ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೊಡ್ಡಮ್ಮನ ನೆನಪುಗಳು ಹಾಗೂ ಆತ್ಮೀಯ ಶ್ರದ್ಧಾಂಜಲಿ

By Staff
|
Google Oneindia Kannada News


ಜೀವನವೆಂದರೆ ಸಂಬಂಧಗಳು ಎಂದು ಬಲ್ಲವರು ಹೇಳುತ್ತಾರೆ. ಸಂಬಂಧಗಳ ಅನನ್ಯ ಅನುಭವಗಳು ಯಾರನ್ನು ತಾನೇ ಕಾಡುವುದಿಲ್ಲ...? ಇತ್ತೀಚೆಗಷ್ಟೇ ತಮ್ಮ ದೊಡ್ಡಮ್ಮನನ್ನು ಕಳೆದುಕೊಂಡ ಲೇಖಕರು, ಮರೆಯಲಾಗದ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ನನ್ನ ದೊಡ್ಡಮ್ಮ ಸುಬ್ಬಮ್ಮನವರು ಮೊನ್ನೆ ದೈವಾಧೀನರಾದರು. ಅವರಿಗೆ ಎರಡು ಅಶ್ರು ಬಿಂದುಗಳ ಮೂಲಕ ನನ್ನ ಶ್ರದ್ಧೆಯನ್ನರ್ಪಿಸುವೆ. ನನ್ನ ಒಂದೆರಡು ನೆನಪುಗಳನ್ನು ಬರೆಯಲು ಪ್ರಯತ್ನಿಸಿರುವೆ.

ನನ್ನ ದೊಡ್ಡಮ್ಮ ಅಂದ್ರೆ ದಿವಂಗತ ತ.ಸು.ಶಾಮರಾಯರ ಪತ್ನಿ. ಅವರಿಗೆ 92-93 ವರ್ಷವಾಗಿತ್ತು. ಜೀವನದುದ್ದಕ್ಕೂ ಒಂದೇ ಸಮನೆ ದುಡಿದ ಜೀವ. ನನ್ನ ತಾಯಿಯ ಕಡೆಯೂ ಸಂಬಂಧಿಯೇ. ನನ್ನ ತಾಯಿಗೆ ಚಿಕ್ಕಮ್ಮ ಆಗ್ಬೇಕಿತ್ತು. 1972ರಲ್ಲಿ ನಾವು ಮೈಸೂರಿಗೆ ಬಂದು ನೆಲೆಸಿದಾಗಿನಿಂದ ನನಗೆ ಅವರ ನೆನಪಿದೆ. ಅಲ್ಲಿಯವರೆವಿಗೆ ನಾನು ಅವರ ಮನೆಗೆ ಅಷ್ಟಾಗಿ ಹೋಗಿರಲಿಲ್ಲ.

1972ರಲ್ಲಿ ನಾನು ಎಂಟನೆಯ ತರಗತಿಯಲ್ಲಿ ಓದುತ್ತಿದ್ದೆ. ಚಾಮರಾಜನಗರದಿಂದ ಮೈಸೂರಿಗೆ ಬಂದ ಹೊಸತು. ನಾವು ಇದ್ದದ್ದು ಚಾಮುಂಡಿಪುರದಲ್ಲಿ. ಆಗಾಗ ನನ್ನ ತಾಯಿ ನನ್ನನ್ನು ಮತ್ತು ನನ್ನ ತಂಗಿಯನ್ನು ಕರೆದುಕೊಂಡು ಕೃಷ್ಣ ಮೂರ್ತಿಪುರಂನಲ್ಲಿದ್ದ ನನ್ನ ದೊಡ್ಡಪ್ಪನವರ ಮನೆಗೆ ಕರೆದೊಯ್ಯುತ್ತಿದ್ದರು. ಯಾವಾಗಲೇ ನಾವು ಅವರ ಮನೆಗೆ ಹೋದರೂ ದೊಡ್ಡಮ್ಮ ಏನಾದರು ತಿನ್ನಲು ಕೊಡುತ್ತಿದ್ದರು. ಸಾಮಾನ್ಯವಾಗಿ ಕೊಡುಬಳೆ ಅಥವಾ ಚಕ್ಕುಲಿಯಂತೂ ಕೊಡ್ತಾನೇ ಇದ್ದರು. ಅವರ ಮನೆಯ ಕಾಂಪೌಂಡಿನಲ್ಲಿದ್ದ ಸೀಬೆ ಗಿಡದಲ್ಲಿ ಕಾಯಿ ಬಿಟ್ಟಿರುತ್ತಿತ್ತು. ದೊಡ್ಡಮ್ಮನ ಮಕ್ಕಳೆಲ್ಲ ಬಹಳ ದೊಡ್ಡವರಾಗಿದ್ದರು. ನಾವುಗಳು ಹೋದಾಗ ಸಾಮಾನ್ಯವಾಗಿ ಯಾರೂ ಮನೆಯಲ್ಲಿ ಇರುತ್ತಿರಲಿಲ್ಲ.

