ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಟಕ ವಿಮರ್ಶೆ : ಜೀಕೆ ಮಾಸ್ತರರ ಪ್ರಣಯ ಪ್ರಸಂಗ

By Staff
|
Google Oneindia Kannada News

A still from the drama 'GK master pranaya prasanga'ನೀನಾಸಂನ ಈ ರಂಗಪ್ರಸ್ತುತಿ ಕೆ.ವಿ.ಅಕ್ಷರ ಅವರ ನಿರ್ದೇಶನದಡಿ ವಿನೂತನವಾಗಿ ಪ್ರಯೋಗಗೊಂಡಿದೆ. ಚಂದ್ರಶೇಖರ ಕಂಬಾರ ಅವರ ಕಾದಂಬರಿಯನ್ನು ಅಕ್ಷರ ರಂಗರೂಪಕ್ಕಿಳಿಸಿದ್ದಾರೆ. ನಾಗರಾಜ ಮತ್ತಿಗಾರ ಅವರು ನಾಟಕದ ಓರೆಕೋರೆಗಳನ್ನು ಅಕ್ಷರದಲ್ಲಿ ಹಿಡಿದಿಟ್ಟಿದ್ದಾರೆ.

ನಾಗರಾಜ ಮತ್ತಿಗಾರ, ಸಿದ್ದಾಪುರ, ಉತ್ತರ ಕನ್ನಡ

'ಪ್ರೀತಿ, ಪ್ರೇಮವೆಂಬ ಅದಮ್ಯ ದಿವ್ಯ ಶಕ್ತಿಯನ್ನು ಈ ನರ ಶರೀರದೊಳಗೆ ಹುದುಗಿಸಿಟ್ಟ ಆ ಪರಶಿವನ ಮಹಿಮೆಗೆ ಶರಣು ಎನ್ನೋಣ" ಎನ್ನುವ ಮೂಲಕ ನೀನಾಸಂ 2008ರ ರಂಗಪ್ರಸ್ತುತಿ 'ಜೀಕೆ ಮಾಸ್ತರರ ಪ್ರಣಯ ಪ್ರಸಂಗ" ತೆರೆ ಸರಿದು ರಂಗದಲ್ಲಿ ಮೂಡಿಬರುತ್ತದೆ. ಡಾ|| ಚಂದ್ರಶೇಖರ ಕಂಬಾರರ ಕಾದಂಬರಿಯನ್ನು ಅಕ್ಷರ ಕೆ.ವಿ. ಅವರು ಆಪ್ತ ರಂಗವೇದಿಕೆಯಲ್ಲಿ ನಿರ್ದೇಶಿಸಿದ್ದಾರೆ. ಇದೊಂದು ಕಥನ ನಿರೂಪಣಾ ಶೈಲಿಯ ನಾಟಕ ಎಂಬುದು ವಿಶೇಷ.

ಉತ್ತರ – ಕರ್ನಾಟಕದ, ಪುಟ್ಟ ಊರಿನಲ್ಲಿ ಕಟ್ಟುನಿಟ್ಟು, ಶಿಸ್ತು ಸಂಯಮಕ್ಕೆ ಹೆಸರಾದ ಜೀಕೆ ಮಾಸ್ತರರು ಹೈಸ್ಕೂಲು, ಕಾಲೇಜನ್ನು ಸ್ಥಾಪಿಸಿದರು, ಬಹುಜನರ ಒತ್ತಾಯದ ಮೇರೆಗೆ ಪ್ರಿನ್ಸಿಪಾಲರಾಗಿ ಹತ್ತು ವರ್ಷಗಳ ಕಾಲ ಯಶಸ್ವಿಯಾಗಿ ಕಾಲೇಜು ನಡೆಸಿದರು. ಕಾಲಕಳೆದಂತೆ ಕಾಲೇಜಿನ ವಾತಾವರಣವು ಬದಲಾಗುತ್ತದೆ. ಅಡ್ನಾಡಿ ಹುಡುಗರ ಸಂಖ್ಯೆ ಹೆಚ್ಚಾಗುತ್ತದೆ. ಅವರೊಲ್ಲಬ್ಬ ಶತಪಟಿಂಗ ಹುಡುಗ ಗಿರಿಯಪ್ಪ ಕಾಲೇಜ್ ಯುನಿಯನ್ ಲೀಡರಾಗುತ್ತಾನೆ. ಕಾಲೇಜಿನ ದಶಮಾನೋತ್ಸವ ಮೀಟಿಂಗ್‌ನಲ್ಲಿ ಗಿರಿಯಪ್ಪ ಜೀಕೆ ಅವರಿಗೆ ಎದುರುತ್ತರ ಕೊಟ್ಟು ಹೋಗುತ್ತಾನೆ. ಇವನು ರೋಜಾ ಎನ್ನುವ ಕ್ರಿಶ್ಚನ್ ಹುಡುಗಿಯನ್ನು 'ಲವ್" ಮಾಡುತ್ತಿದ್ದಾನೆ ಎಂದು ಪೀಟಿಂಗ್ ಮಾಸ್ತರ ಎಂದು ಖ್ಯಾತರಾದ ಎಂಟಿಯವರು ಜೀಕೆ ಅವರಿಗೆ ಹೇಳುತ್ತಾರೆ.

