ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಡುಹಕ್ಕಿ ಅಶ್ವತ್ಥ್‌ಗೊಂದು ಅಕ್ಕರೆ ಪತ್ರ

By Staff
|
Google Oneindia Kannada News

ಉಭಯ ಕುಶಲೋಪರಿ ಸಾಂಪ್ರತ...

ತಿಂಗಳ ಹಿಂದಿನ ಮಾತು. ಅವತ್ತು ಎಚ್‌.ಎನ್‌.ಕಲಾಕ್ಷೇತ್ರದಲ್ಲಿ ‘ಮಸ್‌’್ತ ಜನರಿದ್ದರು. ಅವರ ಕಂಗಳಲ್ಲಿ ಕುತೂಹಲವಿತ್ತು. ಹಾಡು ಕೇಳುವ ಆಸೆಯಿತ್ತು. ಹಾಡುವವರೊಂದಿಗೆ ಮಾತಾಡುವ ಹಂಬಲವಿತ್ತು. ಹಾಡುಗಳ ಜತೆಗೇ ಹಾರಲು ಕೂತವರಿಗೆ ಆದ್ಯಾವ ಸಂಭ್ರಮವೋ ಏನೋ.. ಅವರು ಪಿಸುಗುಡುತ್ತಿದ್ದರು : ‘ಈಗ ಬಿಡುಗಡೆಯಾಗ್ತದಲ್ಲ- ‘ನನ್ನವಳು’ ಕೆಸೆಟ್‌, ಅದಕ್ಕೆ ಅಶ್ವತ್ಥ್‌ ಸಂಗೀತ ನೀಡಿದ್ದಾರಂತೆ. ಅದ್ಭುತವಾಗಿ ಹಾಡಿದ್ದಾರಂತೆ. ಈಗ ಮತ್ತೆ ಹಾಡ್ತಾರಂತೆ.. ಅವರಿವರ ಈ ಪಿಸುಮಾತು ಮುಗಿದ ಮುನ್ನವೇ ನಿರೂಪಕಿ ಉಲಿದಳು :

‘... ಆಡು ಮುಟ್ಟದ ಸೊಪ್ಪಿಲ್ಲ’ ಅಂತಾರಲ್ಲ , ಹಾಗೇ ಅಶ್ವತ್ಥ್‌ ಈಜದ ಸಂಗೀತ ಸಾಗರವೇ ಇಲ್ಲ. ರಂಗ ಸಂಗೀತ,ಚಿತ್ರಸಂಗೀತ, ಭಕ್ತಿ ಸಂಗೀತ, ಸುಗಮ ಸಂಗೀತ, ವಚನ ಗಾಯನ.... ಹೀಗೆ ವಿವಿಧ ರಂಗದಲ್ಲಿ ಮಿಂಚಿ ಮೆರೆದವರು ಅಶ್ವತ್ಥ್‌ . ಒಂದೇ ಮಾತಲ್ಲಿ ಹೇಳುವುದಾದರೆ- ಅಶ್ವತ್ಥ್‌, ಸುಗಮ ಸಂಗೀತದ ಸರದಾರ. ಅಷ್ಟೇ ಅಲ್ಲ. ಅವರು ಅಪಾರ ಜೀವನೋತ್ಸಾಹದ ಆಸಾಮಿ. ಸುಮ್ಮಸುಮ್ಮನೆ ಸಿಟ್ಟಾಗುವ, ಸಿಟ್ಟಾದಾಗ ಹಾರಾಡುವ ; ಇಷ್ಟವಾದಾಗ ಕರಡಿಯಂತೆ ಮುದ್ದಾಡಿ ಮುಜುಗರಗೊಳಿಸುವ ; ‘ಚಿತ್‌ ’ ಆದಾಗ ಅದ್ಭುತವಾಗಿ ಹಾಡಿ ರಂಗೇರಿಸುವ ವಿಚಿತ್ರ ಪ್ರತಿಭೆ ಅವರಿಗುಂಟು. ಅಶ್ವತ್ಥ್‌ ಹಾಡಿದರೆ ಸಾಕು, ಒಂದು ಕವಿತೆ ತನ್ನೆಲ್ಲ ಅರ್ಥವನ್ನೂ ಬಿಚ್ಚಿಡುತ್ತದೆ’...

