ವಾರಾಂತ್ಯ ಲೇಖನ: ನುಗ್ಗಿಕೇರಿ ಹನುಮಪ್ಪನ ಭಕ್ತ ಸೈಯದ್ ಶೇಖ್

ಆಡು-ಮೇಕೆಗಳ ಮಧ್ಯೆ ಅಷ್ಟೇ ಕರಿ ಗಡ್ಡ-ತಲೆಗೂದಲಿನ ಜತೆಗೆ ಕಂಡ ಆತನ ಹೆಸರು ಸೈಯದ್ ಶೇಖ್. ತಲೆ ಮೇಲಿನ ಟೋಪಿ ಕೈಯಲ್ಲಿ ಹಿಡಿದು, ಮೇಕೆಗಳನ್ನು ಮೇಯಿಸುತ್ತಿದ್ದವನ ಜತೆಗೆ ಒಂದಿಷ್ಟು ಮಾತು ಕುದುರಿತು. ಏನ್ ಮಾಡ್ತೀರಿ, ಎಲ್ಲಿದ್ದೀರಿ ಎಂಬ ಕುಶಾಲಿಯ ಮಾತುಗಳು ಕ್ರಮೇಣ ಅಚ್ಚರಿಗೆ ದೂಡಿದವು.

ಸೈಯದ್ ಗೆ ಇಂಗ್ಲಿಷ್ ಗೊತ್ತು. ಕೈಯಲ್ಲೊಂದು ಪದವಿ ಇದೆ. ಜತೆಗೆ ಒಂದು ವರ್ಷದ ಕಂಪ್ಯೂಟರ್ ಕೋರ್ಸ್ ಕೂಡ ಮಾಡಿದ್ದಾರೆ. ಕಲಿತಿದ್ದೆಲ್ಲಾ ಧಾರವಾಡದಲ್ಲಿ ಯುಪಿಎಸ್ ಶಾಲೆ, ಕಿಟಲ್ ಕಾಲೇಜಿನಲ್ಲಿ. ಪ್ರಯತ್ನ ಅಂತೇನಾದರೂ ಮಾಡಿದ್ದರೆ ನೌಕರಿ ಹಿಡಿಯುವುದು ಕೂಡ ಕಷ್ಟ ಏನಾಗಿರಲಿಲ್ಲ.

ಆದರೆ, ಸೈಯದ್ ಗೆ ನುಗ್ಗಿಕೇರಿ ಹನುಮಪ್ಪನ ಮೇಲೆ ಭಾರೀ ಭಕ್ತಿ. ಇಲ್ಲಿನ ದೇವಸ್ಥಾನದಲ್ಲಿ ಕೊಡುತ್ತಿದ್ದ ಹತ್ತು ಕೇಜಿ ಅಕ್ಕಿ, ಎರಡು ಕೇಜಿ ಎಣ್ಣೆ-ಕಾಳು ಇವರ ಕುಟುಂಬಕ್ಕೆ ಸಾಕಾಗುತ್ತಿತ್ತು. ಕಲಿಯೋ ವಯಸ್ಸಿನಲ್ಲಿ ಸೈಯದ್, ಅವರ ಅಣ್ಣ-ತಮ್ಮರು ಹಾಗೂ ಸಹೋದರಿಯರಿಗೆ ಊಟಕ್ಕೇನೂ ತ್ರಾಸಾಗಲೇ ಇಲ್ಲ.[ಪ್ರೀತಿಸಿದ ಹುಡುಗಿಗಾಗಿ ಹಿಂದೂ ಧರ್ಮಕ್ಕೆ ಮತಾಂತರವಾದ ಮುಸ್ಲಿಂ ಯುವಕ]

ಅವರ ತಂದೆ-ತಾಯಿ ಕೂಡ ಮಕ್ಕಳನ್ನು ಎಲ್ಲೂ ಹೊರಗೆ ಕಳಿಸಲಿಲ್ಲ. ಮೊದಲಿಗೆ ಈ ಸೈಯದ್ ನ ಕುಟುಂಬ ಇದ್ದದ್ದು ತಾರಿಹಾಳದಲ್ಲಿ 1988ರಲ್ಲಿ ನುಗ್ಗಿಕೇರಿಗೆ ಬಂದಿದೆ. ಸೈಯದ್ ನ ತಂದೆಗೆ ತೇಜಸ್ವಿನಗರದಲ್ಲಿ ಜೋಶಿ ಅನ್ನೋರು ತಮ್ಮ ಪ್ರಿಂಟಿಂಗ್ ಪ್ರೆಸ್ ನಲ್ಲಿ ಕೆಲಸ ಕೊಟ್ಟರು.

