ್ಲಿಯೂ ಅದರ ಸೀಮಿತ ಆವಿಷ್ಕಾರವಿದೆ. ತಾತ್ವಿಕತೆ ರಾಮಾನುಜನ್‌ರ ಕೃತಿಯ ಜೀವಾಳವಾದರೂ ಅದ್ಭುತ ವಿವರಗಳ ಸೃಷ್ಟಿಯ ಮೂಲಕ ಅದು ಅನನ್ಯ ಸಾಹಿತ್ಯ ಗುಣವನ್ನು ಗಳಿಸಿಕೊಳ್ಳುತ್ತದೆ. ಈ ಸತ್ಯವನ್ನು ಕೃಷ್ಣರಾಜು ಅವರು ಸರಿಯಾಗಿಯೇ ಗುರುತಿಸಿದ್ದಾರೆ. ಕುಸುಮಾಕರ ದೇವರಗೆಣ್ಣೂರರ ಬಯಲು ಬಸಿರು ಕಾದಂಬರಿಯ ನಾಯಕ ಅಮೆರಿಕಾ ಮೂಲದವನಾದುದರಿಂದ ಹಾಗೂ ಅವನ ಅಮೆರಿಕನ್ ಅನುಭವವೇ ಅವನನ್ನು ನೆಮ್ಮದಿ ಹುಡುಕಿಕೊಂಡು ಭಾರತಕ್ಕೆ ಬರಲು ಪ್ರೇರೇಪಿಸಿದುದರಿಂದ ಈ ಕಾದಂಬರಿಯನ್ನು ಅಮೆರಿಕೆಯಲ್ಲಿ ವಾಸವಾಗಿರುವ ಕನ್ನಡ ಓದುಗರು ಹೇಗೆ ಓದಿದ್ದಾರೆ ಎನ್ನುವುದನ್ನು ತಿಳಿಯಲು ನನ್ನಲ್ಲಿ ಕುತೂಹಲವಿತ್ತು. ಆದುದರಿಂದ ಮೈ. ಶ್ರೀ. ನಟರಾಜರ ಲೇಖನವನ್ನು ನಾನು ಆಸಕ್ತಿಯಿಂದಲೇ ಓದಿದೆ. ಕಥಾನಾಯಕ ನಾರ್ಮನ್ ಅಮೆರಿಕನ್ ಆಗಿರುವುದರ ಔಚಿತ್ಯವೇನು' ಎಂಬ ಮೂಲಭೂತ ಪ್ರಶ್ನೆಯನ್ನೇ ನಟರಾಜ್ ಎತ್ತುತ್ತಾರೆ. ನಾರ್ಮನ್ ಬದಲು ನಾರಾಯಣ ಎಂಬುವವ ಭಾರತದಿಂದ ಅಮೆರಿಕೆಗೆ ಹೋಗಿ ನಾರ್ಮನ್ ಪಡೆದ ಅನುಭವಗಳನ್ನೇ ಪಡೆಯಲು ಸಾಧ್ಯವಿತ್ತು ಎಂದು ನಟರಾಜರಿಗೆ ಅನಿಸಿದೆ. ಇದೂ ಅಲ್ಲದೆ, ಅಮೆರಿಕದ ಸರಾಸರೀ ಸಂಸಾರಗಳ ಬಗ್ಗೆ ಮತ್ತು ಸರಾಸರೀ ಅಮೆರಿಕನ್‌ರ ಬಗೆಗಿನ ಕಲ್ಪನೆಗಳಲ್ಲಿ ಸರಳೀಕರಣವಿದೆ ಎಂದೂ ಅವರು ಹೇಳುತ್ತಾರೆ. ಈ ಕಾದಂಬರಿಯ ತಾತ್ವಿಕತೆ ಹಾಗೂ ದರ್ಶನ'ಗಳೂ ಸಹಜವಾಗಿ ಮೂಡಿ ಬಂದಿಲ್ಲ. ಅತಿಯಾಗಿವೆ ಎನ್ನುವ ಅಭಿಪ್ರಾಯವನ್ನೂ ಅವರು ಪ್ರಕಟಿಸಿದ್ದಾರೆ. ನಾರ್ಮನ್ ಊಹಾ ಪ್ರಪಂಚದ ಪ್ರಾತಿನಿಧಿಕ ಅಂತಾರಾಷ್ಟ್ರೀಯ ವ್ಯಕ್ತಿ ಯಾಗಿಯೇ ಓದುಗರ ಮನಸ್ಸಿನಲ್ಲಿ ಉಳಿಯುತ್ತಾನೆ' ಎಂಬ ನಿರ್ಣಯಕ್ಕೆ ಅವರು ಬಂದಿದ್ದಾರೆ. ಬಯಲು ಬಸಿರಿನ ಬಗ್ಗೆ ಕನ್ನಡ ವಿಮರ್ಶಕರ ಅನಿಸಿಕೆಗಳನ್ನು ಗಮನಿಸಿಯೇ ನಟರಾಜ್ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ ಎನ್ನುವುದು ಮಹತ್ವದ್ದಾಗಿದೆ. ಕನ್ನಡ ವಿಮರ್ಶೆ ಈ ಅಭಿಪ್ರಾಯಗಳನ್ನು ಗಂಭೀರವಾಗಿ ಪರಿಗಣಿಸುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

ಕತೆಗಾರರಾಗಿ ನೇಮಿಚಂದ್ರ ತುಂಬ ಒಳ್ಳೆಯ ಹೆಸರು ಗಳಿಸಿದ್ದಾರೆ. ಆದರೆ, ಅವರ ಕಾದಂಬರಿ ಯಾದ್ ವಶೇಮ್ ಅಷ್ಟೊಂದು ಪರಿಚಿತವಲ್ಲ. ಶಶಿಕಲಾ ಚಂದ್ರಶೇಖರ ಅವರ ಲೇಖನವನ್ನು ಓದುವತನಕ ನಾನೂ ಅದನ್ನು ಗಮನಿಸಿರಲಿಲ್ಲ. ಶಶಿಕಲಾ ಅವರೇ ಹೇಳುವಂತೆ ಈ ಕಾದಂಬರಿಯ ವಸ್ತು ಈಗಾಗಲೇ ಸಾಕಷ್ಟು ಪರಿಚಿತವಾಗಿದ್ದರೂ ಅದರ ಭಾರತೀಯ ಆಯಾಮ ಹೊಸತು. ಪರದೇಶಿ' ಹ್ಯಾನಾಳನ್ನು ಸ್ವದೇಶಿಯನ್ನಾಗಿಸಿ ಓದುಗರೊಟ್ಟಿಗೆ ಒಂದು ಆತ್ಮೀಯ ಬುನಾದಿಯನ್ನು ಸೃಷ್ಟಿಸಿರುವುದು ನೇಮಿಚಂದ್ರರ ಸಾಧನೆಯಾಗಿದೆ'. ಕೃತಿಯ ಸ್ವರೂಪದ ಬಗ್ಗೆ ಶಶಿಕಲಾ ಅವರಲ್ಲಿ ಸಂಶಯಗಳಿದ್ದರೂ ಈ ಕಾರಣಕ್ಕಾಗಿ ಅದನ್ನು ಮೆಚ್ಚಿಕೊಂಡಿದ್ದಾರೆ. ಇಂಥ ಒಂದು ಮಹತ್ವದ ಕೃತಿಯತ್ತ ನಮ್ಮ ಗಮನ ಸೆಳೆದ ಅವರಿಗೆ ಕೃತಜ್ಞತೆಗಳು ಸಲ್ಲಬೇಕು. ಈ ಸಂಗ್ರಹದಲ್ಲಿ ಶಶಿಕಲಾ ಅವರಲ್ಲದೇ, ತ್ರಿವೇಣಿ ಎಸ್.