ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಕೃತಿ ಮಡಿಲಿನಲ್ಲಿ ವಿಶಿಷ್ಟವಾದ ಕವಿಗೋಷ್ಠಿ

By *ರಾಮಸ್ವಾಮಿ, ಅರಸೀಕೆರೆ
|
Google Oneindia Kannada News

GS Soumya bags first prize in kavighosti
ಫೆ.22 ರಂದು ಹಾಸನ ಸಮೀಪದ ಅನುಗನಾಳಿನ ಜೀವ ವೈವಿಧ್ಯ ಸಂರಕ್ಷಣೆ ಮತ್ತು ಸಂಶೋಧನಾ ಟ್ರಸ್ಟ್ (ಬಿಸಿ‌ಆರ್‌ಟಿ) ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಾಹಿತ್ಯ ಡಾಟ್‌ಕಾಂ ಬೆಂಬಲಿಗರ ಬಳಗಗಳು ಭಾನುವಾರದ ರಜೆಯನ್ನು ಚೇತೋಹಾರಿಯಾಗಿ ಬದಲಾಯಿಸಿಬಿಟ್ಟವು. ಈ ಮೂರೂ ಸಂಸ್ಥೆಗಳ ಸಂಯುಕ್ತಾಶ್ರಯ ಅನುಗನಾಳಿನ ಬಿ.ಸಿ.ಆರ್.ಟಿ ಆವರಣದಲ್ಲಿ ಕವಿತೆಗಳಿಗೆ ವೇದಿಕೆಯೊದಗಿಸಿತು.

ಜಿಲ್ಲಾ ಮಟ್ಟದ ಕವಿಗೋಷ್ಠಿಗಾಗಿ ಕೊಟ್ಟಿದ್ದ ವಿಷಯ “ಜಾಗತೀಕರಣ ಮತ್ತು ಅಂತರ್ಜಾಲ ಸಂದರ್ಭದಲ್ಲಿ ಕನ್ನಡದ ಪರಿಸರ" ಸ್ವಲ್ಪ ಕ್ಲಿಷ್ಟವಾಗಿದ್ದಾರೂ ಭಾಗಿವಹಿಸಿದ ಉತ್ಸಾಹಿಗಳಿಗೆ ತೊಡಕೇನೂ ಆಗಲಿಲ್ಲ. ಕವಿಗೋಷ್ಠಿಯ ಕವಿಗಳನ್ನು ಈಗಾಗಲೇ ಆಹ್ವಾನಿಸಿದ್ದ ಕವಿತೆಗಳ ಮೌಲ್ಯಮಾಪನದ ನಂತರ ಆಯ್ಕೆಮಾಡಿದ್ದುದರಿಂದ ಕವಿಗೋಷ್ಠಿ ಅಂದರೆ ಕಿರಿಕಿರಿ ಅನ್ನುವ ಭಯವನ್ನು ಅಳಿಸಿಹಾಕಿದ ಕೀರ್ತಿ ಕೂಡಾ ಈ ಕಾರ್ಯಕ್ರಮಕ್ಕೆ ಸಲ್ಲುತ್ತದೆ.

