• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಲೇ ವಿಚಿತ್ರಾನ್ನ... ಭಲೇ!

By Staff
|
  • ಹ.ಚ.ನಟೇಶ್‌ ಬಾಬು

natesh.hc@greynium.com

ಅಲ್ಲೊಂದು ವೇದಿಕೆ, ವೇದಿಕೆ ಮೇಲೊಂದು ಬಾಣಲೆ, ಬಾಣಲೆ ಜೊತೆಗೊಂದು ಜಾಲರ, ಬಾಣಲೆಯಿಂದ ಎಂಥದೋ ಬಗೆಯ ಘಮಲು.

ಬಸವನಗುಡಿಯ ವಾಡಿಯಾ ರಸ್ತೆಯ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಜರ್‌ ಸಭಾಂಗಣದಲ್ಲಿ ಶನಿವಾರ ಸಂಜೆ ಸೇರಿದ್ದ ನೂರಾರು ಜನರ ಮೂಗಿಗೆ ಮೇಲಿಂದ ಬರುತ್ತಿದ್ದ ಆ ಅದ್ಭುತ ಘಮಲು ಮೂಗಿಗೆ ಬಡಿಯುತ್ತಿದ್ದಂತೆ ಮೆಲ್ಲುತ್ತಿದ್ದ ಉಪ್ಪಿಟ್ಟು, ಚಟ್ನಿ, ಕಾಫಿಯನ್ನು ಪಕ್ಕಕ್ಕಿಟ್ಟು ಸಭಾಂಗಣಕ್ಕೆ ದೌಡು.

ಸಭಾಂಗಣದಿಂದ ಬರುತ್ತಿದ್ದ ವಿಸ್ಮಿತ ಘಮಲು ವಿಚಿತ್ರಾನ್ನದ ಘಮಲು. 148 ವಾರಗಳಿಂದ ಒಂದು ವಾರವೂ ತಪ್ಪದಂತೆ ದಟ್ಸ್‌ಕನ್ನಡ.ಕಾಂನಲ್ಲಿ ಅಂಕಣಕಾರ, ಅಮೆರಿಕನ್ನಡಿಗ ಶ್ರೀವತ್ಸ ಜೋಶಿ ಅವರು ಬರೆಯುತ್ತಿರುವ 126 ಲೇಖನಗಳ ಒಟ್ಟಾರೆ ಸಂಗ್ರಹವೇ ಬಾಣಲೆಯಲ್ಲಿದ್ದ ವಿಚಿತ್ರಾನ್ನ ಪುಸ್ತಕ.

ವಿಚಿತ್ರಾನ್ನದ ರುಚಿ ಬಲ್ಲವರು, ಅಲ್ಲಿ-ಇಲ್ಲಿ ಕೇಳಿ ತಿಳಿದವರು, ಓದಿ ತಿಳಿದವರು, ಚಿತ್ರಾನ್ನ ಗೊತ್ತು ಇದ್ಯಾವುದಿದು ವಿಚಿತ್ರಾನ್ನ ಎಂದು ಕುತೂಹಲಗೊಂಡವರು -ಹೀಗೆ ನಾನಾ ಮಂದಿ ಅಲ್ಲಿ ನೆರೆದಿದ್ದರು. ಇಂಥ ವಿಶಿಷ್ಟ ಬಗೆಯ ಪುಸ್ತಕದ ಬಿಡುಗಡೆ ಸಮಾರಂಭವನ್ನು ಅಲ್ಲಿ ಆಯೋಜಿಸಲಾಗಿತ್ತು.

ವೇದಿಕೆಯ ಮೇಲೆ ಬಾಣಲೆಯಲ್ಲಿದ್ದ ‘ವಿಚಿತ್ರಾನ್ನ’ ಪುಸ್ತಕವನ್ನು ಹಾಸ್ಯ ಸಾಹಿತಿ ಪ್ರೊ.ಅ.ರಾ.ಮಿತ್ರ ಅವರು ಲೋಕಾರ್ಪಣೆ ಮಾಡಿದ ತಕ್ಷಣ, ವಿಚಿತ್ರಾನ್ನದ ರುಚಿಯನ್ನು ಬಣ್ಣಿಸಲು ನಟ ಸಿ.ಆರ್‌.ಸಿಂಹ ಎದ್ದು ನಿಂತರು ಮತ್ತು ಮೈಕು ಹಿಡಿದರು.