ನಮ್ಮಮ್ಮ ಮತ್ತು ದೊಡ್ಡಮ್ಮ ಮಾತನಾಡುತ್ತಿದ್ದಾಗ ನಾನೂ ಸ್ವಲ್ಪ ಹೊತ್ತು ಅಲ್ಲಿಯೇ ಕುಳಿತು ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದೆ. ನಮ್ಮ ದೊಡ್ಡಪ್ಪನವರು ನಮ್ಮೊಂದಿಗೆ ಅಷ್ಟಾಗಿ ಮಾತನಾಡುತ್ತಿರಲಿಲ್ಲ. ಕಾರಣೆವೆಂದರೆ ವಯಸ್ಸಿನಲ್ಲಿ ಇರುವ ವ್ಯತ್ಯಾಸ. ನನಗಿನ್ನೂ 13 ವರ್ಷ, ಆಗ ದೊಡ್ಡಪ್ಪನವರಿಗೆ 67-68 ವರ್ಷ ವಯಸ್ಸು. ಆದ್ರೆ ದೊಡ್ಡಮ್ಮ ಮಾತ್ರ ಹಾಗಲ್ಲ, ನನ್ನನ್ನು ಆಗಾಗ ‘ಏನೋ ಛತ್ರಿ ಮುಂಡೇದೇ ಎಂದು ತಲೆ ನೇವರಿಸಿ, ಪೋ ಆಡವಾಣ್ಳು ಮಾಟ್ಲಾಡೇ ಸಮಯಂಲೋ ನೀಕೇಮಿ ಪನಿ’ ಎಂದು ಆಚೆಗೆ ಹೋಗಲು ಕಳುಹಿಸುತ್ತಿದ್ದರು.

ನನ್ನ ತಾಯಿ ದೊಡ್ಡಮ್ಮನೊಂದಿಗೆ ಮನೆಯಂಗಳದಲ್ಲಿ ಕುಳಿತು ಮಾತನಾಡುತ್ತಿದ್ದರೆ, ನಾನು ಸೀಬೆಗಿಡವನ್ನು ಹತ್ತಿ ಸಣ್ಣ ಕಾಯಿಯನ್ನೂ ಬಿಡದೇ ಎಲ್ಲವನ್ನೂ ಕಿತ್ತು ತಿನ್ನುತ್ತಿದೆ. ದೊಡ್ಡಮ್ಮನಿಗೆ ಈ ವಿಷಯ ಗೊತ್ತಾಗುತ್ತಿದ್ದರೂ ಎಂದೂ ಬೈಯ್ಯುತ್ತಿರಲಿಲ್ಲ. ಆದರೇನು ವಾಪಸ್ಸು ಮನೆಗೆ ಹೋಗುವ ವೇಳೆಗೆ ನನ್ನ ಹೊಟ್ಟೆಯಲ್ಲಿ ನೋವು ಶುರುವಾಗುತ್ತಿತ್ತು ಮತ್ತು ಅಮ್ಮನಿಂದ ಎರಡೇಟು ಬೀಳುತ್ತಿತ್ತು. ಇದು ಮಾಮೂಲಿ ವಿಷಯವಾಗಿತ್ತು.