ಅದೇ ಜೋಶಿಯವರ ಮೂಲಕವೇ ಹನುಮಪ್ಪನ ಗುಡಿಯಲ್ಲಿ ಸೇವೆ ಶುರು ಮಾಡಿದರು ಸೈಯದ್ ನ ತಂದೆ. ಗುಡಿಯಲ್ಲಿ ಯಾವ ಕಾರ್ಯಕ್ರಮ ಇದ್ದರೂ ಸೈಯದ್ ನ ಕುಟುಂಬ ಹಾಜರು. ಅಲ್ಲಿನ ಪ್ರಸಾದವೇ ಅವರ ಪಾಲಿಗೆ ಊಟ-ಹಬ್ಬದೂಟ ಎಲ್ಲವೂ. "ನಾನು ನಡೆದಾಡುವ ನೆಲ ಅವನದು, ಈ ಗಾಳಿ ಅವನದು. ನನ್ನಿಂದ ಹನುಮಪ್ಪನ್ನ ಬಿಟ್ಟಿರಕಾಗಲ್ಲ" ಎನ್ನುತ್ತಾರೆ ಸೈಯದ್.[ಜಾತಕ ನೋಡಿ ಔಷಧ ನೀಡುವ ಹೊನ್ನಾವರ ಬಳಿಯ ಧನ್ವಂತರಿ ದೇಗುಲ]

ಎಲ್ಲೋ ಹೋಗೋದು ನನಗೆ ಇಷ್ಟವಿಲ್ಲ

ಎಲ್ಲೋ ಹೋಗೋದು ನನಗೆ ಇಷ್ಟವಿಲ್ಲ

ನನಗೆ ಕೆಲಸದ ಅಗತ್ಯವೇ ಕಂಡುಬರಲಿಲ್ಲ. ಒಳ್ಳೆ ಉದ್ಯೋಗ ಹಿಡಿಯಲಿಲ್ಲ ಮೂರ್ಖ ಎಂದು ನನ್ನನ್ನ ಹೀಯಾಳಿಸಿದರೂ ಮನಸಿಗೆ ಹಚ್ಚಿಕೊಳ್ಳಲಿಲ್ಲ. ಇಲ್ಲಿಗೆ ಬಂದು ವಿದ್ಯೆ ಕಲಿತೆ. ಬದುಕುವುದು ಅರಿತೆ. ಇವನ್ನೆಲ್ಲ ಕತ್ತರಿಸಿಕೊಂಡು ಎಲ್ಲೋ ಹೋಗೋದು ನನಗೆ ಇಷ್ಟವಿಲ್ಲ.

ಒಂದು ಮೇಕೆ ಮಾರಿದರೆ ಎರಡು ತಿಂಗಳು ಚಿಂತೆಯಿಲ್ಲ

ಒಂದು ಮೇಕೆ ಮಾರಿದರೆ ಎರಡು ತಿಂಗಳು ಚಿಂತೆಯಿಲ್ಲ

ನನ್ನ ಅವ್ವನಿಗೆ ಅಜ್ಜನಿಂದ ಮೇಕೆಗಳು ಬಳವಳಿ ಬಂದಿದ್ದವು. ಅವುಗಳನ್ನು ಮೇಯಿಸಲು ಆರಂಭಿಸಿದೆ. ಐದಿದ್ದದ್ದು ಹತ್ತಾಯಿತು. ಇಪ್ಪತ್ತು, ನಲವತ್ತು, ಈಗ ಐವತ್ತಾಗಿವೆ. ಮನೆಯಲ್ಲಿ ಏನೂ ಇಲ್ಲದಿದ್ದಾಗ ಒಂದು ಮೇಕೆ ಮಾರಿದರೆ ಕನಿಷ್ಠ ಎರಡು ತಿಂಗಳು ಕುಟುಂಬ ನಡೆಯುತ್ತೆ. ಅದಿರಲಿ ಬಿಡಿ, ಎಲ್ಲಕ್ಕಿಂತ ಹನುಮಪ್ಪನ ದಯೆ ನಮ್ಮ ಮೇಲಿದೆ.

