ಗಿರೀಶ್ ಕಾರ್ನಾಡ್‌ರ ನಾಟಕಗಳಿಗೆ ಇಂಗ್ಲಿಷ್ ರೂಪ
ಬೆಂಗಳೂರು : ಜ್ಞಾನಪೀಠ ಪುರಸ್ಕೃತ ಕನ್ನಡ ಸಾಹಿತಿ ಹಾಗೂ ನಾಟಕಕಾರ ಗಿರೀಶ್ ಕಾರ್ನಾಡ್ ಅವರ ನಾಟಕಗಳ ಇಂಗ್ಲಿಷ್ ಅನುವಾದದ ಕೃತಿಗಳನ್ನು ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ಹೊರತಂದಿದೆ.
ಇಂಗ್ಲಿಷ್ ಅನುವಾದವನ್ನು ಸ್ವತಃ ಗಿರೀಶ್ ಕಾರ್ನಾಡ್ ಅವರೇ ಮಾಡಿದ್ದು, ಒಟ್ಟು ಎರಡು ಸಂಪುಟಗಳಲ್ಲಿ ನಾಟಕಗಳನ್ನು ಹೊರತರಲಾಗಿದೆ.
ಮೊದಲ ಸಂಪುಟದಲ್ಲಿ ಕಾರ್ನಾಡ್ ಅವರ ತುಘಲಕ್, ಹಯವದನ, ಬಲಿ, ನಾಗಮಂಡಲ ನಾಟಕಗಳಿದ್ದರೆ ; ಎರಡನೇ ಸಂಪುಟದಲ್ಲಿ ತಲೆದಂಡ, ಅಗ್ನಿ ಮತ್ತು ಮಳೆ, ಟಿಪ್ಪು ಸುಲ್ತಾನನ ಕನಸುಗಳು, ಬಿಂಬ ಎಂಬನಾಟಕಗಳಿವೆ.
ನಗರದಲ್ಲಿ ಆಯೋಜಿಸಲಾಗಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಗಿರೀಶ್ ಕಾರ್ನಾಡ್, ಯಾವುದೇ ಕೃತಿ ರಚನೆಗೆ ತೊಡಗುವ ಮೊದಲು ನಾನು ಕನ್ನಡದಲ್ಲಿ ಯೋಚಿಸುತ್ತೇನೆ. ನಂತರವಷ್ಟೇ ಇಂಗ್ಲಿಷ್‌ಗೆ ಸ್ಥಾನ ಎಂದರು.
ಸಾಹಿತಿ ಜಗತ್ತಿನ ನಿತ್ಯ ವಿದ್ಯಮಾನಗಳಿಗೆ ತಕ್ಷಣಕ್ಕೆ ತನ್ನ ಕೃತಿ ಮೂಲಕ ಪ್ರತಿಕ್ರಿಯಿಸಲು ಬಯಸಿದರೆ, ಉತ್ತಮ ಸಾಹಿತ್ಯ ರಚನೆ ಸಾಧ್ಯವಾಗದು. ರಾಜಕೀಯ ಹಿಂಸೆ ಎನ್ನುವುದು ಕುಟುಂಬ ಹಿಂಸೆಯ ವಿಸ್ತರಣೆಯೇ ಆಗಿದೆ. ದಿನದ ಆತಂಕಗಳನ್ನೆಲ್ಲ ನೇರವಾಗಿ ಸಾಹಿತ್ಯದಲ್ಲಿ ತರಬೇಕು ಎಂದು ಹಟಕ್ಕೆ ಬಿದ್ದರೆ, ಯಾವ ಕೃತಿಯೂ ಶ್ರೇಷ್ಠವಾಗುವುದಿಲ್ಲ. ಒಳಮನಸ್ಸಿನಲ್ಲಿ ಚಿಂತಿಸಿ-ಮಂಥಿಸಿ ಅವಲೋಕಿಸಬೇಕು ಎಂದು ಅಭಿಪ್ರಾಯಪಟ್ಟರು.
ಕಲಾ ವಿಮರ್ಶಕ ಶಮಿಕ್ ಬಂಡೋಪಾಧ್ಯಾಯ ನಾಟಕಗಳನ್ನು ಬಿಡುಗಡೆ ಮಾಡಿದರು. ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್‌ನ ವಿಕ್ರಮ್ ಕೊಹ್ಲಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.
(ಇನ್ಫೋ ವಾರ್ತೆ)












Click it and Unblock the Notifications