• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾಮಾನ್ಯನಿಂದ ಅಸಾಮಾನ್ಯನವರೆಗೆಸ್ವಾತಂತ್ರ ್ಯ ಚಳವಳಿಯ ನೆನಪುಗಳು

By Staff
|

*ಡಾ.ಎಚ್‌.ಎಸ್‌. ಗೋಪಾಲರಾವ್‌

ಭಾರತದ ಸ್ವಾತಂತ್ರ್ಯ ಸಂಗ್ರಾಮವನ್ನು ಕುರಿತಂತೆ ಕನ್ನಡದಲ್ಲಿ ಕೆಲವು ಕಾದಂಬರಿಗಳು ಈಗಾಗಲೇ ಓದುಗರ ಗಮನ ಸೆಳೆದಿವೆ. ಅವುಗಳಲ್ಲಿ ನಿರಂಜನರ ಚಿರಸ್ಮರಣೆ ಹಾಗೂ ಬಸವರಾಜ ಕಟ್ಟೀಮನಿ ಅವರ ಮಾಡಿ ಮಡಿದವರು ಪ್ರಮುಖವಾದವು. ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಹಲವು ಒಳ್ಳೆಯ ಕಥೆಗಳೂ ಪ್ರಕಟಗೊಂಡಿವೆ. ಅದೇ ವಸ್ತುವನ್ನು ಕುರಿತಂತೆ ಅದೇ ಸಂದರ್ಭದಲ್ಲಿ ಮತ್ತು ಆನಂತರವೂ ಹಲವು ನಾಟಕಗಳು ಓದುಗರ ಮತ್ತು ಪ್ರೇಕ್ಷಕರ ಮನ ಮುಟ್ಟಿವೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡ ಕೆಲವು ಹಿರಿಯರನ್ನು ಕುರಿತು ಗ್ರಂಥಗಳೇ ಪ್ರಕಟಗೊಂಡಿವೆ. ಸ್ವಾತಂತ್ರ್ಯ ಹೋರಾಟದ ಬಗೆಗೆ ಹೇರಳ ಮಾಹಿತಿಗಳ ಸಂಗ್ರಹ ಈಗ ಲಭ್ಯವಿದೆ.

ಸ್ವಾತಂತ್ರ್ಯ ಸಂಗ್ರಾಮ ಕುರಿತ ಈವರೆಗಿನ ಕೃತಿಗಳನ್ನು ಗಮನಿಸಿದಾಗ ಭಾರತದಲ್ಲಿ ಸ್ವಾತಂತ್ರ್ಯಕ್ಕೆ ನಡೆದ ಹೋರಾಟವು ಕೇವಲ ಕೆಲವು ರಾಜಕೀಯ ಪಕ್ಷಗಳು ಮತ್ತು ಕೆಲವು ವ್ಯಕ್ತಿಗಳನ್ನಷ್ಟೇ ಕೇಂದ್ರೀಕರಿಸಿಕೊಂಡಿತ್ತು ಎನಿಸಿದರೆ ಆಶ್ಚರ್ಯವಾಗುವುದಿಲ್ಲ . ಸ್ವಾತಂತ್ರ್ಯದ ಬಗ್ಗೆ ರಾಜಕೀಯ ನಾಯಕರಿಗೆ ಮಾತ್ರವಲ್ಲದೆ ಸಾಮಾನ್ಯ ಜನತೆಗೂ ಕಾಳಜಿ ಇತ್ತು ಮತ್ತು ಅಂತಹ ಜನತೆಯನ್ನು ಸರಿಯಾಗಿ ಬಳಸಿಕೊಳ್ಳುವ ಜಾಣತನವನ್ನು ಕೆಲವು ನಾಯಕರು ಮಾಡಿದರು. ಭಾರತದಲ್ಲಿ ನಡೆದ ಸ್ವಾತಂತ್ರ ್ಯ ಸಂಗ್ರಾಮದ ಸಮಗ್ರ ಚಿತ್ರಣ ಮತ್ತು ಅದರಲ್ಲಿ ಸಾಮಾನ್ಯ ಜನತೆಯ ಪಾತ್ರದ ಬಗ್ಗೆ ತಿಳಿಯುವ ಅವಶ್ಯಕತೆ ಇತ್ತು . ಅಂತಹ ಅವಶ್ಯಕತೆಯನ್ನು ಕೋ. ಚೆನ್ನಬಸಪ್ಪ (ಕೋ.ಚೆ.) ಪೂರೈಸಿದ್ದಾರೆ.

