• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೊಬೈಲ್‌ ಫೋನೂ... ಅಮ್ಮೋ ಅದರ ಬಿಲ್‌ ಊ...!

By Staff
|

ಈಗಿನ ಮೊಬೈಲ್‌ ಯುಗದಲ್ಲಿ ಎಲ್ಲರಿಗೂ ಒಂದಿಲ್ಲ ಒಂದು ತರದ ಅನುಭವವಾಗಿರುತ್ತೆ ಅಲ್ಲವೆ? ಅದು ಸಿಹಿಯಾಗಿದ್ದರೆ ಬೇರೇನೆ, ನೆನಪಿಸಿಕೊಂಡು ಹಿಗ್ಗುತ್ತೀರಿ, ಅದೇ ಕಹಿಯಾದ ಅನುಭವವಾದ್ರೆ ಅದು ಶಿಕ್ಷೆ ಅನುಭವಿಸಿದಂತೆಯೇ. ಅದಕ್ಕೆ ಕಾರಣರಾದವರನ್ನು ಸಿಕ್ಕಾಪಟ್ಟೆ ಹಳಿದರೂ ಮನಸ್ಸು ಶಾಂತವಾಗುವುದಿಲ್ಲ. ಅಂತಹುದೆ ಒಂದು ಅನುಭವವನ್ನು ನಾನು ಹೇಳಹೊರಟಿರುವುದು. ನಗುತ್ತೀರೋ, ಇದೇನು ಮಹಾ ಅಂತ ಮೂಗು ಮುರಿಯುತ್ತೀರೋ ನಿಮಗೆ ಬಿಟ್ಟದ್ದು, ಆ ಬಗ್ಗೆ ನನಗ್ಯಾಕೆ ತಲೆ ಬಿಸಿ...

ದೆಹಲಿಯಲ್ಲಿರುವವರಿಗೆ ಸಾಮಾನ್ಯ ದೃಶ್ಯವೆಂದರೆ ಕಸಗುಡಿಸುವ ಜಮಾದಾರ್‌ ಕೂಡಾ ಮೊಬೈಲಿಗನಾಗಿರುವುದು. ತರಕಾರಿ ಮಾರುವವ, ಪಾನ್‌ವಾಲಾ, ಧೋಬಿ, ಕಬಾಡಿ ಅಂತಾ ಕೂಗಿಕೊಂಡು ಸೈಕಲ್ನಲ್ಲಿ ಗಲ್ಲಿ ಗಲ್ಲಿ ಸುತ್ತುವ ಬಿಹಾರಿಗಳು, ಹುಡುಗರು, ಬಸ್‌ ಡ್ರೈವರುಗಳು, ಆಟೋ ಚಾಲಕರು - ಹೀಗೆ ಪ್ರತಿಯಾಬ್ಬರೂ ಅಗತ್ಯವಿರಲಿ, ಬಿಡಲಿ ಮೊಬೈಲ್‌ ಇಟ್ಟುಕೊಂಡಿದ್ದಾರೆ. ಇದು ಉಪಯೋಗದ ಜತೆಗೆ ನಾನಾ ರೀತಿಯ ಗೊಂದಲಗಳನ್ನೂ ಸೃಷ್ಟಿಸುತ್ತ ಮುಜುಗರ, ಕಿರುಕುಳವೆನಿಸಿದ್ದೂ ಉಂಟು. ಅಗ್ಗವಾಗಿರುವುದರಿಂದಲೇ ಎಲ್ಲರಿಗೂ ಲಭ್ಯವಾಗಿದೆ. ರಿಲೈಯನ್ಸ್‌ ಬಂದ ಮೇಲಂತೂ ಸ್ವಲ್ಪ ಜಾಸ್ತಿಯೇ ಆಗಿದೆ ಇದರ ಹಾವಳಿ. ಇದು ಕೆಲವರಿಗೆ ಬಿ.ಪಿ.ಯನ್ನು ಏರಿಸುತ್ತೆ ಅಂತ ಯಾಕೆ ಮೆಡಿಕಲ್‌ ಸೈನ್ಸ್‌ ಸಿದ್ಧಮಾಡಿಲ್ಲವೋ ಅರ್ಥವಾಗಿಲ್ಲ. ಸದ್ಯ ನನಗಿನ್ನೂ ಅಂಥ ತೊಂದರೆಯಿಲ್ಲಾ (ಕೆಲವೇ ವರ್ಷಗಳಲ್ಲಿ ಆದರೂ ಅದೀತು!)