ಆ ಸಮಯದಲ್ಲಿ ನಮ್ಮ ಮನೆಯಲ್ಲಿ ಬಹಳ ಕಷ್ಟವಿದ್ದು, ನನ್ನ ತಾಯಿಗೆ ನನ್ನ ದೊಡ್ಡಪ್ಪನವರು ಲಲಿತಾ ಸಹಸ್ರನಾಮದ ಬೀಜ ಮಂತ್ರದ ದೀಕ್ಷೆಯನ್ನು ನೀಡಿದ್ದರು (ಅವರಿಗೆ ಅದು ಸಿದ್ಧಿಸಿತ್ತಂತೆ). ಹಾಗೆಯೇ ನನ್ನ ದೊಡ್ಡಮ್ಮ ಹದಿನಾರು ಸೋಮವಾರ ವ್ರತವನ್ನೂ ಮತ್ತು ದತ್ತಾತ್ರೇಯ ಆರಾಧನೆಯನ್ನೂ ಮಾಡಲು ಹೇಳಿಕೊಟ್ಟಿದ್ದರು. ಆಗ ನನ್ನ ದೊಡ್ಡಪ್ಪನವರು ಗುಬ್ಬಿ ಚಿದಂಬರಾಶ್ರಮದಲ್ಲಿ ಅಧ್ಯಕ್ಷರಾಗಿದ್ದರು. ಅಲ್ಲಿ ಒಂದು ಕೋಣೆಯನ್ನೂ ಕಟ್ಟಿದ್ದರು. ನನ್ನ ತಂದೆ ಮತ್ತು ತಾಯಿಯರನ್ನು ಪ್ರತಿವರ್ಷ ಆರಾಧನೆಯ ಸಮಯದಲ್ಲಿ ಬಂದು ಹೋಗುವಂತೆ ಹೇಳುತ್ತಿದ್ದರು. ನನ್ನ ಮೂರನೆಯ ಅಣ್ಣನ ಉಪನಯನವೂ ಅಲ್ಲಿಯೇ ಆಗಿತ್ತು.

ದೊಡ್ಡಮ್ಮನ ಎರಡನೆಯ ಮಗ ಛಾಯಾಪತಿ ಪುಸ್ತಕ ಪ್ರಕಟಣೆಯ ಸಂಸ್ಥೆಯನ್ನು ನಡೆಸುತ್ತಿದ್ದರು. ಅದರ ಹೆಸರು ತ.ವೆಂ.ಸ್ಮಾರಕ ಗ್ರಂಥಮಾಲೆ. ಅವರ ಮದುವೆಗೆ ಹುಡುಗಿಯನ್ನು ನೋಡುತ್ತಿದ್ದರು. ಆಗ ನಾನು ಓದುತ್ತಿದ್ದುದು ಜೆ.ಎಸ್‌.ಎಸ್‌. ಪ್ರೌಢಶಾಲೆಯಲ್ಲಿ. ಒಮ್ಮೆ ನಮ್ಮ ಕನ್ನಡ (ನಾನು ಸಂಸ್ಕೃತ ಭಾಷೆಯನ್ನು ತೆಗೆದುಕೊಂಡಿದ್ದು), ಮೇಡಂ ನನಗೆ ಅವರನ್ನು ಭೇಟಿಯಾಗಲು ಹೇಳಿ ಕಳುಹಿಸಿದ್ದರು. ನಾನು ಅವರಲ್ಲಿಗೆ ಹೋದಾಗ ಅವರು ಇತರ ಟೀಚರುಗಳಿಗೆ ನಾನು ತ.ಸು.ಶಾಮರಾಯರ ತಮ್ಮನ ಮಗನೆಂದು ಪರಿಚಯಿಸಿದ್ದರು. ನನಗೆ ಏಕೆ ಕನ್ನಡ ವಿಷಯವನ್ನು ಅಭ್ಯಸಿಸಲು ಇಚ್ಛೆಯಿಲ್ಲವೆಂದು ಕೇಳಿದ್ದರು. ಜೊತೆಗೇ ಅವರ ತಂಗಿಯ ಭಾವಚಿತ್ರವನ್ನು ಕೊಟ್ಟು ನನ್ನ ದೊಡ್ಡಮ್ಮನಿಗೆ ಕೊಡಬೇಕೆಂದೂ, ತಮ್ಮ ಬಗ್ಗೆ ಒಂದೆರಡು ಒಳ್ಳೆಯ ಮಾತುಗಳನ್ನು ಹೇಳಬೇಕೆಂದೂ ತಿಳಿಸಿದ್ದರು. ನಾನು ಹಾಗೆಯೇ ದೊಡ್ಡಮ್ಮನಿಗೆ ತಿಳಿಸಿದ್ದೆ. ಅದಕ್ಕವರು ಹೋಗೋ ನಿನಗ್ಯಾಕೆ ಅದೆಲ್ಲಾ, ನಿನಗೇನೂ ಅರ್ಥ ಆಗೋಲ್ಲ, ಎಂದು ಹೇಳಿದ್ದರು. ನಾನ್ಯಾವ ದೊಡ್ಡ ಮನುಷ್ಯ ಅಂತ ನನ್ನ ದೊಡ್ಡಮ್ಮ ನನಗೆ ಮರ್ಯಾದೆ ಕೊಡ್ಬೇಕಿತ್ತು. ಅಲ್ವೇ? ಆ ಟೀಚರ್ರಿಗೆ ಈ ವಿಷಯ ಗೊತ್ತಾಗಿತ್ತು ಅನ್ಸತ್ತೆ, ಮತ್ತೆ ಅವರೇನೂ ನನ್ನನ್ನು ಕರೆದಿರಲಿಲ್ಲ, ಮತ್ತು ಮಾತನಾಡಿಸಲೂ ಇಲ್ಲ.