ಗೌಣವಲ್ಲದ ಪಾತ್ರಗಳ ಐತಿಹಾಸಿಕ ಕಾದಂಬರಿ

ದಾಖಲೆಗಳ ಮಹಾಪೂರದಲ್ಲಿ ಕೇವಲ ಚರಿತ್ರೆ ಅಥವಾ ಇತಿಹಾಸ ಆಗಿಬಿಡಬಹುದಾಗಿದ್ದ ಈ ಕೃತಿಯು ತನ್ನ ಸೃಜನಾತ್ಮಕತೆಯಿಂದಾಗಿ ಒಂದು ಐತಿಹಾಸಿಕ ಕಾದಂಬರಿಯಾಗಿ ರೂಪುಗೊಂಡಿದೆ. ಬಹುಮುಖ್ಯ ಪ್ರಗತಿಶೀಲ ಸಾಹಿತಿಗಳಲ್ಲಿ ಒಬ್ಬರಾದ ಕೋ.ಚೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಕಾರಣದಿಂದ ಆ ಸಂದರ್ಭದ ಸೂಕ್ಷ್ಮಾತಿಸೂಕ್ಷ್ಮ ವಿಷಯಗಳೆಲ್ಲವನ್ನೂ ಬಲ್ಲವರಾಗಿದ್ದರು. ಆ ಅನುಭವ ಈ ಕೃತಿಯಲ್ಲಿ ಸಂಪೂರ್ಣವಾಗಿ ಬಳಕೆಯಾಗಿದೆ. ಯಾವುದೇ ಒಂದು ವರ್ಷದ ಹಂಪಿ ಹುಣ್ಣಿಮೆಯ ದಿನ ಹಂಪಮ್ಮ - ಪಂಪಾವತಿಯ ತೇರಿನ ಸಂದರ್ಭದಲ್ಲಿ ಕೊಟ್ರಪ್ಪ - ಸಿದ್ಧಮ್ಮರಿಗೆ, ದೊರೆತ ಅನಾಥ ಮಗು ವಿರುಪಾಕ್ಷಿ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಳಿಗೆ ಸಾಕ್ಷಿಯಾಗಿರುವುದನ್ನು ಕೋ.ಚೆ. ಸಮರ್ಥವಾಗಿ ಚಿತ್ರಿಸಿದ್ದಾರೆ.

ಗಾಂಧೀ ಗಾಳಿ ಬೀಸಿ ಭಾರತದಾದ್ಯಂತ ಸ್ವಾತಂತ್ರ್ಯಕ್ಕೆ ಹೋರಾಟ ಆರಂಭವಾದುದನ್ನು ತಿಳಿಸುತ್ತಾ , ಕಥನಕ್ಕೆ ಒಂದು ಖಚಿತ ಸ್ವರೂಪ ನೀಡಿದ್ದಾರೆ. ದಾವಣಗೆರೆಯ ಅಬ್ದುಲ್‌ ಖಾದರ್‌ ಮತ್ತು ಕೊಟ್ಟೂರಿನ ಬಸವ್ವ (ಮುಂದೆ ವಂದೇ ಮಾತರಂ ಬಸಕ್ಕ ಎಂದೇ ಖ್ಯಾತಿ ಪಡೆದವಳು), ರಮಣಯ್ಯ, ಮಲಿಯಜ್ಜ , ದೇವೇಂದ್ರಪ್ಪ , ಇತ್ಯಾದಿ ಪಾತ್ರಗಳು ಕಥೆಯ ಜೊತೆಗೆ ಹೊಂದಿಕೊಂಡುಬಿಟ್ಟಿವೆ. ಇಲ್ಲಿ ಯಾವ ಪಾತ್ರಗಳೂ ಗೌಣವಲ್ಲ . ಆಯಾಯ ಸಂದರ್ಭಕ್ಕೆ ಎಲ್ಲ ಪಾತ್ರಗಳೂ ಅರ್ಥಪೂರ್ಣವಾಗಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತವೆ.