Talking Time !ಇನ್ನು ನನ್ನಂಥಾ ಉದ್ಯೋಗದಲ್ಲಿರುವ ಹೆಂಗಸಾದರೆ ಬರುವ ರಾಂಗ್‌ ನಂಬರುಗಳು ಗಂಡಂದಿರ ಪ್ರಶ್ನಾರ್ಥಕ ಕೆಂಗಣ್ಣು ಎದುರಿಸಬೇಕು. ಎಲ್ಲ ಗಂಡಸರೂ ಹೀಗಿರಲಿಕ್ಕಿಲ್ಲ ಬಿಡಿ, ಕೆಲವರ ಮನೆಯಲ್ಲಿಯಾದರೂ ಹೀಗೇ ಇದ್ದಾರು. ಎಷ್ಟೇ ಒಳ್ಳೆಯ ಗಂಡನಾದರೂ ಹೆಂಡತಿಯ ಮೊಬೈಲಿಗೆ, ಮಿಸ್‌ ಕಾಲ್ಸ್‌ ಬರಲಿ, ರಾಂಗ್‌ ನಂಬರೆ ಬರಲಿ, ತಲೆ ಮಾತ್ರ ವಿನಾಕಾರಣ ಬಿಸಿಯಾಗಿ, ಇಬ್ಬರೂ ಗುರ್‌ ಗುರ್‌ ಮಾಡಿ, ಪಾತ್ರೆಗಳು ತಳ ಕುಕ್ಕಿಸಿಕೊಂಡು, ಮಕ್ಕಳು ಬೈಸಿಕೊಂಡು, ಮೌನ ಯುದ್ಧವನ್ನೇ ಸಾರುತ್ತಾರೆ. ಇನ್ನೂ ವಿಪರೀತ ಬುದ್ಧಿಯವರಾದ್ರೆ ಇನ್ನೂ ನಾಲ್ಕು ಮನೆಯವರಿಗೆ ಗೊತ್ತಾಗುವಂತೆ, ಸೂರು ಕಿತ್ತು ಬೀಳುವಷ್ಟು ಕಿರುಚಿಯಾರು. ಯಾರದೋ ಫೋನು, ಯಾರಿಗೋ ಜಗಳ ಹಚ್ಚಿ ಮೊಬೈಲ್‌ ಮಾತ್ರ ತೆಪ್ಪಗೆ ಕುಳಿತಿರುತ್ತದೆ!