ಗಿರಿಯಪ್ಪನ ಮೇಲಿನ ಸಿಟ್ಟಿನಿಂದ ರೋಜಾಳನ್ನು ವಿಚಾರಿಸಲು ಕರೆಸುತ್ತಾರೆ. ಅಲ್ಲೇ ಜೀಕೆ ಫೇಲ್ ಆದದ್ದು ಕೂಡಾ. ಕಾಳಿದಾಸನ ಶೃಂಗಾರ ಕಾವ್ಯವನ್ನು ಘನಗಂಭೀರವಾಗಿ ಪಾಠ ಮಾಡುವ ಇವರಿಗೆ, ಮೈಗಂಟುವ ಬಟ್ಟೆಯನ್ನು ತೊಟ್ಟು, ದೇಹದ ಎದ್ದುಕಾಣುವ ಜಾಗವನ್ನು ಮತ್ತಷ್ಟು ತೋರಿಸುವ ರೋಜಾಳನ್ನು ನೋಡಿ, ವಿಚಿತ್ರ ಭಾವನೆ ಉಂಟಾಗಿ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಇದಕ್ಕೆ ಕಾರಣವೂ ಇತ್ತು. ಜೀಕೆ ಅವರ ದಾಂಪತ್ಯ ಜೀವನ ಉಲ್ಲಾಸಕರವಾಗಿರಲಿಲ್ಲ. ಇವರ ಹೆಂಡತಿ ಅನಾರೋಗ್ಯದ ಗೂಡಾಗಿದ್ದಳು. ಇಂತಿರುವಾಗ ಕಾಲೇಜಿನ ಹತ್ತುವರ್ಷದ ಸಂಭ್ರಮದ ತಯಾರಿಯಲ್ಲಿರುವಾಗ ರೋಜಾಳಿಗೆ ಗಿರಿಯಪ್ಪ 'ಕಿಸ್" ಮಾಡಿದ ಎಂಬ ಸುದ್ದಿ ಜೀಕೆ ಅವರಿಗೆ ತಿಳಿದು ಕೆಂಡಮಂಡಲವಾಗಿ ಗಿರಿಯಪ್ಪನನ್ನು ಡಿಸ್‌ಮಿಸ್ ಮಾಡುತ್ತಾರೆ. ಇದರಿಂದ ಸಿಟ್ಟುಗೊಂಡ ವಿದ್ಯಾರ್ಥಿಗಳು ಸ್ಟ್ರೈಕ್ ಮಾಡುತ್ತಾರೆ. ಇದರಿಂದ ಖೇದಗೊಂಡ ಜೀಕೆ ರಾಜಿನಾಮೆ ಕೊಡಲು ಮುಂದಾದಾಗ ರೋಜಾ ಇವರ ಛೇಂಬರಿಗೆ ಬಂದು 'ಗಿರಿಯಪ್ಪ ತನಗೆ ಕಿಸ್ ಮಾಡಲಿಲ್ಲ. ತಾನು ಬೇರೆಯವರನ್ನು ಪ್ರೀತಿಸುತ್ತಿದ್ದೇನೆ" ಎನ್ನುತ್ತಾಳೆ. 'ಯಾರು ಅದು" ಎಂದಾಗ ನೀವೆ ಎಂದು ಪ್ರೇಮಪತ್ರ ಕೊಡುತ್ತಾಳೆ.