ರಾವ್, ಅಲಮೇಲು ಅಯ್ಯಂಗಾರ್, ಜ್ಯೋತಿ ಮಹಾದೇವ, ಪ್ರತಿಭಾ ಭಾಗವತ, ಮೀರಾ ಪಿ. ಆರ್, ಮಾಲಾ ರಾವ್, ವಿಮಲಾ ರಾಜಗೋಪಾಲ್, ಶಾಂತಲಾ ಭಂಡಿ, ನಳಿನಿ ಮೈಯರಂಥ ಹಲವಾರು ಮಹಿಳೆಯರ ಲೇಖನಗಳಿರುವುದು ಈ ಸಂಕಲನದ ಒಂದು ಗಮನಾರ್ಹ ವೈಶಿಷ್ಟ್ಯವಾಗಿದೆ. ಕನ್ನಡದ ಬೇರೆ ಯಾವ ಪ್ರಾತಿನಿಧಿಕ ವಿಮರ್ಶಾ ಸಂಕಲನದಲ್ಲಿಯೂ ಈ ಪ್ರಮಾಣದಲ್ಲಿ ಲೇಖಕಿಯರು ದೊರೆಯಲಾರರು.

ಭೈರಪ್ಪನವರ ಬಹುಚರ್ಚಿತ ಕೃತಿ ಮಂದ್ರವನ್ನು ಕುರಿತ ತಮ್ಮ ಲೇಖನದ ಪ್ರಾರಂಭದಲ್ಲಿ ಈ ಲೇಖನ ಮಂದ್ರದ ವಿಮರ್ಶೆಯಲ್ಲ, ಪ್ರಬಂಧ ಶೈಲಿಯಲ್ಲಿ ಬರೆಯುತ್ತಿದ್ದೇನೆ' ಎಂದು ರಂಗಾಚಾರ್ ಹೇಳಿದ್ದಾರಾದರೂ ಅವರು ಈ ಬಹುಚರ್ಚಿತ ಕಾದಂಬರಿಯ ಬಗ್ಗೆ ಸಮತೂಕದ ವಿಮರ್ಶೆಯನ್ನೇ ಕೊಟ್ಟಿದ್ದಾರೆ. ವಿಮರ್ಶೆ ಪ್ರಬಂಧ ಶೈಲಿಯಲ್ಲಿ ಇರಬಾರದು ಎಂದೇನೂ ಇಲ್ಲ. ಕೀರ್ತಿನಾಥ ಕುರ್ತಕೋಟಿಯವರು ತಮ್ಮ ವಿಮರ್ಶಾ ಲೇಖನಗಳ ರೂಪವನ್ನು ಪ್ರಬಂಧವೆಂದೇ ಗುರುತಿಸಿದುದನ್ನು ಇಲ್ಲಿ ನೆನಯಬಹುದು. ಕಲೆ ಹಾಗೂ ಧಾರ್ಮಿಕತೆಗಳ ಸಂಬಂಧದ ಬಗ್ಗೆ ರಂಗಾಚಾರ್ ಅವರಿಗೆ ತಮ್ಮದೇ ಆದ ವಿಚಾರಗಳಿವೆ: ನಮ್ಮ ದೇಶದಲ್ಲಿ ಕಲೆಗಳನ್ನು ಧಾರ್ಮಿಕತೆ ಹರಡುವ ಒಂದು ಉಪಕರಣ ಮಾಡಿಕೊಂಡುಬಿಟ್ಟಿರುವುದು ನಿಜವಾಗಿಯೂ ವಿಷಾದದ ಸಂಗತಿ ಇದರಿಂದ ಉತ್ತಮ ಮಟ್ಟದ ಕಲಾಸೃಷ್ಟಿಗೆ ಬೇಕಾದ ಸ್ವಾತಂತ್ರ್ಯ ಕುಂದಿ ಹೋಗಿದೆ'. ಆದರೆ, ಮಂದ್ರದಲ್ಲಿ ನಿಜವಾದ ಸಮಸ್ಯೆ ಇರುವುದು ಕಲಾವಿದನ ನೈತಿಕತೆಯ ಸಮಸ್ಯೆ, ಕಲೆಯ ಹೆಸರಿನಲ್ಲಿ ಮೋಹನಲಾಲನ ಅನೈತಿಕ ವ್ಯವಹಾರಗಳನ್ನು ಸಮರ್ಥಿಸಲಾಗುತ್ತದೆಯೊ? ಬಹುಶಃ ಈ ಪ್ರಶ್ನೆಗೆ ರಂಗಾಚಾರ್‌ರ ಉತ್ತರ ಅಹುದು' ಎಂದೇ ಇರುವಂತೆ ತೋರುತ್ತದೆ.

