‘ನಿಶ್ಯಬ್ದ- ಸಂಗೀತ’ ವೆಂಬ ಅನುಭವ ಲಹರಿ

*ಎಸ್‌.ಕೆ. ಹರಿಹರೇಶ್ವರ

ಮೂವತ್ತ ನಾಲ್ಕು ಹಾಸ್ಯ ಪ್ರಸಂಗಗಳನ್ನುಳ್ಳ ಈ ಸಂಕಲನ ಡಾ. ನಂಜುಂಡಸ್ವಾಮಿಯವರ ಭಾರತದಲ್ಲಿನ ಮತ್ತು ಅಮೆರಿಕಾದಲ್ಲಿನ ಅನುಭವಗಳ ಹಿನ್ನೆಲೆಯಲ್ಲಿ ಮೂಡಿ ಬಂದಂಥವು. ಸರಳ ನಿರೂಪಣೆಯಲ್ಲಿ ಸುಲಭವಾಗಿ ಓದಿಸಿಕೊಂಡು ಹೋಗುವ ಈ ವ್ಯಕ್ತಿ- ಘಟನೆಗಳ ನುಡಿ-ಚಿತ್ರಗಳ ಲೇಖಕರು ಭಾರತದಲ್ಲಿ ಬೆಳೆವಾಗ ಎದುರಿಸಿದ ತೊಳಲಾಟಗಳನ್ನೂ, ಇತ್ತ ವಿದೇಶಕ್ಕೆ ಬಂದ ಹೊಸದರಲ್ಲಿ ಅನುಭವಿಸಿದ ಪರಿಪಾಟಲುಗಳನ್ನೂ ಹೃದಯಂಗಮವಾಗಿ ಬಣ್ಣಿಸುತ್ತವೆ. ಸಂಗೀತದ ಬಗ್ಗೆ ಈ ವಿಕಟ-ಕವಿಯ ಒಲವು- ಹಗೆಯ ಇಬ್ಬಂದಿಯ ನೆರಳು ಪುಸ್ತಕದಲ್ಲಿನ ಬರಹಗಳ ಹಿಂಬದಿಯಲ್ಲಿ ಅಚ್ಚೊತ್ತಿ ಕುಳಿತಿದೆ. ವಿಭಿನ್ನ ಪರಿಸರದಲ್ಲಿ ಬೆಳೆದು, ಹೊಸ ವಾತಾವರಣಕ್ಕೆ ಹೊಂದಿಕೊಳ್ಳುವ ತವಕದಲ್ಲಿ ಇತ್ತ ವಲಸೆ ಬಂದ ಪ್ರತಿ ಭಾರತೀಯ ಸುಶಿಕ್ಷಿತನೂ ಪಡುವ ಅನೇಕ ಪೇಚಾಟದ ಸಂದರ್ಭಗಳ ಲಹರಿಗಳು ತಿಳಿ ಹಾಸ್ಯದ ಹೊನಲಾಗಿ ಇಲ್ಲಿ ಹರಿದಿದೆ.

ಭಾರತದಲ್ಲಿ ಅವರ ಊರಿನ ಜನ-ಜನಿತ ಪ್ರಕರಣ ಪ್ರಹಸನಗಳು ನಮ್ಮನ್ನು ನಗಿಸುವ ಸೊಗಸು ಒಂದು ಬಗೆಯದು. ಇದಕ್ಕೆ ಪೂರಕವಾಗಿ, ಅಲ್ಲಿಂದ ಹೊರಡುವ ತರಾತುರಿಯಲ್ಲಿ ಪ್ರಯಾಣದ ಸಿದ್ಧತೆಯಲ್ಲಿ ಅನುಭವಿಸಿದ ಅವಿವೇಕಿತನ, ‘ಎಲಾ ಇವನ ಹೆಸರೇನು’ ತರುವ ತಲೆ ಕೆರೆತ, ‘ಹೆಸರಿನಲ್ಲಿ ಏನಿದೆ - 1 ಮತ್ತು 2’ ಗಳಲ್ಲಿ ಮನಗಂಡ ಮಹತ್ವ, ‘ಸ್ವಾತಂತ್ರ್ಯ ದಿನಾಚರಣೆ’ ಯಲ್ಲಿ ಆಡಿದ ಎಣ್ಣೆ ಮುಖದವರ ನಾಟಕ, ಲೇಕ್‌ಸಿಟಿಯ ಸ್ವಂತ ಮನೆಯ ‘ಸೋರುವ ಸೂರಿ’ ಗೆ ಮಾಡಿದಂತೆ, ಭಾರತೀಯರ ಸಂಘದ ಕಾರ್ಯಕ್ರಮವೊಂದರಲ್ಲಿ ಇವರು ಮಾಡಿದ ‘ಜಾಮೂನು ರಿಪೇರಿ’, ‘ಹೊಂಬಿಸಲ ತೋಟ’ಕ್ಕೆ ಮರುಳಾಗಿ ಬಿದ್ದ ಬೇಸ್ತು , ಹೆಂಡತಿ ತೌರಿಗೆ ಹೋಗಿದ್ದಾಗ ‘ನಾನು ಮಾಡಿದ ಪಿಟ್ಜಾ ’ ಫಜೀತಿ, ಹೆಂಡತಿಗೆ ಸುಳ್ಳು ಹೇಳಲಾರದೆ, ‘ಟ್ರಾಫಿಕ್‌ ಟಿಕೆಟ್‌ ಸ್ಕೂಲಿನಲ್ಲಿ ’ ಆಡಿದ ಒದ್ದಾಟ, ನವಿಲಿನಂತೆ ಕೆಂಬೂತವೂ ಕುಣಿದು ವೈದ್ಯರು ಹವ್ಯಾಸೀ ಇಂಜಿನಿಯರ್‌ ಆದ ಎರಡು ಸಿಟ್‌ ಕಾಂಗಳು, ಅತಿ ಬುದ್ಧಿವಂತಿಕೆ ಮಾಡಹೋಗಿ ‘ಟ್ರಾಫಿಕ್‌ ಟಿಕೆಟ್‌- ಕೋರ್ಟಿನಲ್ಲಿ ’ ಇಂಗು ತಿಂದ ಮಂಗನಾದದ್ದು, ಇವೆಲ್ಲ ಚಟಾಕಿಗಳ ಜೊತೆಗೆ ಕುತೂಹಲ ಹುಟ್ಟಿಸುವ ಹಣೆಪಟ್ಟಿಯ ಕಿರೀಟ ಕಥಾನಕವೂ ಇಲ್ಲಿದೆ.