ಬಾಳೆ ಎಲೆ ಸೈಜ್‌ ನೋಡಿ ಮದುವೆಯನ್ನು ಅಳೆಯುವ ಪರಿಪಾಠ ನಮ್ಮಲ್ಲಿದೆ. ದೊಡ್ಡ ಬಾಳೆ ಎಲೆಯಲ್ಲಿ ಬಯಸಿದ್ದಕ್ಕಿಂತ ಹೆಚ್ಚು ರುಚಿರುಚಿ ತಿಂಡಿಗಳನ್ನು ಬಡಿಸುವುದನ್ನೇ ವಿಚಿತ್ರಾನ್ನ ಎನ್ನಬಹುದು. ಅಲ್ಲಿ ಯಾವ ಐಟಮ್ಸ್‌ ತಿಂದರೂ ಒಂದೊಂದು ರುಚಿ. ಲೇಖನ, ರಸಪ್ರಶ್ನೆ, ಮೋಜು, ಬುದ್ಧಿಗೆ ಸವಾಲು -ಹೀಗೆ ಜೋಶಿ ಓದುಗರನ್ನು ಅಪರೂಪದ ಬರವಣಿಗೆ ಮೂಲಕ ತಲುಪಿದ್ದಾರೆ. ಅವರೊಬ್ಬ ಅಪರೂಪದ ಬರಹಗಾರ. ದಟ್ಸ್‌ ಕನ್ನಡ ಮೂಲಕ ಅವರು ಗ್ಲೋಬಲ್‌ ಆಗಿದ್ದಾರೆ. ಜಗತ್ತು ಸುತ್ತಿ ಈಗ ವಿಚಿತ್ರಾನ್ನ ತವರಿಗೆ ಬಂದಿದೆ.

ಚಿತ್ರಾನ್ನ ಗೊತ್ತು, ಯಾವುದಿದು ವಿಚಿತ್ರಾನ್ನ ಎನ್ನುವ ಕುತೂಹಲ ನನಗೂ ಇತ್ತು. ಜೋಶಿ ವಿಚಿತ್ರಾನ್ನ ಬರೆಯದೇ ಪಾಕಶಾಸ್ತ್ರ ಬರೆದಿದ್ದರೆ, ಇನ್ನೂ ಫೇಮಸ್‌ ಆಗ್ತಾಯಿದ್ದರು, ದುಡ್ಡು ಮಾಡ್ತಾಯಿದ್ದರು. ಅಡಿಗೆಯವನಾಗಿದ್ದರೆ ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿರುತ್ತಿದ್ದರು ಎಂದು ಸಿಂಹ ಹೇಳುತ್ತಾ ಹೋದರು.

ವಿಚಿತ್ರಾನ್ನ ಉಪಯುಕ್ತ ಪುಸ್ತಕ. ಹೆಂಗಸರಿಗಂತೂ ಉಪಯುಕ್ತ. ಅದರಲ್ಲಿನ ಅಡುಗೆಗಳನ್ನು ಜೋಶಿ ಸಲಹೆಯಂತೆ ಮಾಡಿದ್ರೆ, ಬಾಯಲ್ಲಿ ನೀರು ಬರುತ್ತೆ. ಇಲ್ಲದಿದ್ರೆ ಮುಖದಲ್ಲಿ ನೀರು ಬರುತ್ತೆ . ವಿಚಿತ್ರಾನ್ನದಲ್ಲಿ ಒಂದೆರಡಲ್ಲ...ನೂರಾರು ಸಂಗತಿಗಳಿವೆ. ಅನೇಕ ಕುತೂಹಲಕರ ಸಂಗತಿಗಳನ್ನು ಸಂಗ್ರಹಿಸಿ, ಪ್ರತಿವಾರ ಓದುಗರಿಗೆ ಆಕರ್ಷಕ ಭಾಷೆಯಲ್ಲಿ ಹಂಚಿದ್ದಾರೆ.

