• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವೀರಪ್ಪನ್‌ ಕ್ಯಾಮರಕ್ಕಾದರು ಸಿಗುವನೇ?

By Staff
|
  • ಕನ್ನಡ ಡೆಸ್ಕ್‌

Ram Gopal Verma‘ಅಬ್‌ತಕ್‌ ಛಪ್ಪನ್‌’ ಹುವಾ ಮಗರ್‌ ಏ ನಹೀ ಮಿಲತಾಹೇ ಸಾಲಾ ವೀರಪ್ಪನ್‌’

ಮಲೈಮಹದೇಶ್ವರದ ಈ ಮಹಾತ್ಮನ(?) ಸಾಹಸ ಬಾಲಿವುಡ್‌ಗೂ ತಲುಪಿದೆ. ‘ರಂಗೀಲಾ’ ಖ್ಯಾತಿಯ ರಾಮ್‌ಗೋಪಾಲ್‌ ವರ್ಮಾ ವೀರಪ್ಪನ್‌ಕತೆ ಆಧಾರಿತ ಚಿತ್ರ ಮಾಡಲು ಹೊರಟ್ಟಿದ್ದಾರೆ. ಈ ಚಿತ್ರದ ನಿರ್ದೇಶನ ‘ಅಬ್‌ತಕ್‌ ಛಪ್ಪನ್‌’ ನಿರ್ದೇಶಕ ಶಮಿತ್‌ ಅಮೀನ್‌. ಆಗಸ್ಟ್‌ ತಿಂಗಳಿಂದ ಚಿತ್ರಿಕರಣ ಆರಂಭವಾಗಲಿದೆ. ಚಿತ್ರಕಥೆಗೆ ಆಧಾರ ಮೈಸೂರು ಮೂಲದ ಸುನಾದ ರಘುರಾಮ್‌ ಅವರ : ಅನ್‌ ಟೋಲ್ಡ್‌ ಸ್ಟೋರಿ.

ದೇವರಾಜ್‌ ನಟನೆಯ ಕನ್ನಡ ಚಿತ್ರ ‘ವೀರಪ್ಪನ್‌’ನ ಆರಂಭದಲ್ಲೇ ವೀರಪ್ಪನ್‌ ಹೇಳುವ ಒಂದು ಮಾತಿದೆ: ‘ಗಾಂಧಿ ಸತ್ತ ಮ್ಯಾಲೆ ಅದ್ಯಾವ್ನೋ ಪರದೇಶಿ ಬಂದು ಅವರ ಸಿನಿಮಾ ಮಾಡ್ದ್ನಂತೆ. ಆದರೆ ನಾನು, ನಾನು... ನೋಡು ಬದುಕಿರುವಾಗಲೇ ಸಿನಿಮಾ ಮಾಡ್ತಿದ್ದಾರೆ! ’

ವೀರಪ್ಪನ್‌ ಕಥೆಯಾಧರಿತ, ಪ್ರಭಾವ ಹೊಂದಿದ ಹಲವು ಚಿತ್ರಗಳು ಕನ್ನಡ, ತಮಿಳು ತೆಲುಗುವಿನಲ್ಲಿ ಬಂದು ಹೋಗಿವೆ. ಆ ಬಳಿಕ ಅದೆಷ್ಟೋ ಘಟನೆಗಳು ಘಟಿಸಿವೆ. ಆದರೆ ಆ ಮಾತುಗಳನ್ನು ಮತ್ತೆ ಆತನೇ ಹೇಳಬಹುದು. ಯಾಕೆಂದರೆ ಈಗ ಚಿತ್ರ ಮಾಡ ಹೊರಟಿರುವುದು ರಾಮ್‌ಗೋಪಾಲ್‌ ವರ್ಮ. ಚಿತ್ರದ ಹೆಸರು: ‘ಲೆಟ್ಸ್‌ ಕ್ಯಾಚ್‌ ವೀರಪ್ಪನ್‌’

