• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹರಿಹರೇಶ್ವರರ ವಿದೇಶಕ್ಕೆ ಬಂದವರು, ಒಂದು ಅನ್ನಿಸಿಕೆ -ಡಾ. ವಿಜಯಾ ಸುಬ್ಬರಾಜ್‌

By Staff
|

*ಡಾ. ವಿಜಯಾ ಸುಬ್ಬರಾಜ್‌

ಅಚ್ಚ ಭಾರತೀಯನೂ ಕನ್ನಡಿಗನೂ ಆಗಿರುವ ಎಸ್‌.ಕೆ. ಹರಿಹರೇಶ್ವರ ಅವರು ಅವಕಾಶಗಳ ಅಮರಾವತಿಯಾದ ಅಮೇರಿಕೆಯಲ್ಲಿ ನೆಲೆಸಿದ್ದಾರೆ. ನೆಲ ಬಿಟ್ಟು ಹೋದರೂ, ನಾಲಗೆಯ ಪರಿಸರ ಬೇರೆಯಾದರೂ ಹುಟ್ಟಿದ ನೆಲ, ನೀರು, ಗಾಳಿಯನ್ನು ಮರೆಯುವುದೆಂದರೆ ಅದು ಆತ್ಮದ್ರೋಹವಾಗುತ್ತದೆ. ಆದರೆ, ಹಾಗೆಂದು ತಾಯಿನೆಲದಲ್ಲೇ ಬೇರು ಬಿಟ್ಟುಕೊಂಡು ಇಲ್ಲಿಯೇ ಉಳಿದು ಸ್ಥಗಿತಗೊಳ್ಳುವುದನ್ನು ಒಪ್ಪಿಕೊಳ್ಳುವುದಿಲ್ಲ.

ವೈಯಕ್ತಿಕವಾಗಿ , ಬೌದ್ಧಿಕ, ಭೌತಿಕಾಭಿವೃದ್ಧಿ ಮತ್ತು ಪ್ರಗತಿ ವಿಕಾಸಗಳಿಗಾಗಿ ಮುಕ್ತ ಅವಕಾಶಗಳ ಶೋಧದಲ್ಲಿ ಹೊರಟಾಗ ವಿಶ್ವದ ಅನೇಕ ಎಡೆಗಳು ಕೈ ಬೀಸಿ ಕರೆಯುತ್ತವೆ. ಅವಕಾಶಗಳ ಮಹಾಪೂರದ ವರ್ಣಜಾಲವನ್ನು ಎಸೆಯುತ್ತವೆ. ಮನುಷ್ಯ ಮಾತ್ರನಾದವನು ಇಂತಹ ಆಮಿಷ, ಅವಕಾಶಗಳು ಎದುರಾದಾಗ ಅವುಗಳನ್ನು ಬಾಚಿ ಹಿಡಿಯುತ್ತಾನೆ. ಆದರೆ, ಎಲ್ಲೇ ಇರು ಹೇಗೇ ಇರು ಎಂದೆಂದಿಗೂ ಕನ್ನಡವಾಗಿರು ಎಂದು ಬಯಸುವ ಕವಿಯಂತೆ, ಹರಿಹರೇಶ್ವರ ಅವರು ದೇಶ ಬಿಟ್ಟರೂ ದೇಶಾಭಿಮಾನ ಬಿಡದಾದರು. ಭಾಷೆ ಬಿಟ್ಟರೂ ಭಾಷೆಯ ಮೋಹದಿಂದ ಮುಕ್ತರಾಗಲು ಸಾಧ್ಯವಾಗದೆ ಉಳಿದರು. ಈ ನೆಲದ, ಈ ಸಂಸ್ಕೃತಿಯ ಸಸಿಗಳನ್ನು ಸಮುದ್ರದಾಚೆಗೂ ಒಯ್ದು ಹೆಮ್ಮರವಾಗಿ ಬೆಳೆಸಲು ಪ್ರಯತ್ನಿಸಿದರು.