ಮನಸ್ಸು ಮತ್ತು ನಾಲಿಗೆಗೆ ಜ್ಞಾನೋದಯವಾಗಬೇಕಾದ್ರೆ, ವಿಚಿತ್ರಾನ್ನ ಓದಬೇಕು. ಕಾರ್ಕಳ, ಮೈಸೂರು ಮತ್ತು ಬೆಂಗಳೂರು ಭಾಷೆ ಅವರ ಬರವಣಿಗೆಯಲ್ಲಿದೆ. ಅಗಾಧ ಓದು, ಅಭಿರುಚಿ, ಕನ್ನಡ ಅಭಿಮಾನ ಸೇರಿ ವಿಚಿತ್ರಾನ್ನ ರೆಡಿಯಾಗಿದೆ. ಜೊತೆಗೆ ಪಾಕ ಕೆಟ್ಟಿಲ್ಲ ರುಚಿಯಾಗಿದೆ. ಪುರಾಣ, ಇತಿಹಾಸಗಳಂತೆ ಆರಂಭದಿಂದಲೇ ಓದಬೇಕೆಂದೇನಿಲ್ಲ. ಯಾವ ಪುಟದಿಂದ ಓದಿದರೂ ರುಚಿ. ಅದು ಜೋಶಿ ಸ್ಟೈಲ್‌ ಎಂದ ಸಿಂಹ, ಪುಸ್ತಕದ ಕೆಲವು ಸ್ಯಾಂಪಲ್‌ಗಳನ್ನು ತಮ್ಮದೇ ಆದ ಶೈಲಿಯಲ್ಲಿ ಪರಿಚಯಿಸಿದರು.

ದುಡ್ಡು ಕಳೆದುಕೊಂಡರು...

ಈಗಾಗಲೇ ಪರಿಚಿತರಾಗಿರುವ ಜೋಶಿ ಅವರನ್ನು ತಮ್ಮದೇ ಆದ ಶೈಲಿಯಲ್ಲಿ ವಿಜಯಕರ್ನಾಟಕ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್‌ ವಿಶ್ಲೇಷಿಸಿದರು.

ಅಮೆರಿಕಾದಲ್ಲಿ ನಿಮಿಷಕ್ಕೆ ಡಾಲರ್‌ ಲೆಕ್ಕದಲ್ಲಿ ಬೆಲೆ ಇದೆ. ಹಾಡು, ಸಿನಿಮಾ, ನಾಟಕ, ಸಾಹಿತ್ಯ ಇವೆಲ್ಲವೂ ಅಮೆರಿಕನ್ನರ ದೃಷ್ಟಿಯಲ್ಲಿ ನಷ್ಟದ ಬಾಬತ್ತುಗಳು. ಅಲ್ಲಿನ ಜನ ಡಾಲರ್‌ ಕನಸಿನಲ್ಲಿ ಬದುಕು ಸವೆಸುತ್ತಾರೆ. ಬರೆಯುವುದು ಹಾನಿಕಾರಕ ಚಟುವಟಿಕೆ ಎಂದು ವ್ಯಂಗ್ಯವಾಗಿ ಹೇಳಿದ ಅವರು, 150ವಾರ ನಷ್ಟ ಅನುಭವಿಸಿ, ಡಾಲರ್‌ ಮರೆತು, ಜಾಗತಿಕ ಕನ್ನಡಿಗರಿಗಾಗಿ ಜೋಶಿ ವಿಚಿತ್ರಾನ್ನ ಉಣಬಡಿಸಿದ್ದಾರೆ. ಕನ್ನಡಕ್ಕೆ ಆ ಮೂಲಕ ಹೊಸ ಲೇಖಕ ಸಿಕ್ಕಿದ್ದಾನೆ. ಸಾಹಿತ್ಯ ಲೋಕ ಆದರದಿಂದ ಬರಮಾಡಿಕೊಳ್ಳಬೇಕು. ಬಳಸಿಕೊಳ್ಳಬೇಕು. ಆ ಅಗತ್ಯ ಇದೆ ಎಂದರು.