ಸ್ವತಃ ಒಳ್ಳೆಯ ಕಾದಂಬರಿಕಾರರಾದ ಗುರುಪ್ರಸಾದ ಕಾಗಿನೆಲೆಯವರು ಲಂಕೇಶರ ಕಾದಂಬರಿ ಅಕ್ಕದ ಬಗ್ಗೆ ಮಾರ್ಮಿಕವಾಗಿ ಬರೆದಿದ್ದಾರೆ. ಅವರು ಸಮರ್ಪಕವಾಗಿ ಗುರುತಿಸಿದಂತೆ ಇಂಥ ಕಾದಂಬರಿಗಳಲ್ಲಿ ಕಾದಂಬರಿಕಾರರ ದೃಷ್ಟಿಕೋನ ಹಾಗೂ ಅವನು ಆಯ್ದುಕೊಳ್ಳುವ ನಿರೂಪಣ ಶೈಲಿ ಮಹತ್ವದ್ದಾಗುತ್ತದೆ. ಕಥೆಯನ್ನು ಹೆಚ್ಚಾಗಿ ಕ್ಯಾತನ ಪಾತ್ರದ ಮೂಲಕವೇ ಹೇಳುವುದರಿಂದ ಹಾಗೂ ಸ್ಲಮ್ ಡಾಗ್ ಮಿಲಿಯನೇರ್' ದಂಥ ಕೃತಿಗಳಲ್ಲಿ ನುಸುಳಿಕೊಳ್ಳುವ ರೊಮಾಂಟಿಸಿಸಂನ್ನು ತಡೆಯುವ ಮೂಲಕ ಲಂಕೇಶರರು ತಮ್ಮ ಕೃತಿಯಲ್ಲಿ ವಾಸ್ತವತೆಯನ್ನು ಕಾಯ್ದುಕೊಳ್ಳಲು ಶಕ್ತರಾಗಿದ್ದಾರೆ ಎಂದು ಕಾಗಿನೆಲೆ ಸರಿಯಾಗಿಯೇ ಹೇಳಿದ್ದಾರೆ. ಈ ಕೃತಿ ಪುಸ್ತಕ ರೂಪದಲ್ಲಿ ಪ್ರಕಟವಾದಾಗ ಲಂಕೇಶ್ ಅದರ ಪ್ರತಿಯೊಂದನ್ನು ಕಳಿಸಿ ನನ್ನ ಅಭಿಪ್ರಾಯ ಕೋರಿದ್ದರು. ನನ್ನ ಮೆಚ್ಚುಗೆಯನ್ನು ತಿಳಿಸುವುದರ ಜೊತೆಗೆಯೇ ಚೇಲಾನ 'The Family of Pascuoul Duarte' ಕಾದಂಬರಿಯ ಜೊತೆಗೆ ಅಕ್ಕ ಹೊಂದಿದ ಹೋಲಿಕೆಯನ್ನು ನಾನು ಪ್ರಸ್ತಾಪಿಸಿದ್ದೆ. ಅಕ್ಕ ಬರೆಯುವ ಮೊದಲು ತಾವು ಚೇಲಾನ ಕಾದಂಬರಿಯನ್ನು ಓದಿರಲಿಲ್ಲ ಎಂಬ ವಿವರಣೆಯನ್ನು ಲಂಕೇಶರು ಕೊಟ್ಟಂತೆ ನೆನಪು.