ಗಿಡ ನೆಟ್ಟು ಪರಿಸರವನ್ನು ಶ್ರೀಮಂತಗೊಳಿಸುವ ಮೂಲಕ ಉದ್ಘಾಟಿಸಲಾದ ಕಾರ್ಯಕ್ರಮದ ರೂಪುರೇಷೆ ಪ್ರಾರಂಭದಲ್ಲೇ ಆಸಕ್ತಿಯನ್ನು ಕುತೂಹಲವನ್ನೂ ಉಂಟುಮಾಡಿದವು. ಧಾನ್ಯರಾಶಿಗೆ ಆಹ್ವಾನಿತ ಗಣ್ಯರಿಂದ ಪೂಜೆಮಾಡಿಸುವ ಮೂಲಕ ದೇಶೀ ಪರಂಪರೆಯನ್ನು ನೆನಪಿಸಿತು. ಹೆಗ್ಗೋಡಿನಿಂದ ಬಂದಿದ್ದ ಸಾಹಿತ್ಯಾಸಕ್ತ ಅವಿನಾಶ್ ತಮ್ಮ ಉದ್ಘಾಟನಾ ಭಾಷಣದಲ್ಲೂ ಹೊಸತನವನ್ನು ಮುಂದುವರೆಸಿದರು. ಇತಿಹಾಸದ ಎಲ್ಲ ಕಾಲಘಟ್ಟಗಳಲ್ಲೂ ಇದ್ದೇ‌ಇರುವ ಹಲವು ಸಂಕಷ್ಟಗಳಂತೆಯೇ ಇಂದಿನ ವರ್ತಮಾನವೂ ಇರುವುದರಿಂದ ಕಾವ್ಯ ಕಟ್ಟುವ ಕೆಲಸಕ್ಕೂ ಈ ಸಂಕಷ್ಟ ಇದ್ದೇ ಇರುತ್ತದೆ. ಇವತ್ತಿನ ನಿಯೋರಿಚ್ ಜನಗಳು ಹಳೆಯ ಬ್ರಾಹ್ಮಣಶಾಹಿಗಳಂತೆಯೇ ಇದ್ದಾರೆ. ಹಳತಾಗಿರುವ ಪಂಥಗಳ ಮೂಲಕ ಸದ್ಯದ ಸಾಹಿತ್ಯ ಸಂದರ್ಭವನ್ನು ಅರಿಯುವುದು ಸಾಧ್ಯವಿಲ್ಲ. ವರ್ತಮಾನದ ಎಚ್ಚರ ಇರದೇ ಇದ್ದರೆ ಬದುಕನ್ನು ಕಟ್ಟಲಿಕ್ಕಾಗುವುದಿಲ್ಲ. ಕೆಲವರು ತಮ್ಮ ಅಭಿಪ್ರಾಯಗಳನ್ನೇ ಆತ್ಯಂತಿಕ ಸತ್ಯವೆಂದು ಭಾವಿಸಿಬಿಟ್ಟಿರುತ್ತಾರೆ. ಅನುಭವದ ದ್ರವ್ಯವಿಲ್ಲದ ಬರಹ ಬರಿಯ ಅಭಿಪ್ರಾಯವಾಗುತ್ತದೆಯೇ ವಿನಾ ಅದು ಸಾಹಿತ್ಯ ಕೃತಿಯಾಗಿ ಚಿರಕಾಲ ನಿಲ್ಲುವುದಿಲ್ಲ. ಅವಿನಾಶರ ಮಾತು ಮುಖ್ಯ ಅತಿಥಿಯಾಗಿ ಬಂದಿದ್ದ ಹರಿಹರಪುರ ಶ್ರೀಧರರ ಮಾತಿನಲ್ಲೂ ಮುಂದುವರೆಯಿತು. ವಿಜ್ಞಾನದ ವಿರೋಧ ಸಲ್ಲದು. ಅಂತರ್ಜಾಲವೂ ವಿಜ್ಞಾನದ ಆವಿಷ್ಕಾರ. ನಮ್ಮೊಳಗಿನ ಅಂತರ್ಜಾಲವನ್ನು ಕ್ಲಿಕ್ಕಿಸದೇ ಹೊರಗಿನ ಅಂತರ್ಜಾಲ ಸಂಪರ್ಕಿಸುವುದು ತೋರಿಗಾಣಿಕೆಯದಾಗುತ್ತೆ ಎಂದು ಅಭಿಪ್ರಾಯಪಟ್ಟರು.