‘ಶಿವ’ ಚಿತ್ರದ ನಿರ್ದೇಶನದ ಮೂಲಕ ಚಿತ್ರರಂಗಕ್ಕೆ ವರ್ಮಾಪರಿಚಿತರಾದರು. ಅವರ ನಿರ್ದೇಶನದ ಹಿಂದಿ ಚಿತ್ರ ‘ರಂಗೀಲಾ’ ಪ್ರಸಿದ್ಧಿ ಪಡೆಯಿತಲ್ಲದೆ, ಹಿಂದಿ ಚಿತ್ರರಂಗದಲ್ಲಿ ಹೊಸ ವರಸೆಗೆ ನಾಂದಿಯಾಯಿತು. ಅಂತೆಯೇ ‘ಉದಯಮ್‌’ತಮಿಳಿನಲ್ಲಿ ಹೊಸ ಶೈಲಿ ನಿರೂಪಿಸಿತು. ಅವರ ಚಿತ್ರದಲ್ಲಿ ನಟಿಸಿದ ನಟಿ-ನಟರಿಗೆ ಬ್ರೇಕ್‌ ನೀಡಿತು. ತಪ್ಪೋ-ಸರಿಯೋ,ಪ್ರತಿ ಚಿತ್ರಗಳು ಹೊಸದೊಂದು ಆಯಾಮವನ್ನು ತೆರೆದುಕೊಂಡವು. ಅವರ ‘ಜಂಗಲ್‌’ ಚಿತ್ರ ವೀರಪ್ಪನ್‌ ಕಥೆಯಿಂದ ಪ್ರಭಾವಿತವಾದದ್ದು. ಆದರೆ ಅದೊಂದು ಪ್ರೇಮ ಕಥೆ. ಈಗ ನಿರ್ಮಿಸುತ್ತಿರುವುದು ಶುದ್ಧ ವೀರಪ್ಪನ್‌ ಕಥೆ.

Duplicate veerappan in Jungle ವೀರಪ್ಪನ್‌ ಚಿತ್ರ ನಿರ್ಮಿಸಲು ಹೊರಟ ವರ್ಮಾರಿಗೆ ನೋಟಿಸೊಂದು ತಯಾರಾಗಿದೆ. ಮೈಸೂರಿನ ಪತ್ರಕರ್ತಟಿ. ಗುರುರಾಜ್‌ ನೋಟಿಸ್‌ ನೀಡಲಿರುವ ವ್ಯಕ್ತಿ. ಅನ್‌ ಟೋಲ್ಡ್‌ ಸ್ಟೋರಿಯ ಕರ್ತೃ ಸುನಾದ ರಘುರಾಮ್‌ ಕೃತಿ ಚೌರ್ಯ ಮಾಡಿದ್ದಾರೆ ಎಂಬುದು ಅವರ ಆಪಾದನೆ. ತಾವು ರಚಿಸಿರುವ ‘ವೀರಪ್ಪನ್‌ ನರಹಂತಕನ ರುದ್ರ ನರ್ತನ’ಕೃತಿಯು ಹಸ್ತ ರೂಪದಲ್ಲಿ ಇದ್ದಾಗಲೇ ಅದನ್ನು ಕದ್ದು ಇಂಗ್ಲೀಷ್‌ನಲ್ಲಿ ಅವರು ಬರೆದಿದ್ದಾರೆ. ಹಿಂದೆ ರಾಯಲ್ಟಿ ಮತ್ತು ಕ್ರೆಡಿಟ್‌ ಹಂಚಿಕೊಳ್ಳುವುದಾಗಿ ಹೇಳಿದ್ದರು. ಬಳಿಕ ಮಾತು ಮೀರಿ ಪುಸ್ತಕ ಪ್ರಕಟಿಸಿದ್ದಾರೆ. ನಾನು ಮತ್ತು ಅವರು ಮಾಡಿಕೊಂಡ ಟಿಪ್ಪಣಿಗಳೇ ಇದಕ್ಕೆ ಸಾಕ್ಷಿ ಎನ್ನುತ್ತಾರೆ ಟಿ.ಗುರು ಮೂರ್ತಿ.

