ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಲಾಗ್ ಆಕ್ಷನ್ ಡೇ 09 'ಹವಾಮಾನ ಬದಲಾವಣೆ'.

|
Google Oneindia Kannada News

Blog action day 09 kicks off awareness on climate change
ಬ್ಲಾಗ್, ಪೋರ್ಟಲ್ ಇವುಗಳ ಬಗ್ಗೆ ಪತ್ರಿಕೆಯೊಂದಕ್ಕೆ ನಾನು ಲೇಖನವೊಂದನ್ನು ಕಳಿಸಿದಾಗ ಆ ಪತ್ರಿಕೆಯಿಂದ ನನಗೆ ಬಂದ ಉತ್ತರ ಹೀಗಿತ್ತು: 'ಪತ್ರಿಕೆಯ ಓದುಗರ ಪೈಕಿ ಶೇಕಡಾ ಒಂದರಷ್ಟು ಜನರೂ ಅಂತರ್ಜಾಲವನ್ನು ಬಳಸುವುದಿಲ್ಲ, ಹೀಗಿರುವಾಗ ನಾವು ಪತ್ರಿಕೆಯಲ್ಲಿ ಅಂತರ್ಜಾಲದ ಬಗ್ಗೆ ಲೇಖನಗಳನ್ನು ಏಕೆ ಹಾಕಬೇಕು?'

ಏಕೆ ಹಾಕಬೇಕು ಎಂದು ವಿವರಿಸಿ ಒಂದು ಸುದೀರ್ಘ ಲೇಖನವನ್ನೇ ನಾನು ಬರೆಯಬಲ್ಲೆ. ಆದರೆ ಅಂಥ ಲೇಖನದ ಅಗತ್ಯ ನನಗೇನೂ ಕಂಡುಬರದು. ಏಕೆಂದರೆ, ಅಂತರ್ಜಾಲವು ಮುಂದೆ ಸರ್ವಾಂತರ್ಯಾಮಿ ಹಂತ ತಲುಪತೊಡಗಿದಾಗ ಮುದ್ರಣ ಮಾಧ್ಯಮವು ತಂತಾನೇ 'ದಾರಿಗೆ' ಬರುತ್ತದೆ. ಆದರೆ ನನಗೆ ಬಂದ ಆ ಉತ್ತರವು ವಿಚಾರಾರ್ಹವಂತೂ ಹೌದು. ಬ್ಲಾಗ್, ಪೋರ್ಟಲ್, ಆನ್‌ಲೈನ್ ಪತ್ರಿಕೆ ಮುಂತಾದ ಅಂತರ್ಜಾಲ ಸೌಲಭ್ಯಗಳನ್ನು ನಾವಿನ್ನೂ ಬರವಣಿಗೆ, ಚರ್ಚೆ ಮತ್ತು ಅಭಿಪ್ರಾಯ ವಿನಿಮಯಗಳಿಗಾಗಿ ಸೂಕ್ತವಾಗಿ ದುಡಿಸಿಕೊಳ್ಳುತ್ತಿಲ್ಲ.

ಬ್ಲಾಗ್‌ನ ಮಟ್ಟಿಗೆ ಹೇಳುವುದಾದರೆ, ಅಂತರ್ಜಾಲದ ಪ್ರತಿಯೊಬ್ಬ ಬಳಕೆದಾರನೂ ತನ್ನೊಂದು ಬ್ಲಾಗ್ ಹೊಂದಿ ತನ್ನ ಅಭಿಪ್ರಾಯಗಳನ್ನು ಅಂತರ್ಜಾಲಿಗರ ಮುಂದೆ ಇಡುವಂತಾದರೆ ಅದರ ಪರಿಣಾಮ ಅದ್ಭುತ! ಪ್ರತಿಯೊಬ್ಬ ವ್ಯಕ್ತಿಗೂ ಅವನದಾದ ಅಭಿಪ್ರಾಯಗಳಂತೂ ಇದ್ದೇ ಇರುತ್ತವಷ್ಟೆ. ಅಂತರ್ಜಾಲದ ಬಳಕೆದಾರನೆಂದಮೇಲೆ ಆತ ತಕ್ಕಮಟ್ಟಿಗಾದರೂ ವಿದ್ಯಾವಂತನೂ ಜ್ಞಾನಿಯೂ ಆಗಿಯೇ ಇರುತ್ತಾನೆ. ಅಂದಮೇಲೆ, ತನ್ನದಾದ ಬ್ಲಾಗ್ ಹೊಂದಿ ವಿವಿಧ ವಿಷಯಗಳ ಬಗ್ಗೆ ತನ್ನ ಅನ್ನಿಸಿಕೆಗಳನ್ನು ಇತರರೊಡನೆ ಹಂಚಿಕೊಳ್ಳಲು ಅವನಿಗೆ ಏನಡ್ಡಿ? ಮನುಷ್ಯ ಏನಿದ್ದರೂ ಸಂಘಜೀವಿಯೇ ತಾನೆ.