ಕಳೆದ ತಿಂಗಳು ಬೇಸಿಗೆ ರಜೆಗೆ ಧಾರವಾಡಕ್ಕೆ ಹೋಗಿದ್ದೆ. ಮೊಬೈಲ್‌ ಜತೆಗಿದ್ದುದರಿಂದ ಏನೂ ತೊಂದರೆ ಇರಲ್ಲಾಂತ ಖುಶಿಯಾಗಿದ್ದೆ . ಆದರೆ, ದೆಹಲಿಗೆ ವಾಪಸ್ಸಾದ ನಂತರ ಬಿಲ್ಲು ನೋಡಿ ಬವಳಿ ಬರುವಂತಾಯಿತು. ‘ರೋಮಿಂಗ್‌’ನಲ್ಲಿರುವಾಗ ಇನ್‌ಕಮಿಂಗ್‌ / ಔಟ್‌ಗೊಯಿಂಗ್‌ ಎಲ್ಲಾ ನಮಗೇ ಚಾರ್ಜ್‌ ಆಗುತ್ತೆಂದು ಗೊತ್ತಿತ್ತಾದರೂ, ಇಷ್ಟು ಅನ್ಯಾಯವಾಗುತ್ತೇಂತ ತಿಳಿದಿರಲಿಲ್ಲ ! ಆಫೀಸಿನಲ್ಲಿ ಹಿರಿಯ ಅಧಿಕಾರಿಗಳಿಗೆ- ಏನೇ ಪ್ರಾಬ್ಲಮ್‌ ಇದ್ದರೂ ನಾನು ಮೊಬೈಲ್‌ನಲ್ಲಿ ಸಿಗುತ್ತೇನೆ, ಫೋನ್‌ ಮಾಡಿ ಅಂತ ತುಂಬಾ ಔದಾರ್ಯದಿಂದ ಹೇಳಿದ್ದೆ . ನನ್ನ ಒಳ್ಳೆಯತನವನ್ನು ಸ್ವಲ್ಪ ಜಾಸ್ತಿಯೇ ತೋರಿಸಿದೆನೇನೋ ಅಂತ ಬಿಲ್‌ ನೋಡಿ ಅನ್ನಿಸಿತು. ಆಗಷ್ಟೇ ಚುನಾವಣೆಯ ಬಿಸಿಯಾದ ಪ್ರಚಾರದ ಸಮಯ, ನಾನು ಊರು ತಲುಪಿದ ನಂತರ ಫಲಿತಾಂಶ ಎಣಿಕೆ ಪ್ರಾರಂಭವಾದದ್ದು. ಅಲ್ಲಿಂದಲೇ ನನ್ನ ಶನಿದೆಶೆ ಶುರುವಾಯಿತೆನ್ನಿ. ನನ್ನ ಮೊಬೈಲಿಗೆ ದೆಹಲಿಯ ‘ಸದರ್‌ ಬಜಾರ್‌’ ಕ್ಷೇತ್ರಕ್ಕೆ ಚುನಾವಣೆಗೆ ನಿಂತ ಅಭ್ಯರ್ಥಿ, ಜಗದೀಶ ಟೈಟ್ಲರ್‌ರ ಫೋನುಗಳು, ಎಸ್‌.ಎಮ್‌.ಎಸ್‌.ಗಳು ಬರತೊಡಗಿದವು. ಮಕ್ಕಳಿಗೆ ಫೋನ್‌ ಎತ್ತಬೇಡಿರೋ...ಅಂತ ಅಲವತ್ತುಕೊಂಡರೂ ಕೇಳದ ಬುದ್ಧಿ ಅವಕ್ಕೆ. ಕೊನೆಗೆ ತಿಳಿಸಿಹೇಳಿದರೂ, ತಪ್ಪುಗಳು ಆಗೇ ಆದವು. ‘ಟೈಟ್ಲರ್‌ ಸಾಹಬ್‌ ಹೈ ಜೀ ?’ ಅಂತ ಫೋನ್‌ ಬರುತ್ತೆ. ‘ನಹೀ...ರಾಂಗ್‌ ನಂಬರ್‌’ ಅನ್ನುವುದು ತಪ್ಪಿಸಲಿಲ್ಲ ಈ ಮಕ್ಕಳು. ನಂಬರ್‌ ನೋಡಿ, ನಮ್ಮದಾದರೆ ಎತ್ತಿ, ಇಲ್ಲಾಂದರೆ ಎತ್ತಬೇಡಿ ಅಂತಾ ಕಲಿಸಿಕೊಟ್ಟರೂ, ಇವಕ್ಕೆ ಮಂಗಚೇಷ್ಟೆಯೋ....ನನ್ನ ಕೇಡುಗಾಲವೋ...!!