ವೀರಪ್ಪನ್‌ ಸೆರೆಹಿಡಿಯಲು ನಮ್ಮ ಪೊಲೀಸರಿಂದ ಸಾಧ್ಯವಾಗಲೇ ಇಲ್ಲ. ಇತ್ತ ವರ್ಮಾ ಕ್ಯಾಮರಾದಲ್ಲಿ ಸೆರೆ ಹಿಡಿಯ ಹೊರಟಾಗಲೂ ವಿಘ್ನವೇ? ಎಲ್ಲೆಡೆ ನಿರಾಶೆ!!! ಪ್ರಸ್ತುತ ಡಿಜಿಪಿಯಾಗಿರುವ ಮಡಿಯಾಳರಿಗೂ ತುಂಬಾ ನೋವು ನೀಡಿದ ವಿಷಯವೆಂದರೆ ಅವರ ಅಧಿಕಾರ ಅವಧಿಯಲ್ಲಿ ವೀರಪ್ಪನ್‌ ಸಿಗದಿರುವುದು. ಇದು ಅವರೊಬ್ಬರ ಅಳಲಲ್ಲ. ಎಲ್ಲಾ ಪೊಲೀಸ್‌-ಮಂತ್ರಿ-ಅಧಿಕಾರಿಗಳದ್ದೂ. ಈ ಸನ್ನಿವೇಶಗಳ ವಿರುದ್ಧ ರೊಚ್ಚಿಗೆದ್ದು ನಿರ್ಮಿಸಿದ ಕೃತಿಯೇ: ‘ವೀರಪ್ಪನ್‌ ಪ್ರೆೃಸ್‌ ಕ್ಯಾಚ್‌: ರಾಜ್‌ಕುಮಾರ್‌’ . ಕೃತಿಯ ಕತೃ: ನಿವೃತ್ತ ಡಿಜಿಪಿ ದಿನಕರ್‌.

ಡಾ. ರಾಜ್‌ಕುಮಾರ್‌ರನ್ನು ವೀರಪ್ಪನ್‌ ಸೆರೆಯಿಂದ ಬಿಡುಗಡೆ ಮಾಡಲು ಸರಕಾರ 20 ಕೋಟಿ ರೂಪಾಯಿ ಕಪ್ಪ ನೀಡಿದೆ ಎಂಬ ಸ್ಫೋಟಕ ವಿಷಯದ ಉಲ್ಲೇಖ ಈ ಕೃತಿಯಲ್ಲಿದೆ.

ಕೃತಿಯಲ್ಲಿ ಮತ್ತೆ ಇನ್ನೇನಿದೆ ? ಅಲ್ಪ-ಸ್ವಲ್ಪ ...

...ಡಿಐಜಿ ಜಯಪ್ರಕಾಶ್‌ ತೆಗೆದುಕೊಂಡ ಸಾಮಾನು ಸರಂಜಾಮುಗಳನ್ನು ಟಾಟಾ ಸುಮೋದೊಳಕ್ಕೆ ಇಡಲಾಯಿತು. ನೆಡುಮಾರನ್‌ ಮತ್ತು ಅವರ ಇಬ್ಬರು ಸಹಾಯಕರು ಬೆಳಗ್ಗೆಯೇ ಈರೋಡ್‌ನಿಂದ ಹೊರಟು ವೀರಪ್ಪನ್‌ ಅಡಗುದಾಣ ಸೇರಿದ್ದರು. ಅವರು ಇಷ್ಟು ಬೇಗ ಅಡಗುದಾಣ ಸೇರಿದ್ದು ಆಶ್ಟರ್ಯ ! ಯಾಕೆಂದರೆ, ನಕ್ಕೀರನ್‌ ಗೋಪಾಲ್‌ ವೀರಪ್ಪನನ್ನು ಭೇಟಿ ಮಾಡಬೇಕೆಂದರೆ, ಅರಣ್ಯದ ಅಂಚಿನಲ್ಲಿ ಸಂಕೇತಕ್ಕಾಗಿ ಕಾದು ನಿಲ್ಲುತ್ತಿದ್ದ. ನಂತರ ವೀರಪ್ಪನ್‌ ಸಹಚರನೊಬ್ಬ ಬಂದು ಗೋಪಾಲ್‌ನನ್ನು ಕರೆದೊಯ್ಯುತ್ತಿದ್ದ. ನೆಡುಮಾರನ್‌ ಬಗ್ಗೆ ವೀರಪ್ಪನ್‌ಗೆ ಅಪಾರ ಗೌರವ, ಆದರ ಇರುವುದರಿಂದ ಆತ ಅವರನ್ನು ಹೆಚ್ಚು ಕಾಯಿಸಿಲ್ಲ.ಜಯಪ್ರಕಾಶ್‌ ತೆಗೆದುಕೊಂಡು ಹೋದ ಸಾಮಾನು ಸರಂಜಾಮುಗಳನ್ನು ನೋಡಿ ವೀರಪ್ಪನ್‌ ಖುಷಿಯಾದ. ಜಿಂಕೆಯಾಂದನ್ನು ಕೊಂದು ಔತಣಕ್ಕೆ ಅಣಿಮಾಡುವಂತೆ ಸಂಗಡಿಗ ಮಾರನ್‌ಗೆ ಹೇಳಿದ.