ಅವತ್ತು ಯಾಕೆ ಹಾಗಾಯಿತು? ಗೊತ್ತಿಲ್ಲ. ಒಂದು ಕ್ಷಣದ ಮಟ್ಟಿಗೆ ನಿರೂಪಕಿಯ ಮಾತು ಉತ್ಪ್ರೇಕ್ಷೆ ಅನ್ನಿಸಿದ್ದು ಸುಳ್ಳಲ್ಲ.ಅದೇ ಭಾವದಿಂದ ಸೀದಾ ಮನೆಗೆ ಬಂದು ಟೇಪ್‌ ರೆಕಾರ್ಡರಿನ ಮುಂದೆ ಕೂತರೆ ರತ್ನಮಾಲಾ ಪ್ರಕಾಶರ ಮಾದಕ ಕಂಠ ಉಲಿಯಿತು : ‘...ನಮ್ಮೂರು ಚೆಂದವೋ ನಿಮ್ಮೂರು ಚೆಂದವೋ/ಎಂದೆನ್ನ ಕೇಳಲೇಕೆ/ ನಮ್ಮೂರು ಮಂಚದಲಿ ನಿಮ್ಮೂರ ಕನಸಿದನು/ ವಿಸ್ತರಿಸಿ ಹೇಳಲೇಕೆ ?’ ಹಾಡು ಮುಂದುವರಿದಂತೆಲ್ಲ ರತ್ನಮಾಲರ ಸ್ವರ ಚಿಲುಮೆಯ ಕಣ್ಣೋಟದಂತೆ ಸುಳಿಯಿತು. ಸುಂದರಿಯ ಸೊಂಟದಂತೆ ಬಳುಕಿತು ! ಹಾಡು ಕೇಳುತ್ತಾ ಹೋದಂತೆಲ್ಲ ಅದರ ಅರ್ಥವೂ ಬಿಚ್ಚಿಕೊಳ್ಳತ್ತಾ ಹೋಯಿತು-ಈರುಳ್ಳಿಯ ಪಕಳೆಯಂತೆ, ಸೀರೆಯ ನೆರಿಗೆಯಂತೆ !

ಪ್ರಿಯ ಅಶ್ವತ್ಥ್‌ ಸಾಹೇಬರೆ, ಅನಂತರದಲ್ಲಿ ನಿಮ್ಮ ಸಂಯೋಜನೆಯ ಹಾಡುಗಳು ಒಂದರ ಹಿಂದೊಂದು ಬಿಡದೆ ಕಾಡಿದವಲ್ಲ- ಆ ಮಧುರ ನೆನಪಿಗೆಂದೇ ನಿಮಗೀ ಒಲವ ಪತ್ರ..

‘ಅಶ್ವತ್ಥ್‌ ಒಗೆಗೆ ಒಂದಿಷ್ಟು ಹೇಳ್ತೀರಾ ? ಇಂಥದೊಂದು ಪ್ರಶ್ನೆ ಎದುರಿಗಿಟ್ಟರೆ-ಒಂದಿಷ್ಟು ಮೆಚ್ಚಗೆ, ಚಿಟಿಕೆ ಅಸಮಾಧಾನದಿಂದಲೇ ಹಲವರು ಹೇಳುತ್ತಾರೆ : ‘ಅಶ್ವತ್ಥ್‌ ವಿಜ್ಞಾನದ ವಿದ್ಯಾರ್ಥಿ. ಕಲಿತದ್ದು ಹಿಂದೂಸ್ತಾನಿ. ಹಾಗಾಗಿಯೇ ಒಂದು ರಾಗವನ್ನು ವಿಸ್ತರಿಸುವುದು ಅವರಿಗೆ ಸಾಧ್ಯವಾಗಿರಬೇಕು. 27 ವರ್ಷಗಳ ಕಾಲ ಐಟಿಐನ ಉದ್ಯೋಗಿಯಾಗಿದ್ದ ಅಶ್ವತ್ಥ್‌ ಅವರಿಗೆ ಇವತ್ತು ಕನ್ನಡ ಸಾಂಸ್ಕೃತಿಕ ರಂಗದೊಂದಿಗೆ ಇರುವ ಒಡನಾಟ ಗಮನಿಸಿದರೆ ಬೆರಗಾಗುತ್ತದೆ. ಹತ್ತಕ್ಕೂ ಹೆಚ್ಚು ಸಿನಿಮಾಗಳು ಕೇವಲ ಅಶ್ವತ್ಥ್‌ರ ಸಂಗೀತದಿಂದಾಗಿಯೇ ಗೆದ್ದಿವೆ. ಕಾಕನಕೋಟೆ, ಚಿನ್ನಾರಿಮುತ್ತ, ಸಂತ ಶಿಶುನಾಳ ಷರೀಫ, ಮೈಸೂರು ಮಲ್ಲಿಗೆ, ನಾಗಮಂಡಲ ಸಿನಿಮಾಗಳ ಯಶಸ್ಸು ಪೂರ್ತಿಯಾಗಿ ಅಶ್ವತ್ಥ್‌ರಿಗೇ ಸಲ್ಲಬೇಕು. ಅವರು ಸಂಗೀತ ನೀಡಿದ ಪ್ರತಿ ಚಿತ್ರದ ಒಂದು ಹಾಡಾದರೂ ಇವತ್ತಿಗೂ ಜನಪ್ರಿಯವಾಗಿದೆ...

