• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತವರಿಗೆ ಹೋದ ಹೆಂಡತಿಗೊಂದು ಪತ್ರ

By Staff
|

To My dearest Wife...ಪ್ರಿಯ ಅರ್ಧಾಂಗಿಗೆ,

ನಿನ್ನ ಪತಿದೇವನ ಯಥಾಶಕ್ತಿ ಆಶೀರ್ವಾದಗಳು. ನೀನು ನನ್ನೊಡನೆ ಅನವಶ್ಯಕವಾಗಿ ಜಗಳವಾಡಿ ತವರಿಗೆ ಮರಳಿ ಮೂರು ಮಾಸಗಳು ತುಂಬಿದವು. ನೀನು ತವರಿಗೆ ಹೋದ ಕಾರಣವನ್ನು ಆಮೂಲಾಗ್ರವಾಗಿ ಶೋಧಿಸಿದೆ. ಅದು ನಿನ್ನಲ್ಲಿರುವ ಸಂಶಯ ಪ್ರವೃತ್ತಿಯೇ ಎಂದು ಬೇರೆ ಹೇಳಬೇಕಾಗಿಲ್ಲ. ಈ ಹಿಂದೆ ಹಲವಾರು ಪತ್ರ ಬರೆದು ನಾನು ಮಾಡಿರುವುದು ಕೇವಲ ಶೂನ್ಯ ಸಂಪಾದನೆಯಷ್ಟೇ. ಆದರೂ ಈ ಕೊನೆಯ ಪತ್ರಕ್ಕಾಗಿ ಹಾಳೆಯನ್ನು, ಲೇಖನಿಯ ಮಸಿಯನ್ನು ಹಾಗೂ ನನ್ನ ಆಮೂಲ್ಯ ಸಮಯವನ್ನು ಹಾಳು ಮಾಡುತ್ತಿದ್ದೇನೆ.

ನೀನು ನನ್ನ ಮೇಲೆ ವೃಥಾ ಸಂಶಯಪಟ್ಟಿರುವೆ. ನನಗೆ ಖಂಡಿತವಾಗಿಯೂ ಮದಿರೆ- ಮಾನಿನಿಯರ ಬಗೆಗೆ ಒಲವಿಲ್ಲ. ನೀನು ನನ್ನನ್ನು ಹೀಗೇ ಬಿಟ್ಟರೆ ಮುಂದೊಂದು ದಿನ ಅದರ ಬಗೆಗೆ ಒಲವು ಮೂಡಿದರೂ ಆಶ್ಟರ್ಯವಿಲ್ಲ. ನಾನೊಬ್ಬ ಹುಲು ಮಾನವ. ಆಸೆಗಳೆನ್ನೆಲ್ಲಾ ನಿಗ್ರಹಿಸಲು ನಾನೇನೂ ಉದ್ಭವಮೂರ್ತಿಯಲ್ಲವೆಂದು ಈ ಮೂಲಕ ಸ್ಪಷ್ಟೀಕರಿಸುತ್ತೇನೆ. ಮದಿರೆ-ಮಾನಿನಿಯರನ್ನು ಕಣ್ಣಿಂದ ನೋಡಲು ಧೈರ್ಯವುಂಟೇ ಹೊರತು ಮುಟ್ಟಲು ನಿಜವಾಗಿಯೂ ತುಂಬಾ ಭಯ!

To My dearest Wife...ನೀನು ನನ್ನ ಬಳಿ ಇದ್ದಷ್ಟು ಕಾಲ ನಿನ್ನನ್ನು ಚೆನ್ನಾಗಿಯೇ ನೋಡಿಕೊಂಡಿರುವೆ.

ರೇಷನ್ನಿಗೆ ಹೋಗಿ ನಾನೇ ಸಾಮಾನು ತರುತ್ತಿರಲಿಲ್ಲವೇ? ಸರಕಾರಿ ಕಚೇರಿಯಲ್ಲಿದ್ದರೂ ದಿನವೂ ತರಕಾರಿ ತಂದು ಸಹಕಾರಿಯಾಗಿರಲಿಲ್ಲವೇ? ತಿಂಗಳ ಸಂಬಳ ( ಸಂಬಳ ಮಾತ್ರ -ಗಿಂಬಳಕ್ಕೆ ಅಂಟಿಕೊಳ್ಳುವ ಸಿಂಬಳದ ಹುಳು ನಾನಲ್ಲವೆಂದು ನಿನಗೂ ಗೊತ್ತಿದೆ)ಪೂರ್ತಿ ನಿನ್ನ ಕೈಗೇ ಕೊಡುತ್ತಿರಲಿಲ್ಲವೇ? ದಿನವೂ ಒಲೆ ಉರಿ ಹಾಕಿ ಹೊಸ್ತಿಲು ತೊಳೆದು ರಂಗವಲ್ಲಿ ಇಡುತ್ತಿರಲಿಲ್ಲವೇ? ನಿನಗಾಗಿ ಸಿಗರೇಟನ್ನೂ ಬಿಡಲಿಲ್ಲವೇ? ಇಂತಹ ಅನೇಕಾನೇಕ ಮಹಾತ್ಯಾಗಗಳನ್ನು ನಾನು ಮಾಡಿರುವೆನಾದರೂ ಅವೆಲ್ಲ ಈಗ ನಗಣ್ಯ.

