ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲ.ನಾ.ಭಟ್ಟರ ಷೇಕ್ಸ್‌ಪಿಯರ್‌ ಸಾನೆಟ್‌ ಚಕ್ರ-ಕಿನ್ನರಲೋಕ ಬಿಡುಗಡೆ

By Staff
|
Google Oneindia Kannada News

*ಎಂ. ಕೆ. ಗೋಪಿನಾಥ್‌

ಬೇರೆ ಭಾಷೆಯ ಕಾವ್ಯವನ್ನು ನಮ್ಮ ಭಾಷೆಗೆ ಅನುವಾದಿಸುವುದೆಂದರೆ ಬೇರೆ ಮನೆಯ ಹೆಣ್ಣನ್ನು ಮದುವೆ ಮಾಡಿಕೊಂಡು ಮನೆಗೆ ಕರೆ ತಂದ ಹಾಗೆ. ಆ ಸೊಸೆ ನಾಳೆ ನಮ್ಮ ವಂಶ ಬೆಳೆಸುವ ಸೌಭಾಗ್ಯಲಕ್ಷ್ಮಿಯಾಗಬಹುದು. ಅನುವಾದಗೊಂಡ ಕೃತಿಗಳು ಶ್ರೇಷ್ಠ ಕೃತಿಗಳಾಗಿದ್ದರಂತೂ ಅದು ನಮ್ಮ ಭಾಷೆಯ ಪುಣ್ಯ.

‘ಡಾ. ಎನ್‌. ಎಸ್‌. ಲಕ್ಷ್ಮೀ ನಾರಾಯಣ ಭಟ್ಟರು ಇಂಗ್ಲಿಷ್‌ನಿಂದ ಕನ್ನಡಕ್ಕೆ ತಂದಿರುವ ‘ಷೇಕ್ಸ್‌ಪಿಯರ್‌ ಸಾನೆಟ್‌ ಚಕ್ರ’ ಅಂಥ ಶ್ರೇಷ್ಠ ಕೃತಿ. ಷೇಕ್ಸ್‌ಪಿಯರನ ಆಯ್ದ ನೂರು ಸಾನೆಟ್‌ ಕವಿತೆಗಳ ಸುಂದರ ಅನುವಾದ. ಭಟ್ಟರು ಈ ಹಿಂದೆ ಜಗತ್‌ಪ್ರಸಿದ್ಧ ಕವಿಗಳಾದ ಯೇಟ್ಸ್‌ ಮತ್ತು ಎಲಿಯಟ್‌ರ ಅತ್ಯುತ್ತಮ ಕವಿತೆಗಳನ್ನು ಅನುವಾದಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿ ವಿಮರ್ಶಕರ ಮೆಚ್ಚುಗೆ ಗಳಿಸಿದ್ದರು. ಅವರ ಅನುವಾದಗಳು ತುಂಬ ಮೇಲು ನೆಲೆಯದಾಗಿದ್ದು, ಕನ್ನಡ ಅನುವಾದ ಕ್ಷೇತ್ರದಲ್ಲಿನ ಒಂದು ಮಹತ್ವದ ವಿಕ್ರಮ ಎನಿಸಿಕೊಂಡಿದೆ. ಈ ಸಾಹಸಕ್ಕಾಗಿ ನಾಡು ಅವರನ್ನು ಅಭಿನಂದಿಸಬೇಕು.’

ಹೀಗೆ ಹೇಳಿದವರು ಕನ್ನಡದ ಪ್ರಸಿದ್ಧ ಕವಿ. ಡಾ.ಜಿ.ಎಸ್‌. ಶಿವರುದ್ರಪ್ಪನವರು. ಬೆಂಗಳೂರಿನ ಸುಚಿತ್ರಾ ಫಿಲಂ ಸೊಸೈಟಿಯಲ್ಲಿ 7-3-2002ರಂದು ನಡೆದ ಭಟ್ಟರ ‘ಷೇಕ್ಸ್‌ಪಿಯರ್‌ ಸಾನೆಟ್‌ ಚಕ್ರ’ ಮತ್ತು ‘ಕಿನ್ನರ ಲೋಕ’ ಎಂಬ ಎರಡು ಪುಸ್ತಕಗಳ ಬಿಡುಗಡೆಯ ಉತ್ಸವದ ಅಧ್ಯಕ್ಷತೆ ವಹಿಸಿದ್ದ ಜಿ.ಎಸ್‌. ಎಸ್‌. ಮೊದಲ ಪುಸ್ತಕದ ಬಗ್ಗೆ ಮಾತನಾಡುತ್ತಾ - ಭಟ್ಟರ ಅನುವಾದಗಳ ಹಿಂದಿರುವ ಪ್ರತಿಭೆ, ಶ್ರದ್ಧೆ, ಶ್ರಮ ಪಾಂಡಿತ್ಯಗಳನ್ನು ಮುಕ್ತ ಮನಸ್ಸಿನಿಂದ ಪ್ರಶಂಸಿದರು.