ಜೋಶಿ ಅವರ ಪ್ರತಿ ಅಂಕಣದ ಪ್ರತಿ ಸಾಲಿನಲ್ಲಿ ಫನ್‌ ಇದೆ. ಡೆಸ್ಕಲ್ಲಿರುವವರು ಜೋಷಿ ಅಂಕಣ ಓದಬೇಕೆಂದು ನಾನು ಹೇಳುತ್ತಿರುತ್ತೇನೆ. ಅವರ ಪುಸ್ತಕದ 150ಶೀರ್ಷಿಕೆಗಳೂ ನಮ್ಮನ್ನು ಕೆಣಕುತ್ತವೆ. ಅವರು ಕಂಪ್ಯೂಟರ್‌ ಇಂಜಿನಿಯರ್‌ ಆಗದೇ ಪತ್ರಿಕೋದ್ಯಮಕ್ಕೆ ಬಂದಿದ್ರೆ ಚೆನ್ನಾಗಿತ್ತು. ಬರಲಿಲ್ಲ ಪುಣ್ಯ ಅನ್ನಿಸುತ್ತೆ. ರಾಜ್ಯ ಮಟ್ಟದ ಪತ್ರಿಕೆಯ ಮ್ಯಾಗಜಿನ್‌ ಸಂಪಾದಕನಾಗುವ ಎಲ್ಲಾ ಅರ್ಹತೆ ಅವರಿಗಿದೆ.

ಅಮೆರಿಕಾಕ್ಕೆ ಹೋದವರು ತಕ್ಷಣ ಮಾಡುವ ಕೆಲಸ ಕನ್ನಡ ಮರೆಯುವುದು. ಕನ್ನಡದಿಂದ ಡಾಲರ್‌ ಬರೋದಿಲ್ಲವೆಂದು ವ್ಯಕ್ತಿತ್ವ ಕಳೆದುಕೊಳ್ಳುತ್ತೇವೆ. ಆದರೆ ಐದು ವರ್ಷದಿಂದ ಅಮೆರಿಕಾದಲ್ಲಿರುವ ಜೋಶಿ, ಸೊಗಸಾದ ಕನ್ನಡ ಬರೆಯುತ್ತಾರೆ. ಭಾಷೆಯಲ್ಲಿ ಪುಭುತ್ವ ಸಾಧಿಸಿರುವವರು ಮಾತ್ರ ಭಾಷೆಯನ್ನು ಬಳುಕಿಸಬಲ್ಲರು, ಬಗ್ಗಿಸಬಲ್ಲರು, ಪಳಗಿಸಬಲ್ಲರು. ಈ ಕೆಲಸ ವಿಚಿತ್ರಾನ್ನದಲ್ಲಿ ನಡೆದಿದೆ. ಜೋಶಿಯವರ ಮಾತೃ ಭಾಷೆ ಮರಾಠಿ, ಮಾತಾಡುವುದು ಇಂಗ್ಲಿಷ್‌, ಬರೆಯುವುದು ಕನ್ನಡ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜೋಶಿ ಅವರ ವಿಚಿತ್ರಾನ್ನದ ಕೆಲವು ಲೇಖನಗಳು ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದಾಗ, ಪ್ರತಿಬರಹಕ್ಕೂ ಕಡಿಮೆಯೆಂದರೂ 50 ಇಮೇಲುಗಳನ್ನು ನನಗೆ ಬರುತ್ತಿದ್ದವು. ಅದವರ ಜನಪ್ರಿಯತೆ. 150ವಾರ ಸತತವಾಗಿ ಅಂಕಣ ಬರೆಯುವ ಕಷ್ಟ ಮತ್ತೊಬ್ಬ ಅಂಕಣಗಾರನಿಗಷ್ಟೇ ಗೊತ್ತು. ಬರೆಸುವ ಕಷ್ಟ ಸಂಪಾದಕನಿಗಷ್ಟೇ ಗೊತ್ತು. ಇಂತಹ ಅದ್ಭುತ ಪ್ರತಿಭೆಯನ್ನು ದಟ್ಸ್‌ಕನ್ನಡದ ಶಾಮ್‌ ಎಲ್ಲಿ ಹುಡುಕಿದರೋ ಗೊತ್ತಿಲ್ಲ . ಈ 150ವಾರ ಇದನ್ನೆಲ್ಲಾ ಜೋಶಿ ಅವರ ಪತ್ನಿ ಸಹನಾ ಹೇಗೆ ಸಹಿಸಿಕೊಂಡರೋ ಗೊತ್ತಿಲ್ಲ. ಸಹನಾ, ಜೋಶಿ, ಶಾಮ್‌ ವಿಚಿತ್ರಾನ್ನದ ಯಶಸ್ನಿಗೆ ತ್ರಿಮೂರ್ತಿಗಳು ಎಂದು ವಿಶ್ವೇಶ್ವರ ಭಟ್‌ ಬಣ್ಣಿಸಿದರು.