ಇನ್ನೋರ್ವ ಮುಖ್ಯ ಅತಿಥಿ ಕನ್ನಡ ಸಾಹಿತ್ಯ ಡಾಟ್ ಕಾಂನ ಸಂಚಾಲಕ ಅರೇಹಳ್ಳಿರವಿ ಕನ್ನಡದಲ್ಲಿ ಅಂತರ್ಜಾಲ ಸೌಲಭವಿಲ್ಲದ ಕಾಲದಲ್ಲಿ ಕನ್ನಡದ ವೆಬ್ ಸೈಟ್ ನಡೆಸಿದ ಸಾಹಸದ ಅನುಭವವನ್ನು ಹಂಚಿಕೊಂಡರು. ದೃಶ್ಯ ಮಾಧ್ಯಮಗಳಿಗೂ ಇರುವ ಭಾಷೆಯನ್ನು ಅರಿಯಲು ಆರಂಭಿಸಲಾದ ಸಂವಾದ ಡಾಟ್ ಕಾಂ ಹೇಗೆ ಸದ್ದಿಲ್ಲದೇ ಯುವಜನರಿಗೆ ಹೊಸಚಿಂತನೆಗಳನ್ನು ಊಡಿಸುತ್ತಿದೆ ಎಂದು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಉದಯರವಿ ಪ್ರಕೃತಿಯ ಮಡಿಲಲ್ಲಿ ಆಯೋಜಿಸಲಾಗಿರುವ ಕವಿಗೋಷ್ಠಿ ನಗರ ಪ್ರಜ್ಞೆಯಲ್ಲೇ ಇರುವ ನಮ್ಮ ಲೇಖಕರಿಗೆ ಹಳ್ಳಿಯ ಪರಿಸರದ ಶ್ರೀಮಂತಿಕೆಯನ್ನು ಪರಿಚಯಿಸುತ್ತಿರುವುದರ ಜೊತೆಜೊತೆಗೆ ದೇಶೀ ವಿಚಾರಗಳಲ್ಲೂ ಆಸಕ್ತಿಯನ್ನು ಹುಟ್ಟಿಸುತ್ತದೆ. ಒತ್ತಡಗಳಿಲ್ಲದೇ ಒಂದು ದಿನವನ್ನಾದರೂ ಕಳೆಯುವ ಭಾಗ್ಯ ನಮ್ಮದಾಯಿತು ಎಂದು ಸಂತಸವನ್ನು ಹಂಚಿಕೊಂಡರು. ಬಿಸಿ‌ಆರ್‌ಟಿಯ ಕೆಲಸವು ಹೇಗೆ ದೇಶೀ ಸಂಪ್ರದಾಯವನ್ನು ಮುಂದುವರೆಸುತ್ತಿದೆ ಎಂದೂ ವಿವರಿಸಿದರು. ಬಿಸಿ‌ಆರ್‌ಟಿ ಸಂಚಾಲಕ ಕೃಷ್ಣಮೂರ್ತಿ ಸ್ವಾಗತಿಸಿ, ಸಾಹಿತ್ಯಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಲಕ್ಷ್ಮಣ ಬಳೂಟಗಿ ವಂದಿಸಿದರು. ಇಂದಿರಾ ಮಹದೇವ್ ನಿರೂಪಿಸಿದರು.