ಪರೀಕ್ಷೆ ಬರುತ್ತದೆ. ರೋಜಾ ಜೀಕೆ ಅವರ ಮನೆಗೆ ಹೋಗಿ ಬಂದು ತನಗೆ ಬೇಕಾದಷ್ಟು ಮಾರ್ಕ್ಸನ್ನು ಹಾಕಿಸಿಕೊಳ್ಳುತ್ತಾಳೆ. 'ಮದುವೆ ಯಾವಾಗ ಆಗೋಣ" ಎಂದಾಗ 'ಫಲಿತಾಂಶದ ದಿನ ಹುಬ್ಬಳ್ಳಿಗೆ ಬನ್ನಿ" ಎನ್ನುತ್ತಾಳೆ. ಜೀಕೆ ಅವರಿಗೆ ಬಂದ ಪ್ರೇಮ ಪತ್ರವನ್ನು ನೋಡಿದ ಹೆಂಡತಿ ಸಾಯುತ್ತಾಳೆ. ಹೆಂಡತಿ ಸಾವಿಗೆ ತಾನೇ ಕಾರಣ ಅನ್ನಿಸುತ್ತದೆ. ರೋಜಾಳ ಕಾವಿನ ಮುಂದೆ ಹೆಂಡತಿಯ ಸಾವು ನಗಣ್ಯವಾಗಿ ಹುಬ್ಬಳ್ಳಿ ಬಸ್ಸನ್ನು ಹತ್ತುತ್ತಾರೆ. ಅಲ್ಲಿ ಅಶೋಕಾ ಹೋಟೆಲಿನಲ್ಲಿ ತನಗಾಗಿ ಕಾದು ಕುಳಿತಿರುತ್ತಾಳೆ ಎಂದುಕೊಂಡು ರೂಮಿಗೆ ಹೋಗುತ್ತಾರೆ. ಅಲ್ಲಿ ಇವರು ಕಂಡದ್ದೇ ಬೇರೆ. ರೋಜಾಳೊಂದಿಗೆ ಗಿರಿಯಪ್ಪ ಇರುತ್ತಾನೆ. ಆಗ ರೋಜಾ 'ನಾನು ನಿಮಗೆ ಸುಳ್ಳು ಹೇಳಿದೆ, ಗಿರಿಯಪ್ಪ ಜೀಕೆಯವರನ್ನು ಬುಟ್ಟಿಗೆ ಹಾಕಿಕೊಂಡರೆ ನೂರು ರೂಪಾಯಿ ಎಂದು ಬೆಟ್ಟು ಕಟ್ಟಿದ. ನಾನು ಹೇಳಿದ ಸುಳ್ಳನ್ನು ಇಷ್ಟು ಸೀರಿಯಸ್ಸಾಗಿ ತಗೋತೀರಾ ಎಂದು ಗೊತ್ತಿರಲಿಲ್ಲ, ಕ್ಷಮಿಸಿ ಸಾರ್" ಎನ್ನುತ್ತಾಳೆ.

ಮುಂದೆ ಜೀಕೆ ಏನಾಗುತ್ತಾರೆ? ಗಿರಿಯಪ್ಪ ಮತ್ತು ರೋಜಾ ಜೀವನ ಹೇಗಿರುತ್ತದೆ ಅನ್ನುವುದು ನಾಟಕದ ಕೊನೆಯ ಭಾಗ.