ನಾಯಕರ ಸೂಕ್ಷ್ಮ ವಿಚಾರಗಳ ಅನಾವರಣ : ಬಳ್ಳಾರಿಯ ಆಸುಪಾಸಿನಲ್ಲಿ ನಡೆಯುವ ಈ ಕಥೆ ಇಡೀ ಭಾರತವನ್ನು ಆಕ್ರಮಿಸಿಬಿಡುತ್ತದೆ. ಸುಭಾಷ್‌ಚಂದ್ರ ಬೋಸ್‌, ಅರವಿಂದ ಘೋಷ್‌, ಅಬ್ದುಲ್‌ ಗಫಾರ್‌ ಖಾನ್‌, ಆನಿಬೆಸೆಂಟ್‌ ಇತ್ಯಾದಿ ಅನೇಕ ನಾಯಕರ ಎಷ್ಟೋ ಸೂಕ್ಷ್ಮ ವಿಚಾರಗಳು ಈ ಕೃತಿಯ ಮೂಲಕ ಪರಿಚಯವಾಗುತ್ತವೆ. ಜಾತ್ರೆಗಳು ಮತ್ತು ಸಂತೆಗಳೂ ಸಹ ಸ್ವಾತಂತ್ರ್ಯ ಚಳವಳಿಗೆ ನೆರವಾದವು. ಚಳವಳಿಯ ಸಮಯದಲ್ಲೇ ಹರಿಜನರ, ಕಾರ್ಮಿಕರ ಸಮಸ್ಯೆಗಳು ಚರ್ಚೆಗೆ ಬಂದು ಪರಿಹಾರಕ್ಕೆ ಅವಕಾಶಗಳು ದೊರೆಯುತ್ತಿದ್ದವು. ಹಂಪಿಯ ಪ್ರಾಂತೀಯ ಕಾಂಗ್ರೆಸ್‌ ಸಮ್ಮೇಳನ, ಧಾರವಾಡ ಪ್ರಾಂತೀಯ ಕಾಂಗ್ರೆಸ್‌ ಸಮ್ಮೇಳನ ಇತ್ಯಾದಿ ಸಂದರ್ಭಗಳ ಮತ್ತು ವಿಚಾರಗಳ ಚರ್ಚೆ ಮತ್ತು ವಿಶ್ಲೇಷಣೆಗೂ ಕೋ.ಚೆ ಮಹತ್ವ ನೀಡಿದ್ದಾರೆ. ಬಹುತೇಕ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡ ಎಲ್ಲಾ ಮಹನೀಯರೂ ಈ ಕೃತಿಯಲ್ಲಿ ನಮಗೆ ಕಾಣುತ್ತಾರೆ.

ಗಂಗಾಧರ ರಾವ್‌ ದೇಶಪಾಂಡೆ, ಕಾರ್ನಾಡು ಸದಾಶಿವರಾವ್‌, ಮುದವೀಡು ಕೃಷ್ಣರಾವ್‌, ಕುದ್ಮಲ್‌ ರಂಗರಾವ್‌, ನಾ.ಸು. ಹರ್ಡೀಕರ್‌, ಇತ್ಯಾದಿ ಚಿರಪರಿಚಿತ ಹೆಸರುಗಳ ಜೊತೆಗೆ ವಂದೇಮಾತರಂ ಬಸಕ್ಕ , ಮಲಿಯಜ್ಜ , ಖಾದರ್‌, ರಮಣಯ್ಯ, ಹರಿಹರರಾಯ, ಕನಕಲಕ್ಷ್ಮಿ ಹಂಪಿಯ ಸ್ವಾಮಿ ಮುಕ್ತಾನಂದ ಇತ್ಯಾದಿ ನಮಗೆ ಕಾಲ್ಪನಿಕ ಎನಿಸುವ ಪಾತ್ರಗಳ ಮೂಲಕ ಆ ಕಾಲದಲ್ಲಿ ಸ್ವಾತಂತ್ರ್ಯಕ್ಕೆ ನಡೆದ ಹೋರಾಟಗಳ ವಿವಿಧ ಮುಖಗಳ ಪರಿಚಯ ಈ ಕೃತಿಯ ಮೂಲಕ ಆಗುತ್ತದೆ.