ತುಲನೆ (comparision) ವಿಮರ್ಶೆಯ ಮುಖ್ಯ ಸಾಧನಗಳಲ್ಲೊಂದು ಎಂದು ಟಿ.ಎಸ್. ಎಲಿಯಟ್ ಬಹಳ ಹಿಂದೆಯೇ ಗುರುತಿಸಿದ್ದುಂಟು. ತುಲನೆ ಒಂದೇ ಪರಂಪರೆಯಲ್ಲಿಯ ಕೃತಿಗಳೊಡನೆ ನಡೆದಾಗ ಪರಂಪರೆ ಹೊಸ ಅರ್ಥ ಪಡೆದುಕೊಳ್ಳುತ್ತದೆ ಎಂಬುದಕ್ಕೆ ಈ ಸಂಗ್ರಹದ ಎರಡು ಲೇಖನಗಳು - ಎಚ್.ವೈ. ರಾಜಗೋಪಾಲರ ಗಾಂಧಿಯುಗಕ್ಕೆ ಕನ್ನಡಿ - ನಾಗವೇಣಿಯವರ ಗಾಂಧಿ ಬಂದ ಮತ್ತು ವ್ಯಾಸರಾಯ ಬಲ್ಲಾಳರ ಹೆಜ್ಜೆ, ಕಾದಂಬರಿಗಳ ಸಮೀಕ್ಷೆ, ಹಾಗೂ ವಿಮಲಾ ರಾಜಗೋಪಾಲರ ಮಾನವೀಯ ಮಾಯಾಲೋಕ ಅಸಮಾನ ಬದುಕು ಸಾಕ್ಷಿಯಾಗಿವೆ. ನಾಗವೇಣಿಯವರ ಗಾಂಧಿ ಬಂದ ಹಾಗೂ ಬಲ್ಲಾಳರ ಹೆಜ್ಜೆಗಳ ಪ್ರಾದೇಶಿಕ ಹಿನ್ನೆಲೆ ಒಂದೇ ಆಗಿರುವುದು ಹಾಗೂ ಘಟನೆಗಳ ಕಾರ್‍ಯಕ್ರಮದಲ್ಲಿ ಸಾತತ್ಯವಿರುವುದು ಈ ಎರಡೂ ಕಾದಂಬರಿಗಳ ತುಲನೆಯ ಸಮರ್ಪಕತೆಯನ್ನು ಸಮರ್ಥಿಸುತ್ತವೆ. ರಾಜಗೋಪಾಲರಿಗೆ ಈ ಕಾದಂಬರಿಗಳ ಸಮಾನತೆಯಂತೆ ಅವುಗಳ ಭಿನ್ನತೆಯೂ ಮಹತ್ತ್ವದ್ದೆನಿಸಿದೆ. ಗಾಂಧಿಯುಗದಲ್ಲಿ ನಡೆದ ಸಾಮಾಜಿಕ ಪಲ್ಲಟ ಎರಡೂ ಕಾದಂಬರಿಗಳ ವಸ್ತುವಾದರೂ ನಾಗವೇಣಿಯವರ ಕಾದಂಬರಿಯಲ್ಲಿ ತುಳು ನಾಡಿನ ಸಂಸ್ಕೃತಿಯ ಅನಾವರಣ ಮುಖ್ಯವಾದರೆ, ಬಲ್ಲಾಳರ ಕಾದಂಬರಿಯಲ್ಲಿ ಗಾಂಧಿ ವಿಚಾರಗಳ ಪ್ರಭಾವವೇ ಕೇಂದ್ರದಲ್ಲಿದೆ ಎನ್ನುವುದನ್ನು ರಾಜಗೋಪಾಲ್ ವಿವರಗಳಲ್ಲಿ ಸ್ಥಾಪಿಸುತ್ತಾರೆ.