ಈ ಮಧ್ಯೆ, ನಕ್ಕೀರನ್‌ ಗೋಪಾಲ್‌ ಚೆನ್ನೈನಲ್ಲೇ ಇದ್ದ. ತಾನು ವೀರಪ್ಪನ್‌ ಕಳಿಸುವ ಸಂಕೇತಕ್ಕಾಗಿ ಕಾಯುತ್ತಿರುವುದಾಗಿ ಆತ ಹೇಳುತ್ತಿದ್ದ. ಸಂಕೇತ ಯಾವುದಕ್ಕಾಗಿ? ಔತಣಕ್ಕಾಗಿಯೋ? ಅಥವಾ ವೀರಪ್ಪನ್‌ಗೆ ಬರಬೇಕಾದ ಬಾಕಿ ಹಣ ಕೊಡುವುದಕ್ಕಾಗಿಯೋ?ಕಳೆದ ಕೆಲದಿನಗಳಿಂದ ಏನು ನಡೆಯುತ್ತಿದೆ? ಎಂಬ ಬಗ್ಗೆ ಮಾಧ್ಯಮಗಳಿಗೆ ಸ್ವಲ್ಪವೂ ಗೊತ್ತಿಲ್ಲ. ಪತ್ರಿಕೆಗಳಲ್ಲಿ ಅಂದಾಜಿನ ಮೇಲೆ ವರದಿಗಳನ್ನು ನೀಡಲಾಗುತ್ತಿದೆ. ಒಂದು ಪತ್ರಿಕೆಯಂತೂ ವೀರಪ್ಪನ್‌ ಮತ್ತು ಮಾರನ್‌ ನಡುವೆ ಭಿನ್ನಾಭಿಪ್ರಾಯ ಉಂಟಾಗಿರುವುದರಿಂದ ಗೋಪಾಲ್‌ ಈ ಬಾರಿ ಕಾಡಿಗೆ ಹೋಗಿಲ್ಲ ಎಂದು ಬರೆದಿದೆ. ಈ ಸುದ್ದಿಯ ಮೂಲ ಯಾವವಿರಬಹುದು? ಬಹುಶಃ ಮದ್ಯದ ಬಾಟಲಿ ಇರಬಹುದು ಎಂದು ನನಗನ್ನಿಸುತ್ತದೆ.

Former DGP Dinakarನಂತರ, ವೀರಪ್ಪನ್‌, ನೆಡುಮಾರನ್‌ ಹಾಗೂ ಇತರ ಸಂಧಾನಕಾರರೊಂದಿಗೆ ಹರಟೆ ಹೊಡೆಯುತ್ತಾನೆ. ಅವನಿಗಂತೂ ಹೇಳಲಾರದಷ್ಟು ಸಂತೋಷವಾಗಿದೆ. ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರೊಂದಿಗೆ ಮೊಬೈಲ್‌ನಲ್ಲಿ ಮಾತಾಡಿದ್ದು ಅವನಿಗೆ ಥ್ರಿಲ್‌ ಉಂಟುಮಾಡಿತ್ತು. ರಾಮ್‌ಕುಮಾರ್‌ ತನ್ನ ಮೊಬೈಲಿನಿಂದ ಕೃಷ್ಣರನ್ನು ಸಂಪರ್ಕಿಸಿದರು. ಅವರೊಂದಿಗೆ ಮೊದಲು ಮಾತಾಡಿದ್ದು ನೆಡುಮಾರನ್‌, ನಂತರ ರಾಜ್‌ಕುಮಾರ್‌ ಮಾತಾಡಿದರು, ‘ನಿಮ್ಮೀ ಸಹಾಯವನ್ನು ನಾನು ಯಾವತ್ತೂ ಮರೆಯುವುದಿಲ್ಲ’ ಎಂದವರು ಉದ್ಗರಿಸಿದರು.

