ಎಂಎಸ್ ಆಫೀಸ್‌ನಲ್ಲಿ ಕನ್ನಡದ ಆಭಾಸ

*ಶೆಲ್ವನಾರಾಯಣ ಎ.ಆರ್, ರೋಟರ್ಡ್ಯಾಮ್, ನೆದರ್ಲ್ಯಾಂಡ್ಸ್
ನನ್ನ ಲ್ಯಾಪ್ ಟ್ಯಾಪ್ ದಲ್ಲಿ M.S.Officeಗೆ ಕನ್ನಡ ಸರ್ವಿಸ್ ಪ್ಯಾಕ್ ಸ್ಥಾಪಿಸಿದೆ. ತಕ್ಷಣ OUTLOOK ಶುರುಮಾಡಿ ನೋಡಿದ್ರೆ ಎಲ್ಲಾ ಕನ್ನಡಮಯ, ಗೆರೆಗಳಿಂದ ಕೂಡಿದ ರೋಮನ್ ಅಕ್ಷರಗಳು ಮಾಯವಾಗಿ ಎಲ್ಲೆಲ್ಲೂ ಗುಂಡು ಗುಂಡಾದ ಕನ್ನಡ ಅಕ್ಷರಗಳು ರಾರಾಜಿಸುತ್ತಿತ್ತು. ಎಲ್ಲಾ ಆಯ್ಕೆ ಪಟ್ಟಿಗಳನ್ನ ಕ್ಲಿಕ್ಕಿಸಿ ನೋಡಿದ್ರೆ, ಎಲ್ಲಾ ಕಡೆ ಕನ್ನಡ, ನಿಜ ಹೇಳ್ಬೇಕು ಅಂದ್ರೆ ಬೆಂಗಳೂರಿನಲ್ಲಿ ಕಾಣೋಕ್ಕಿಂತ ಹೆಚ್ಚು ಕನ್ನಡ ಕಾಣುತಿತ್ತು. ಅದನ್ನ ನೋಡಿ ಹಲಸಿನ ಹಣ್ಣು ತಿಂದಷ್ಟು ಸಂತೋಷ ಆಯ್ತು (ಎಲ್ಲರೂ ಹಾಲುಕುಡಿದಷ್ಟು ಸಂತೋಷ ಅಂತಾರೆ, ಆದ್ರೆ ನನಗೆ ಹಾಲಿಗಿಂತ ಹಲಸಿನ ಹಣ್ಣು ಪ್ರಾಣ ಅದಕ್ಕೆ ಹಾಗೆ ಬರ್ದಿದ್ದೀನಿ). ಆದ್ರೆ ಈ ಸಂತೋಷ ಬಹಳ ಸಮಯ ಉಳಿಲಿಲ್ಲ.
ಯಾಕೆ ಅಂದ್ರೆ ಅಲ್ಲಿ ಬಳಸಿರೋ ಪದಗಳು ಅಷ್ಟು ವಿಚಿತ್ರವಾಗಿವೆ. ಆ ಪದಗಳನ್ನ ನೋಡಿದ್ರೆ ಭಾಷಾತಜ್ಞರ ಕೊಡುಗೆಯ ಲಕ್ಷಣಗಳೇ ಕಾಣೋದಿಲ್ಲ. ಟೆಕ್ಕಿಗಳ ಆಡುಭಾಷೆಯಲ್ಲಿ ಪ್ರಯೋಗಿಸುವ ಪದಗಳು, ಆಂಗ್ಲ ಭಾಷೆಯಿಂದ ನೇರವಾಗಿ ಕನ್ನಡಕ್ಕೆ ಭಾಷಾಂತರ ಮಾಡಿರುವಂಥಾ ಸಂಧರ್ಭೋಚಿತವಲ್ಲದ ಪದಗಳ ಸಂಖ್ಯೆ ಎಲ್ಲೆ ಮೀರಿವೆ. ಹಲವಾರು ಪದಗಳನ್ನ ಭಾಷಾಂತರ ಮಾಡೋ ಪ್ರಯತ್ನ ಕೂಡ ಮಾಡಿಲ್ಲ, ಹಾಗೆ ಆಂಗ್ಲಪದಗಳನ್ನೇ ಉಪಯೋಗಿಸಲಾಗಿ. ಉದಾಹರಣೆಗಾಗಿ ಈ ಕೆಳಗಿನ ಪಟ್ಟಿಯಲ್ಲಿ ಕೆಲವು ಆಭಾಸಗಳನ್ನ ಉಲ್ಲೇಖಿಸಿದ್ದೇನೆ.