....ಎಷ್ಟೋ ಸಂದರ್ಭಗಳಲ್ಲಿ ಕವಿ ಹೇಳದ ಅರ್ಥವನ್ನೂ ತನ್ನ ಸ್ವರ ಸಂಯೋಜನೆ ಮತ್ತು ಗಾಯನ ಹೇಳುತ್ತದೆ ಎಂದು ಅಶ್ವತ್ಥ್‌ ನಂಬಿರುವುದುಂಟು. ಇದೇ ಕಾರಣದಿಂದ ಎಷ್ಟೋ ಸಂದರ್ಭಗಳಲ್ಲಿ ಕವಿ ಮತ್ತು ಕಾವ್ಯ ಹಿಂದಾಗಿ ಅಶ್ವತ್ಥ್‌ ಗಾಯನವೇ ಮುಂದಾಗಿಬಿಡುತ್ತದೆ. ಇಷ್ಟಾದರೂ, ತಮ್ಮ ಕವನವನ್ನು ನೀವೇ ಹಾಡಬೇಕು ಎಂದು ಬಹುತೇಕ ಸಾಹಿತಿ ಮಿತ್ರರು ಅಶ್ವತ್ಥ್‌ ಅವರಿಗೆ ದುಂಬಾಲು ಬೀಳುತ್ತಾರೆ! ಕಾರಣವಿಷ್ಟೇ ಎಷ್ಟೋ ಪೇಲವ ಗೀತೆಗಳು ‘ಅಶ್ವತ್ಥ್‌’ ಸ್ಪರ್ಶದಿಂದಾಗಿಯೇ ಗೆದ್ದ ಉದಾಹರಣೆಗಳಿವೆ....ಇಷ್ಟು ಪರಿಚಯವನ್ನೂ ಯಾವುದೋ ಸಡಗರದಿಂದ ಹೇಳಿದವರೇ ಯಾವುದೋ ಗುಟ್ಟು ಹೇಳುವವರಂತೆ ಪಿಸುಗುಡುತ್ತಾರೆ : ‘ಎಷ್ಟೋ ಸಂದರ್ಭದಲ್ಲಿ ಅಶ್ವತ್ಥ್‌ ತಾರಕದಲ್ಲಿ ಹಾಡ್ತಾರೆ. ಹೀಗೆ ಆರೋಪಿಸಿದರೆ- ಮತ್ತೆ ತಾರಕದಲ್ಲೇ ಮಾತಾಡಿ ಅದನ್ನ ನಿರಾಕರಿಸುತ್ತಾರೆ! ನೀವು ಹೆದರಿಸ್ತೀರಿ ಅಂತ ಗೊತ್ತಾದರೆ ಅವರು ಹೆದರ್ತಾರೆ. ನೀವು ಹೆದರಿದರೆ-ಹೆದರಿಸ್ತಾರೆ....’ ಪ್ರಿಯ ಅಶ್ವತ್ಥ್‌ ಸಾಹೀಬರೆ, ಇದೆಲ್ಲ ನಿಜವಾ? ಎದೆ ತುಂಬಿ ಹಾಡುವ, ವಾರಿಗೆಯ ಗೆಳೆಯರೊಂದಿಗೆ ಮಗುವಂತೆ ಆಡುವ ನಿಮಗೂ ಶರಂಪರ ಸಿಟ್ಟು ಬರೋದುಂಟಾ?