ಕೊನೆಯಲ್ಲಿ ವೀರಪ್ಪನ್‌ ಮಾತಾಡಿ ‘ಅವಂಗಳೆ ವಿಟ್ಟುಟೆಂಗೋ’ (ಅವರನ್ನು ಬಿಟ್ಟುಬಿಟ್ಟಿದ್ದೇನೆ) ಎನ್ನುತ್ತಾನೆ. ಕೃಷ್ಣ ಅವರೆಲ್ಲರಿಗೂ ಧನ್ಯವಾದ ಅರ್ಪಿಸುತ್ತಾರೆ. ಅದರಲ್ಲೂ ವೀರಪ್ಪನ್‌ಗೆ ಆಲದ ಕೃತಜ್ಞತೆ ಸಮರ್ಪಿಸುತ್ತಾರೆ.ನೆಡುಮಾರನ್‌ ಮತ್ತಿತರ ಸಂಧಾನಕಾರರು ರಾಜ್‌ ಜತೆಗೆ ಬೆಂಗಳೂರಿಗೆ ಬರಲಿಚ್ಛಿಸುತ್ತಾರೆ. ಆದರೆ ಕೃಷ್ಣ ಅವರನ್ನು ವಿನಂತಿಸಿದ ನಂತರ ಅವರ ಯೋಜನೆ ಬದಲಾಗುತ್ತದೆ.

ರಾಜ್‌ ಮತ್ತು ಸಂಧಾನಕಾರರಿಗೆ ವೀರಪ್ಪನ್‌ ಉಡುಗೊರೆಗಳನ್ನು ಕೊಡುತ್ತಾನೆ. ರಾಜ್‌ಗೆ ಒಂದು ಧೋತಿ ಮತ್ತು ಒಂದು ಪಂಚೆ ಮತ್ತೊಂದು ಶಾಲನ್ನೂ ಹೊದಿಸುತ್ತಾನೆ.ಅವತ್ತು ಸಂಜೆ 5 ಗಂಟೆಗೆ ಶಂಕರ ಬಿದರಿ ನನ್ನ ಛೇಂರಿಗೆ ಬಂದರು. 4 ಗಂಟೆ ಸುಮಾರಿಗೆ ರಾಜ್‌ ಬಿಡುಗಡೆ ಆಯಿತು ಎಂದು ಅವರು ಹೇಳಿದರು. ಅವತ್ತು ಮಂಗಳವಾರವಾದ್ದರಿಂದ 3 ಗಂಟೆಯಿಂದ 4.30 ರಾಹುಕಾಲವಾಗಿತ್ತು. ವೀರಪ್ಪನ್‌ ರಾಜ್‌ರನ್ನು ರಾಹುಕಾಲದಲ್ಲೇ ಬಿಡುಗಡೆ ಮಾಡಿರುವುದಕ್ಕೆ ಕಾರಣವೇನಿರಬಹುದೆಂದು ಯೋಚಿಸಿದೆ. ಅಥವಾ, ಸಮಯದಲ್ಲೇನಾದರೂ ವ್ಯತ್ಯಾಸವಿದ್ದಿರಬಹುದೇ?

ರಾಜ್‌ ಬಿಡುಗಡೆಯ ನಂತರ ಹೋದದ್ದು ಅಲ್ಲೇ ಹತ್ತಿರದ ಹಳ್ಳಿಯ ಮನೆಯಾಂದಕ್ಕೆ. ಬಿಡುಗಡೆಯ ವಿಷಯ ಬಯಲಾಗುವುದು ಇನ್ನು ನಾಳೆಯೇ. ಯಾಕೆಂದರೆ ವೀರಪ್ಪನ್‌ ಮತ್ತೆ ಕಾಡಿನ ಮಧ್ಯಭಾಗಕ್ಕೆ ಹೋಗಲು ಸಾಕಷ್ಟು ಸಮಯ ನೀಡಬೇಕಲ್ಲ ಎಂದು ಹೇಳಿದರು ಶಂಕರ ಬಿದರಿ.