1. ತಂತ್ರಾಂಶದ ಎಲ್ಲ ಭಾಗಗಳಲ್ಲಿ Mail ಎಂದು ಉಲ್ಲೇಖಿಸಲಾಗಿರುವ ಪದವನ್ನ ಸುಲಭವಾಗಿ 'ಅಂಚೆ' ಅನ್ನಬಹುದಲ್ಲವೆ?
2. Connection ಅನ್ನೋಪದವನ್ನ ಸತತವಾಗಿ ಆಂಗ್ಲ ಭಾಷೆಯಲ್ಲೇ ಬಳಸಲಾಗಿದೆ. ಅದರ ಬದಲು, 'ಸಂಪರ್ಕ' ಅನ್ನೋ ಒಂದು ಸಾಮಾನ್ಯ, ಇನ್ನೂ ಹೆಚ್ಚಾಗಿ ಬಳಸಲಾಗುತ್ತಿರುವ ಪದವನ್ನೂ ಬಳಸಬಹುದು ಅನ್ನೋ ಯೋಚನೆ ಆ ತಂಡದವರಿಗೆ ಯಾಕೆ ಹೊಳೀಲಿಲ್ಲ? ಔಟ್‌ಲುಕ್‌ನಲ್ಲಿ ಸಂಪರ್ಕ ಸಾಧಿಸಿದ ನಂತರ ಬಲಗೈ ಕೆಳಭಾಗದಲ್ಲಿ connected ಅನ್ನೋ ಸಂದೇಶವನ್ನ ಕೊಡಲಾಗುತ್ತೆ. ಕನ್ನಡದಲ್ಲಿ ಅದಕ್ಕೆ "ಕನೆಕ್ಟ್ ಮಾಡಿದ" ಅನ್ನೋ ಸಂದೇಶವನ್ನ ತೋರಿಸಲಾಗುತ್ತಿದೆ. ಇದನ್ನ ನೋಡಿದರೆ ತಂತ್ರಾಂಶ ನಿರ್ಮಾಣ ತಂಡದಲ್ಲಿದ್ದ ಟೆಕ್ಕಿಗಳ ನೇರಪ್ರಭಾವ ಎದ್ದು ಕಾಣುತ್ತೆ.
3. View ಎನ್ನುವ ಆಯ್ಕೆಗೆ 'ದೃಶ್ಯ' ಎಂದು ಬಳಸಲಾಗಿದೆ. ದೃಶ್ಯ ಎಂದರೆ Scene ಅಂತ ಅಲ್ವೆ? File ಅನ್ನೋದನ್ನ ಹಾಗೇ 'ಫೈಲ್' ಅಂತಾನೇ ಇಟ್ಟಿದ್ದಾರೆ. ಬರಹ ಬ್ರಹ್ಮ ವಾಸು ಅವರು ಈ ಎರಡೂ ಪದಗಳಿಗೆ ಕ್ರಮವಾಗಿ ಬಳಸಿರೋ "ನೋಟ" ಹಾಗೂ "ಕಡತ" ಸಮಂಜಸವಾದ ಪದಗಳು ಅಂತ ನನ್ನ ಭಾವನೆ.
4. ಕೆಲವು ಪದಗಳಂತೂ ನಗಬೇಕೋ ಅಳಬೇಕೋ ಎನ್ನೋ ಜಿಜ್ಞಾಸೆಯನ್ನ ಹುಟ್ಟುಹಾಕುತ್ತವೆ. Customize ಎಂಬ ಪದವನ್ನ ನೇರವಾಗಿ 'ಗ್ರಾಹಕೀಯಗೊಳಿಸು' ಅಂತ ಭಾಷಾಂತರ ಮಾಡಿದ್ದಾರೆ. Out of Office Assistant ಎನ್ನುವುದನ್ನ ನೇರವಾಗಿ "Office ಹೊರಗೆ ಸಹಾಯಕ" ಎಂದು ಪ್ರಯೋಗಿಸಲಾಗಿದೆ. ಎಲ್ಲಕ್ಕಿಂತ ತಮಾಷೆ ಅಂದ್ರೆ Followup ಅನ್ನೋದನ್ನ "ಹಿಂಬಾಲಿಸು" ಅಂತಾರೆ! ಈ ಪದಗಳ ಶಬ್ದಕೋಶೀಯ ಭಾಷಾಂತರ ಸರಿ ಇದ್ದರೂ, ಸಂಧರ್ಭೋಚಿತವಲ್ಲ.
5. ಇನ್ನು ಔಟ್‌ಲುಕ್‌ನ್ನು ಪ್ರಥಮ ಭಾರಿಗೆ ಉಪಯೋಗಿಸಿದಾಗ ಬರುವ ಮೊದಲ ವಿ-ಅಂಚೆಯ ಗುಣಮಟ್ಟವಂತೂ ದೇವರಿಗೇ ಪ್ರೀತಿ. ಹಲವಾರು ಕಾಗುಣಿತದ ತಪ್ಪುಗಳನ್ನೊಳಗೊಂಡ, ವಾಕ್ಯ ಸಂಯೋಜನೆಯ ಅಸಮರ್ಥತೆಯನ್ನು ಎತ್ತಿತೋರಿಸುವ ಪತ್ರವಾಗಿದೆ.