ಈ ರಂಗ ಪ್ರಯೋಗದ ವಿಶೇಷತೆಯೆಂದರೆ, ಒಬ್ಬ ಕಲಾವಿದನಿಗೆ ಒಂದು ಪಾತ್ರವಲ್ಲ, ಕಥೆಯನ್ನು ಹೇಳುತ್ತ ಹೇಳುತ್ತ ಕಲಾವಿದ ಪಾತ್ರವಾಗುತ್ತಾನೆ. ರಂಗದ ಚಲನೆ ಚುರುಕಾಗಿದ್ದು ಕಥೆಯನ್ನು ಹೇಳುವಾಗಲೂ ಒಬ್ಬರಿಂದ ಒಬ್ಬರಿಗೆ ಕಥೆಯ ಸಾಲನ್ನು ಬದಲಾಯಿಸಿಕೊಂಡು ಒಬ್ಬರು ಹೇಳುವಾಗ ಉಳಿದವರು ಪ್ರೇಕ್ಷಕರಾಗಿ ಅದಕ್ಕೆ ಸ್ಪಂದನ ನೀಡುತ್ತಿರುವುದು ವಿಶೇಷ ಆಕರ್ಷಣೀಯವಾಗಿತ್ತು. ಬೇರೆ ಮಾಸ್ತರಾಗಿ ಬದಲಾಗುತ್ತಿದ್ದ ಕಲಾವಿದರಾದ ಅಮರೇಶ ಕೆ. ಗೋಪಾಲಕೃಷ್ಣ ದೇಶಪಾಂಡೆ, ನಾಗೋಡಿ ವಿಶ್ವನಾಥ, ನವೀನಕುಮಾರ್ ಸುಳ್ಯ, ಕೃಷ್ಣಮೂರ್ತಿ ಮೂಡುಬಾಗಿಲು, ಸೊಗಸಾದ ಅನುಭವ ನೀಡಿ ಜೀಕೆ ಪಾತ್ರಕ್ಕೆ ಜೀವ ತುಂಬಿದ್ದಾರೆ. ಪಂಟಿಂಗ ವಿದ್ಯಾರ್ಥಿಯಾಗಿ ಗಿರಿಯಪ್ಪನಾಗಿ ಹರೀಶ ಗುಂಗೇರ, ರೋಜಾಳಾಗಿ ಸಿತಾರ ಪಿ. ಗಮನ ಸೆಳೆಯುತ್ತಾರೆ. ಎಂಟಿಯಾಗಿ ಗಜೇಂದ್ರ, ಪ್ರಶಾಂತ, ನಿರೂಪಕರಾಗಿ ಮತ್ತೆ ಕೆಲವು ಪಾತ್ರವಾಗುವ ಪೂರ್ಣಿಮಾ, ಅಪರ್ಣಾ, ರೇಣುಕಾ ಸಿದ್ದಿ ಕಥೆಯನ್ನು ಜನರಿಗೆ ತಲುಪಿಸುವಲ್ಲಿ ಸಫಲರಾಗಿದ್ದಾರೆ.

ನಾಟಕದುದ್ದಕ್ಕೂ ಸಂಗೀತ ಉತ್ತಮವಾಗಿರುವುದು ಪ್ರೇಕ್ಷಕರನ್ನು ರಂಜಿಸುತ್ತ ಹಿಡಿದಿಟ್ಟಿರುವುದು ಪ್ಲಸ್ ಪಾಯಿಂಟ್. ಪ್ರೇಮವೇ ಕಥೆಯೇ ಮೂಲ ತಿರುಳಾಗಿರುವಾಗ 'ಅಮರ ಮಧುರ ಪ್ರೇಮ" ಹಾಡನ್ನು ಬಳಸಿಕೊಂಡಿದ್ದಾರೆ. ಕಾಲೇಜಿನ ಸನ್ನಿವೇಶಕ್ಕೆ 'ಮಾಮಾ ಮಾಮಾ ಮಜಾ ಮಾಡು" ಹಾಡನ್ನು , ಪ್ರವಾಸದ ಸಂದರ್ಭದಲ್ಲಿ 'ಮುಕ್ಕಾಬುಲ್ಲಾ", ಜೀಕೆಯವರು ರೋಜಾಳನ್ನು ಕಾಯುವ ಸಂದರ್ಭದಲ್ಲಿ 'ಈ ಸಂಜೆ ಯಾಕಾಗಿದೆ" ಹಾಗೂ ನಾಟಕದೂದ್ದಕ್ಕೂ ಬಳಸಿದ 'ರೋಜಾ" ಚಲನಚಿತ್ರದ ಶೀರ್ಷಿಕೆ ಪದವನ್ನು ವ್ಯವಸ್ಥಿತವಾಗಿ ಬಳಸಿಕೊಂಡು ನಾಟಕಕ್ಕೆ ನವ್ಯ ಸ್ಪರ್ಶವನ್ನು ನೀಡಿರುವುದು ವಿಶೇಷ.