‘ನೀವು ಹಾಡಬೇಡಿ’ , ಅಥವಾ ‘ನಿಮ್ಮ ಹಾಡು ಬೇಡ ’ - ಎನ್ನುವ ಹೆಂಡತಿಯ ಮನೋಧರ್ಮ, ಅವಳ ಎಂಥಾ ಜಾಣ್ತನದ ನಡವಳಿಕೆಯಿಂದ ನುಂಗಲಾರದ ಬಿಸಿ ತುಪ್ಪವಾಯ್ತೆಂಬ ಪ್ರಸಂಗ ಪುಸ್ತಕದ ಶೀರ್ಷಿಕೆಯ ಲೇಖನ ‘ನಿಶ್ಯಬ್ದ ಸಂಗೀತ’ ದಲ್ಲಿ ನಗೆ ಬುಗ್ಗೆ ಎಬ್ಬಿಸುತ್ತದೆ.

ಈ ಪ್ರಯತ್ನಕ್ಕೆ ಸ್ಫೂರ್ತಿ ಕೊಟ್ಟ ತಮ್ಮ ಅಣ್ಣ ಡಾ. ರಂಗನಾಥರನ್ನು ನೆನೆಯುತ್ತಾ ಲೇಖಕರೇ ಬರೆದ ರೇಖಾಚಿತ್ರಗಳ್ನೊಳಗೊಂಡ ಈ ಕೃತಿಯನ್ನು ‘ಇಪ್ಪತ್ತು ವರ್ಷಗಳ ಕಾಲ ನಮ್ಮನ್ನೆಲ್ಲಾ ನಕ್ಕು ನಗಿಸಿ , ಅಕಾಲದಲ್ಲಿ ಕಾಲಾಧೀನನಾದ ಪರಮ ಮಿತ್ರ ಮಣೀಂದ್ರನ ನೆನಪಿಗೆ’ ಅರ್ಪಿಸಿದ್ದಾರೆ. ಈ ಇಡೀ ಪುಸ್ತಕವನ್ನು ಒಂದು ಧ್ವನಿ ಮುದ್ರಿತ ಗಣಕ ಸಂಪುಟ (ಸಿ.ಡಿ.)ವನ್ನಾಗಿ ತರುವ ಹವಣಿಕೆಯಲ್ಲಿದ್ದಾರೆ, ಕೂಡ !

ನಿಲ್ಲದ ಓಟದ ನಡುವೆಯೂ ಒಮ್ಮೆ ನಿಂತು, ನಡೆದ ಜಾಡಿನತ್ತ ಹಿಂತಿರುಗಿ ನೋಡಿ , ಎಡವಿದ, ಮುಗ್ಗರಿಸಿದ, ಪೆಚ್ಚಾಗಿಸಿದ, ಪೆದ್ದು ಪೆದ್ದಾಗಿಸಿದ ಆ ರಸ ನಿಮಿಷಗಳ ಸವಿನೆನಪುಗಳನ್ನು ಮೆಲುಕು ಹಾಕುವುದು ಒಂದು ಆರೋಗ್ಯಕರ ಮಾರ್ಗ. ಬಾಳ ಸಂಜೆಯ ವೇಳೆ, ಡಾ. ಸ್ವಾಮಿಯವರು ತಾವೂ ನಕ್ಕು ಓದುಗರನ್ನೂ ನಗಿಸಿ ಉಲ್ಲಸಿತರನ್ನಾಗಿ ಮಾಡಲು ನಡೆಸಿರುವ ಪ್ರಯತ್ನದ ಫಲ, ‘ನಿಶ್ಯಬ್ದ ಸಂಗೀತ’ ಯಶಸ್ವಿಯಾಗಿದೆ !

‘ನಿಶ್ಯಬ್ದ - ಸಂಗೀತ’ : ಪ್ರಕಾಶಕರು - ಮನೋಹರ ಗ್ರಂಥಮಾಲಾ, ಲಕ್ಷ್ಮೀ ಸದನ, ಸುಭಾಸ ರಸ್ತೆ, ಧಾರವಾಡ 580001, ಪುಟಗಳು 12+ 158, ಪ್ರಥಮ ಮುದ್ರಣ 2000. ಲೇಖಕರ ವಿಳಾಸ - ಡಾ. ಎಚ್‌. ಕೆ. ನಂಜುಂಡ ಸ್ವಾಮಿ, 3650. ಸೌತ್‌ ವೆಸ್ಟ್‌ 24 ಅವೆನ್ಯೂ ರಸ್ತೆ , ಓಕಲಾ, ಫ್ಲಾರಿಡಾ 34474, ಯು.ಎಸ್‌. ಎ.

ಮುಖಪುಟ / ಸಾಹಿತ್ಯ ಸೊಗಡು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+