ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಇದು ಹೋಳಿಗೆ... ಇದು ತುಪ್ಪ... ಇದು ಹಪ್ಪಳ... ’

By Staff
|
Google Oneindia Kannada News


ಮೊದಲು ಎಷ್ಟೊಂದು ಜಾನಪದ ಆಟಗಳಿದ್ದವು. ಮುನಿಸಿಕೊಂಡು, ಮುಖ ಊದಿಸಿಕೊಂಡ ಮಗುವಿನ ಮೊಗದಲ್ಲಿ ನಗೆ ಅರಳಿಸಲು ಅಜ್ಜಿಯಂದಿರು ಎಷ್ಟೆಲ್ಲ ಕಸರತ್ತು ಮಾಡುತ್ತಿದ್ದರು ಅಲ್ವಾ? ಅಂತಹ ಒಂದು ಸ್ಯಾಂಪಲ್‌ ಇಲ್ಲಿದೆ.

A warm touch and guidance...‘ಇದು ಹೋಳಿಗೆ... ಇದು ತುಪ್ಪ... ಇದು ಹಪ್ಪಳ... ಇದು ಅನ್ನ... ಇದು ಸಾರು’ ಎನ್ನುತ್ತ ಅಳುವ ಮಗುವಿನ ಕೈ ಬೆರಳುಗಳನ್ನು ಬಿಡಿಸಿ ‘ನೀ ಉಣ್ಣು ಕಲ್ಲು... ನೀ ಉಣ್ಣು ಬಸೂ... ನೀ ಉಣ್ಣು ಸಿದ್ದು...’ ಎಂದು ಮಕ್ಕಳಾಡುವುದನ್ನು ನಾವೆಲ್ಲಾ ನೋಡಿದ್ದೇವೆ , ಬಾಲ್ಯದಲ್ಲಿ ನಾವೂ ಆಡಿದ್ದೇವೆ..

ಹೀಗೆ ಆಡುವ ಆಟಕ್ಕೆ ಏನಾದರೂ ಹಿನ್ನೆಲೆ ಇದೆಯೆ? ಇದಕ್ಕಿರುವ ಅರ್ಥವಾದರೂ ಏನು? ಅರ್ಥವೇ ಇರದಿದ್ದರೆ ಚಟುವಟಿಕೆ ಮೂಲದ ಈ ಶಿಶುಪ್ರಾಸ ಇಂದಿಗೂ ಉಳಿದು ಬಂದದ್ದಾದರೂ ಹೇಗೆ? ಇಂತಹ ಹಲವಾರು ಪ್ರಶ್ನೆಗಳು ದುತ್ತನೇ ಎದುರಾಗುತ್ತವೆ.

ಎಲ್ಲರಿಗಿಂತ ಚಿಕ್ಕ ಮಗು (ಅವಿಭಕ್ತ ಕುಟುಂಬದಲ್ಲಿಯ ಇಲ್ಲವೆ ನೆರೆಮನೆಗಳ ನಾಲ್ಕಾರು ಮಕ್ಕಳಲ್ಲಿ) ಯಾವುದೋ ತಿನಿಸಿಗೆ ಹಟ ಮಾಡಿ, ಆ ತಿನಿಸನ್ನೆಲ್ಲ ತನ್ನ ಮುಷ್ಟಿಯಲ್ಲಿ ಹಿಡಿದಿದ್ದರೂ ಅಳುತ್ತಲೇ ಇದೆ. ಆಸೆ ಕಣ್ಣುಗಳಿಂದ ಆ ಮಗುವಿನ ಕೈಯಲ್ಲಿಯ ತಿನಿಸನ್ನೇ ನೋಡುತ್ತಲಿವೆ, ಸುತ್ತಲಿನ ಉಳಿದ ಮಕ್ಕಳು ! ಆಗ ಹಟಮಾರಿ ಮಗುವನ್ನೆತ್ತಿಕೊಂಡು ತೊಡೆಯ ಮೇಲೆ ಕೂಡಿಸಿಕೊಂಡ ಅಜ್ಜಿ ತನ್ನ ಸಮ್ಮೋಹಕ ಆಟವನ್ನು ಶುರುಮಾಡುತ್ತಾಳೆ.

