ಪುಣೇಕರ್ ಎನ್ನುವ ಅಭಿನವ ವಾಲ್ಮೀಕಿ
ಅವರಿಗೆ 3 ಜನ ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು. ಕಳೆದ ವಾರದಿಂದ ಅಸ್ವಸ್ಥರಾದ ಅವರು ಕೆಲದಿನ ತಮ್ಮ ಮುಂಬೈನಲ್ಲಿನ ಮಗಳು ವೀಣಾ ಮೋಕಾಶಿಯವರ ಬಳಿ ಇದ್ದು, ಇತ್ತೀಚೆಗಷ್ಟೆ ಧಾರವಾಡಕ್ಕೆ ಬಂದಿದ್ದರು. ಹುಬ್ಬಳ್ಳಿಯಲ್ಲಿ ತಮ್ಮ ಪುತ್ರಿ ಸ್ನೇಹಾ ಅವರ ಬಳಿ ಇದ್ದರು. ಹುಬ್ಬಳ್ಳಿಯಿಂದ ಅವರ ಪಾರ್ಥಿವ ಶರೀರವನ್ನು ಧಾರವಾಡದ ಮಾಳಮಡ್ಡಿಯ 6ನೇ ಕ್ರಾಸ್‌ನಲ್ಲಿರುವ ಮನೆಗೆ ತಂದು ಸಾರ್ವಜನಿಕ ದರ್ಶನಕ್ಕಾಗಿ ಇರಿಸಲಾಗಿತ್ತು.
ನಮ್ಮ ಸ್ನೇಹಿತೆ ತಿಳಿಸಿದಂತೆ ಅವರಿಗೆ ತಾಯಿ ಮೊದಲೆ ತೀರಿಹೋಗಿ, ಮೊಕಾಶಿಯವರು ಪುಣೆಕರ ಮನೆತನಕ್ಕೆ ದತ್ತಕ್ಕೆ ಹೋದವರು, ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ, ಅವರು ‘ಗಂಗವ್ವ ಗಂಗಾಮಾಯಿ’ ಬರೆದಾಗ, ಅವರ ಎರಡನೇ ತಾಯಿ, ಅಕ್ಕಪಕ್ಕದವರೊಂದಿಗೆ, ‘ನನಗ ಗೊತ್ತದ, ಅಂವಾ ನನ್ನ ಮ್ಯಾಲೆ ಬರದಾನ’ ಅನ್ನುತ್ತಿದ್ದರಂತೆ. ಆ ತಾಯಿ ಒಳಗೆ ಮನದಲ್ಲಿ ಎಷ್ಟು ಸಂತೋಷಪಟ್ಟಿರಬಹುದು !!
ಕಾದಂಬರಿ, ವಿಮರ್ಶೆ, ಕಾವ್ಯ, ಸಂಶೊಧನೆ, ನಾಟಕ ಎಲ್ಲದರಲ್ಲೂ ವಿಶೇಷ ಪಾಂಡಿತ್ಯ , ವಿಪುಲ ಸಾಹಿತ್ಯ ಕೃಷಿ ಮಾಡಿದ ಪುಣೇಕರರಿಗೆ ಸಾಹಿತ್ಯದಲ್ಲಷ್ಟೆ ಅಲ್ಲದೇ ಸಂಗೀತದಲ್ಲೂ ಅಭಿರುಚಿ, ಪಾಂಡಿತ್ಯ ಪಡೆದವರು. ಇಂಥ ಒಬ್ಬ ಅಭಿನವ ವಾಲ್ಮೀಕಿಯನ್ನು ಕಳೆದುಕೊಂಡುದು, ನಮ್ಮೆಲ್ಲರ ದುರ್ಭಾಗ್ಯ. ವರಕವಿ ಶ್ರೀ.ದ.ರಾ.ಬೇಂದ್ರೆ, ಡಾ.ಪುಣೆಕರ ರಂಥವರನ್ನು ಕಳೆದುಕೊಂಡ ಧಾರವಾಡದ ಸಾಹಿತ್ಯ ಸಿರಿ ಬರಿದಾಗದಿರಲಿ ಎಂದಿಗೂ. ಕನ್ನಡನಾಡಿನಲ್ಲಿ ಮತ್ತೆ ಇಂಥವರು ಹುಟ್ಟಿಬರಲೆಂದು ಆಶಿಸೋಣ. ದೆಹಲಿಯಲ್ಲಿದ್ದರೂ ಮನಸ್ಸೆಲ್ಲಾ ಧಾರವಾಡದಲ್ಲೇ, ಮೊಕಾಶಿಯವರನ್ನು ನೆನೆ ನೆನೆಸಿ ಕಣ್ಣು ತೇವವಾಗಿವೆ.












Click it and Unblock the Notifications