ಸ್ವಲ್ಪ ಬಿಡುವಿನ ನಂತರ ಕವಿಗೋಷ್ಠಿ ಪ್ರಾರಂಭವಾಯಿತು. ಡಿ.ಎಸ್.ರಾಮಸ್ವಾಮಿಯವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಹದಿನೆಂಟು ಕವಿಗಳು ತಮ್ಮ ಕವಿತೆಗಳನ್ನು ಪ್ರಸ್ತುತಪಡಿಸಿದರು. ಉತ್ತಮ ಕವಿತೆಗಳಿಗೆ ಬಹುಮಾನಗಳನ್ನೂ ಘೋಷಿಸಿದ್ದುದರಿಂದ ಅವಿನಾಶ್ ಮತ್ತು ಅರೇಹಳ್ಳಿ ರವಿ ತೀರ್ಪುಗಾರರಾಗಿ ಸಹಕರಿಸಿದರು. ಫಲಿತಾಂಶ ಪ್ರಕಟಿಸುವ ಮುನ್ನ ಕವಿಗೋಷ್ಠಿಯ ಅಧ್ಯಕ್ಷರು ಸದ್ಯದ ಪದ್ಯದ ದುಸ್ಥಿತಿ ಮತ್ತು ಅದನ್ನು ಮೀರುವ ಅನಿವಾರ್ಯತೆಗಳ ಬಗ್ಗೆ ಮಾತನಾಡಿದರು. ವರ್ತಮಾನವನ್ನು ಗ್ರಹಿಸದೇ ಬರಿಯ ಆಶಯಗಳ ಮೂಲಕ ಮಾತನಾಡುವವರು ಘೋಷಣೆಗಳಿಗಷ್ಟೇ ತೃಪ್ತರಾಗಬೇಕಾಗುತ್ತದೆ. ಹಾಗೆಯೇ ಆಧುನಿಕ ಬದುಕಿನ ಪಡಿಪಾಟಲುಗಳನ್ನು ಅರ್ಥಮಾಡಿಕೊಳ್ಳದೆಯೇ ಬರಿಯ ಭಾವನಾತ್ಮಕವಾಗಿ ಪದ್ಯ ಬರೆಯುವವರು ಸ್ವಕೇಂದ್ರ ಮುಕ್ತರಾಗದೇ ಇದ್ದಲ್ಲೇ ಬಿದ್ದು ಹೊರಳಬೇಕಾಗುತ್ತದೆ. ಸಾಹಿತ್ಯ ಪಂಥಗಳನ್ನು ನಮ್ಮ ಮಿತಿಯಲ್ಲಿ ಆವಿರ್ಭವಿಸಿಕೊಂಡು ಹೊಸಪರಿಭಾಷೆಯನ್ನು ಕಂಡುಕೊಳ್ಳದೇ ಹೋದರೆ ಕವಿತೆ ಚಿರಕಾಲ ನಿಲ್ಲುವುದಿಲ್ಲ ಎಂದರು.

ಕವಿಗಿಂತಲೂ ಕವಿತೆ ಮುಖ್ಯ. ಈಗ ಪ್ರಸಿದ್ಧರಾಗಿರುವವರು ಜನಕ್ಕೆ ತಿಳಿದುದು ಅವರ ಕವಿತೆಗಳಿಂದ. ಕವಿ ಜನಮಾನಸದಲ್ಲಿ ಉಳಿಯಬೇದದ್ದು ತನ್ನ ಕವಿತೆಗಳ ಮೂಲಕವೇ ವಿನಾ ತನ್ನ ಹೆಸರಿನ ಬಲದ ಮೇಲಿನಿಂದಲ್ಲ ಎಂದು ಅಭಿಪ್ರಾಯ ಪಟ್ಟರು. ಜಿ. ಎಸ್.ಸೌಮ್ಯ ಅವರ 'ಜಾಗತೀಕರಣ, ರಾಗಿಮುದ್ದೆ ಮತ್ತು ಕನ್ನಡ" ಕವಿತೆ ಮೊದಲ ಬಹುಮಾನ ಪಡೆಯಿತು. ಎನ್.ಎಲ್.ಚನ್ನೇಗೌಡರ 'ಹೂವಿನ ತೋಟದಲ್ಲಿ" ಎರಡನೆಯ ಬಹುಮಾನ ಮತ್ತು ಡಿ.ಎಲ್.ರಮೇಶರ 'ಜಾಗತೀಕರಣ" ಕವಿತೆ ಮೂರನೇ ಬಹುಮಾನ ಪಡೆದವು. ಎಸ್. ಲಲಿತಾ ಮತ್ತು ಕೆ.ಕೆ.ವಿನುತಾ ಪ್ರೋತ್ಸಾಹಕ ಬಹುಮಾನ ಪಡೆದರು. ಕವಿಗೋಷ್ಠಿಯ ನಂತರ ರಾಗಿಮುದ್ದೆ, ಹಲಸಿನ ಕಾಯಿ ಅವರೆಕಾಳಿನ ಸಾರು, ಕಾಯಿ ಹಾಲುಗಳ ದೇಸಿ ಊಟವನ್ನು ಉಣಿಸಲಾಯಿತು. ಬಹುಮಾನ ಬಂದವರೂ ಬಾರದವರೂ ಸಂತೋಷದಿಂದ ತಮ್ಮ ಗೂಡುಗಳಿಗೆ ತೆರಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X