ಗಾಂಧಿ ಬಂಧ ಹಾಗೂ ಹೆಜ್ಜೆಗಳ ನಡುವಿನ ಹೋಲಿಕೆ ಒಮ್ಮೆಲೆ ಕಂಡು ಬರುವಂಥದು. ಆದರೆ ತೇಜಸ್ವಿಯವರ ಮಾಯಾಲೋಕ ಹಾಗೂ ಗೀತಾ ನಾಗಭೂಷಣರ ಬದುಕು ಕಾದಂಬರಿಗಳ ವಿಷಯ ಹಾಗಲ್ಲ. ವಿಮಲಾ ರಾಜಗೋಪಾಲರಿಗೆ ಈ ಹೋಲಿಕೆ ಹೊಳೆದದ್ದೇ ಸಾಹಿತ್ಯದ ಪರಂಪರೆಯ ಬಗ್ಗೆ ಅವರಲ್ಲಿರುವ ತಿಳಿವಿನ ದ್ಯೋತಕವಾಗಿದೆ. ಅವೆರಡನ್ನೂ ತುಲನಾತ್ಮಕವಾಗಿ ನೋಡಿದಾಗ ಕಾಣುವ ಸಾದೃಶ್ಯ - ವೈದೃಶ್ಯಗಳು ತುಂಬ ಸ್ವಾರಸ್ಯಕರವಾಗಿವೆ'. ಈ ಎರಡೂ ಕಾದಂಬರಿಯಲ್ಲಿ ಕಂಡುಬರುವುದು ಸಮಾಜದ ಪರಿಸರದ, ವಿವಿಧ ಮುಖಗಳು. ಮಾಯಾಲೋಕ ನಿತ್ಯ ಜೀವನದ ವಾಸ್ತವತೆಯ ಮೇಲೆ ಮಾಯೆಯ ಮುಸುಕು ಹೊದಿಸಿದರೆ ಬದುಕು ನಿತ್ಯ ಜೀವನದ ಮೇಲಿನ ಮುಸುಕನ್ನು ಕಿತ್ತೊಗೆದು ಅದನ್ನು ಬತ್ತಲಾಗಿ ತೋರಿಸುತ್ತದೆ ಎಂದು ಹೇಳಿ ಈ ಸಾದೃಶ್ಯ- ವೈದೃಶ್ಯಗಳ ಸ್ವರೂಪದ ಮೇಲೆ ವಿಮಲಾ ಅವರು ಬೆಳಕು ಚೆಲ್ಲಿದ್ದಾರೆ. ಗಾತ್ರದಲ್ಲಿ, ಶೈಲಿಯಲ್ಲಿ ಕಥನದ ರೀತಿಯಲ್ಲಿ ಸಾಕಷ್ಟು ಭಿನ್ನತೆ ಇದ್ದರೂ ಇವೆರಡೂ ಕಾದಂಬರಿಗಳ ತುಲನೆ ಉಪಯುಕ್ತವಾಗಿದೆ ಎಂದೆನಿಸುತ್ತದೆ.