ಎದೆ ತುಂಬಾ ಕನ್ನಡ ಸಾಹಿತ್ಯ, ಸಂಸ್ಕೃತಿಯ ಪ್ರೀತಿಯನ್ನು ತುಂಬಿಸಿಕೊಂಡವರಿಗೆ ಹೊರದೇಶದಲ್ಲಿದ್ದರೂ ತಾನು ಬಿಟ್ಟು ಬಂದುದರ ನಾಸ್ಟಾಲ್ಜಿಯಾ ಕಾಡುತ್ತಲೇ ಇರುತ್ತದೆ. ಅಲ್ಲಿನ ಅದ್ಭುತ ಅವಕಾಶಗಳನ್ನು , ಆರ್ಥಿಕ ಅನುಕೂಲಗಳನ್ನು ಸಾರಾಸಗಟಾಗಿ ತಿರಸ್ಕರಿಸಿ ಮರಳಿ ಬರಲಾಗದೆ, ಬಿಟ್ಟು ಬಂದದ್ದನ್ನು ಮರೆಯಲಾಗದೆ ಒಂದು ಬಗೆಯ ಮಾನಸಿಕ ಹಿಂಸೆಗೆ, ಒಮ್ಮೊಮ್ಮೆ ಅಪರಾಧಿಭಾವದೊಂದಿಗೆ ತುಡಿಯುವ ಎಲ್ಲ ಸಾಧ್ಯತೆಗಳಿರುತ್ತವೆ. ಎಷ್ಟೇ ತನ್ನದಲ್ಲದ ಅನ್ಯ ಪರಿಸರಕ್ಕೆ ಹೊಂದಿಕೊಂಡು ಬಾಳುತ್ತಿದ್ದರೂ ಪರಕೀಯತೆ, ಅನಾಥ ಪ್ರಜ್ಞೆಗಳು ಜಾಗೃತವಾಗಿ ಮನಸ್ಸು ತಲ್ಲಣಗೊಳ್ಳುವಂತೆ ಮಾಡುತ್ತವೆ. ಅಂತಹ ಯಾತನೆಯ ಸಂದಿಗ್ಧದ ಸಮಯದಲ್ಲಿ ಒಳಗಿನದನ್ನೆಲ್ಲ ತೋಡಿಕೊಳ್ಳುವುದೊಂದೇ ದಾರಿ. ಪ್ರತಿಕ್ಷಣದ ಅನುಭವಗಳು, ಎದುರಾಗುವ ಸನ್ನಿವೇಶ ಸಂದರ್ಭಗಳು ಸೃಜನಶೀಲ ಮನಸ್ಸನ್ನು ಅಭಿವ್ಯಕ್ತಿಗಾಗಿ ಒತ್ತಾಯಿಸುತ್ತವೆ. ಆಗ ಕವಿತೆಗಳಾಗಿಯೋ, ಕತೆಗಳಾಗಿಯೋ ಚಿತ್ರಗಳಾಗಿಯೋ ಮೈ ತಳೆದು ನಿಲ್ಲುತ್ತವೆ. ಹರಿಹರೇಶ್ವರ ಅವರು ಇಂತಹ ಹಿನ್ನೆಲೆಯಾಳಗೆ ಅವತರಿಸಿದ ಕವಿಯಾಗಿದ್ದಾರೆ.

ಅನಿವಾಸಿ ಭಾರತೀಯನೊಬ್ಬನ ಆತ್ಮ ನಿವೇದನೆಯಂತೆ ವಿದೇಶಕ್ಕೆ ಬಂದವರು ಕವನ ಸಂಕಲನ ಹುಟ್ಟು ಪಡೆದಿದೆ. ಸಹಜವಾಗಿ ಕನ್ನಡ ಸಾಹಿತ್ಯ ಸಂಸ್ಕೃತಿಗಳ ಬಗ್ಗೆ ಮೂಡಿಸಿಕೊಂಡ, ಬೆಳೆಸಿಕೊಂಡ ಒಲವು ಕವಿತೆಗಳಾಗಿ ಅರಳಿವೆ. ಅನ್ಯದೇಶ, ಭಾಷೆ, ಸಂಸ್ಕೃತಿಯ ಪರಿಸರದಲ್ಲಿ ಅಚ್ಚ ಕನ್ನಡಿಗನು ಕನ್ನಡಾಭಿಮಾನಿಯ ಮಾನಸಿಕ ತುಡಿತಗಳೇ ಇಲ್ಲಿನ ಕವಿತೆಗಳಾಗಿವೆ. ಭಾಷಾ ಪರಿಸರದಿಂದ ದೂರವಿದ್ದರೂ ಭಾಷೆಯ ಮೇಲಿನ ಹಿಡಿತ, ನಿರರ್ಗಳ ಪದ ಪ್ರಯೋಗ ಯಾವುದೇ ತೊಡಕು, ತಡವರಿಕೆಯಿಲ್ಲದೆ ಕಂಡು ಬಂದಿದೆ. ಕಾವ್ಯ ಭಾಷೆ, ಲಯಗಳ ಮೇಲೆ ಹಿಡಿತವಿದೆ. ನವೋದಯದ ಭಾವುಕತೆ, ಭಾವನಾತ್ಮಕತೆಗಳಿಗೆ ಬದಲಾಗಿ ವಸ್ತು ನಿಷ್ಠವಾದ ಮತ್ತು ತಾರ್ಕಿಕವಾದ ಮನಸ್ಸಿನ ದರ್ಶನ ಇಲ್ಲಿ ಸಿಗುತ್ತದೆ. ಸಾಮಾಜಿಕ ವ್ಯಂಗ್ಯ, ವಿಡಂಬನೆಗಳ ಜೊತೆಗೆ ಆತ್ಮ ವಿಡಂಬನೆಯೂ ಸೇರಿ ಹೇಳಬೇಕಾದ್ದನ್ನು ಹೇಳುವಾಗ ಪ್ರಾಮಾಣಿಕತೆ ಎದ್ದು ಕಾಣುತ್ತದೆ.