ಸ್ವಲ್ಪ ದಿನಗಳ ಮಟ್ಟಿಗೆ, ನಮಗೆ ಬಾಡಿಗೆ ಮನೆಯಾಂದು ಕೃಷ್ಣಮೂರ್ತಿಪುರಂನಲ್ಲೇ ದೊರೆತಿತ್ತು. ಅದೂ ದೊಡ್ಡಪ್ಪನವರ ಮನೆಯ ಹಿಂದೆಯೇ ಸಿಕ್ಕಿತ್ತು. ಆಗಂತೂ ನನ್ನ ತಾಯಿ ಪ್ರತಿದಿನ ಮಧ್ಯಾಹ್ನವೂ ದೊಡ್ಡಮ್ಮನನ್ನು ನೋಡಲು ಹೋಗುತ್ತಿದ್ದರು. ನನ್ನ ದೊಡ್ಡಮ್ಮನ ಅಡುಗೆಯ ರುಚಿಯೇ ಬೇರೆ. ಆಹಾ! ಇಂದಿಗೂ ನೆನೆಸಿಕೊಂಡ್ರೆ ಬಾಯಲ್ಲಿ ನೀರೂರುತ್ತದೆ. ಆಗಾಗ ದೊಡ್ಡಮ್ಮ ಇದರ ಬಗ್ಗೆ ದೊಡ್ಡಪ್ಪನವರ ಶಿಷ್ಯಂದಿರಾಗಿ ಮನೆಗೆ ಊಟಕ್ಕೆ ಬರುತ್ತಿದ್ದ ಜಿ.ಎಸ್‌.ಶಿವರುದ್ರಪ್ಪ, ಎನ್‌.ಎಸ್‌.ಲಕ್ಷ್ಮೀನಾರಾಯಣ ಭಟ್ಟ ಅವರು ಹೊಗಳುತ್ತಿದ್ದ ಮಾತಗಳನ್ನು ಹೇಳುತ್ತಿದ್ದರು. ಆಗಲೇ ಒಮ್ಮೆ ಕವಿ ಜಿ.ಎಸ್‌.ಎಸ್‌. ಅವರು ದೊಡ್ಡಪ್ಪನವರ ಬಗ್ಗೆ ಬರೆದ ’ಎದೆ ತುಂಬಿ ಹಾಡಿದೆನು ಅಂದು ನಾನು’ ಕವನದ ಬಗ್ಗೆಯೂ ತಿಳಿಸಿದ್ದರು. ದೊಡ್ಡಪ್ಪನವರ ಶ್ರೇಯದ ಹಿಂದೆ ದೊಡ್ಡಮ್ಮ ಇದ್ದೇ ಇದ್ದಾರೆ. ಆ ಶ್ರೇಯಕ್ಕೆ ಮಾತ್ರ ಸಾವಿಲ್ಲ. ಅದು ಚಿರಂತನ.