ರಾಜ್‌ ಉಳಿದುಕೊಂಡಿದ್ದು, ಉಂಜಲಪಾಳ್ಯಂ ಹಳ್ಳಿಯ ಭೂತಪಾಡಿ ಪಂಚಾಯ್ತಿ ಅಧ್ಯಕ್ಷ ರಾಮರಾಜ್‌ ಅವರ ಮನೆಯಲ್ಲಿ. ಈರೋಡಿನಿಂದ 25 ಕಿ.ಮೀ. ದೂರದಲ್ಲಿದೆ ಈ ಹಳ್ಳಿ.ರಾಜ್‌ ಮತ್ತು ಭಾನು ಒಂದೇ ಕೋಣೆಯಲ್ಲಿ ಉಳಿಯುತ್ತಾರೆ. ಟಾಯ್ಲೆಟ್‌ಗೆ ಹೋದ ರಾಜ್‌, ಕನ್ನಡಿಯಲ್ಲಿ ತಮ್ಮ ಮುಖ ನೋಡಿಕೊಂಡು ಕಂಗಾಲಾಗುತ್ತಾರೆ. ತಮ್ಮ ಅಭಿಮಾನಿಗಳನ್ನು ಈ ಸ್ಥಿತಿಯಲ್ಲಿ ನೋಡುವುದು ಸಾಧ್ಯವಿಲ್ಲ ಎಂದು ಅವರು ಹೇಳುತ್ತಾರೆ. ಆಮೇಲೆ ಒಬ್ಬ ಕ್ಷೌರಿಕನನ್ನು ಕರೆಸಿ, ಅವರಿಗೆ ಶೇವ್‌ ಮತ್ತು ಹೇರ್‌ಕಟ್‌ ಮಾಡಿಸಿ ಕೂದಲಿಗೆ ಬಣ್ಣ ಹಾಕಲಾಗುತ್ತದೆ. ಊದಿರುವ ರಾಜ್‌ ಮುಖಕ್ಕೆ ಭಾನು ಕ್ರೀಂ ಹಚ್ಚುತ್ತಾಳೆ.

ಈಗ ನೀವು ಚೆನ್ನಾಗಿ ಕಾಣುತ್ತಿದ್ದೀರಿ ಎಂದು ಅವಳು ಹೇಳುತ್ತಾಳೆ. ಮಂಡಿ ನೋವು ಎಂದ ರಾಜ್‌ಗೆ ಆಕೆ ಅಯೋಡೆಕ್ಸ್‌ ಹಚ್ಚುತ್ತಾಳೆ. ರಾಜ್‌ಗೆ ಮಂಡಿನೋವು ಹಲವು ವರ್ಷಗಳಿಂದ ಇದೆ. ಮಂಡಿಚಿಪ್ಪಿನ ಕೆಳಗೆ ಮೃದ್ವಸ್ಥಿ ಸವೆದುಹೋಗಿರುವುದರಿಂದ ಬಂದಿರುವ ನೋವು ಅದು. ಅದಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಅಯೋಡೆಕ್ಸ್‌ ತಾತ್ಕಾಲಿಕ ಉಪಶಮನ ನೀಡುತ್ತದೆ.

ರಾಜ್‌ ಅಂತೂ ವಿಚಿತ್ರವಾಗಿ ಮಾತನಾಡುತ್ತಿದ್ದಾರೆ. ‘ನೀವು ದೇವತೆಯಾಗಿ ಬಂದು ನನ್ನನ್ನು ಕಾಪಾಡಿದಿರಿ’ ಎಂದು ಭಾನುಗೆ ತಮಿಳಿನಲ್ಲಿ ಹೇಳುತ್ತಾ ಆಕೆಯ ಕೆನ್ನೆಗೆ ಮುತ್ತು ಕೊಡುತ್ತಾರೆ. ಅವರಿಗೆ ತಾನೇನು ಮಾಡುತ್ತಿದ್ದೇನೆಂದು ಅರಿವಿದ್ದ ಹಾಗೆ ಕಾಣಲಿಲ್ಲ. ಬಿಡುಗಡೆಯಿಂದಾಗಿ ಅವರ ಸಂತೋಷ ಮೇರೆ ಮೀರಿತ್ತೇ? ಅಥವಾ ಅವರ ತಲೆ ಸ್ವಲ್ಪ...?