ಈ ಸಂಕಲನದಲ್ಲಿ ಪ್ರಸಿದ್ಧ ಕಾದಂಬರಿಕಾರರ ಕೃತಿಗಳ ಸಮೀಕ್ಷೆಯೊಡನೆ ಹಲವಾರು ಹೊಸ ಲೇಖಕರ ಕೃತಿಗಳೂ ಪರಾಮರ್ಶೆಗೆ ಒಳಗಾದುದು ಸಂತೋಷದ ವಿಷಯವಾಗಿದೆ. ಎನ್ನ ಭವದ ಕೇಡು ಸುರೇಂದ್ರನಾಥರ ಪ್ರಥಮ ಕಾದಂಬರಿ. ಆದರೆ ಎಂ. ಆರ್. ದತ್ತಾತ್ರಿಯವರು ಅದನ್ನು ತುಂಬ ಗಂಭೀರವಾಗಿಯೇ ಓದಿದ್ದಾರೆ. ಮುಖ್ಯವಾಹಿನಿಯ ಹೊರಗಿನ ಓದುಗರನ್ನು ಬಯಸುವ ಕಾದಂಬರಿಗಳು ಕನ್ನಡಕ್ಕೆ ಹೊಸತೇನಲ್ಲ ಎನ್ನುವುದನ್ನು ಸಂಸ್ಕಾರದಂಥ ಕೃತಿಗಳು ಈಗಾಗಲೇ ಸಾಬೀತುಪಡಿಸಿವೆ. ಈ ಕಾದಂಬರಿಯಲ್ಲಿ ನಡೆಯುವ ಜೀವನ ವಿಮುಖಿ ಮಾಮಿ ಹಾಗೂ ಪ್ರತಿಹಿಂಸೆಯ ಭಾವನೆಯ ಜೋರಿನಲ್ಲಿ ಬದುಕನ್ನು ನಿರಾಕರಿಸುವ ಸರಸ್ವತಿ ಇವರ ಮುಖಾಮುಖಿಯಲ್ಲಿ ಕತೆಯ ಕೇಂದ್ರವನ್ನು ದತ್ತಾತ್ರಿ ಸರಿಯಾಗಿಯೇ ಗುರುತಿಸಿದ್ದಾರೆ. ಇದಕ್ಕೂ ಹೆಚ್ಚಾಗಿ ಕಾಮದಂಥ ವಸ್ತುವನ್ನು ನಿರ್ವಹಿಸುವಲ್ಲಿ ಸುರೇಂದ್ರನಾಥ ಪರಿಚಿತ ಮಾದರಿಗಳನ್ನು ಬಿಟ್ಟುಕೊಟ್ಟು. ಹೆಚ್ಚಿನ ರಹಸ್ಯಶೋಧದ ಸಾಹಸಕ್ಕೆ ಕೈಹಾಕಿರುವುದರ ಮಹತ್ತ್ವವನ್ನು ಅವರು ಎತ್ತಿ ತೋರಿಸಿದ್ದಾರೆ.

ಮಾನವೀಯ ಕಲೆಗಳು ಸ್ವಾನುಭವಕ್ಕಷ್ಟೇ ದಕ್ಕುವಂತಹದ್ದಾಗಿ ವಿಮರ್ಶೆಯ ಮಾತುಗಳಿಂದ ಮುನ್ನೂರು ಅಡಿ ಮೇಲಿರುತ್ತವೆ' ಎನ್ನುವ ದತ್ತಾತ್ರಿಯವರ ಮಾತು ನೂರಕ್ಕೆ ನೂರರಷ್ಟು ಸತ್ಯವಾದರೂ, ಕಲೆಗಳ ಅನುಭವವನ್ನು ಭಾಷೆಯ ನೆಲೆಯಲ್ಲಾದರೂ ಹಂಚಿಕೊಳ್ಳುವುದು ಸಾಧ್ಯವಿದೆಯೆನ್ನುವುದೂ ನಿಜ. ವಿಮರ್ಶೆಯೆಂದರೆ ಈ ಹಂಚಿಕೊಳ್ಳುವಿಕೆಯೇ. ನಾರ್ತ್ರಪ್ ಫ್ರಾಯ್ ಹೇಳಿದಂತೆ 'it is impossible to teach or learn literature, what one teaches and learns is criticism'. ಆದ್ದರಿಂದ ವಿಮರ್ಶೆಯ ಮಹತ್ವವನ್ನು ಕಡೆಗಣಿಸುವಂತಿಲ್ಲ.

« ಆಮೂರರ ಮುನ್ನುಡಿಯ ಮೊದಲ ಭಾಗ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more