ಹೀಗೇ ನನ್ನ ಟೀಕಾಸ್ತ್ರವನ್ನು ಮುಂದುವರಿಸಿದರೆ, ನನ್ನ ಲೇಖನ ತುಂಬಾ ದೊಡ್ಡದಾಗಿ ಓದುಗರ ಸಹನೆಯನ್ನ ಕೆಣಕಿಬಿಡುತ್ತೆ. ಹಾಗಾಗಿ ನನ್ನ ಟೀಕಾಸ್ತ್ರವನ್ನು ಇಲ್ಲಿಗೇ ನಿಲ್ಲಿಸಿ, ನನಗೆ ತಿಳಿದಮಟ್ಟಿಗೆ ಕೆಲವು ಆಂಗ್ಲ ಪದಗಳಿಗೆ ಸಮರ್ಥಕವಾದ ಕನ್ನಡ ಪದಗಳ ಪಟ್ಟಿಯನ್ನ ಈ ಕೆಳಗೆ ಒದಗಿಸಿದ್ದೇನೆ. ಇದಕ್ಕಿಂತ ಸಮರ್ಥಕವಾದ ಪದಗಳನ್ನು ತಿಳಿದ ಕನ್ನಡ ಬಾಂಧವರಿರಬಹುದು. ಹಾಗಿದ್ದಲ್ಲಿ, ಈ ವೇದಿಕೆಯಮೂಲಕ ಬರೆದು ತಿಳಿಸಿ.
| ಆಂಗ್ಲ ಪದ | ನನ್ನ ಸಲಹೆ | ಈಗ ಬಳಸಿರುವ ಪದ |
| Folder | ಸಂಪುಟ | ಫೋಲ್ಡರ್ |
| Connected | ಸಂಪರ್ಕ ಸಾಧಿಸಿದೆ | ಕನೆಕ್ಟ್ ಮಾಡಿದ |
| Updated | ಸಮೀಕರಿಸಲಾಗಿದೆ | ಮಾರ್ಪಡಿಸಲಾಗಿದೆ |
| Synchronise | ಸಮೀಕರಿಸು | ಸಿಂಕ್ರೊನೈಜ್ |
| View | ನೋಟ | ದೃಶ್ಯ |
| Layout | ವಿನ್ಯಾಸ | ಲೇಔಟ್ |
| Forward | ಪ್ರವರ್ತಿಸು | ಮುಂದೆಕಳಿಸು |
| FollowUp | ಪುನರ್ಪರಾಮರ್ಶಿಸಲು | ಹಿಂಬಾಲಿಸು |
| Calender | ಜಂಗಮದ ಬದುಕು | ಕ್ಯಾಲೆಂಡರ್ |
| ಅಂಚೆ | ಮೈಲ್ | |
| Draft | ಕರಡು | ಡ್ರಾಫ್ಟ್ |
| Item | ವಸ್ತು/ಅಂಶ | ಐಟಮ್ |
| Customise | ಖಾಸಗೀಕರಿಸು/ವೈಯಕ್ತೀಕರಿಸು | ಗ್ರಾಹಕೀಯಗೊಳಿಸು |
| Notes | ಟಿಪ್ಪಣಿಗಳು | ನೋಟ್ಸ್ |
| Default | ಮೂಲ | ಡಿಫಾಲ್ಟ್ |
| Setup | ಸಿದ್ಧಪಡಿಸು | ಸೆಟಪ್ |
| Encrypt | ಗೌಪ್ಯೀಕರಿಸು/ಗೂಢೀಕರಿಸು | ಎನ್ಕ್ರಿಪ್ಟ್ ಮಾಡಿ |
| File | ಕಡತ | ಫೈಲ್ |
| Navigation Bar | ಸಂಚಾರ ಫಲಕ | ನ್ಯಾವಿಗೇಶನ್ ಫಲಕ |
| Advanced | ಪ್ರೌಢ/ಉಚ್ಚ | ಆಧುನಿಕ |
| Organize | ವ್ಯವಸ್ಥೀಕರಿಸು | ಸಂಘಟನೆ ಮಾಡಿ |
| Quick Flags | ಶೀಘ್ರಸೂಚಿ | ಶೀಘ್ರಧ್ವಜ |
| Page Setup | ಪುಟ ವಿನ್ಯಾಸ | ಪೇಜ್ ಸೆಟಪ್ |
| Filter | ಪರಿಶೋಧಕ | ಫಿಲ್ಟರ್ |
| Settings | ಸಿದ್ಧತೆಗಳು | ಸೆಟ್ಟಿಂಗ್ಸ್ |
| Organize | ವ್ಯವಸ್ಥೀಕರಿಸು | ಸಂಘಟನೆ ಮಾಡಿ |
ಔಟ್‌ಲುಕ್‌ನ ನಂತರ Word ತಂತ್ರಾಂಶವನ್ನ ತೆರೆದು ನೋಡಿದೆ, ಅಲ್ಲಿ ಕೂಡಾ ಕಂಡುಬಂದ ಆಭಾಸವನ್ನು ನೋಡಿದಮೇಲೆ, ನನ್ನ ಆಶಾವಾದ ಕುಗ್ಗಿಹೋಗಿ ಬೇರಾವ ತಂತ್ರಾಂಶವನ್ನೂ ತೆರೆಯುವ ಸಾಹಸಕ್ಕೆ ಕೈಹಾಕಲಿಲ್ಲ.