ಹನುಮಪ್ಪ ವಯೀ ದೇತಾ ಹೈ, ವಯೀ ಲೇತಾ ಹೈ

ಹನುಮಪ್ಪ ವಯೀ ದೇತಾ ಹೈ, ವಯೀ ಲೇತಾ ಹೈ

ಮತ್ತೊಬ್ಬರ ಹತ್ತಿರ ಕೆಲಸಕ್ಕೆ ಹೋಗಲ್ಲ. ಹನುಮಪ್ಪ ವಯೀ ದೇತಾ ಹೈ, ವಯೀ ಲೇತಾ ಹೈ. ಹೀ ಇಸ್ ಕೋಟ್ಯಧಿಪತಿ. ನಮ್ಮ ಮನೇಲಿ ಈವರೆಗೆ ಆದ ಯಾವ ಮದುವೆಗೂ ನಾವು ಸಾಲ ಮಾಡಿಲ್ಲ. ನನ್ನ ಮದುವೆ ಆದ ಮೇಲೆ ವಾಜಪೇಯಿ ನಗರದಲ್ಲಿ ಒಂದು ನಿವೇಶನ ಸಿಕ್ಕಿದೆ. ಈಗ ಹೆಂಡತಿ-ಮಕ್ಕಳ ಜತೆ ಅಲ್ಲೇ ಇದ್ದೀನಿ ಅಂತಾರೆ ಸೈಯ್ಯದ್.

ಗುಜರಿಯಲ್ಲಿ ಬಾಟಲಿ ಮಾರಾಟ

ಗುಜರಿಯಲ್ಲಿ ಬಾಟಲಿ ಮಾರಾಟ

ದಿನಕ್ಕೆ ಮೇಕೆ ಮೇಯಿಸುತ್ತಾ ಹದಿನೈದು ಕಿಲೋಮೀಟರ್ ಸುತ್ತಾಡುತ್ತಾರೆ. ಅಲ್ಲಿ-ಇಲ್ಲಿ ಬಿದ್ದ ಬಿಯರ್, ನೀರು, ತಂಪು ಪಾನೀಯ ಬಾಟಲ್, ಟಿನ್ ಎಲ್ಲವನ್ನೂ ಆರಿಸಿಕೊಂಡು ಗುಜರಿಗೆ ಹಾಕುತ್ತಾರೆ. ಅದರಿಂದ ಐವತ್ತು-ಅರವತ್ತು ರುಪಾಯಿ ಆಗುತ್ತದೆ. ಅದು ಸೈಯದ್ ಶ್ರಮಕ್ಕೆ ಸಿಗುತ್ತಿರುವ ಹೆಚ್ಚುವರಿ ಕೂಲಿಯಂತೆ.

ಭೂಮಿಗೆ ತಂದವನು ಅಲ್ಲಾ, ಸಾಕುತ್ತಿರುವವನು ಹನುಮಪ್ಪ

ಭೂಮಿಗೆ ತಂದವನು ಅಲ್ಲಾ, ಸಾಕುತ್ತಿರುವವನು ಹನುಮಪ್ಪ

ಮೂವತ್ತೊಂಬತ್ತು ವರ್ಷದ ಸೈಯದ್ ಗೆ ಯಾವುದರ ಬಗ್ಗೆಯೂ ದೂರುಗಳಿಲ್ಲ. ತಾನು-ತನ್ನ ಮೇಕೆಗಳು-ಹನುಮಪ್ಪ ಇಷ್ಟೇ. ನಮ್ಮನ್ನ ಭೂಮಿಗೆ ತಂದವನು ಅಲ್ಲಾ, ಸಾಕುತ್ತಿರುವವನು ನಮ್ಮ ಹನುಮಪ್ಪ ಅಂತಾರೆ ಸೈಯದ್. ನಿಮ್ಮ ಮೊಬೈಲ್ ನಂಬರ್ ಕೊಡ್ರೀ ಅಂದರೆ, ವಿಠ್ಠಲ ಗುಡಿ ಸಮೀಪ ಬಂದು ಆಡು ಮೇಸೋ ಸಯ್ಯದಾ ಅಂತ ಕೇಳ್ರೀ, ಯಾರಾದ್ರೂ ಹೇಳ್ತಾರೆ ಅಂತ ಹೊರಟೇ ಬಿಟ್ಟರು ಸೈಯದ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+