ಯಾರ ಜಪ್ತಿಗೂ ಸಿಗದ ಮಹಾದೇವನೆಂಬ ನವಿಲು
'ಸಾಹಿತ್ಯ ಬರೆಯುವಾಗ ನನಗೆ ಅಂಬೇಡ್ಕರ್ ಆಗಲಿ, ಗಾಂಧಿ ಆಗಲಿ, ಅವರಪ್ಪ ಆಗಲಿ ಮುಖ್ಯ ಅಲ್ಲ. ಜನ ಸಾಮಾನ್ಯರೇ ಗಾಂಧಿ, ಅವರೇ ಅಂಬೇಡ್ಕರ್ ! '
- ಬಹುಮುಖಿ ನಾಟಕೋತ್ಸವದ ಅಂಗವಾಗಿ ಮೈಸೂರಿನ ಶ್ರೀರಂಗ ಸಭಾಂಗಣದಲ್ಲಿ ಬುಧವಾರ ನಡೆದ 'ಲೇಖಕರ ಭೇಟಿ' ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರ ಜೊತೆ ಮುಖಾಮುಖಿಯಾದ ದೇವನೂರು ಮೇಲಿನಂತೆ ಹೇಳಿದರು. ನೀವು ಸಾಹಿತಿಯೂ ಹೌದು. ದಲಿತ ಚಳವಳಿಯ ನೇತಾರರೂ ಹೌದು. ನೇತಾರರಾಗಿ ನಿಮ್ಮ ವೈಫಲ್ಯಕ್ಕೆ ಕಾರಣ ಕೊಡಿ ಅಂತ ಸಹೃದಯರು ಕೇಳಿದ ಪ್ರಶ್ನೆಗೆ, ದೇವನೂರು ಕೊಟ್ಟ ಉತ್ತರವದು.
ಪ್ರಶ್ನೆಗಳು ಒಂದರ ಮೇಲೊಂದು ಎರಗುತ್ತಿದ್ದವು. ದೇವನೂರು ಮಹಾದೇವ ತಮ್ಮ ಎಂದಿನ ಶೈಲಿಯಲ್ಲಿ ನಿಧಾನವಾಗಿ ಉತ್ತರಿಸುತ್ತಿದ್ದರು. ಕೆಣಕುವ ಪ್ರಶ್ನೆಗಳು ಎದುರಾದಾಗಲೂ ದೇವನೂರು ದನಿ ತಾರಕಕ್ಕೇರಲಿಲ್ಲ . ತಮ್ಮ ಕಥೆಗಳ ಭಾಷೆಯಂತೆಯೇ ದೇವನೂರು ಮಾತಿನಲ್ಲೂ ನಿರ್ಲಿಪ್ತತೆ ಸಾಧಿಸಿದ್ದರು.
ದೇವನೂರು ಅವರ ಮಾತುಗಳ ಸಾರ ಹಿಡಿದಿಡುವುದಾದರೆ-
'ನಾನು ಸಿದ್ಧಾಂತಗಳನ್ನು ಹೇಳೋಕೆ ಕಥೆ ಬರೆಯೋದಿಲ್ಲ . ನಾನು ಕಸಿ ತಜ್ಞ . ದಲಿತ ಚಳವಳಿಯಲ್ಲಿ ನಿಮ್ಮ ಸಾಧನೆ ಏನು ಅಂತ ಕೇಳಿದರೆ, ಅದನ್ನು ನಾನು ಲೆಕ್ಕ ಇಟ್ಟಿಲ್ಲ .
ನನ್ನನ್ನು ಕೆಲವರು ದಲಿತ ಲೇಖಕ ಎಂದು ಹೇಳಿದಾಗ ಸುಮ್ಮನಿದ್ದೆ . ಅಲ್ಲ ಅಂದಾಗಲೂ ಸುಮ್ಮನಿದ್ದೆ. ಮಂಗಳೂರಲ್ಲಿ ಈಚೆಗೆ ಮುಸ್ಲಿಂ ಲೇಖಕರ ಸಭೆಯಲ್ಲೂ ನಾನು ಭಾಗವಹಿಸಿದ್ದೆ.
ಜಾತಿ- ಧರ್ಮದೊಂದಿಗೆ ಗುರ್ತಿಸಿಕೊಳ್ಳುವ ಸಂಘಗಳು ಲೇಖಕನಿಗೆ ಆರಂಭದಲ್ಲಿ ಒಂದು ಹಂತದವರೆಗೆ ಅನಿವಾರ್ಯವಾಗಬಹುದು. ಆಮೇಲೆ ಅದನ್ನು ಮೀರಬೇಕು. ಅದನ್ನೇ ದೊಡ್ಡದಾಗಿಸುವ ಅಗತ್ಯವಿಲ್ಲ.
ಖಾಸಗೀಕರಣ ಅಂದರೆ ಜಾತೀಯತೆ ಉಳಿಸಿಕೊಳ್ಳುವುದು ಎಂದೇ ಅರ್ಥ. ಯಾವ ಜಾತಿಯವರೂ ಪ್ರತಿಭೆ ನೋಡಿ ಕೆಲಸ ಕೊಡಲ್ಲ . ತಮ್ಮ ಜಾತಿಯವ ಎಂಬ ನಂಬಿಕೆಯಿಂದಲೇ ಕೆಲಸ ಕೊಡೋದು. ಹಣ ಮಾಡಲು, ಗದ್ದುಗೆ ಏರಲು ಧರ್ಮದ ಬಳಕೆಯಾಗುತ್ತಿದೆ.
ಮಹಾದೇವರ ಮಹಾಮೌನ
ಕುಸುಮಬಾಲೆ ಬರೆದ ನಂತರ ಕಳೆದ 18 ವರ್ಷಗಳಲ್ಲಿ ದೇವನೂರು ಏನೂ ಬರೆದಿಲ್ಲ . ಅವರ ವ್ಯಕ್ತಿತ್ವದ ಸಂವೇದನೆ ಸ್ವೋಪಜ್ಞವಾದದ್ದು ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿಮರ್ಶಕ ಜಿ.ಎಚ್.ನಾಯಕ ಹೇಳಿದರು.
ಯಾವುದೇ ಇಸಂಗೆ ಅಂಟಿಕೊಂಡು ದೇವನೂರರ ಪ್ರತಿಭೆ ಬೆಳೆಯಲಿಲ್ಲ . ಚಳವಳಿಯ ಚೌಕಟ್ಟಿಗೆ ಸೀಮಿತಗೊಳಿಸಿ, ಓದಿಕೊಂಡರೆ ದೇವನೂರು ದಕ್ಕುವುದಿಲ್ಲ ಎಂದೂ ಜಿ.ಎಚ್.ನಾಯಕ ದೇವನೂರರ ವ್ಯಕ್ತಿತ್ವವನ್ನು-ಬರಹದ ಅನನ್ಯತೆಯನ್ನು ಬಣ್ಣಿಸಿದರು.
ಡಾ.ಕೆ.ಮರುಳ ಸಿದ್ಧಪ್ಪ , ಕೆ.ರಾಮದಾಸ್, ಹಿ.ಶಿ.ರಾಮಚಂದ್ರೇಗೌಡ, ಎಂ.ಚಿನ್ನಸ್ವಾಮಿ, ಕಾಳೇಗೌಡ ನಾಗವಾರ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.












Click it and Unblock the Notifications