ವೀರಪ್ಪ ಮೊಯಿಲಿ ಅವರಿಂದ ಸಾಹಿತ್ಯ ಪ್ರಯೋಗ!
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರ ‘ಶ್ರೀರಾಮಾಯಣ ಮಹಾನ್ವೇಷಣಂ’ ಮಹಾಕಾವ್ಯದ 5ನೇ ಸಂಪುಟದ ಬಿಡುಗಡೆ ಸಮಾರಂಭ ಭಾನುವಾರ(ಮೇ.15)ನಡೆಯಲಿದೆ.
ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಜರುಗಲಿರುವ ಈ ಸಮಾರಂಭದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ಅರ್ಜುನ್‌ಸಿಂಗ್ ಕೃತಿಯನ್ನು ಬಿಡುಗಡೆ ಮಾಡುವರು. ರಾಜ್ಯಪಾಲ ಟಿ.ಎನ್. ಚತುರ್ವೇದಿ ಅಧ್ಯಕ್ಷತೆವಹಿಸುವರು. ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಡಾ। ಯು.ಆರ್. ಅನಂತಮೂರ್ತಿ, ಮಹಾಕಾವ್ಯದ ವಸ್ತು ವೈಭವವನ್ನು ವಿಶ್ಲೇಷಿಸುವರು.
ಮುಖ್ಯಮಂತ್ರಿ ಎನ್.ಧರ್ಮಸಿಂಗ್, ಪ್ರೊ। ಬರಗೂರು ರಾಮಚಂದ್ರಪ್ಪ, ಕಮಲಾಹಂಪನಾ, ಜಿ.ಎಸ್. ಶಿವರುದ್ರಪ್ಪ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಳ್ಳುವರು. ಈ ಸಂದರ್ಭದಲ್ಲಿ ವಿಚಾರ ಸಂಕಿರಣ ಮತ್ತು ಕಾವ್ಯ ಗಾಯನಗಳನ್ನು ಆಯೋಜಿಸಲಾಗಿದೆ.
ಒಂದಿಷ್ಟು ಖುಷಿ : ತಮ್ಮ ಸಾಹಿತ್ಯ ಬದುಕಿನ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ವೀರಪ್ಪ ಮೊಯಿಲಿ, ಕಳೆದ 6 ವರ್ಷಗಳಿಂದ ಪ್ರತಿದಿನ ಐದೂವರೆ ಗಂಟೆಗಳ ಕಾಲ ಕಾವ್ಯ ರಚನೆ ಮತ್ತು ಪೂರಕ ಅಧ್ಯಯನಗಳಲ್ಲಿ ತೊಡಗಿದ ಫಲಿತಾಂಶ ಓದುಗರ ಮುಂದಿದೆ. ‘ಶ್ರೀರಾಮಾಯಣ ಮಹಾನ್ವೇಷಣಂ’ ಕೃತಿ ಹಿಂದಿ ಭಾಷೆಗೂ ಅನುವಾದಗೊಳ್ಳುತ್ತಿದೆ ಎಂದರು.
ನನ್ನ ಸಂಕಲ್ಪದಂತೆ ಇದೀಗ ಐದು ಸಂಪುಟಗಳಲ್ಲಿ ಮಹಾಕಾವ್ಯ ಹೊರ ಬಂದಿದೆ. ಈ ಮಹಾಕಾವ್ಯದಲ್ಲಿ 43,295 ಪದ್ಯದ ಸಾಲುಗಳಿವೆ. ಮೂರು ಸಾವಿರ ಪುಟಗಳ ಸುದೀರ್ಘ ಕಾವ್ಯ ಇದಾಗಿದೆ. ಕೃತಿ ರಚನೆ ಹಿನ್ನೆಲೆಯಲ್ಲಿ ಅನೇಕ ಸರ್ವಾಧಿಕಾರಿಗಳ ಜೀವನ ಚರಿತ್ರೆ, ಸುಮಾರು 80ಕ್ಕೂ ಹೆಚ್ಚು ಔಷಧೀಯ ಗ್ರಂಥಗಳನ್ನು ಅಧ್ಯಯನ ಮಾಡಿರುವುದಾಗಿ ಮೊಯಿಲಿ ತಿಳಿಸಿದರು.
(ಇನ್ಫೋ ವಾರ್ತೆ)












Click it and Unblock the Notifications