ಅಮೆರಿಕಾ ಬಗ್ಗೆ ಜೋಶಿ ವೆಬ್‌ಸೈಟ್‌ ರೂಪಿಸಿದ್ದಾರೆ. ತವರ ನೆಲ, ಉಳಿದ ನೆಲ ಅರ್ಥಮಾಡಿಕೊಂಡು ಬೇರೆಯವರಿಗೆ ಅವುಗಳನ್ನು ಪರಿಚಯಿಸುವ ಅವರು ಪ್ರತಿ ವರ್ಷ ತವರಿಗೆ ಬರಲಿ... ಬರುವಾಗ ವಿಚಿತ್ರಾನ್ನ ತರಲಿ...ಅವರ ಅಡುಗೆ ಸವಿಯೋಣ ಎಂದರು.

ಅಗೆದು ಮೊಗೆವ ಬುದ್ಧಿಗೆ ಅನಂತ ಅವಕಾಶ

ವಿಚಿತ್ರಾನ್ನ ಪುಸ್ತಕ ಪ್ರಸವ ಮಾಡಿದ ವೈದ್ಯ ಅ.ರಾ.ಮಿತ್ರ ತಮ್ಮ ವರದಿಗಾಗಿ ಜೇಬುಗಳನ್ನು ತಡಕಾಡಿ, ಕೊನೆಗೆ ಸುಮ್ಮನಾದರು. ಎಂದೂ ಭಾಷಣಕ್ಕಾಗಿ ಚೀಟಿಯನ್ನು ಬಳಸದ ಮಿತ್ರ ಅವರ ಈ ಪರದಾಟ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು.

ನನ್ನ ಎರಡು ಪುಟಗಳ ಭಾಷಣವನ್ನು ಈ ಮುಂಚೆ ಮಾತನಾಡಿದ ಸಿಂಹ ಮತ್ತು ಭಟ್ಟರು ಕದ್ದು, ಇಬ್ಬರೂ ಒಂದೊಂದು ಪುಟ ಬಳಸಿಕೊಂಡಿದ್ದಾರೆ ಎನ್ನುವ ಚಟಾಕಿಯಿಂದಲೇ ಮಾತು ಶುರುಮಾಡಿದ ಅವರು, ಈ ಹಿಂದೆ ಮಾತನಾಡಿದವರು ವಿಚಿತ್ರಾನ್ನ ಸಹಿಸಿಕೊಂಡ ಜೋಶಿ ಪತ್ನಿಗೆ ಶುಭಾಶಯ ಹೇಳಿದರು. ನಾನು ಅವರಿಗೆ ಕನಿಕರ ಹೇಳುತ್ತೇನೆ ಎಂದು ಮತ್ತೊಂದು ನಗೆಚಟಾಕಿ ಹಾರಿಸಿದರು.