ಮುಷ್ಟಿಯಲ್ಲಿ ಎಲ್ಲ ತಿನಿಸನ್ನೂ ಗಟ್ಟಿ ಹಿಡಿದುಕೊಂಡ ತುಂಟನ ಕೈ ಬೆರಳುಗಳನ್ನು ಒಂದೊಂದಾಗಿ .... ‘ಇದು ಹೋಳಿಗೆ... ಇದು ತುಪ್ಪ...’ ಎನ್ನುತ್ತ ಬಿಡಿಸಿ ಅಗಲ ಮಾಡುತ್ತಾಳೆ. ಸುತ್ತಲಿನ ಮಕ್ಕಳಿಗೆಲ್ಲ ಆ ತಿನಿಸು ಕಾಣಿಸಿದಕೂಡಲೇ ಬಾಯಲ್ಲಿ ನೀರೂರುತ್ತವೆ ! ಇದನ್ನು ಸೂಕ್ಷ್ಮವಾಗಿ ಗಮನಿಸಿದ ಅಜ್ಜಿ ‘ನೀ ಉಣ್ಣ ಕಲ್ಲು. ..... ನೀ ಉಣ್ಣು ಬಸೂ...’ ಎಂದು ಆ ತಿನಿಸನ್ನು ಮೊದಲು ಆ ಹಟಮಾರಿ ಮಗುವಿನ ಬಾಯಿಗಿಡುತ್ತಾಳೆ.

ಶೇಂಗಾ ಬೆಲ್ಲದ ಆ ತಿನಿಸಿನ ರುಚಿ ಉಂಡ ಮಗು ಪೂರ್ಣ ಅಳು ನಿಲ್ಲಿಸಿ ಬಿಡುತ್ತದೆ. ಆನಂದದಿಂದ ಖುಷಿ ಪಡುತ್ತದೆ. ಅದೇ ಕ್ಷಣಕ್ಕೆ ಕಾಯ್ದು ನಿಂತ ಅಜ್ಜಿ ಆ ಎಂದು ಬಾಯ್ತೆರದ ಇನ್ನೊಂದು ಮಗುವಿಗೆ ‘ನೀ ಉಣ್ಣು ಬಸೂ...’ ಎಂದು ಬಾಯಿಗಿಡುತ್ತಾಳೆ ! ಇಷ್ಟೊತ್ತಿಗೆ ಎಲ್ಲ ಮಕ್ಕಳಿಗೂ ನನಗೂ ತಿನಿಸು ಸಿಕ್ಕೇ ಸಿಗುತ್ತದೆ ಎಂಬ ಭರವಸೆ ಮೂಡುತ್ತದೆ.

‘ನೀ ಉಣ್ಣು ಸಿದ್ದು...’ ಎನ್ನುತ ಎಲ್ಲರ ಸರತಿಯೂ ಮುಗಿಯುತ್ತದೆ. ಆದರೂ ಮಗುವಿನ ಕೈಯಲ್ಲಿ ತಿನಿಸು ಇನ್ನೂ ಉಳಿದೇ ಇರುತ್ತದೆ ! ಅಬ್ಬಾ , ಎಂತಹ ಅಕ್ಷಯ ಅಂಜಲಿ ಅದು ! ಎಲ್ಲ ಮಕ್ಕಳು ರುಚಿ ಕಂಡ ಮೇಲೆ ಅಜ್ಜಿಯ ಆಟ ಮುಂದುವರೆಯುತ್ತದೆ. ‘ ಎಲ್ಲಾ ಉಂಡು ಕಟ್ಟಿಗೆ ಹಾಕಿ’ ಎಂದು ಹೇಳಿ... ‘ಕಟ್ಟೆ ಒಡೆಯಿತು’ ಎನ್ನುತ್ತ ಹರ್ಷೋದ್ಗಾರ ಮಾಡುತ್ತಾಳೆ.

ಅಜ್ಜಿಯ ಬಲಗೈ ಬೆರಳುಗಳು ಹಟಮಾರಿ ಮಗುವಿನ ಮುಂಗೈವರೆಗೆ ಸಾಗಿ.. ಸಾಗಿ ಕುತ್ತಿಗೆ ತಲುಪುತ್ತವೆ. ಕಚಗುಳಿಗೊಂಡ ಮಗು ನಗುತ್ತದೆ. ನಕ್ಕೇ ನಗುತ್ತದೆ! ಅಹಹ... ಅಹಹ! ಎಲ್ಲರೂ ನಕ್ಕದ್ದೇ ನಕ್ಕದ್ದು... ನಗೆಯ ಕಟ್ಟೆ ಹೀಗೆ ಒಡೆದುಬಿಡುತ್ತದೆ! ನಮ್ಮ ಜನಪದರು ಬಾಲ್ಯದಲ್ಲಿಯೇ ಮಕ್ಕಳಿಗೆ ಎಂತಹ ಸಂಸ್ಕಾರ ಕೊಡುತ್ತಿದ್ದರೆಂಬುದಕ್ಕೆ ಈ ಶಿಶುಪ್ರಾಸ ನಿದರ್ಶನವಾಗಿದೆ. ಹಂಚಿಕೊಂಡು ತಿನ್ನುವದರಲ್ಲಿಯ ಸುಖ ಸಂತೋಷಗಳನ್ನು ಮುಗ್ಧ ಮಕ್ಕಳಿಗೆ ಮನವರಿಕೆ ಮಾಡಿಕೊಡುವ ಈ ಆಟ ಅದ್ಭುತವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X