ಅತ್ತ ಟೈಟ್ಲರ್‌ ಸಾಹೇಬರು ಸದರ್‌ ಕ್ಷೇತ್ರದಿಂದ ಆರಿಸಿಬಂದರೆಂದು ಅವರಿಗೆ ಬಂದ ಎಸ್‌.ಎಮ್‌.ಎಸ್‌. ನಿಂದ ಗೊತ್ತಾಯಿತು. ನನ್ನ ಮೊಬೈಲಿಗೆ ಅವರಿಗೆ ಬರುವ ಅಭಿನಂದನೆಗಳ ಸುರಿಮಳೆ, ನನಗೆ ಮೈ ಪರಚಿಕೊಳ್ಳುವಷ್ಟು ಸಿಟ್ಟು ಬರ್ತಾ ಇತ್ತು. ಅಯ್ಯೋ ....ನನ್ನ ಮೊಬೈಲಿಗೆ ರೋಮಿಂಗ್‌ ಚಾರ್ಜ್‌ ಆಗುತ್ತಿದೆಯೆಂದು ಸಂಕಟ ಬೇರೆ. ಅಂತೂ ನನ್ನ ಪರ್ಸಿಗೆ ಕತ್ತರಿ ಬಿತ್ತು ಬಿಡಿ. ಅತ್ತ ದೆಹಲಿಯಲ್ಲಿರುವ ಯಜಮಾನರು ಫೋನಾಯಿಸಿದರೂ ಜಾಸ್ತಿ ಫೋನ್‌ ಮಾಡಬೇಡಿ, ನನಗೆ ಎಸ್‌.ಟಿ.ಡಿ ಚಾರ್ಜ್‌ ಆಗುತ್ತೆ ಅಂತಾ ಸಿಡಿಮಿಡಿಗುಟ್ಟುವ ನಾನು ಈ ಟೈಟ್ಲರ್‌ ಸಾಹೇಬರ ಕಾಲ್ಸ್‌ ಗಳಿಗೆ ಬಾಯಿ ಮುಚ್ಚಿಕೊಂಡು ದಂಡ ತೆತ್ತಿದ್ದೇನೆ. 1200 /= ರೂ ಬಿಲ್ಲು ಬಂದಿದ್ದು ಮನೆಯಲ್ಲಿ ಹೇಳಲಿಲ್ಲ.

ಆದರೂ ಒಂದು ಪ್ರಯತ್ನಾ ಅಂತ ‘ಹಚ್‌’ ನ್ನು ಸಂಪರ್ಕಿಸಿ, ಈ ಇನ್‌ಕಮಿಂಗ್‌ ಕಾಲ್‌ಸು ನನಗೆ ಸಂಬಂಧಿಸಿದ್ದಲ್ಲಾ, ಅದು ಈಗಿನ ಕ್ಯಾಬಿನೆಟ್‌ ಮಿನಿಸ್ಟರ್‌ ‘ಟೈಟ್ಲರ್‌ ಸಾಹೇಬರದ್ದು’ ಅಂತಾ ಗೋಳಾಡಿದರೂ, ‘ಹಚ್‌’ನವಳು, ಹಚಾ ಹಚ್‌... ಅಂದು ನಿಷ್ಟುರವಾಗಿ, ನೋ..ಮ್ಯಾ..ಮ್‌ ಯೂ..ಹ್ಯಾವ್‌ ಟು ಪೇ...!!! ಅಂತಾ ಹೇಳಿ ಹ್ಯಾವ್‌ ಅ ನೈಸ್‌ ಡೇ ! ಹೇಳಲು ಮಾತ್ರ ಮರೆಯಲಿಲ್ಲ. .. ಎಲ್ಲಿಯ ನೈಸ್‌ ಡೇ ... ಹೀಗೆ ‘ಹಚ್‌’ ಜೊತೆ ಮಾತಾಡಲು ಸಲಹೆಕೊಟ್ಟ ಸಹೋದ್ಯೋಗಿಗೆ ಒಂದಿಷ್ಟು ಬೈದು, ಅವನಿಂದಾನೆ ಎಲ್ಲಾ ಆಗಿದೆಯೇನೋ ಅನ್ನುವ ರೀತಿ ಆ ಬಡಪಾಯಿಯ ಮೇಲೆ ಕೋಪ ತೋರಿಸಿದೆ. ಹಚ್‌ನವರು ಏನೂ ಮಾಡಲ್ಲಾಂತ ಗೊತ್ತಿದ್ದೂ ಗೊತ್ತಿದ್ದೂ... ಅವಮಾನ ಹೇಳಿ ಮಾಡಿಸಿಕೊಂಡಂತೆ ಆಯಿತು. ಇದರಲ್ಲಿ ಪಾಪ ಟೈಟ್ಲರ್‌ರ ತಪ್ಪು ಏನಿದೆ?