ನನ್ನ ದೊಡ್ಡಮ್ಮನ ತಮ್ಮ ಅಂದರೆ ನನ್ನ ತಾಯಿಯ ಸೋದರಮಾವ, ನನ್ನ ಚಿಕ್ಕಮ್ಮನನ್ನು ಮದುವೆಯಾಗಿದ್ದರು. ಇದೆಲ್ಲಾ ಗೋಜಲಿನ ವಿಷಯ. ನಮ್ಮ ಮನೆಯಲ್ಲಿ ಹೆಚ್ಚಿನವರೆಲ್ಲರೂ ಸಂಬಂಧದಲ್ಲಿಯೇ ಮದುವೆಯಾಗಿರುವುದು. ಅದರ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳಬೇಡಿ. ಆ ಚಿಕ್ಕಮ್ಮನ ಮಗ ಅಂದ್ರೆ ನನ್ನ ಅಣ್ಣ ನಾಗೇಶ ದೊಡ್ಡಪ್ಪವರ ಮನೆಯಲ್ಲಿಯೇ ಇದ್ದು ಯುವರಾಜಾ ಕಾಲೇಜಿನಲ್ಲಿ ಪಿ.ಯೂ.ಸಿ. ಓದುತ್ತಿದ್ದ. ಅವನಿಗೆ ಮನೆಯಲ್ಲಿ ಕೊಡುತ್ತಿದ್ದ ಕೆಲಸವೆಂದರೆ, ಆಗಾಗ ಕೃಷ್ಣರಾಜಾ ಮಾರ್ಕೆಟ್ಟಿಗೆ ಹೋಗಿ ದೊಡ್ಡಪ್ಪನಿಗೆ ನಶ್ಯದ ಪುಡಿ ತರಬೇಕು ಮತ್ತು ಮನೆಗೆ ಆಗಾಗ ಕಾಫೀಪುಡಿ ತರಬೇಕು ಅಷ್ಟೆ. ಅವನು ಜೊತೆಗೆ ನನ್ನನ್ನೂ ಕರೆದೊಯ್ಯುತ್ತಿದ್ದ. ಪ್ರತಿ ದಿನ ಸಂಜೆ ದೊಡ್ಡಪ್ಪನವರು ಅವರ ಅಣ್ಣನ ಮಗ (ವೆಂಕಣ್ಣಯ್ಯನವರ ಎರಡನೆಯ ಮಗ) ರಾಘವ ಅವರೊಂದಿಗೆ ಚಾಮುಂಡಿ ಬೆಟ್ಟದ ಕಡೆಗೆ ವಾಕಿಂಗ್‌ ಹೋಗುತ್ತಿದ್ದರು. ದೊಡ್ಡಪ್ಪನ ಸಂಪೂರ್ಣ ಆರೈಕೆಯನ್ನು ದೊಡ್ಡಮ್ಮನೇ ಮಾಡಬೇಕಿತ್ತು. ಬೇರೆ ಯಾರನ್ನೂ ಅವರು ಹತ್ತಿರಕ್ಕೆ ಬರಗೊಡುತ್ತಿರಲಿಲ್ಲ.