ನಮಗೆಲ್ಲ ಗೊತ್ತಿರುವಂತೆ ಬ್ಲಾಗ್‌ನ ಪ್ರಯೋಜನಗಳು ಅನೇಕ. ಆ ಪ್ರಯೋಜನಗಳು ಮುದ್ರಣಮಾಧ್ಯಮ ಹಾಗೂ ದೃಶ್ಯಮಾಧ್ಯಮಗಳಿಗಿಂತ ಭಿನ್ನ ಹಾಗೂ ತ್ವರಿತ. ನಮಗೆ ಗೊತ್ತಿರುವ ಏನೆಲ್ಲವನ್ನೂ ಮತ್ತು ನಮ್ಮೆಲ್ಲ ಅನ್ನಿಸಿಕೆಗಳನ್ನೂ ನಮ್ಮ ಬ್ಲಾಗ್‌ಗಳಲ್ಲಿ ನಾವು ಯಥಾವತ್ತಾಗಿ ಪ್ರಕಟಿಸಬಹುದು. ಶೈಲಿ ಹಾಗೂ ಲೇಖನಪಾಂಡಿತ್ಯದ ಬಗ್ಗೆ ಚಿಂತಿಸಬೇಕಿಲ್ಲ. ಹಾಗೆ ನಾವು ಪ್ರಕಟಿಸಿದ ಬರಹವು ತತ್ ಕ್ಷಣವೇ ಪ್ರಪಂಚವ್ಯಾಪಿಯಾಗಿಬಿಡುತ್ತದೆ.

ಜಗತ್ತಿನಲ್ಲಿ ಯಾರಿಗೆ ಬೇಕಾದರೂ ಅದು ಆ ಕ್ಷಣದಿಂದಲೇ ಲಭ್ಯ. ನಮಗೆ ಬೇಕಾದವರಿಗೆ ಅಥವಾ ಆ ಲೇಖನಕ್ಕೆ ಸಂಬಂಧಿಸಿದವರಿಗೆ ನಾವು ಆ ಲೇಖನದ ಕೊಂಡಿ ನೀಡಿ ಅವರ ಗಮನ ಸೆಳೆಯಬಹುದು. ಲೇಖನ ಪ್ರಕಟವಾದ ಕ್ಷಣದಿಂದಲೇ ಲೇಖನದ ಬಗ್ಗೆ ಚರ್ಚೆಯ ಆರಂಭವು ಸಾಧ್ಯ. ಜಗತ್ತಿನ ಮೂಲೆಮೂಲೆಯಿಂದಲೂ ಇಚ್ಛುಕರು ಚರ್ಚೆಯಲ್ಲಿ ಪಾಲ್ಗೊಳ್ಳಬಹುದು. ಮುಖಾಮುಖಿ ಮಾತನಾಡುವ ರೀತಿಯಲ್ಲೇ ಚರ್ಚಿಸಬಹುದು. ಮೇಲಾಗಿ, ನಮ್ಮ ಬ್ಲಾಗ್ ಬರಹವನ್ನು ಮುಂದೆ ಎಂದೇ ಆಗಲೀ ಯಾರೇ ಆಗಲೀ ಕ್ಷಣಮಾತ್ರದಲ್ಲಿ ಹುಡುಕಿ ತೆಗೆದು ಓದಬಹುದು. ಈ ಎಲ್ಲ ಸಾಧ್ಯತೆಗಳ ಗರಿಷ್ಠ ಪ್ರಯೋಜನವು ಸಮಾಜಕ್ಕೆ ಆಗಬೇಕೆಂದರೆ ಹೆಚ್ಚೆಚ್ಚು ಮಂದಿ ಅಂತರ್ಜಾಲ ಬಳಸತೊಡಗಬೇಕು ಮತ್ತು ಬ್ಲಾಗ್ ಹೊಂದತೊಡಗಬೇಕು. ಬ್ಲಾಗ್ ಬರಹಗಳನ್ನು ಪ್ರಕಟಿಸತೊಡಗಬೇಕು ಮತ್ತು ಅಂತರ್ಜಾಲದ ವಿವಿಧ ಸೌಲಭ್ಯಗಳನ್ನು ಬಳಸಿಕೊಂಡು ತಮ್ಮ ಬ್ಲಾಗ್ ಬಗ್ಗೆ ಇತರರಿಗೆ ತಿಳಿಸತೊಡಗಬೇಕು.