ನಾಟಕ ಪೂರ್ತಿ ಸಾಮಾನ್ಯ ಬೆಳಕಿನಲ್ಲಿಯೇ ನಡೆದಿದ್ದು, ಕೆಲವು ಸಂದರ್ಭದಲ್ಲಿಯಾದರೂ ಅಂದರೆ, ನಿರೂಪಕರು ಪ್ರೇಕ್ಷಕರಾಗುವ ಸಮಯದಲ್ಲಿ ಅವರೆಡೆಗೆ ಲೈಟನ್ನು ಕಡಿಮೆ ಮಾಡಿ ಮುಖ್ಯ ಪಾತ್ರದೆಡೆಗೆ ಹೆಚ್ಚು ಬೆಳಕನ್ನು ನೀಡಿದ್ದರೆ, ನಾಟಕ ಇನ್ನೂ ಎನ್ನಿಸುತ್ತದೆ. ವಸ್ತ್ರವು ಕೂಡಾ ಎಲ್ಲರಿಗೂ ಒಂದೇ ರೀತಿ ಇದ್ದು, ಜೀಕೆ ಪಾತ್ರವಾಗುವವರು ಒಂದು ಕೋಟನ್ನು ಹಾಕಿಕೊಂಡು ಆ ಪಾತ್ರದ ಗಾಂಭೀರ್ಯತೆಯನ್ನು ತೋರಿಸುತ್ತಿರುವುದು ಗಮನಾರ್ಹವಾಗಿದೆ. ರಂಗದ ಮಧ್ಯದಲ್ಲಿ ಕಟ್ಟಿದ ಹಗ್ಗದಲ್ಲಿ ನೇತಾಡಿ, ಅದರಲ್ಲಿಯೇ ಯೋಗಾಸನವನ್ನು ಹಾಕುತ್ತ ಸಂಭಾಷಣೆ ಹೇಳುತ್ತ ಅಭಿನಯಿಸಿದರು ಹಾಗೂ ಜೋಕಾಲಿಯಲ್ಲಿ ಜೋಲಿ ಹೊಡೆಯುತ್ತ ನಿರೂಪಿಸಿದ್ದು ಆಕರ್ಷಣೀಯವಾಗಿದ್ದರೂ ಈ ನಾಟಕದ ಸಂದರ್ಭದಲ್ಲಿ ಅಗತ್ಯವಾಗಿರಲಿಲ್ಲ ಅನ್ನಿಸುತ್ತದೆ.

ರಂಗದಲ್ಲಿ ಮಾತ್ರವಲ್ಲದೆ ಇದನ್ನು ನೋಡುತ್ತಾ ಕುಳಿತವರಲ್ಲಿಯೂ ಜೀಕೆ, ರೋಜಾ, ಗಿರಿಯಪ್ಪನಾದ ಅನುಭವವಾಗುತ್ತದೆ. ಈ ಕಾದಂಬರಿಯನ್ನು ಓದಿದವರಿಗೆ ಮತ್ತೊಮ್ಮೆ ಮನನವಾಗುವ ಹಾಗೆ ಇದನ್ನು ರಂಗದಲ್ಲಿ ಯಶಸ್ವಿಯಾಗುವಂತೆ ಮಾಡಿದ ನಿರ್ದೇಶಕ ಅಕ್ಷರ ಅವರನ್ನು ಮೆಚ್ಚಲೇಬೇಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X