ಲಕ್ಷ್ಮೀನಾರಾಯಣ ಭಟ್ಟರು ಶ್ರೇಷ್ಠ ನವ್ಯ ಕವಿತೆಗಳನ್ನು ಬರೆದು ನಾಡಿನ ಪ್ರತಿಷ್ಠಿತ ಕವಿ ಎನಿಸಿಕೊಂಡಿದ್ದಾರೆ. ಮೋಹಕವಾದ ನೂರಾರು ಭಾವಗೀತೆಗಳನ್ನು ಬರೆದು ಎಲ್ಲ ಜನಕ್ಕೆ ಪ್ರಿಯರಾಗಿದ್ದಾರೆ. ಮಕ್ಕಳ ಗೀತೆಗಳನ್ನು ರಚಿಸಿ ಎಳೆಯರ ಜಗತ್ತನ್ನು ತಣಿಸಿದ್ದಾರೆ. ಹೀಗೆ ಅವರದ್ದು ಬಹುಮುಖ ಪ್ರತಿಭೆ. ತಮ್ಮ ಅನುವಾದ ಕೃತಿಗಳಿಂದ ಕನ್ನಡದ ಭಾವ ಸಂಪತ್ತನ್ನು ವಿಚಾರ ಸಂಪತ್ತನ್ನು ಬೆಳೆಸಿ ಯಶಸ್ವೀ ಲೇಖಕರಾಗಿದ್ದಾರೆ ಎಂದು ಜಿ.ಎಸ್‌. ಎಸ್‌. ಬಣ್ಣಿಸಿದರು.

ಕನ್ನಡದ ಪ್ರಸಿದ್ಧ ವಿಮರ್ಶಕರಾದ ಎಲ್‌.ಎಸ್‌. ಶೇಷಗಿರಿ ರಾಯರು, ಭಟ್ಟರ ಅನುವಾದದಲ್ಲಿ ಬಳಕೆಯಾಗಿರುವ ಭಾಷೆ, ಲಯ ಮತ್ತು ಸೃಜನಶೀಲತೆ ಅಪರೂಪದ್ದಾಗಿದ್ದು ಅವು ಕನ್ನಡಕ್ಕೆ ಬಹಳ ಬೆಲೆಯುಳ್ಳ ಕೊಡುಗೆಯಾಗಿದೆ ಎಂದರಲ್ಲದೆ, ಕೆಲವು ಪದ್ಯಗಳನ್ನು ಓದಿ ಭಟ್ಟರ ಅನುವಾದದ ಹೆಚ್ಚುಗಾರಿಕೆಗೆ ನಿದರ್ಶನ ನೀಡಿದರು.

ಪುಸ್ತಕಗಳನ್ನು ಬಿಡುಗಡೆ ಮಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಸಿ. ಸೋಮಶೇಖರ್‌ ಕಿನ್ನರ ಲೋಕ ಎಂಬ ಮಕ್ಕಳ ಕವಿತೆಗಳ ಸಮಗ್ರ ಸಂಪುಟದ ಕುರಿತು ಮಾತನಾಡಿದರು. ಇಲ್ಲಿರುವ ಎಷ್ಟೋ ಕವಿತೆಗಳು ನಾಡಿನ ಮಕ್ಕಳಿಗೆಲ್ಲ ಕಂಠಪಾಠವಾಗಿ ಹೋಗಿದೆ. ‘ಭಾಳ ಒಳ್ಳೇವ್ರ್‌ ನಮ್‌ ಮಿಸ್ಸು ’ ‘ಗೇರ್‌ ಗೇರ್‌ ಮಂಗಣ್ಣ ’‘ ಟಾಮಿ ಟಾಮಿ ನಮ್ಮನೆ ನಾಯಿ’ ಮೊದಲಾದ ಕವಿತೆಗಳು ಮಕ್ಕಳ ಜಗತ್ತನ್ನು ಇನ್ನಷ್ಟು ಸುಂದರವಾಗಿ ಮಾಡಿವೆ ಎಂದು ಶ್ಲಾಘಿಸಿದರು.

ಗೌರಿಸುಂದರ್‌ ಅವರ ‘ ಚಿತ್ರಶ್ರೀ’ ಸಂಸ್ಥೆ ಈ ಸಮಾರಂಭವನ್ನು ಏರ್ಪಡಿಸಿತ್ತು. ಆರಂಭದಲ್ಲಿ ಕುಮಾರಿ ಅರ್ಚನಾ ಉಡುಪ, ಭಟ್ಟರ ಎರಡು ಭಾವಗೀತೆಗಳನ್ನು ಆಕರ್ಷಕವಾಗಿ ಹಾಡಿದರು.

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X