ಬೆಂಗಳೂರು ಕನ್ನಡಿಗರ ಕನ್ನಡ ದೇವರಿಗೆ ಪ್ರೀತಿ. ಆದರೆ ಅಮೆರಿಕನ್ನಡಿಗರ ಕನ್ನಡ ಸೊಗಸಾಗಿರುತ್ತೆ. ಕನ್ನಡ ಪ್ರೀತಿ ಮತ್ತು ಅಭಿಮಾನ ವೃದ್ಧಿಗಾಗಿ ಎಲ್ಲರನ್ನೂ ಅಮೆರಿಕಾಕ್ಕೆ ಆರು ತಿಂಗಳು ಕಳಿಸಬೇಕು ಎಂದು ಕನ್ನಡಿಗರ ಮನಸ್ಥಿತಿಯನ್ನು ಗೇಲಿ ಮಾಡಿದ ಮಿತ್ರಾ, ಜೋಶಿ ಅವರನ್ನು ಮೊದಲು ನೋಡಿದಾಗ ಒಳ್ಳೆಯ ಹುಡುಗ ಎಂದು ಕೊಂಡೆ. ಪಾಪ ಇತ್ತೀಚೆಗೆ ಬರವಣಿಗೆ ಆರಂಭಿಸಿ ದಾರಿ ತಪ್ಪುತ್ತಿದ್ದಾನೆ ಎಂದು ಮತ್ತೊಂದು ನಗೆಬಾಂಬ್‌ ಸಿಡಿಸಿದರು.

ಬಾಲ್ಯದಲ್ಲಿ ಶಿಕ್ಷಕರು ಮಾತಾಡುವುದನ್ನು ಕಲಿಸಿದರು. ಮನಸ್ಸು ಮಾತಾಡೋದನ್ನು ಕಲಿಸಲಿಲ್ಲ. ನಮ್ಮ ಆಸ್ತಿ ಹಿರಿಯರ ಹೇಳಿಕೆಗಳಲ್ಲಿವೆ. ಅವುಗಳ ಬಳಕೆ ವಿಚಿತ್ರಾನ್ನದಲ್ಲಾಗಿದೆ. ಓದಿಗೆ ತಳ್ಳುವ, ಮನಸ್ಸನ್ನು ಮಾತಾಡಿಸುವ ಲಕ್ಷಣ ಆ ಬರಹಕ್ಕಿದೆ.

ನಮ್ಮಲ್ಲಿ ಡೈರಿ ಬರೆಯುವುದು ಸೇರಿದಂತೆ ಭಾವನೆ ಹಂಚಿಕೊಳ್ಳುವ ಪರಂಪರೆ ಇಲ್ಲ. ಹೃದಯ ಸಂವಾದ ಇಲ್ಲದೇ ಬೆಳವಣಿಗೆ ಕುಂಠಿತಗೊಂಡಿದೆ. ನಮ್ಮಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ. ಆದರೆ ಪ್ರತಿಭೆಯನ್ನು ಬರವಣಿಗೆಯಲ್ಲಿ ವ್ಯಕ್ತಪಡಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಅನಿಸಿದ್ದನ್ನು ಬರೆಯಿರಿ ಎಂದು ಕರೆ ನೀಡಿದರು.

‘ಇವನಾರವ ಇವನಾರವ’ಎಂಬುದು ಎಲ್ಲರಿಗೂ ಗೊತ್ತಿರುವ ಮಾತು. ನಾವುಗಳು ಕೇಳದೇ, ತಿಳಿಯದೇ, ಬರೆಯದಿದ್ರೆ ‘ಇವನಾರುವ ಇವನಾರುವ ’ ಗುಂಪಿಗೆ ಸೇರಬೇಕಾಗುತ್ತದೆ ಎಂದು ಮಾರ್ಮಿಕವಾಗಿ ಅ.ರಾ. ಮಿತ್ರ ಎಚ್ಚರಿಸಿದರು.

ವಿಚಿತ್ರಾನ್ನದ ಗುಟ್ಟು ಶಾಮ್‌ರಿಂದ ರಟ್ಟು!

ಸಮಾರಂಭದಲ್ಲಿ ಮಾತನಾಡಿದ ದಟ್ಸ್‌ಕನ್ನಡ ಸಂಪಾದಕ ಎಸ್‌.ಕೆ.ಶಾಮ್‌ಸುಂದರ್‌, ವಿಚಿತ್ರಾನ್ನದ ಯಶಸ್ಸಿಗೆ ಶ್ರೀವತ್ಸ ಜೋಶಿ ಬಳಸಿದ ತಂತ್ರ ಮತ್ತು ಅವರ ನೈಜ ಮನಸ್ಥಿತಿಯನ್ನು ಅನಾವರಣಗೊಳಿಸಿದರು.