ಅಂದ ಹಾಗೆ ನಿನಗೆ ಕೆಲವು ಸಂತೋಷದ ವಿಷಯಗಳಿವೆ. ನಿನ್ನ ಅನುಮಾನಗಳ ಸೃಷ್ಟಿಕರ್ತಳಾದ ಎದುರು ಮನೆಯ ಗುಂಡು ಗುಂಡುಗಿನ ಗಾಯತ್ರಿಗೆ ಗಂಡು ಗೊತ್ತಾಗಿದೆ. ಮುಂದಿನ ವಾರವೇ ಮದುವೆ. ಪಕ್ಕದ ಮನೆ ಪದ್ಮಾವತಿಯಾಂದಿಗೆ ಜಗಳಕ್ಕೆ ನೀನಿಲ್ಲದ್ದರಿಂದ, ನಿನ್ನನ್ನು ಬಿಟ್ಟರೆ ಬೇರಾವ ಗಂಡೂ ಕ್ಷಮಿಸು, ಹೆಣ್ಣೂ ಜಗಳಕ್ಕೆ ಅರ್ಹರಲ್ಲವೆಂದರಿತು ಬೇಸರ ತಾಳದೇ ಮನೆ ಬದಲಾಯಿಸಿದ್ದಾಳೆ. ನಿನ್ನ ಬಗ್ಗೆ ಇಲ್ಲ ಸಲ್ಲದ್ದನ್ನು ಎಲ್ಲಾ ಕಡೆ ಹೇಳಿ ಹೀಗಳೆಯುತ್ತಿದ್ದ ಸರೋಜ, ಡಿಸೋಜನೊಡನೆ ಓಡಿ ಹೋಗಿದ್ದಾಳೆ. ನೀನು ಇಲ್ಲಿಗೆ ವಾಪಸು ಬಂದ ಮೇಲೆ ಏಕಪತ್ನೀವ್ರತದ ಜೊತೆಗೆ ಮೌನ ವ್ರತವನ್ನೂ ಆಚರಿಸಬೇಕೆಂದಿರುವೆ. ಅದಕ್ಕಾಗಿ ನಿನ್ನ ಮಾಂಗಲ್ಯ (ಮಾಂಗಲ್ಯ ಅಷ್ಟೇ) ಮುಟ್ಟಿ ಆಣೆ ಮಾಡಲೂ ಸಿದ್ಧ. ಇನ್ನೇನು ಬೇಕು?

ಅಂತೆಯೇ, ನನಗೆ ಆಫೀಸಿನ ಕೆಲಸಗಳ ಜೊತೆಗೆ ಮನೆ ಕೆಲಸಗಳನ್ನು ಮಾಡಿಕೊಳ್ಳಲು ತುಂಬಾ ತೊಂದರೆಯಾಗುತ್ತಿದೆಯೆಂದು ಮೊದಲೇ ತಿಳಿಸಿದ್ದೆ. ನೀನು ಬರಲೂ ಇಲ್ಲ , ಬರೆಯಲ್ಲೂ ಇಲ್ಲ. ನಿರ್ವಾಹವಿಲ್ಲದೆ ನಾನೀಗ ಗೌರಿಯನ್ನು ಇಟ್ಟುಕೊಂಡಿದ್ದೇನೆ (ಮನೆ ಕೆಲಸಕ್ಕಷ್ಟೇ)! ಆಕೆ ಚೊಕ್ಕವಾಗಿ (ನಿನ್ನಷ್ಟಲ್ಲದಿದ್ದರೂ) ಕೆಲಸ ಮಾಡಿಕೊಟ್ಟು ಹೋಗುತ್ತಾಳೆ. ಬೆಳಗ್ಗೆ ಏಳಕ್ಕೇ ಬಂದು ಪಾತ್ರೆಗಳನ್ನು ತೊಳೆದು, ತಿಂಡಿ ಮಾಡಿ, ಅಡುಗೆಯನ್ನೂ ಅವಳೇ ಮಾಡಿಕೊಡುತ್ತಾಳೆ. ಆಕೆ ಮಾಡುವ ಸೌತೇಕಾಯಿ ಹುಳಿಯಂತೂ ಅದ್ಭುತ. ಇನ್ನು ಸೌತೇಕಾಯಿ ಪಲ್ಯ, ಕೋಸಂಬರಿಯಂತೂ ರಸೋತ್ಕೃಷ್ಟ ! ಒಟ್ಟಿನಲ್ಲಿ ಆಕೆ ನನ್ನ ಬಲಗೈಯಂತಾಗಿದ್ದಾಳೆ. ಈಗೀಗ ಮನೆಯ ಪೂರ್ಣ ಜವಾಬ್ದಾರಿಯನ್ನು ಅವಳೇ ವಹಿಸಿಕೊಳ್ಳುತ್ತಿದ್ದಾಳೆ (‘ಯಜಮಾನಿಕೆ’ಯಾಂದನ್ನು ಬಿಟ್ಟು). ಬಾಕಿ ನೀನು ಬಂದು ಬಳಿಕ.