ನಾವು ಹಾಯಾಗಿ, ನೆಮ್ಮದಿಯಿರುವ ಜೀವನ ಬಯಸುವಂತೆಯೇ, ನಮಗೆ ಸುಖ-ಸೌಕರ್ಯ ನೀಡುವ ಉಪಕರಣಗಳ ಸೌಲಭ್ಯಗಳು ಹನುಮಂತನ ಬಾಲದಂತೆ ಬೆಳೆಯುತ್ತವೆ. ಅವುಗಳನ್ನು ಸುರಕ್ಷಣೆಯಿಂದ ಇಟ್ಟುಕೊಳ್ಳುವದರ ಜತೆ ಹೀಗೆ ಒಳ್ಳೆ ಕೆಟ್ಟ ಅನುಭವಗಳೂ, ಪಾಠಗಳೂ ದೊರೆಯುತ್ತವೆ.

ಆಫೀಸಿನಲ್ಲಿಯೇನೂ ಕಡಿಮೆ ಕಿಲಾಡಿಗಳಿರುವುದಿಲ್ಲ ! ಸುಮ್ಮನೆ ನೋಡ್ತಾ, ನೋಡ್ತಾ ನಾವು ಆಚೀಚೆ ಇಲ್ಲದಾಗ ಎಸ್‌.ಟಿ.ಡಿ. ಹೊಡೆಯುವರೂ ಉಂಟು. ಪರ್ಸಲ್ಲಿ ಎಷ್ಟಂತ ಮುಚ್ಚಿಟ್ಟುಕೊಳ್ಳುವದು ? ಫೋನ್‌ ಬಂದ್ರೆ ತೆಗಿಯಲೇ ಬೇಕಾಗುತ್ತೆ. ಮೊನ್ನೆ ಬಸ್ಸಿನಲ್ಲಿ ಒಬ್ಬಳು ಕೈಯಲ್ಲಿ ಮೊಬೈಲ್‌ ಹಿಡಿದು ಸುಮ್ಮನೆ ಕುಳಿತವಳು, ನನ್ನ ಬ್ಯಾಗ್‌ ನಲ್ಲಿಯ ಫೋನ್‌ ಶಬ್ದ ಕೇಳಿದ್ದು, ತನ್ನ ಬ್ಯಾಟರಿ ಲೊ ಅಗಿದೆಯೆಂದೂ ಸ್ವಲ್ಪ ಫೋನ್‌ ಮಾಡಲು ಕೇಳಿ ಪಡೆದು, ಯಾವ ಶಿಷ್ಟಾಚಾರವೂ ಇಲ್ಲದೇ, ಬೇರೆಯವರ ಫೋನೆಂಬ ಮುಜುಗರವೂ ಇಲ್ಲದೆ, 10 ನಿಮಿಷ ಮಕ್ಕಳೊಂದಿಗೆ ಮಾತಾಡಿ, ನಂತರ ಗಂಡನಿಗೆ ತನ್ನನ್ನು ಪಶ್ಚಿಮವಿಹಾರದಿಂದ ಕರೆದುಕೊಂಡು ಹೋಗಲು ವಿವರಿಸಿ, ಕೊನೆಗೆ ಥ್ಯಾಂಕ್ಸ್‌ ಕೂಡಾ ಹೇಳದೆ, ತನ್ನ ಕೆಲಸವಾಯಿತು ಎಂಬಂತೆ ಕಿಟಕಿಯಲ್ಲಿ ಮುಖವಿಟ್ಟು ಕುಳಿತಳು. ಒಂದೇ ಒಂದು ಸ್ನೇಹಮಯ ಮುಗುಳ್ನಗುವಾಗಲಿ, ಕೃತಜ್ಞತೆಯಾಗಲಿ ಆ ಹೆಂಗಸು ತೋರಿಸಲಿಲ್ಲ. ನನಗೆ ಯಾಕಾದರೂ ನಾನು ಫೋನ್‌ ಕೊಟ್ಟೆನೋ, ‘ಇಲ್ಲಾ , ಸ್ಸಾರಿ....!’ ಅನ್ನಲು ಬಾಯಿ ಬರಲಿಲ್ಲವೋ ಅನ್ನಿಸಿತು.