1997ರಲ್ಲಿ ನಾನು ಬೆಂಗಳೂರಿಗೆ ಬಂದ ನಂತರ ಒಂದು ದಿನ ನನ್ನ ಅಣ್ಣನೊಂದಿಗೆ ದೊಡ್ಡಪ್ಪ ದೊಡ್ಡಮ್ಮನನ್ನು ನೋಡಲು ಮೈಸೂರಿಗೆ ಹೋಗಿದ್ದೆ. ಆಗ ದೊಡ್ಡಪ್ಪನವರ ಆರೋಗ್ಯ ಹದಗೆಡುತ್ತಿತ್ತು. ಅದೇ ಮೊದಲ ಬಾರಿಗೆ ಅವರು ನನ್ನೊಂದಿಗೂ ಮನ ಬಿಚ್ಚಿ ಮಾತನಾಡಿದ್ದರು. ಅಂದೂ ಅವರ ಮನೆಯಲ್ಲಿ ಅದೇ ದೊಡ್ಡಮ್ಮನ ಕೈಯ ಊಟವಾಗಿತ್ತು. ಮತ್ತೆ ಅಲ್ಲಿಗೆ ಹೋಗಿದ್ದು ಇನ್ನೊಂದು ವರ್ಷದ ನಂತರ, ದೊಡ್ಡಪ್ಪನವರು ದೈವಾಧೀನರಾದ ನಂತರ. ಹತ್ತನೆಯ ದಿನದ ಧರ್ಮೋದಕಕ್ಕೆ ಹೋಗಿದ್ದ ನಾವು, ದೊಡ್ಡಮ್ಮನನ್ನು ನೋಡಲು ಮನೆಗೆ ಹೋಗಿದ್ದೆವು. ಆಗಲೇ ಅವರ ಮೈ ಅರ್ಧ ಕಮಾನಿನಂತೆ ಬಗ್ಗಿ ಹೋಗಿತ್ತು. ಆಗಲೂ ಕೂಡಾ, ಊಟ ಮಾಡುತ್ತಿದ್ದ (ನನಗಾಗ 39 ವರ್ಷ ವಯಸ್ಸು) ದೊಡ್ಡಮ್ಮ ಮತ್ತು ಅಕ್ಕ(ಲಕ್ಷ್ಮೀದೇವಿ) ಹತ್ತಿರಕ್ಕೆ ಕರೆದು ನನ್ನ ತಲೆ ನೇವರಿಸಿ, ’ಏನೋ, ನಮ್ಮ ಮುಂದೆ ಚಡ್ಡಿ ಹಾಕಿ ಓಡಾಡುತ್ತಿದ್ದ ಹುಡುಗ, ಮನೆಯ ಸೀಬೇಕಾಯಿ ಕಿತ್ತು ತಿನ್ನುದ್ದವನು, ಈಗ ಬ್ಯಾಂಕಿನಲ್ಲಿ ಮ್ಯಾನೇಜರಾಗಿ ನಮ್ಮನ್ನೆಲ್ಲಾ ಮರೆತಿದ್ದೀಯಾ? ಇಲ್ಲ ಅನ್ಸತ್ತೆ, ಅದಕ್ಕೇ ನೋಡು ನೋಡೋಕ್ಕೆ ಬಂದಿರೋದು, ದೇವರು ನಿಮ್ಮನ್ನೆಲ್ಲಾ ಚೆನ್ನಾಗಿಟ್ಟಿರಲಿ’ ಎಂದಿದ್ದರು. ಈಗಲೂ ಆ ಮಾತುಗಳು ಕಿವಿಯಲ್ಲಿ ಪ್ರತಿಧ್ವನಿಸುತ್ತಿವೆ. ಇನ್ನೆಲ್ಲಿ ಆ ದೊಡ್ಡಮ್ಮ. ಆ ಆಪ್ಯಾಯತೆಯ ಮಾತುಗಳನ್ನು ಇನ್ಯಾರಿಂದ ನಿರೀಕ್ಷಿಸಲಾಗುತ್ತದೆ. ಇನ್ನು ನಾನು ಇತರ ಮಕ್ಕಳಿಗೆ ಹೇಳಬೇಕಷ್ಟೆ.

ಏನು ಮಾಡುವುದು. ವಿಧಿಯಾಟ. ಈಗ ಆ ದೊಡ್ಡಮ್ಮನ ಬಗ್ಗೆ ನೆನಪು ಮಾತ್ರವೇ ನನ್ನಲ್ಲಿ ಚಿರಂತನ. ಇದೀಗ ನನ್ನ ಮೂರನೆಯ ಅಣ್ಣ ದೂರವಾಣಿಯ ಮೂಲಕ ತಿಳಿಸಿದ, ಧರ್ಮೋದಕಕ್ಕೆ ಎರಡನೆಯ ಅಣ್ಣನೊಂದಿಗೆ ಮೈಸೂರಿಗೆ ಹೋಗುತ್ತಿದ್ದೇನೆ ಎಂದು. ನಾನು ದೂರದಲ್ಲಿರುವವನು, ಆದರೂ ನನ್ನ ನೆನಪುಗಳು ಮಾತ್ರ ಆ ದೈವಸ್ವರೂಪಿ ದೊಡ್ಡಮ್ಮನೊಂದಿಗೇ ಇದೆ. ನಾನೇನು ಮಾಡಬಲ್ಲೆ. ಒಂದು ಕೆಲಸವನ್ನಂತೂ ಮಾಡಬಲ್ಲೆ. ಅದನ್ನು ಮಾಡಲೇಬೇಕು. ಅದೆಂದರೆ ಆ ಸರ್ವಶಕ್ತನಲ್ಲಿ ನಾನು ಪ್ರಾರ್ಥಿಸಿಕೊಳ್ಳಬಲ್ಲೆ. ಜೀವನದಲ್ಲಿ ಎಲ್ಲ ಮಜಲುಗಳನ್ನೂ ಕಂಡ ಆ ಹಿರಿಯ ಚೇತನಕ್ಕೆ ಮರು ಜನ್ಮವೀಯದಿರಲು ಆತನಲ್ಲಿ ಪ್ರಾರ್ಥಿಸುವೆ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X