ಸಾರ್ವತ್ರಿಕ ಮಹತ್ತ್ವದ ಯಾವುದೇ ಒಂದು ವಿಷಯದಲ್ಲಿ ಜಗತ್ತಿನ ಬ್ಲಾಗಿಗರೆಲ್ಲ ಒಂದಾಗಿ ಮುಂದುವರಿಯುವಂತಾದರಂತೂ ಈ ನೆಲದಲ್ಲಿ ಮಹತ್ತರ ಬದಲಾವಣೆಗಳನ್ನು ತರಬಹುದು. ಅಂಥದೊಂದು ಪ್ರಯತ್ನವು ಇದೇ ಅಕ್ಟೋಬರ್ 15ರಂದು ನಡೆಯುತ್ತಿದೆ. 'ಬ್ಲಾಗ್ ಆಕ್ಷನ್ ಡೇ 09' ಎಂಬ ಹೆಸರಿನಲ್ಲಿ ಆ ದಿನ ಜಗತ್ತಿನ ಎಲ್ಲ ಬ್ಲಾಗಿಗರೂ ಒಂದೇ ವಿಷಯ ಕುರಿತು ತಂತಮ್ಮ ಬ್ಲಾಗ್‌ನಲ್ಲಿ ಬರಹ, ಚಿತ್ರ, ದೃಶ್ಯಗಳನ್ನು ಪ್ರಕಟಿಸಲಿದ್ದಾರೆ ಮತ್ತು ಓದುಗರೊಡನೆ ಚರ್ಚೆ ಆರಂಭಿಸಲಿದ್ದಾರೆ. ಅದಕ್ಕಾಗಿ ಅವರು ಆಯ್ಕೆಮಾಡಿಕೊಂಡಿರುವ ವಿಷಯ 'ಹವಾಮಾನ ಬದಲಾವಣೆ'. ಅಂತರ್ಜಾಲ ಬಳಕೆದಾರರೆಲ್ಲರೂ ಅಂದು ಈ ಪ್ರಯತ್ನದಲ್ಲಿ ಭಾಗಿಗಳಾದಲ್ಲಿ ಹವಾಮಾನ ವೈಪರೀತ್ಯವನ್ನು ತಡೆಯುವ ಮತ್ತು ಮೆಟ್ಟಿನಿಲ್ಲುವ ಕಾರ್ಯಕ್ಕೆ ಇನ್ನಷ್ಟು ಪುಷ್ಟಿ ದೊರೆತೀತು. ಹವಾಮಾನ ಬದಲಾವಣೆಗೆ ಜಗತ್ತಿನ ಸ್ಪಂದನ ಕುರಿತು ಇದೇ ಡಿಸೆಂಬರ್‌ನಲ್ಲಿ ಜಾಗತಿಕ ನೇತಾರರು ನಡೆಸಲಿರುವ ಸಮಾಲೋಚನೆಗೆ ಈ 'ಬ್ಲಾಗ್ ಕ್ರಾಂತಿ'ಯು ಮಾರ್ಗದರ್ಶಿಯೂ ಆದೀತು. (ನಾನಂತೂ ನನ್ನ 'ಗುಳಿಗೆ' ಬ್ಲಾಗ್‌ನಲ್ಲಿ ಆ ದಿನ 'ಹವಾಮಾನ ಬದಲಾವಣೆ' ಬಗ್ಗೆ ನನ್ನ 'ವಿಚಾರ' ದಾಖಲಿಸುತ್ತೇನೆ.)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X