ಇದು ದೆಹಲಿಯಲ್ಲವೇ ? ನಾವು ಹೊರಗಿನವರು ಮಾತ್ರ ದಯೆ ಧರ್ಮ ಪಾಲಿಸುವವರು. ಇಲ್ಲಿನವರಿಗೆ ಇಂಥ ನಯ ವಿನಯಗಳು ಕಡಿಮೆಯೇ. ವರ್ಷಗಳಿಂದ ಆಕ್ಕಪಕ್ಕದ ಮನೆಗಳಿದ್ದರೂ ಅವರ ಮನೆಯಲ್ಲಿ ಅವರು, ಇವರ ಮನೆಯಲ್ಲಿ ಇವರು, ಯಾರಿಗೂ ಯಾರೂ ಸಂಬಂಧವೇ ಇಲ್ಲವೆನ್ನುವಂತೆ ಜೀವಿಸುತ್ತಿರುತ್ತೇವೆ. ಒಣ ದೊಡ್ಡಸ್ತಿಕೆಯಲ್ಲಿ ಮಾನವೀಯ ಮೌಲ್ಯಗಳನ್ನೂ ಕಡೆಗಣಿಸಿ ಬದುಕುತ್ತಿರುತ್ತೇವೆ. ಇನ್ನೊಬ್ಬರ ಮನೆಯಲ್ಲಿ ಕಳ್ಳರು ದೋಚಿಕೊಂಡು ಹೋಗಲಿ, ಕೊಲೆಯೇ ಆಗಲಿ, ಪಕ್ಕದವರಿಗೆ ಮಾತ್ರ ಏನೂ ತಿಳಿದಿರುವುದಿಲ್ಲ. ಸಂಘ ಜೀವಿ ಮಾನವ ನಮ್ಮಂತೆ ದೊಡ್ಡ ಮಹಾನಗರಗಳಲ್ಲಿ ಏಕಾಂಗಿಯಾಗುತ್ತಾ ಏನಾಗುತ್ತಾನೊ ಗೊತ್ತಿಲ್ಲ ! ನೀವು ಏನೇ ಅಂದ್ಕೊಳ್ಳಿ, ನಮ್ಮೂರಿಗಿಂತ ಚಂದದ ಊರು ಯಾವುದೂ ಇಲ್ಲ , ಅಲ್ಲವೆ? ‘ಊರಿದ್ದಲ್ಲಿ ಹೊಲಗೇರಿ ಇಲ್ಲದಿರುವುದೆ?’ ಅಂದಿರಾ, ಆ ಮಾತು ಬೇರೆ ಬಿಡಿ.

ಇನ್ನು ಫೋನಿನ ವಿಷಯದಲ್ಲಿ ನನ್ನ ತಂಗಿ ಜಾಣೆ. 51 ರೂಪಾಯಿಯ ಕಾರ್ಡ್‌ ಹಾಕಿಸಿ, ನಾವು ಮಾಡಿದಾಗಷ್ಟೆ ಮಾತಾಡುತ್ತಾಳೆ, ಹಬ್ಬಕ್ಕೊಂದು ಎಸ್‌.ಎಮ್‌.ಎಸ್‌. ಕಳಿಸಿದರೆ ಆಯಿತು. ನಾನೇ ಬೆಪ್ಪು ತಕ್ಕಡಿನೋ ಅಂತ ಸಂಶಯ ಬರತೊಡಗಿದೆ. ನಿಮಗೆ ಹೇಗೆ ಅನಿಸ್ತಾ ಇದೆ ? ಹೇಳ್ತೀರಾ ? (renukani@hotmail.com). ಇಂಥ ಘಟನೆಗಳು, ಅನುಭವಗಳು ನಿಮಗೂ ಆಗಿವೆಯೇ ?

ನಿಮಗೆ ಹೇಳಿಕೊಂಡಾದರೂ ನನ್ನ ಮನಸ್ಸು ಹಗುರವಾಯಿತು ಬಿಡಿ. ಬಿಲ್‌ ತೆತ್ತಮೇಲೆ ಆದ ಬೇಸರ ಸ್ವಲ್ಪವಾದರೂ ಕಡಿಮೆಯಾಯಿತು.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more