ಈ ಎಲ್ಲಾ ಬೆಳವಣಿಗೆಗಳು ನಡೆಯುತ್ತಿರುವಾಗ ಕರ್ನಾಟಕ ಎಸ್‌ಟಿಎಫ್‌ ಮುಖ್ಯಸ್ಥರು ಮಲೆ ಮಹದೇಶ್ವರ ಬೆಟ್ಟಕ್ಕೆ ಅನತಿ ದೂರದಲ್ಲಿ ವಾಸ್ತವ್ಯ ಹೂಡಿದ್ದರು. ರಾಜ್‌ಕುಮಾರ್‌ ಬಿಡುಗಡೆಗೆ ವೀರಪ್ಪನ್‌- ನೆಡುಮಾರನ್‌ ನಡುವೆ ಸಂಧಾನ ಮಾತುಕತೆ ನಡೆಯುತ್ತಿದೆ ಎಂಬ ಸಂದೇಶ ರವಾನಿಸಿದರು.ಈ ಎಲ್ಲಾ ಬೆಳವಣಿಗೆಗಳು ನನಗೆ ಬಹುಶಃ ತಿಳಿದಿರಲಿಕ್ಕಿಲ್ಲ ಎಂದು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಭಾವಿಸಿರಬಹುದು. ಅದಾಗಲೇ ‘ಅನುಗ್ರಹ’ದಲ್ಲಿದ್ದ ಗೃಹ ಕಾರ್ಯದರ್ಶಿ ಎಂ.ಬಿ.ಪ್ರಕಾಶ್‌ ಅವರನ್ನು ಕೃಷ್ಣ ವಿಸ್ವಾಸಕ್ಕೆ ಕೆಗೆದುಕೊಂಡಂತೆ ಕಂಡುಬಂತು. ಮೊಬೈಲ್‌ ಫೋನ್‌ನ್ನೂ ಸಹ ಕದ್ದಾಲಿಸಬಹುದು ಎಂಬುದು ಮುಖ್ಯಮಂತ್ರಿಗೆ ತಿಳಿದಿರಲಿಲ್ಲವೇ?

15 ನವೆಂಬರ್‌ 2000

ಬೆಳಗ್ಗೆ 4.30ಕ್ಕೆ ರಾಜ್‌ಕುಮಾರ್‌ ಬಿಡುಗಡೆಯಾಗಿದೆ ಎಂದು ಸುದ್ದಿಮಾಧ್ಯಮಗಳಿಗೆ ಮಾಹಿತಿ ನೀಡಲಾಯಿತು. ಬೆಳಗ್ಗೆ 10 ಗಂಟೆ ಸುಮಾರಿಗೆ ಬೇಹುಗಾರಿಕಾ ಇಲಾಖಾ ಮುಖ್ಯಸ್ಥ ಪಿ.ಎಸ್‌.ರಾಮಾನುಜಂ ದೂರವಾಣಿ ಮೂಲಕ ನನಗೆ ರಾಜ್‌ಕುಮಾರ್‌ ಬಿಡುಗಡೆ ಸುದ್ದಿ ತಿಳಿಸಿದರು.ಇಲ್ಲಿಗೆ ರಾಜ್‌ ಅಪಹರಣ ಕ್ಕೆ ಸುಖಾಂತ್ಯ ಕಾಣಿಸಿದರು. ಈಗ ಎರಡು ಅಪಹರಣಗಳು ಮುಗಿದು ಹೋಗಿವೆ. ನಾಗಪ್ಪ ಅಪಹರಣ ದುಖಾಂತ್ಯದಲ್ಲಿ ಕೊನೆಗೊಂಡಿತು. ಕೃಪಾಕರ್‌ ಮತ್ತು ಸೇನಾನಿ ವೀರಪ್ಪನ್‌ ಬದುಕನ್ನು ಬಲ್ಲ ವ್ಯಕ್ತಿಗಳು. ಚಿತ್ರಕ್ಕೆ ಇವರ ಸಹಾಯ ಪಡೆದುಕೊಳ್ಳ ಬಹುದು. ಇನ್ನೂ ಇಂತಹ ಮಹತ್ತರ ದೃಶ್ಯ ಸಿಗುತ್ತದೆ. ಪ್ರತಿ ಸನ್ನಿವೇಶಕ್ಕೂ ಹಲವು ವಿವರಣೆ ದೊರಕುತ್ತದೆ. ಇದೆಲ್ಲ ವರ್ಮಾರ ಚಿತ್ರದಲ್ಲಿ ಹೇಗೆ ಬಿಂಬಿತವಾಗುತ್ತದೆ ಎಂದು ಕಾದು ನೋಡೋಣ. ಆದರೂ ವೀರಪ್ಪನ್‌ ಮರಿಚೀಕೆಯಾಗಿಯೇ ಉಳಿದಿದ್ದಾನಲ್ಲ.