ಮೈಕ್ರೋಸಾಫ್ಟಿನಂಥಾ ತಂತ್ರಾಂಶ ತಂತ್ರಜ್ಞಾನದ ದೈತ್ಯರಿಂದ ಇಂತಹ ಬೇಜವಾಬ್ದಾರಿತನ ಅಕ್ಷಮ್ಯ ಅಪರಾಧ. ಚೀನಿ, ಜಪಾನಿ ಭಾಷೆಗಳಿಗೆ ತಂತ್ರಾಂಶ ಒದಗಿಸಿದ ಮಹಾರಥಿಗಳಿಗೆ, ಕನ್ನಡ ಕಷ್ಟವಾಯಿತೆ? ಅಥವಾ ನಾವುಗಳು ಆಂಗ್ಲಭಾಷೆಯ ಗುಲಾಮರಾಗಿರುವುದರಿಂದ, ಭಾರತೀಯ ಭಾಷೆಗಳ ಬಗ್ಗೆ ಅವರಿಗಿರುವ ತಾತ್ಸಾರವೇ? ಹೊಸ ತಂತ್ರಜ್ಞಾನ, ಹೊಸ ವಸ್ತುಗಳು, ಹೊಸ ಶೈಲಿಗಳು ಬರುತ್ತಿದ್ದಹಾಗೆ ಎಲ್ಲ ಭಾಷೆಗಳಲ್ಲಿ ಹೊಸ ಪದಗಳ ಆವಿಷ್ಕಾರ ಅವಶ್ಯಕ. ಇಂತಹ ಸಂಧರ್ಭಗಳಲ್ಲಿ ಭಾಷಾತಜ್ಞರ ಸದುಪಯೋಗ ಅತ್ಯವಶ್ಯಕ, ಇಲ್ಲದಿದ್ದರೆ ಇಂತಹ ಆಭಾಸಗಳು ಜರುಗುತ್ತಲೇ ಇರುತ್ತವೆ. ಕನ್ನಡದ ಹಾಗೇ ತಮಿಳು, ತೆಲಗು ಇನ್ನಿತರ ಭಾರತೀಯ ಭಾಷೆಗಳಿಗೆ ಒದಗಿಸಿರುವ ತಂತ್ರಾಂಶ ಹೇಗಿದೆ? ಅದನ್ನು ಉಪಯೋಗಿಸಿರುವವರು ದಯವಿಟ್ಟು ತಿಳಿಸಿ.
ಈ ಲೇಖನವನ್ನು ಬರೆಯುವ ಮುಖ್ಯಉದ್ದೇಶ ಈ ತಪ್ಪುಗಳನ್ನು ಹಾಗೂ ಆಭಾಸಗಳನ್ನು ಮೈಕ್ರೋಸಾಫ್ಟ್ ನಿರ್ಮಾಣ ತಂಡದ ಗಮನಕ್ಕೆ ತರುವುದು. ಹಾಗೂ, ಅವರು ಇಚ್ಠಿಸಿದರೆ ನಾನು ಹಾಗು ನನ್ನ ಸ್ನೇಹಿತರು ಈ ಭಾಷಾಂತರ ಕಾರ್ಯದಲ್ಲಿ ಉಚಿತವಾಗಿ ಭಾಗವಹಿಸಲು ಮುಂದಾಗುತ್ತೇವೆ. ಓದುಗರಲ್ಲಿ ಯಾರಾದರೂ ಆ ತಂಡದಲ್ಲಿದ್ದರೆ ಅಥವ ಅಂಥವರ ಪರಿಚಯ ಇದ್ದರೆ, ಈ ಸಂದೇಶವನ್ನ ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪಿಸಲು ಸಹಾಯಮಾಡಿರಿ.












Click it and Unblock the Notifications