ಕಾಲಘಟ್ಟಗಳು ಬದಲಾದಂತೆ ಹೇಳಿಕೆಗಳು ಬದಲಾಗುತ್ತವೆ. ಭಾರತದಲ್ಲಿ ‘ವಂದೇ ಮಾತರಂ’ ಜಾಗದಲ್ಲಿ ‘ಮೇರಾ ಭಾರತ್‌ ಮಹಾನ್‌’ಬಂದು ನಿಂತಿದೆ. ಅಮೆರಿಕದ ಸ್ಲೋಗನ್‌ ವಿಚಿತ್ರವಾಗಿದೆ. God Bless Americaಎಂಬ ಹೇಳಿಕೆಯನ್ನು ಗಮನಿಸಿ ಎಂದು ಶಾಮ್‌ಸುಂದರ್‌, ದೇವರು ಏಕೆ ಪಕ್ಷಪಾತಿಯಾಗಬೇಕು ಎಂದು ಪ್ರಶ್ನಿಸಿದರು.

God Bless Everybody ಎನ್ನುವ ಮನೋಭಾವ, ಮನೋಸ್ಥಿತಿ ವಿಚಿತ್ರಾನ್ನದ ಯಶಸ್ಸಿಗೆ ಕಾರಣ. ಇದು ವಿಚಿತ್ರಾನ್ನದ ಗುಟ್ಟು. ವಿಶ್ವಕುಟುಂಬದ ಪರಿಕಲ್ಪನೆ, ವಿಚಿತ್ರಾನ್ನವನ್ನು ಜನಪ್ರಿಯಗೊಳಿಸಿದೆ. ಜೊತೆಗೆ ಜೋಶಿ ಅವರ ನಡೆನುಡಿ ಮತ್ತು ಬರಹದಲ್ಲಿ ವಿಶ್ವಪ್ರೀತಿ ವ್ಯಕ್ತವಾಗಿದೆ ಎಂದರು.

ಅಡುಗೆ ಭಟ್ಟನ ಅನುಭವಗಳು!

ಸಮಾರಂಭ ಕಡೆಯ ಘಟ್ಟ ತಲುಪಿದಾಗ, ಎಲ್ಲರಿಗೂ ಧನ್ಯವಾದ ಅರ್ಪಿಸಲು ವೇದಿಕೆಗೆ ಬಂದ ಜೋಶಿ, ಅ.ರಾ.ಮಿತ್ರರೇ, ಹಾಗೂ ಇಲ್ಲಿ ಸೇರಿರುವ ನನ್ನ ಎಲ್ಲಾ ಮಿತ್ರರೇ ನಮಸ್ಕಾರ ಎನ್ನುವ ಮೂಲಕ ನಿಮಗೆಲ್ಲ ಮಸ್ಕಾ ಹೊಡೆಯುತ್ತಿದ್ದೇನೆ ಎಂದು ತಮ್ಮ ಬರವಣಿಗೆಯ ಪಂಚ್‌ಶೈಲಿಯಲ್ಲಿಯೇ ಮಾತು ಪ್ರಾರಂಭಿಸಿದರು.

ನನಗೆ ಬರೆಯಲಿಕ್ಕೆ ಬರುತ್ತೆ... ಕೊರೆಯಲಿಕ್ಕೆ ಬಾರದು . ನಾನು ಮೊದಲು ಕತೆ, ಕವನ, ಸಾಹಿತ್ಯ ಬರೆದವನಲ್ಲ. ಆದರೆ ವಿಷಯ ಸಂಗ್ರಹಣೆ ಮೊದಲಿನಿಂದಲೂ ನನ್ನ ಸ್ವಭಾವ. ದಾವಣಗೆರೆಯಲ್ಲಿ ಇಂಜಿನಿಯರಿಂಗ್‌ ಮಾಡುವಾಗಲೇ, ಮಾಹಿತಿ ಹಂಚುವ ತುಡಿತ ಇತ್ತು. ಪಠ್ಯಕ್ಕೆ ಸಂಬಂಧಿಸಿದಂತೆ ನನ್ನ ನೋಟ್ಸ್‌ಗಳು ಕಾಲೇಜಿನಲ್ಲಿ ಜೋಶಿ ನೋಟ್ಸ್‌ ಎಂದು ಪರಿಚಿತವಾಗಿತ್ತು ಎಂದು ಕಾಲೇಜು ದಿನಗಳನ್ನು ನೆನಪಿಸಿಕೊಂಡರು.