ಸುಮ್ಮನೆ ರೇಗಾಡಿ ಬಿ.ಪಿ. (ಆ) ರೈಸು ಮಾಡಿಕೊಳ್ಳಬೇಡ. ಪಾಪ ! ಅಲ್ಲಿರುವ ನನ್ನ ಅತ್ತೆಮಾವನರಿಗೆ ತೊಂದರೆಯಾದೀತು. ಅವರಿಗೆ ನನ್ನ ಆದರೋಚಿತ ಪ್ರಣಾಮ ತಿಳಿಸು. ನಿನ್ನಂತೆಯೇ ನಿನ್ನ ತಂಗಿಯೂ ಕೂಡ ಜಗಳವಾಡಿ ಮನೆಗೆ ವಾಪಸು ಬಂದಿದ್ದರೆ ಆಕೆಗೆ ನನ್ನ ಯಥಾಶಕ್ತಿ ಆಶೀರ್ವಾದಗಳನ್ನು ತಿಳಿಸುವುದು.

ಇಲ್ಲಿ ಇನ್ನೂ ಮಳೆ ಶುರುವಾಗಿಲ್ಲ. ನೀನು ಬಂದ ಮೇಲೆ ಶುರುವಾಗಬಹುದು! ಬರೀ ಗಾಳಿಯಷ್ಟೇ ಇದೆ. ಹವಮಾನ ವರದಿಯಾಂದಿಗೆ ಪತ್ರ ಮುಗಿಸುತ್ತಿದ್ದೇನೆ. ನನ್ನ ಅತ್ತೆ-ಮಾವನವರನ್ನು ಚೆನ್ನಾಗಿ (?!) ನೋಡಿಕೋ.

ಇಂತಿ,

ಏಕಪತ್ನೀವ್ರತಸ್ಥ

*

ಪತ್ರ ಓದಿದ ಜಯಾಗೆ ತುಸು ಸಮಾಧಾನವಾಯಿತಾದರೂ ತಡೆಯಲಾರದ ಕೋಪ ಬಂದಿತು, ಗೌರಿಯ ಮೇಲೆ. ಸೌತೇಕಾಯಿಯೆಂದರೆ ಅಲರ್ಜಿ ಎನ್ನುತ್ತಿದ್ದವರು ಈಗ ಅದರ ಅಡುಗೆಯ ಗುಣಗಾನ ಮಾಡಿರುವುದು, ಅದೂ ಬೇರಾವಳೋ ಮಾಡಿದ್ದು- ಅವಳ ಕೋಪಕ್ಕೆ ಇನ್ನೊಂದು ಕಾರಣ. ಉಟ್ಟ ಬಟ್ಟೆಯಲ್ಲೇ ಹುಟ್ಟೂರು ಬಿಟ್ಟು ಹೊರಟುಬಂದಳು ಗಂಡನಲ್ಲಿಗೆ. ತನ್ನ ಗಂಡನ ಕೊರಳುಪಟ್ಟಿ ಹಿಡಿದು ಕೇಳೇ ಬಿಟ್ಟಳು,‘ಯಾರ್ರಿ ಆ ಗೌರಿ’?

‘ನಾನೇ ಕಣಮ್ಮಾ ಗೌರಿ.....’ ಧ್ವನಿ ಬಂದ ದಿಕ್ಕಿನೆಡೆ ಜಯಾ ನೋಡಿದಳು. ಅರವತ್ತರ ಹರೆಯದ ಗೌರಿ ಇಬ್ಬರ ಜಗಳ ನೋಡುತ್ತಾ ನಿಂತಿದ್ದಳು!

(ಸ್ನೇಹಸೇತು: ವಿಜಯಕರ್ನಾಟಕ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more