ಸರ್‌, ಯಾರೆಂದರೆ ಯಾರೂ ಒಪ್ಪುವಂತೆ ಹಾಡ್ತೀರಿ ನೀವು. ಅಂಥ ನಿಮಗೆ ಕೇಳಲೇಬೇಕಾದ ಒಂದಿಷ್ಟು ಪ್ರಶ್ನೆಗಳಿವೆ. ಅನುಭವವೇ ಕಾವ್ಯವಾದಾಗ ಅದರಲ್ಲಿ ಜೀವಂತಿಕೆ ಇರುತ್ತೆ ಅಂತ ನಂಬಿರೋದು ನಾವು. ಆದ್ರೆ ಹಾಡೊಂದನ್ನ ಹಾಡ್ತಾನಲ್ಲ-ಆತನಿಗೂ ಅಂಥದೇ ಅನುಭವವಿರಬೇಕಾ ? ‘ಹಿಂದೆ ಹೇಗೆ ಚಿಮ್ಮುತ್ತಿತ್ತು/ಕಣ್ಣ ತುಂಬ ಪ್ರೀತಿ/ಈಗ ಯಾಕೆ ಜ್ವಲಿಸುತಿದೆ/ಏನೋ ಶಂಕೆ ಭೀತಿ’ ಅಂತ ಹಾಡಬೇಕಾದರೆ ಗಾಯಕನಿಗೆ ತನ್ನ ಹಳೆಯ ಪ್ರೀತಿ ನೆನಪಾಗಬೇಕಾ? ನೀವು ಒಂದರ ಹಿಂದೊಂದು ಪ್ರೇಮಗೀತೆಗಳನ್ನ ಹಾಡ್ತಾ ಹೋಗ್ತೀರಲ್ಲ- ಆಗೆಲ್ಲ ನಿಮಗೂ ಹಳೆಯ ಪ್ರೇಮ (?!)ನೆನಪಾಗಿ ಬಿಡುತ್ತಾ? ‘ಏನಿದ್ದೇನು ಎಲ್ಲಾ ಬರಿದು ನೀನಿರದೆ/ಹೋಗಿದೆ ನೆಮ್ಮದಿ ನನ್ನನ್ನು ತೊರೆದು, ನೀನಿರದೆ’ ಎಂದು ಹಾಡಿದಾಗ ಅದೇ ವಿಫಲ ಪ್ರೇಮ ನೆನಪಾಗುತ್ತಾ? ಅದೇ ಹಾಡನ್ನು ಒಂದೊಂದು ಸಂದರ್ಭದಲ್ಲಿ ಒಂದೊಂದು ತೆರನಾಗಿ ಹೇಳ್ತೀರಲ್ಲ- ಆವಾಗೆಲ್ಲ ಅದೇ ಹಾಡು ಕೈ ಹಿಡಿಯುತ್ತಾ ? ಕಾಲಿಗೆ ತೊಡರುತ್ತಾ ? ನೆನಪಾಗಿ ಕಾಡುತ್ತಾ ? ಅಂಥದೇದೂ ಇಲ್ಲ- ಯಾವುದೋ ಧ್ಯಾನದಲ್ಲಿ ಹಾಡು ಬಂದು ಬಿಡುತ್ತೆ ಅನ್ನೋದಾದ್ರೆ-‘ಈಗೇಕೆ ಆ ನೆನಪು/ನನ್ನನ್ನು ಕಾಡಿದೆ ಎದೆಯ ಆಳದಲ್ಲಿ ವಿಷಾದ ಮೂಡಿದೆ’ ಎಂದು ಕಣ್ತುಂಬಿಕೊಳ್ಳುತ್ತೀರಿ! ಕೇಳುತ್ತ ಕೂತವರೂ ಗದ್ಗದರಾಗುವಂತೆ ಮಾಡಿಬಿಡ್ತೀರಿ. ಹಳೆಯದೇನೂ ನೆನಪೇ ಆಗದಿದ್ದರೆ ಇಂಥದೊಂದು ‘ಮ್ಯಾಜಿಕ್ಕು’ ಹೇಗೆ ಸಾಧ್ಯವಾಗುತ್ತೆ ಸಾರ್‌?

ಅಶ್ವತ್ಥ್‌ ಅದ್ಭುತವಾಗಿ ಹಾಡ್ತಾರೆ ಅನ್ನುವ ಮಂದಿಯೇ ಮಾಡುವ ಒಂದಿಷ್ಟು ಆರೋಪಗಳನ್ನೂ ನಿಮ್ಮ ಮುಂದಿಡಬೇಕು. ಬಹುಮಂದಿ ಹೇಳುವುದುಂಟು; ನೀವು ಅಸಾಧ್ಯ ಸಿಡುಕಪ್ಪ ಅಂತೆ! ಹಿಂದೊಮ್ಮೆ ಲಂಕೇಶರು ಟೀಕಿಸಿದ್ದಕ್ಕೆ ಅವರನ್ನೇ ಅಟಕಾಯಿಸಿಕೊಂಡಿದ್ದಿರಂತೆ! ರಾಮಚಂದ್ರ ಶರ್ಮರನ್ನು ಬಹಿರಂಗವಾಗಿ ‘ತಲೆಕೆಟ್ಟ ಕವಿ’ ಎಂದು ಕರೆದರಂತೆ ! ಈಗಲೂ ಕೂಡ, ಸಿಟ್ಟು ಬಂದರೆ ರಾತ್ರೋ ಖುಷಿಯಾದರೆ -ಬೈದವರ ಮುಂದೆಯೇ ಒಂದೊಂದು ಅದ್ಭುತ ಹಾಡು ಹೇಳಿ ಬರ್ತೀರಂತೆ? ಆಮೇಲೆ....ಇನ್ನೊಬ್ಬರ ಪ್ರತಿಭೆಗೆ ನೀವು ಅಷ್ಟಾಗಿ ಬೆಲೆ ಕೊಡಲ್ವಂತೆ.... ಹೌದಾ ಸಾರ್‌?