ಹರಿಹರೇಶ್ವರರು ಸಾಹಿತ್ಯ ವಿದ್ಯಾರ್ಥಿ ಅಲ್ಲದಿದ್ದರೂ ಕನ್ನಡ ಸಾಹಿತ್ಯ ಚಳವಳಿಗಳ, ಕಾವ್ಯ ಸ್ವರೂಪದ ಪರಿಚಯವಿದೆ. ಇಲ್ಲಿನ ಕವಿತೆಗಳು ನವ್ಯದ ಧಾಟಿಯಲ್ಲಿ ಸಾಗುತ್ತ ನವ್ಯ ಕಾವ್ಯ ನಿರೀಕ್ಷಿಸುವ ಪ್ರತಿಮೆ, ಪ್ರತೀಕಗಳನ್ನು ಒಳಗೊಂಡಿದ್ದು ಕೆಲವು ಕವಿತೆಗಳು ಅತ್ಯಂತ ಸೂಕ್ಷ್ಮವೂ ಸಾಂಕೇತಿಕವೂ ಆಗಿ ಸಾರ್ಥಕವೆನಿಸಿವೆ. ಈ ಮೊದಲೇ ಹೇಳಿದಂತೆ ಭಾಷೆ, ಲಯಗಳ ಮೇಲೆ ಒಳ್ಳೆಯ ಹಿಡಿತವಿದೆ. ಅವರು ಬಳಸುವ ನಿಯತಲಯದ ಯಶಸ್ಸನ್ನು ಕೆಳಗಿನ ಈ ಸಾಲುಗಳಲ್ಲಿ ಗಮನಿಸಬಹುದು.

ನೊಂದು ನಾ ಅತ್ತಾಗ, ಮೊರೆ ಕೇಳಿ ಬಳಿಸಾರಿ
ಬಂದು ಕೈ ಹಿಡಿದೆತ್ತಿ ಸಂತೈಸಿದೆ
ಪೂತ ಕರ ಪಲ್ಲವದಿ ಕಣ್ಣೊರೆಸೆ, ಮೈ ದಡವಿ
ದುಃಖ ಹಿಮಗಿರಿಯಲ್ಲಿ ನೀರಾಯಿತು !
ಇರುವಲ್ಲಿ ಎಲ್ಲ ಇದೆ ಎನ್ನುವ ಭ್ರಮೆ
ನಡುವೆ ಕಾಡುವ ಕೊರಗು
ಅಷ್ಟೇ ಸಾಲದೆಂಬಂತೆ,
ಎಲ್ಲಾ ಇದ್ದರೂ ಏನೂ ಇಲ್ಲದ ಭಾಸ, ಕೊರತೆ
ಶೂನ್ಯ ನಿರ್ವಾತ ವಿಲಾಸದಿ ಭ್ರಮೆಯ ಒರತೆ
ಕಳೆದ ಆರೋಗ್ಯವ ರೋಗಿ ನೆನೆವ ನಿಟ್ಟುಸಿರ ಚಿತೆ-
ಮರೀಚಿಕೆಯ ಸುಡು ಮಾಡದಲಿ ಇಲ್ಲಿ ಮರಳುಗಾಡಿನಲಿ
ನೀರು ನೆರಳಿನ ತಂಬೆಲರ ನಿಲುದಾಣ - ಸ್ನೇಹ, ಕಾಣ !
- ಸ್ನೇಹಕ್ಕೆ ನಮನ.
ಸ್ನೇಹವೊಂದರಲ್ಲಿ ಮಾತ್ರವೇ ಇಂತಹ ಪರಿಸ್ಥಿತಿಯಲ್ಲಿ ಪರಿಹಾರ!


ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more