ಬಹುತೇಕ ಸ್ವಾತಂತ್ರ್ಯ ಚಳವಳಿಯ ಎಲ್ಲಾ ಘಟನೆ ಮತ್ತು ವಿಚಾರಗಳನ್ನೂ ಒಳಗೊಂಡಿರುವ ಈ ಕೃತಿಯು ಸ್ವಾತಂತ್ರ್ಯ ಚಳವಳಿಯು ಭಾರತದ ಮುಳುಗಿದೂರಿನಿಂದ ಬ್ರಿಟನ್‌, ಅಮೇರಿಕಾ, ರಷ್ಯಾ, ಫ್ರಾನ್ಸ್‌ , ಜರ್ಮನಿ ಇತ್ಯಾದಿ ದೇಶಗಳವರೆಗೂ ಹೇಗೆ ಹರಡಿತ್ತು ಎಂಬುದರ ವಿವರಗಳನ್ನು ಒದಗಿಸುತ್ತದೆ. ಸುಭಾಷ್‌ಚಂದ್ರ ಬೋಸ್‌, ಅರವಿಂದ ಘೋಷ್‌ ಇತ್ಯಾದಿ ಹೋರಾಟಗಾರರ ಆತ್ಮೀಯ ಪರಿಚಯ ಮಾಡಿಕೊಡುತ್ತದೆ. ಅಷ್ಟೇ ಅಲ್ಲದೆ ಸ್ವಾತಂತ್ರ್ಯ ಬಂದ ಹೊತ್ತಿನಲ್ಲಿ ಬೇಡಿ ಕಳಚಿಕೊಂಡ ದೇಶ ಹೇಗೆ ಒಡೆಯಿತು ಎಂಬ ವಿವರಗಳು ಸತ್ಯಕ್ಕೆ ಸಮೀಪವಾಗಿವೆ ಎಂಬಷ್ಟು ಸಹಜವಾಗಿ ದಾಖಲಾಗಿವೆ.

ದಿನಾಂಕ, ತಿಂಗಳು ಮತ್ತು ಇಸವಿಗಳಿದ್ದಿದ್ದರೆ ಇತಿಹಾಸದ ಆಕರ ಗ್ರಂಥವಾಗಿಬಿಡಬಹುದಾಗಿದ್ದ ಈ ಕೃತಿಯು ಮುಳುಗಿದೂರು ಮತ್ತು ಅದರ ಆಸುಪಾಸಿನ, ನಮಗೆ ಮಾತ್ರ ಕಾಲ್ಪನಿಕವೆನಿಸುವ ಪಾತ್ರಗಳಿಂದಾಗಿ ಈ ಶತಮಾನದ ಒಂದು ಉತ್ತಮ ಐತಿಹಾಸಿಕ ಕಾದಂಬರಿಯಾಗಿ ನಮಗೆ ದಕ್ಕಿದೆ. ತಮ್ಮ ಅನುಭವಗಳ ಜೊತೆಗೆ ಕೋ.ಚೆ. ಆಧರಿಸಿರುವ ಆಕರಗಳು ಮತ್ತು ಅವುಗಳನ್ನು ಬಳಸಿಕೊಂಡಿರುವ ಬಗೆ ಬೆರಗು ಹುಟ್ಟಿಸುತ್ತದೆ.

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more