ಹೀಗಾದರೆ!

ವರ್ಮಾ ಚಿತ್ರ ಯಶಸ್ಸು ಗಳಿಸಿದರೆ ಹೊಸದೊಂದು ಅಧ್ಯಾಯ ಬರೆಯಲಿರುವುದು ನಿರೀಕ್ಷಿತ. ಚಿತ್ರದ ನಾಯಕ, ನಾಯಕಿಯ ಆಯ್ಕೆಯಾಗ ಬೇಕಷ್ಟೇ. ಈ ಬಾರಿ ವೀರಪ್ಪನ್‌ ಹೆಸರಿನಲ್ಲಿ ಯಾರ ಭಾಗ್ಯದ ಬಾಗಿಲು ತೆರೆಯಲಿದೆಯೋ?. ನಕ್ಕಿರನ್‌ ಗೋಪಾಲನ್‌ ಕಥೆ ಕುರಿತು ಸಂಧಾನ ನಡೆಸಬಹುದೆಂದು ಕೆಲವರು ಕುಹಕವಾಡಿದ್ದಾರೆ! ಆತನ ಸಂಧಾನ ಚಾರ್ಜ್‌ ಮಾತ್ರಚಿತ್ರದ ಬಜೆಟ್‌ನ ಮಿತಿಯಾಳಗಿರಬೇಕಲ್ಲ.

ವಿಘ್ನ ನಿವಾರಿಸಿ ಚಿತ್ರ ಬಿಡುಗಡೆ ಕಂಡರೆ! ಯಶಸ್ಸು ಕಟ್ಟಿಟ್ಟ ಬುತ್ತಿಯಂತೆ. ಯಾಕೆಂದರೆ ವೀರಪ್ಪನ್‌ನಿಂದಾಗಿ ನೊಂದವರು ಮತ್ತು ತಿಂದವರು ಚಿತ್ರ ನೋಡಿದರೆ ಸಾಕು.ಚಿತ್ರ ನೂರು ದಿನ ಓಡುವುದು ಗ್ಯಾರೆಂಟಿ.

ಇಲ್ಲವಾದರೆ! ನರಹಂತಕ ವೀರಪ್ಪನ್‌ನನ್ನು ಜೀವಂತವಾಗಿ ಅಥವಾ ಹೆಣವಾಗಿ ತಂದುಕೊಟ್ಟವರಿಗೆ ಎರಡು ಕೋಟಿ ರೂಪಾಯಿ ಬಹುಮಾನವನ್ನು ಸರಕಾರ ಘೋಷಿಸಿದೆ. ಆದರೆ ವರ್ಮಾ ಸರೆಹಿಡಿಯಲಿರುವುದು 70ಎಮ್‌ಎಮ್‌ ರೀಲಿನಲ್ಲಿ. ಕೊನೆಯದಾಗಿ ವರ್ಮಾರನ್ನು ವೀರಪ್ಪನ್‌ ಅಪಹರಿಸಿ ಸರಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸದಿದ್ದರೆ ಸಾಕು ಎಂಬುದೇ ‘ಧರ್ಮಾ’ಶಯ

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X