ಮಾಹಿತಿಯಾಂದಿಗೆ ಮನರಂಜನೆ ಹಂಚುವ ನನ್ನ ಕೆಲಸಕ್ಕೆ ಎಲ್ಲರೂ ಬೆನ್ನುತಟ್ಟಿದರು. ಜೊತೆಗೆ ಫನ್‌ ತಟ್ಟಿದರು. ವಿಚಿತ್ರಾನ್ನದ ಈ ಕುಕ್‌ ಸಮಾರಂಭಕ್ಕೆ ಕಿಕ್ಕಿರಿದು ಅಭಿಮಾನಿಗಳು ಬಂದಿರುವುದು ನನಗೆ ಖುಷಿ ತಂದಿದೆ ಎಂದು ಜೋಶಿ ಎದೆತುಂಬಿ ಮಾತನಾಡಿದರು.

ಯುವ ಗಾಯಕಿ ಶ್ರುತಿ ರಮೇಶ್‌ ಅವರ ಶಾರದೆಯ ಸ್ತುತಿಯಾಂದಿಗೆ ಕಾರ್ಯಕ್ರಮಕ್ಕೆ ಗ್ರೀನ್‌ ಸಿಗ್ನಲ್‌ ಸಿಕ್ಕಿತು. ಸುಮಧುರ ಕಂಠದ ಗಾಯಕಿ ಮಾಲತಿ ಶರ್ಮ ನಿರೂಪಣೆಯ ಹೊಣೆ ಹೊತ್ತಿದ್ದರು. ಎಲ್ಲರ ಮುಖದಲ್ಲೂ ಸಂಭ್ರಮ, ಸಂತೋಷ, ಸಡಗರ...

ಬಿಸಿಬಿಸಿ ಮಾರಾಟ

ಪುಸ್ತಕ ಬಿಡುಗಡೆ ಸಮಾರಂಭದ ಸಂಪ್ರದಾಯವನ್ನು ಭಂಗಮಾಡುವಂತೆ, ಕಾರ್ಯಕ್ರಮದ ಕಡೆಯಲ್ಲಿ ವಿಚಿತ್ರಾನ್ನದ ಪ್ರತಿಗಳು ಬಿಸಿ ಮಸಾಲೆ ದೋಸೆಯಂತೆ ಖಾಲಿಯಾದವು. ಕಥೆಗಾರ ಜಯಂತ್‌ ಕಾಯ್ಕಿಣಿ, ಸರಸ್ವತಿ ವಟ್ಟಂ, ಪವನಜ, ಗುರುಪ್ರಸಾದ್‌ ಕಾಗಿನೆಲೆ, ರತ್ನಮಾಲಾ ಪ್ರಕಾಶ್‌, ದಟ್ಸ್‌ಕನ್ನಡ ಬಳಗ, ಜೋಶಿ ಅಭಿಮಾನಿಗಳು ಸಮಾರಂಭದಲ್ಲಿ ಪ್ರೀತಿಯಿಂದ ಪಾಲ್ಗೊಂಡಿದ್ದರು.

ಎರಡು ತಾಸುಗಳ ಕಾರ್ಯಕ್ರಮ ಅವಿಭಕ್ತ ಕುಟುಂಬವೊಂದರ ಸಂತೋಷ ಕೂಟದಂತಿತ್ತು. ವಿಚಿತ್ರಾನ್ನದ ರುಚಿ ಇಲ್ಲಿಗೆ ಮುಗಿಯುವುದಿಲ್ಲ... ಮತ್ತೊಂದು ಮಂಗಳವಾರ ಬರುತ್ತದೆ...ಮತ್ತೊಂದು ಪುಸ್ತಕ ಬರುತ್ತದೆ ಎನ್ನುವ ಆಶಯದೊಂದಿಗೆ ಕಾರ್ಯಕ್ರಮಕ್ಕೆ ತೆರೆಬಿತ್ತು.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more