ಈ ಪ್ರಶ್ನೆಗಳಿಗೆ ಉತ್ತರ ಹೇಳಲೇಬೇಕು ಅಂತ ಒತ್ತಾಯವಿಲ್ಲ. ಆದ್ರೆ ಈಗ ಕೇಳ್ತೀನಲ್ಲ- ಆ ಪ್ರಶ್ನೆಯ ಗುಚ್ಛಕ್ಕೆ ಮಾತ್ರ ಉತ್ತರ ಬೇಕು. ವೇದಿಕೆಯಲ್ಲಿ ನಿಂತರೆ ಸಾಕು- ಹೈಸ್ಕೂಲಿನ ಡ್ರಿಲ್‌ ಮೇಸ್ಟ್ರ ಥರಾ ಅಭಿನಯಿಸುತ್ತಲೇ ಹಾಡ್ತಾ ಇರ್ತೀರಿ. ಅಂಥ ನೀವು ಮನೇಲಿ ಹೇಗಿರ್ತೀರಿ? ನಿಮ್ಮ ಮನೆಯಾಕೆ ಖುಷಿಪಡ್ತಾರಾ? ಕಣ್ತುಂಬಿಕೊಂಡೇ ಭಗ್ನಗೀತೆಗಳಿಗೆ ದನಿಯಾಗ್ತೀರಲ್ಲ- ಆಗೆಲ್ಲ ಯಾರನ್ನ ನೆನಪು ಮಾಡ್ಕೊಂಡು ಇದೆಲ್ಲ.... ಅಂತ ರೇಗಿಬಿಡ್ತಾರಾ? ಸರ್‌, ಎಲ್ಲರೂ ಹೇಳ್ತಿದಾರೆ ; ‘ಅಶ್ವತ್ಥ್‌ ಅವರಿಗೆ ವಯಸ್ಸಾಗ್ತಾ ಇದೆ....’. ಹೌದಲ್ಲವಾ? ದಶಕಗಳಿಂದ ಹಾಡುತ್ತಲೇ ಉಳಿದವರು, ಹಾಡಿನಿಂದಲೇ ಎಲ್ಲರನ್ನೂ ಕಾಡಿದವರು ನೀವು. ಅಂಥ ನೀವು ತುಂಬ ದಿನ ನಮ್ಮೊಂದಿಗಿಬೇಕು. ನೀವು ಜತೆಗಿದ್ದರೆ-ಜಗತ್ತು ಹೆಚ್ಚು ಸಂಗೀತಮಯವಾಗುತ್ತದೆ. ಹೆಚ್ಚು ಪ್ರಿಯವಾಗುತ್ತದೆ. ಹೆಚ್ಚು ಸಾರ್ಥಕವಾಗುತ್ತದೆ. ನಿಮಗೆ ವಯಸ್ಸಾಗಲಿ-ಆದರೆ ನಿಮ್ಮ ಕಂಠಕ್ಕೆ, ಅದರ ಇಂಪಿಗೆ, ಅದು ತೇಲಿಸುವ ಕಂಪಿಗೆ ವಯಸ್ಸಾಗುವುದು ಬೇಡ. ಬದುಕಿನುದ್ದಕ್ಕೂ ಹಾಡುತ್ತಲೇ ಉಳಿದು ಹಾಡಿನ ನೆಪದಲ್ಲೇ ಕಾಡುವ ಶಕ್ತಿ ನಿಮಗೆ ದಕ್ಕಲಿ ಎಂಬ ಪ್ರೀತಿಯ ಸದಾಶಯ ನನ್ನದು......ಮುಂದಿನದು......ದೇವರಾ ಚಿತ್ತ !

ನಮಸ್ಕಾರ.

- ಎ.ಆರ್‌.ಮಣಿಕಾಂತ್‌
[email protected]

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X